AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮೂವರ ಶತಕ; ಮೊಟ್ಟ ಮೊದಲ ಬಾರಿಗೆ 400 ರನ್​ಗಳ ಗಡಿ ದಾಟಿದ ವಿಂಡೀಸ್

ಗುವಾಹಟಿಯಲ್ಲಿ ನಡೆದ 2ನೇ ಏಕದಿನ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ತಂಡವು ಭಾರತದ ವಿರುದ್ಧ ದಾಖಲೆಯ 405 ರನ್ ಗಳಿಸಿ ಇತಿಹಾಸ ಸೃಷ್ಟಿಸಿತು. ಜಾನ್ ಕ್ಯಾಂಪ್‌ಬೆಲ್, ಶೈ ಹೋಪ್ ಮತ್ತು ಅಮೀರ್ ಜಂಗೂ ಅವರ ಭರ್ಜರಿ ಶತಕಗಳ ನೆರವಿನಿಂದ ವೆಸ್ಟ್ ಇಂಡೀಸ್ ಮೊದಲ ಬಾರಿಗೆ 400 ರನ್ ಗಡಿ ದಾಟಿತು. ಭಾರತದ ಬೌಲರ್‌ಗಳು ರನ್ ನಿಯಂತ್ರಿಸಲು ವಿಫಲರಾದರು, ಇದರಿಂದಾಗಿ ಪಂದ್ಯವು ರೋಚಕ ಹಂತ ತಲುಪಿದೆ.

ಮೂವರ ಶತಕ; ಮೊಟ್ಟ ಮೊದಲ ಬಾರಿಗೆ 400 ರನ್​ಗಳ ಗಡಿ ದಾಟಿದ ವಿಂಡೀಸ್
ಭಾರತ- ವೆಸ್ಟ್ ಇಂಡೀಸ್Image Credit source: PTI
ಪೃಥ್ವಿಶಂಕರ
|

Updated on:Sep 30, 2026 | 6:33 PM

Share

ಗುವಾಹಟಿಯಲ್ಲಿ ನಡೆದ ಟೀಂ ಇಂಡಿಯಾ ವಿರುದ್ಧದ ಎರಡನೇ ಏಕದಿನ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್‌ ಮಾಡಿದ ವೆಸ್ಟ್ ಇಂಡೀಸ್ ತಂಡವು 50 ಓವರ್‌ಗಳಲ್ಲಿ 7 ವಿಕೆಟ್‌ಗಳನ್ನು ಕಳೆದುಕೊಂಡು ದಾಖಲೆಯ 405 ರನ್ ಕಲೆಹಾಕಿದೆ. ತಂಡದ ಪರ ಜಾನ್ ಕ್ಯಾಂಪ್‌ಬೆಲ್ (101), ಶೈ ಹೋಪ್ (104), ಮತ್ತು ಅಮೀರ್ ಜಂಗೂ (114) ಶತಕಗಳ ಇನ್ನಿಂಗ್ಸ್ ಆಡಿದರು. ಇದರೊಂದಿಗೆ ವೆಸ್ಟ್ ಇಂಡೀಸ್, ಏಕದಿನ ಕ್ರಿಕೆಟ್‌ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ 400 ರನ್‌ಗಳ ಗಡಿ ತಲುಪಿದ ದಾಖಲೆ ನಿರ್ಮಿಸಿದೆ. ಇತ್ತ ಟೀಂ ಇಂಡಿಯಾ ಪರ ಯಾವ ಬೌಲರ್​ ಕೂಡ ಪರಿಣಾಮಕಾರಿಯಾಗಲಿಲ್ಲ. ಗುನ್ರೂರ್ ಬ್ರಾರ್, ರವೀಂದ್ರ ಜಡೇಜಾ ಹಾಗೂ ಕುಲ್ದೀಪ್ ಯಾದವ್ ತಲಾ 2 ವಿಕೆಟ್‌ಗಳನ್ನು ಪಡೆದರಾದರೂ ಸರಾಗವಾಗಿ ರನ್ ಬಿಟ್ಟುಕೊಟ್ಟರು.

2ನೇ ವಿಕೆಟ್​ಗೆ ಶತಕದ ಜೊತೆಯಾಟ

ಮೊದಲ ಏಕದಿನ ಪಂದ್ಯದಲ್ಲಿ ಶತಕ ಬಾರಿಸಿದ್ದ ಜಸ್ಟಿನ್ ಗ್ರೀವ್ಸ್ ಗಾಯದಿಂದ ಬಳಲುತ್ತಿದ್ದ ಕಾರಣದಿಂದಾಗಿ ಅವರನ್ನು ಈ ಪಂದ್ಯದಿಂದ ಕೈಬಿಡಲಾಗಿತ್ತು. ಹೀಗಾಗಿ ಈ ಪಂದ್ಯದಲ್ಲಿ ವಿಂಡೀಸ್ ಆರಂಭಿಕ ಜೋಡಿ ಬದಲಾಗಿತ್ತು. ಹಾಗಾಗಿ ವಿಂಡೀಸ್ ತಂಡಕ್ಕೆ ಈ ಪಂದ್ಯದಲ್ಲಿ ಸಾಧಾರಣ ಆರಂಭ ಸಿಕ್ಕಿತು. ಆರಂಭಿಕನಾಗಿ ಕಣಕ್ಕಿಳಿದಿದ್ದ ಕೇಸಿ ಕಾರ್ಟಿ (9) ಬೇಗನೆ ಔಟಾದರು. ಆದರೆ ಆ ಬಳಿಕ ಜೊತೆಯಾದ ಕ್ಯಾಂಪ್‌ಬೆಲ್ ಹಾಗೂ ಹೋಪ್ ಅತ್ಯುತ್ತಮ ಜೊತೆಯಾಟ ಕಟ್ಟಿದರು. ಇವರಿಬ್ಬರು ಎರಡನೇ ವಿಕೆಟ್​ಗೆ ತಂಡವನ್ನು 147 ರನ್​ಗಳಿಗೆ ಕೊಂಡೊಯ್ದರು. ಈ ಹಂತದಲ್ಲಿ ಕ್ಯಾಂಪ್‌ಬೆಲ್ ವಿಕೆಟ್ ಪತನದೊಂದಿಗೆ ಇವರಿಬ್ಬರ ಜೊತೆಯಾಟ ಮುರಿದುಬಿತ್ತು.

ಶತಕ ಬಾರಿಸಿದ ಹೋಪ್ ಮತ್ತು ಜಂಗೂ

ಆ ನಂತರ ಬಂದ ಅಮೀರ್ ಜಂಗೂ ಕೂಡ ನಾಯಕ ಹೋಪ್​ಗೆ ಸಾಥ್ ನೀಡಿದರು. ಹೀಗಾಗಿ ಇಬ್ಬರೂ ತಲಾ ಶತಕ ಸಿಡಿಸಿ ಮಿಂಚಿದರು. ಇವರಿಬ್ಬರ ಈ ಜೊತೆಯಾಟದಿಂದಾಗಿ ವಿಂಡೀಸ್ ತಂಡ 40ನೇ ಓವರ್ ಮುಗಿಯುವುದಕ್ಕೂ ಮುನ್ನವೇ 320 ರನ್​ಗಳ ಗಡಿ ದಾಟಿತ್ತು. ಇವರಿಬ್ಬರು ಶತಕ ಬಾರಿಸಿದ ನಂತರ ಔಟಾದರು. ಕೊನೆಯಲ್ಲಿ ರೋಸ್ಟನ್ ಚೇಸ್ 25 ಎಸೆತಗಳಲ್ಲಿ 29 ರನ್​ಗಳ ಕಾಣಿಕೆ ನೀಡಿದರು.

ಕ್ಯಾಚ್ ಕೈಚೆಲ್ಲಿದ ಕುಲ್ದೀಪ್, ಕೊಹ್ಲಿ..! ಶತಕ ಬಾರಿಸಿದ ಶಾಯ್ ಹೋಪ್

400 ರನ್​ಗಳ ಗಡಿ ದಾಟ್ಟಿದ್ದು ಇದೇ ಮೊದಲು

ಈ ಪಂದ್ಯದಲ್ಲಿ 400 ರನ್​ಗಳ ಗಡಿ ದಾಟುವ ಮೂಲಕ ವಿಂಡೀಸ್ ಇದೇ ಮೊದಲ ಬಾರಿಗೆ ಏಕದಿನ ಕ್ರಿಕೆಟ್​ನಲ್ಲಿ 405 ರನ್ ಕಲೆಹಾಕಿದ ದಾಖಲೆ ಬರೆಯಿತು. ಇದಕ್ಕೂ ಮೊದಲು ವೆಸ್ಟ್ ಇಂಡೀಸ್‌, ಇಂಗ್ಲೆಂಡ್ ವಿರುದ್ಧ 2019 ರಲ್ಲಿ ಬಾರಿಸಿದ್ದ 389 ರನ್ ಇದುವರೆಗಿನ ಗರಿಷ್ಠ ಸ್ಕೋರ್ 389 ಆಗಿತ್ತು. ಅಲ್ಲದೆ ಏಕದಿನ ಕ್ರಿಕೆಟ್ ಇತಿಹಾಸದಲ್ಲಿ ವೆಸ್ಟ್ ಇಂಡೀಸ್‌ ತಂಡದ ಮೂವರು ಬ್ಯಾಟ್ಸ್‌ಮನ್‌ಗಳು ಇನ್ನಿಂಗ್ಸ್‌ನಲ್ಲಿ ಶತಕ ಗಳಿಸಿದ್ದು ಇದೇ ಮೊದಲು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 6:20 pm, Wed, 30 September 26

Follow Us
ಪೃಥ್ವಿಶಂಕರ
ಪೃಥ್ವಿಶಂಕರ

ಹುಟ್ಟೂರು ಹಾಸನದ ಕೊಣನೂರು ಸಮೀಪದ ಲಕ್ಷ್ಮೀಪುರ, ಕಳೆದ 8 ವರ್ಷಗಳಿಂದ ಪತ್ರಿಕಾರಂಗದಲ್ಲಿ ನೆಲೆ. ಟಿವಿ9 ಕನ್ನಡದಲ್ಲೇ ವೃತ್ತಿ ಜೀವನ ಆರಂಭಿಸಿದ ನಾನು, ಮೊದಲ 3 ವರ್ಷ ವಿಡಿಯೋ ಎಡಿಟರ್ ಆಗಿ ಕೆಲಸ ಮಾಡಿದ ಬಳಿಕ ನನ್ನ ಆಸಕ್ತಿಯ ವಿಷಯವಾದ ಕ್ರೀಡೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ನನ್ನ ವೃತ್ತಿ ಬದುಕಿನ ಎರಡನೇ ಇನ್ನಿಂಗ್ಸ್ ಆರಂಭಿಸಿದ್ದೇನೆ.

Read More