ಬಿಜೆಪಿಯ ಮೈಸೂರು ಪಾದಯಾತ್ರೆಗೆ ಟಕ್ಕರ್: ನಾಳೆಯಿಂದ ಕಾಂಗ್ರೆಸ್ ಜನಾಂದೋಲನ ಕಾರ್ಯಕ್ರಮ
ಮುಡಾ ಸೈಟ್ ಹಂಚಿಕೆ ಹಗರಣ ಖಂಡಿಸಿ ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳು ಆಗಸ್ಟ್ 3ರಂದು ಬೆಂಗಳೂರಿನಿಂದ ಮೈಸೂರಿಗೆ ಪಾದಯಾತ್ರೆ ಮಾಡಲಿದೆ. ಸದ್ಯ ಇದಕ್ಕೆ ಟಕ್ಕರ್ ಕೊಡಲು ಕಾಂಗ್ರೆಸ್ ಮುಂದಾಗಿದ್ದು, ನಾಳೆಯಿಂದ ಕಾಂಗ್ರೆಸ್ ಜನಾಂದೋಲನ ಕಾರ್ಯಕ್ರಮ ನಡೆಯಲಿದೆ. ಬಿಜೆಪಿ, ಜೆಡಿಎಸ್ ಪಾದಯಾತ್ರೆ ತೆರಳುವ ಕಡೆ ಸಭೆ ನಡೆಸಲಾಗುವುದು ಎಂದು ಡಿಕೆ ಶಿವಕುಮಾರ್ ಹೇಳಿದ್ದಾರೆ.
ಬೆಂಗಳೂರು, ಆಗಸ್ಟ್ 01: ಕಾಂಗ್ರೆಸ್ (Congress) ಸರ್ಕಾರದ ವಿರುದ್ಧ ಕೇಳಿಬಂದಿರುವ ಮುಡಾ ಹಾಗೂ ವಾಲ್ಮೀಕಿ ಹಗರಣದ ವಿರುದ್ಧ ಹೋರಾಟಕ್ಕಿಳಿದಿರುವ ಬಿಜೆಪಿ ಮತ್ತು ಜೆಡಿಎಸ್ ಬೆಂಗಳೂರು ಟು ಮೈಸೂರು ಪಾದಯಾತ್ರೆ ಕೈಗೊಂಡಿವೆ. ಇದೇ ಆಗಸ್ಟ್ 3ರಿಂದ ಪಾದಯಾತ್ರೆ ಶುರುವಾಗಲಿದ್ದು, ಇದಕ್ಕೆ ಟಕ್ಕರ್ ಕೊಡಲು ಉಪಮುಖ್ಯಮಂತ್ರಿ, ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ (DK Shivakumar) ಮೆಗಾ ಪ್ಲ್ಯಾನ್ ರೆಡಿ ಮಾಡಿದ್ದಾರೆ. ದೋಸ್ತಿ ಪಕ್ಷಗಳು ಯಾವೆಲ್ಲಾ ಮಾರ್ಗದಲ್ಲಿ ಪಾದಯಾತ್ರೆ ನಡೆಯುತ್ತೋ ಅದೇ ಮಾರ್ಗದಲ್ಲಿ ಕಾಂಗ್ರೆಸ್ ಜನಾಂದೋಲನ ಕಾರ್ಯಕ್ರಮ ನಡೆಸುವುದಾಗಿ ಡಿಕೆ ಶಿವಕುಮಾರ್ ಘೋಷಣೆ ಮಾಡಿದ್ದಾರೆ.
ಬೆಂಗಳೂರು ನಗರ ಹೊರತುಪಡಿಸಿ ಪಾದಯಾತ್ರೆಗೆ ನಮ್ಮ ಅಭ್ಯಂತರವಿಲ್ಲ; ಡಿಕೆ ಶಿವಕುಮಾರ್
ದೆಹಲಿಯಲ್ಲಿ ಹೆಚ್ಡಿ ಕುಮಾರಸ್ವಾಮಿ ಜೊತೆ ಬಿಜೆಪಿ ನಾಯಕರು ಮಾತನಾಡಿ ಪಾದಯಾತ್ರೆ ಬಗ್ಗೆ ಅಧಿಕೃತವಾಗಿ ಘೋಷಣೆ ಮಾಡುತ್ತಿದ್ದಂತೆ ಇತ್ತ ಬೆಂಗಳೂರಿನ ಸದಾಶಿವನಗರದ ನಿವಾಸದಲ್ಲಿ ತುರ್ತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಡಿಕೆ ಶಿವಕುಮಾರ್, ಬಿಜೆಪಿ, ಜೆಡಿಎಸ್ ಪಾದಯಾತ್ರೆ ಬಗ್ಗೆ ಬಹಳ ಗೊಂದಲ ಇತ್ತು. ಈಗ ಗೊಂದಲ ಬಗೆಹರಿಸಿಕೊಂಡು ಪಾದಯಾತ್ರೆ ನಡೆಸುವುದಾಗಿ ಹೇಳಿದ್ದಾರೆ ಎಂದರು.
ಇದನ್ನೂ ಓದಿ: ಕೊನೆಗೂ ತಣ್ಣಗಾಯ್ತು ಕುಮಾರಸ್ವಾಮಿ ಕೋಪ: ಪಾದಯಾತ್ರೆ ಬಗ್ಗೆ ಅಧಿಕೃತ ನಿಲುವು ಪ್ರಕಟಿಸಿದ ಜೆಡಿಎಸ್
ಬಿಜೆಪಿ, ಜೆಡಿಎಸ್ ಪಾದಯಾತ್ರೆ ಬಗ್ಗೆ ನಮ್ಮದು ಯಾವುದೇ ಅಭ್ಯಂತರವಿಲ್ಲ. ಬೆಂಗಳೂರು ನಗರದಲ್ಲಿ ಮಾತ್ರ ಪಾದಯಾತ್ರೆ ಬಗ್ಗೆ ಕೆಲ ನಿರ್ಬಂಧವಿದೆ. ಬೆಂಗಳೂರು ನಗರ ಹೊರತುಪಡಿಸಿ ಪಾದಯಾತ್ರೆಗೆ ನಮ್ಮ ಅಭ್ಯಂತರವಿಲ್ಲ ಎಂದು ಹೇಳಿದ್ದಾರೆ.
ಬಿಜೆಪಿ, ಜೆಡಿಎಸ್ ಪಾದಯಾತ್ರೆ ತೆರಳುವ ಕಡೆ ಸಭೆ ನಡೆಸಲಾಗುವುದು. ಸಭೆಯಲ್ಲಿ ಎಲ್ಲರೂ ಭಾಗಿಯಾಗುವಂತೆ ಡಿಕೆ ಶಿವಕುಮಾರ ಮನವಿ ಮಾಡಿದ್ದಾರೆ. ಪಾದಯಾತ್ರೆ ಮುನ್ನವೇ ಬಿಡದಿಯಲ್ಲಿ ಸಭೆ ನಡೆಸಿ ಬಿಜೆಪಿ ಅವಧಿಯಲ್ಲಿ ನಡೆದ ಭ್ರಷ್ಟಾಚಾರಗಳ ಬಗ್ಗೆ ಪ್ರಶ್ನೆ ಮಾಡಲಿದ್ದೇವೆ. ಕೇಂದ್ರ ಸರ್ಕಾರದ ಅನ್ಯಾಯದ ವಿಚಾರಕ್ಕೆ ಉತ್ತರ ಕೊಡಬೇಕಿದೆ ಎಂದು ಕಿಡಿಕಾರಿದ್ದಾರೆ.
ಇದನ್ನೂ ಓದಿ: ಕುತೂಹಲಕ್ಕೆ ಕಾರಣವಾದ ಡಿಸಿಎಂ ಡಿಕೆ ಶಿವಕುಮಾರ್ ತುರ್ತು ಸುದ್ದಿಗೋಷ್ಠಿ, ಇಲ್ಲಿದೆ ಲೈವ್
ಆಗಸ್ಟ್ ರಂದು 2 ಬಿಡದಿ, ಆಗಸ್ಟ್ 3ರಂದು ರಾಮನಗರದಲ್ಲಿ ಸಭೆ, ಆಗಸ್ಟ್ 4 ಚನ್ನಪಟ್ಟಣ, ಆಗಸ್ಟ್ 5 ಮದ್ದೂರು, ಆಗಸ್ಟ್ 6 ಮಂಡ್ಯ, ಆಗಸ್ಟ್ 9ರಂದು ಮೈಸೂರಿನಲ್ಲಿ ಬಹಿರಂಗ ಸಭೆ ನಡೆಸಲಿದ್ದೇವೆ. ಬಿಜೆಪಿ, ಜೆಡಿಎಸ್ ವಿರುದ್ಧ ನಾವು ಯಾವುದೇ ಪಾದಯಾತ್ರೆ ನಡೆಸಲ್ಲ ಎಂದು ಹೇಳಿದ್ದಾರೆ.
ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ ಅನ್ಯಾಯ ಖಂಡಿಸಿ ಸಭೆ ನಡೆಸುತ್ತೇವೆ. ನಾಳೆ ಬಿಡದಿಯಲ್ಲಿ ಸಭೆ ನಡೆಸಿ ಕೆಲ ಪ್ರಶ್ನೆಗಳನ್ನು ಕೇಳುತ್ತೇವೆ ಎಂದಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 10:21 pm, Thu, 1 August 24