
ತುಮಕೂರು, ಮೇ 08: ಜಿಲ್ಲೆಯಲ್ಲಿ ಹಕ್ಕಿ ಜ್ವರದ (Bird Flu) ಭೀತಿ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಕೆಲ ದಿನಗಳ ಹಿಂದೆಯಷ್ಟೇ 44 ನವಿಲುಗಳು ಮತ್ತು 30 ಕೋಳಿಗಳು ಸಾವನ್ನಪ್ಪಿದ್ದವು. ನವಿಲುಗಳ ಸಾವಿಗೆ ಹಕ್ಕಿ ಜ್ವರವೇ ಕಾರಣವೆಂದು ಲ್ಯಾಬ್ ವರದಿಯಲ್ಲಿ ದೃಢಪಟ್ಟಿತ್ತು. ಕೋಳಿಗಳ ಸಾವಿಗೆ ಸಂಬಂಧಿಸಿದಂತೆ ಸ್ಯಾಂಪಲ್‌ಗಳನ್ನು ಪರೀಕ್ಷೆಗೆ ಕಳುಹಿಸಲಾಗಿತ್ತು. ಇದರ ಬೆನ್ನಲ್ಲೇ ಈಗ ಮತ್ತಷ್ಟು ನವಿಲುಗಳು ಸಾವನ್ನಪ್ಪಿದ್ದು, ಸಾರ್ವಜನಿಕರಲ್ಲಿ ಭಾರೀ ಆತಂಕ ಮೂಡಿಸಿದೆ.
ತುಮಕೂರು ತಾಲೂಕಿನಾದ್ಯಂತ ಕಳೆದ ಒಂದು ತಿಂಗಳಿನಿಂದ ನವಿಲುಗಳು ನಿಗೂಢವಾಗಿ ಸಾವನ್ನಪ್ಪುತ್ತಿವೆ. ಕಳೆದ 30 ದಿನಗಳಲ್ಲಿ ಸಾವನ್ನಪ್ಪಿದ ನವಿಲುಗಳ ಸಂಖ್ಯೆ ಈಗ 54ರ ಗಡಿ ದಾಟಿದೆ. ಈ ಹಿಂದೆ 44 ನವಿಲುಗಳು ಸಾವನ್ನಪ್ಪಿದ್ದ ವರದಿಯಾಗಿತ್ತು, ಇದೀಗ ಆ ಸಂಖ್ಯೆ ಏರಿಕೆಯಾಗುತ್ತಲೇ ಇದೆ. ತುಮಕೂರು ತಾಲೂಕು ಮಾತ್ರವಲ್ಲದೆ, ಇದೀಗ ಕುಣಿಗಲ್‌ನಲ್ಲಿಯೂ ನವಿಲಿನ ಕಳೆಬರ ಪತ್ತೆಯಾಗಿದ್ದು, ಹಕ್ಕಿ ಜ್ವರ ಜಿಲ್ಲೆಯ ಇತರೆ ಭಾಗಗಳಿಗೂ ವ್ಯಾಪಿಸುತ್ತಿರುವ ಮುನ್ಸೂಚನೆ ನೀಡಿದೆ. ಕುಣಿಗಲ್‌ನಲ್ಲಿ ಮತ್ತೆ ನವಿಲುಗಳು ಸಾವನ್ನಪ್ಪಿದರೆ ಕೂಡಲೇ ಸ್ಯಾಂಪಲ್‌ಗಳನ್ನು ವರದಿಗೆ ರವಾನಿಸಲು ಅಧಿಕಾರಿಗಳು ನಿರ್ಧರಿಸಿದ್ದಾರೆ.
ನವಿಲುಗಳ ನಿರಂತರ ಸಾವಿನ ಬೆನ್ನಲ್ಲೇ ಪಶುಸಂಗೋಪನಾ ಇಲಾಖೆ ಅಲರ್ಟ್ ಘೋಷಿಸಿದೆ. ಜಿಲ್ಲೆಯಾದ್ಯಂತ ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳುವಂತೆ ಮತ್ತು ಹಕ್ಕಿಗಳ ಚಲನವಲನದ ಮೇಲೆ ನಿಗಾ ಇಡುವಂತೆ ಸೂಚನೆ ನೀಡಲಾಗಿದೆ. ಕಾಡುಪ್ರಾಣಿಗಳು ಹಾಗೂ ಹಕ್ಕಿಗಳ ಸಾವಿನ ಬಗ್ಗೆ ಮಾಹಿತಿ ಸಿಕ್ಕ ತಕ್ಷಣ ವರದಿ ಮಾಡಲು ತಿಳಿಸಲಾಗಿದೆ.
ಇದನ್ನೂ ಓದಿ ತುಮಕೂರಿನಲ್ಲಿ ಹಕ್ಕಿ ಜ್ವರದ ಆತಂಕ: ನವಿಲುಗಳ ಸಾವಿಗೆ ‘H5N1’ ಸೋಂಕು ಕಾರಣ!
ಇನ್ನೊಂದೆಡೆ, ತುಮಕೂರು ತಾಲೂಕಿನ ಬೊಮ್ಮನಹಳ್ಳಿಯ ಕೋಳಿ ಫಾರಂನಲ್ಲಿ ಏಕಕಾಲಕ್ಕೆ ಸುಮಾರು 30ಕ್ಕೂ ಹೆಚ್ಚು ಕೋಳಿಗಳು ಸಾವನ್ನಪ್ಪಿದ್ದವು. ಹಕ್ಕಿ ಜ್ವರದ ಭೀತಿಯ ನಡುವೆ ಈ ಘಟನೆ ಗ್ರಾಮಸ್ಥರನ್ನು ಕಂಗಾಲಾಗಿಸಿತ್ತು. ತಕ್ಷಣವೇ ಮೃತ ಕೋಳಿಗಳ ಸ್ಯಾಂಪಲ್‌ಗಳನ್ನು ವೈದ್ಯಕೀಯ ಪರೀಕ್ಷೆಗೆ ರವಾನಿಸಲಾಗಿತ್ತು. ಇದೀಗ ವರದಿ ಬಂದಿದ್ದು, ಕೋಳಿಗಳಲ್ಲಿ ಹಕ್ಕಿ ಜ್ವರ ಪತ್ತೆಯಾಗಿಲ್ಲ (Negative) ಎಂದು ದೃಢಪಟ್ಟಿದೆ. ಇದರಿಂದ ಕೋಳಿ ಫಾರಂ ಮಾಲೀಕರು ಹಾಗೂ ಸ್ಥಳೀಯರು ಕೊಂಚ ನಿಟ್ಟುಸಿರು ಬಿಟ್ಟಿದ್ದಾರಾದರೂ, ನವಿಲುಗಳ ಸಾವು ಇನ್ನೂ ನಿಗೂಢವಾಗಿಯೇ ಇರುವುದು ಚಿಂತೆಯನ್ನು ಹೆಚ್ಚಿಸಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 11:00 am, Fri, 8 May 26