
ತುಮಕೂರು, ಜುಲೈ 15: ಜೂಜು ಅಡ್ಡೆ ಬಗ್ಗೆ ಮೇಲಧಿಕಾರಿಗೆ ಮಾಹಿತಿ ನೀಡಿದ್ದಕ್ಕೆ ತಿಪಟೂರು (Tipatur) ತಾಲೂಕಿನ ಹೊನ್ನವಳ್ಳಿ ಠಾಣೆಯ ಪೊಲೀಸರು (Police) ವಿಶೇಷ ಚೇತನ ವ್ಯಕ್ತಿಯ ಮೇಲೆ ಹಲ್ಲೆ ಮಾಡಿರುವ ಆರೋಪ ಕೇಳಿಬಂದಿದೆ. ತುಮಕೂರು (Tumakur) ಜಿಲ್ಲೆಯ ತಿಪಟೂರು ತಾಲೂಕಿನ ಚೌಲಿಹಳ್ಳಿ ಗ್ರಾಮದಲ್ಲಿ ಘಟನೆ ನಡೆದಿದೆ. ಚೌಲಿಹಳ್ಳಿ ಗ್ರಾಮದಲ್ಲಿ ನಡೆಯುತ್ತಿದ್ದ ಅಕ್ರಮ ಜೂಜಾಟದ ಬಗ್ಗೆ ರಘು ಅವರು ತಿಪಟೂರು ಸರ್ಕಲ್ ಇನ್ಸ್ಪೆಕ್ಟರ್ಗೆ ಮಾಹಿತಿ ನೀಡಿದ್ದರು. ಈ ಕಾರಣದಿಂದ ಹೊನ್ನವಳ್ಳಿ ಠಾಣೆ ಎಸ್ಐ ರಾಜೇಶ್, ಸಿಬ್ಬಂದಿ ಯೋಗೀಶ್ ವಿಶೇಷ ಚೇತನರಾದ ರಘು ಅವರ ಮನೆಗೆ ನುಗ್ಗಿ ಬೂಟ್ ಕಾಲಿನಿಂದ ಒದ್ದು, ನಿಂದಿಸಿ ಹಲ್ಲೆ ಮಾಡಿದ್ದಾರೆ.
ಈ ವೇಳೆ ತಡೆಯಲು ಬಂದ ಕುಟುಂಬದ ಮಹಿಳೆಯರ ಮೇಲೂ ಹಲ್ಲೆ ಮಾಡಿದ್ದಾರೆ ಎಂದು ರಘು ತಾಯಿ ತುಮಕೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ವಿ.ಅಶೋಕ್ ಅವರಿಗೆ ದೂರು ನೀಡಿದ್ದಾರೆ.
ಎಸ್ಐ ರಾಜೇಶ್, ಸಿಬ್ಬಂದಿ ಯೋಗೀಶ್ ವಿರುದ್ಧ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದಾರೆ. ಪೊಲೀಸರ ಹಲ್ಲೆಯಿಂದ ರಘು ಬಲಗಾಲು ಮುರಿದಿದ್ದು, ತಿಪಟೂರು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಹುಬ್ಬಳ್ಳಿ: ಮಹಿಳೆಯ ಕಣ್ಣಿಗೆ ಕಾರದಪುಡಿ ಎರಚಿ ಹಲ್ಲೆ ಮಾಡಿರುವ ಘಟನೆ ಮಂಟೂರ್ ರಸ್ತೆಯ ಮೌಲಾಲಿ ದರ್ಗಾ ಬಳಿ ನಡೆದಿದೆ. ಮಹಿಳೆ ಮಾವುಬಿ ಬಿಜಾಪುರ್ ಹಲ್ಲೆಗೊಳಗಾದವರು. ಇಂದು (ಜು.15) ಬೆಳಗ್ಗೆ ಮಾವುಬಿ ಬಿಜಾಪುರ್ ಅವರು ತಮ್ಮ ತಾಯಿಯ ಮನೆಗೆ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದರು. ಈ ವೇಳೆ ಮಾಸ್ಕ್ ಧರಿಸಿಕೊಂಡು ದ್ವಿಚಕ್ರ ವಾಹನದಲ್ಲಿ ಬಂದ ಇಬ್ಬರು ಅಪರಿಚಿತರು ಮಾವುಬಿ ಬಿಜಾಪುರ್ ಅವರ ಕಣ್ಣಿಗೆ ಕಾರದಪುಡಿ ಎರಚಿ ಹಲ್ಲೆ ಮಾಡಿದ್ದಾರೆ.
ಇದನ್ನೂ ಓದಿ: ಪತ್ನಿಯ ಕುತ್ತಿಗೆ, ಮುಖಕ್ಕೆ 20 ಕ್ಕೂ ಹೆಚ್ಚು ಬಾರಿ ಇರಿದು ಕೊಂದ ಪತಿ
ಕಳೆದ ವಾರ ಹುಬ್ಬಳ್ಳಿಯಲ್ಲಿ ರೌಡಿಗಳ ಗ್ಯಾಂಗ್ ವಾರ್ ನಡೆದಿತ್ತು. ಗ್ಯಾಂಗ್ ವಾರ್ ನಡೆದ ಸ್ಥಳದಲ್ಲಿ ಮಾವುಬಿ ಬಿಜಾಪುರ್ ಇದ್ದರು. ಗಲಾಟೆ ವೇಳೆ ಮಾವುಬಿ ಬಿಜಾಪುರ್ ಅವರ ಕಾಲಿಗೆ ಕಲ್ಲು ತಗುಲಿತ್ತು. ಈ ಹಿನ್ನೆಲೆಯಲ್ಲಿ ಮಾವುಬಿ ಬಿಜಾಪುರ್ ಅವರು ಪೊಲೀಸ್ ಠಾಣೆಗೆ ತೆರಳಿ ದೂರು ನೀಡಲು ಮುಂದಾಗಿದ್ದರು.
ಆಗ ಪೊಲೀಸರು, ಗಲಾಟೆಗೆ ಸಾಕ್ಷಿಯಾಗುವಂತೆ ಹೇಳಿದ್ದರು. ಇದೇ ಕಾರಣದಿಂದ ಮಾವುಬಿ ಬಿಜಾಪುರ್ ಅವರ ಮೇಲೆ ಹಲ್ಲೆ ನಡೆದಿರಬಹುದು ಎಂಬ ಅನುಮಾನ ವ್ಯಕ್ತವಾಗಿದೆ. ಗಾಯಗೊಂಡ ಮಾವುಬಿ ಬಿಜಾಪುರ್ ಅವರನ್ನು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ಹುಬ್ಬಳ್ಳಿಯ ಬೆಂಡಿಗೇರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
Published On - 3:44 pm, Tue, 15 July 25