ಹೊಸ ಚರ್ಚೆ ಹುಟ್ಟುಹಾಕಿದ KPS ಮ್ಯಾಗ್ನೆಟ್ ಶಾಲೆ ಯೋಜನೆ: ಆರಂಭಕ್ಕೂ ಮುನ್ನವೇ ಅಪಸ್ವರ ಏಕೆ?

ಕರ್ನಾಟಕ ಸರ್ಕಾರ KPS ಮ್ಯಾಗ್ನೆಟ್ ಶಾಲೆಗಳ ನೀತಿಯನ್ನು ಜಾರಿಗೊಳಿಸಲು ಹೊರಟಿದೆ. ಇದು ಸಣ್ಣ ಸರ್ಕಾರಿ ಶಾಲೆಗಳನ್ನು ವಿಲೀನಗೊಳಿಸಿ ಆಧುನಿಕ ಸೌಲಭ್ಯಗಳಿರುವ ದೊಡ್ಡ ಶಾಲೆಗಳನ್ನು ನಿರ್ಮಿಸುವ ಯೋಜನೆಯಾಗಿದೆ. ಆದರೆ, ತುಮಕೂರು ಜಿಲ್ಲೆಯಲ್ಲಿ ಈ ನೀತಿಗೆ ವ್ಯಾಪಕ ವಿರೋಧ ವ್ಯಕ್ತವಾಗಿದೆ. ಸ್ಥಳೀಯರು, ಪೋಷಕರು ಮತ್ತು ವಿದ್ಯಾರ್ಥಿಗಳು ತಮ್ಮ ಹಳ್ಳಿ ಶಾಲೆಗಳು ಮುಚ್ಚಿ ಹೋಗುವ ಭೀತಿಯಿಂದ ಬೀದಿಗಿಳಿದು ಪ್ರತಿಭಟಿಸಿದ್ದಾರೆ.

ಹೊಸ ಚರ್ಚೆ ಹುಟ್ಟುಹಾಕಿದ KPS ಮ್ಯಾಗ್ನೆಟ್ ಶಾಲೆ ಯೋಜನೆ: ಆರಂಭಕ್ಕೂ ಮುನ್ನವೇ ಅಪಸ್ವರ ಏಕೆ?
ಪೋಷಕರಿಂದ ಪ್ರತಿಭಟನೆ
Image Credit source: tv9 kannada
Edited By:

Updated on: Mar 30, 2026 | 8:07 PM

ತುಮಕೂರು, ಮಾರ್ಚ್​ 30: ಅದೊಂದು ಕಾಲವಿತ್ತು. ಶಾಲೆ ಎಂದರೇ ಸಾಕು ಮಕ್ಕಳು ಕಿ.ಮೀಗಳಷ್ಟು ದೂರ ಹೆಜ್ಜೆ ಹಾಕಬೇಕಿತ್ತು. ಊರಿಂದೂರಿಗೆ ಬಂದು ಪಾಠ ಕೇಳಬೇಕಿತ್ತು. ನಂತರದಲ್ಲಿ ನಮ್ಮೂರ ಶಾಲೆ ಎಂಬಂತೆ ಹಳ್ಳಿಹಳ್ಳಿಯಲ್ಲೂ ಸರ್ಕಾರಿ ಶಾಲೆ ತೆರೆಯಲಾಗಿತ್ತು. ಮಕ್ಕಳು ಖುಷಿಯಾಗಿ ಪಾಠ ಕೇಳುತಿದ್ದರು. ಆದ್ರೀಗ ಸರ್ಕಾರದ ಕೆಪಿಎಸ್ ಮ್ಯಾಗ್ನೆಟ್ ಶಾಲೆಯ (KPS Magnet Schools) ನೀತಿ ಆರಂಭಕ್ಕೂ ಮುನ್ನವೇ ಒಂದಷ್ಟು ಅಪಸ್ವರದ ಚರ್ಚೆ ಸೃಷ್ಟಿಸಿದೆ.

ವಿವಿಧೋದ್ದೇಶಿತ ಶಾಲಾ ನೀತಿಗೆ ವಿರೋಧ 

ಕೆಪಿಎಸ್ ಶಾಲೆ, ಕರ್ನಾಟಕ ಸಾರ್ವಜನಿಕ ಶಾಲೆಗಳ ಮ್ಯಾಗ್ನೆಟ್ ಯೋಜನೆ. ಇದು ರಾಜ್ಯದ ಸರ್ಕಾರಿ ಶಾಲೆಗಳ ಗುಣಮಟ್ಟ ಸುಧಾರಣೆ ಮತ್ತು ಏಕೀಕರಣಕ್ಕಾಗಿ ಹಮ್ಮಿಕೊಂಡಿರುವ ನೀತಿ. ಸುಮಾರು ಒಂದರಿಂದ ಐದು ಕಿ.ಮೀ ವ್ಯಾಪ್ತಿಯ ಸಣ್ಣ ಶಾಲೆಗಳನ್ನು ವಿಲೀನಗೊಳಿಸಿ, ಸುಮಾರು 1,200ಕ್ಕೂ ಹೆಚ್ಚು ವಿದ್ಯಾರ್ಥಿಗಳ ಸಾಮರ್ಥ್ಯದ ಆಧುನಿಕ ಸೌಲಭ್ಯಗಳಿರುವ ಶಾಲೆಗಳನ್ನು ನಿರ್ಮಿಸುವ ಗುರಿಯಾಗಿದೆ. ಆ ಮೂಲಕ ಪೂರ್ವ ಹಾಗೂ ಪ್ರಾಥಮಿಕದಿಂದ ಪಿಯುಸಿವರೆಗೆ ಒಂದೇ ಸೂರಿನಡಿ ಶಿಕ್ಷಣ ಮತ್ತು ಆಧುನಿಕ ಮೂಲಸೌಕರ್ಯಗಳನ್ನು ಒದಗಿಸುವ ಉದ್ದೇಶ ಹೊಂದಿದೆ. ಈ ರೀತಿಯ ವಿವಿಧೋದ್ದೇಶಿತ ಶಾಲಾ ನೀತಿಗೆ ಈಗ ತುಮಕೂರಿನಲ್ಲಿ ವಿರೋಧ ವ್ಯಕ್ತವಾಗಿದೆ.

ಇದನ್ನೂ ಓದಿ: ವರ್ಷಗಳಿಂದ ಅಭಿವೃದ್ಧಿ ಕಾಣದೆ ಉಳಿದ ಬಾಲಕಿಯರ ವಸತಿ ನಿಲಯ; ಮೌಢ್ಯವನ್ನೇ ನೆಪ ಮಾಡಿಕೊಂಡಿತಾ ಸರ್ಕಾರ?

ತುಮಕೂರು ಜಿಲ್ಲೆಯಲ್ಲಿ ಕೆಪಿಎಸ್ ಮ್ಯಾಗ್ನೆಟ್ ಶಾಲೆಗಳ ನೀತಿಗೆ ದಿನದಿಂದದಿನಕ್ಕೆ ವಿರೋಧದ ಕೂಗು ಜೋರಾಗುತ್ತಿದೆ. ವಿಲೀನ ನೀತಿ ಪ್ರಕಾರವಾಗಿ ಹಳ್ಳಿಗಳ ಸರ್ಕಾರಿ ಶಾಲೆಗಳನ್ನು ಮುಚ್ಚುವ ಕ್ರಮದ ವಿರುದ್ಧ ಶಾಲಾ ಮಕ್ಕಳು, ಪೋಷಕರು ಬೀದಿಗಿಳಿದು ಹೋರಾಟ ನಡೆಸುತ್ತಿದ್ದಾರೆ. ತುಮಕೂರು ನಗರ, ಶಿರಾ, ಕೊರಟಗೆರೆ ಸೇರಿದಂತೆ ಹಲವು ತಾಲ್ಲೂಕಿನ ಭಾಗಗಳಲ್ಲಿ ಪ್ರತಿಭಟನೆ ತೀವ್ರಗೊಂಡಿದೆ. ಕಾರಣ, ಕೆಪಿಎಸ್ ಮ್ಯಾಗ್ನೆಟ್ ಶಾಲೆಗಳ ಹೆಸರಿನಲ್ಲಿ ನಮ್ಮೂರ ಸರ್ಕಾರಿ ಶಾಲೆಗಳಿಗೆ ಬೀಗ ಹಾಕುವ ಮುಖಾಂತರ ಮುಚ್ಚಲು ಮುಂದಾಗಿದ್ದಾರೆ ಎಂಬ ಆರೋಪ ಕೇಳಿಬರುತ್ತಿದೆ. ಈ ರೀತಿ ಜಿಲ್ಲೆಯಲ್ಲಿ ಒಟ್ಟು 1200 ಸರ್ಕಾರಿ ಶಾಲೆಗಳ ಮೇಲೆ ಪರಿಣಾಮ ಬೀಳುವ ಸಾಧ್ಯತೆ ಇದೆ ಎಂದು ಸ್ಥಳೀಯರು ಆತಂಕ ವ್ಯಕ್ತಪಡಿಸುತ್ತಿದ್ದಾರೆ.

ವಿದ್ಯಾರ್ಥಿಗಳು ಮತ್ತು ಪೋಷಕರ ಜೊತೆ ಪ್ರತಿಭಟನೆ

ಇನ್ನು ಈ ಹೋರಾಟಕ್ಕೆ ಎಐಡಿಎಸ್ಒ ಸಂಘಟನೆ ಜೊತೆಯಾಗಿದೆ. ಹಳ್ಳಿಹಳ್ಳಿಯ ಸಣ್ಣ ಸರ್ಕಾರಿ ಶಾಲೆಗಳ ಉಳಿವಿಗಾಗಿ ವಿದ್ಯಾರ್ಥಿಗಳು ಮತ್ತು ಪೋಷಕರ ಜೊತೆ ಪ್ರತಿಭಟನೆ ನಡೆಸುತ್ತಿದೆ. ಗ್ರಾಮಸ್ಥರು ನಮ್ಮ ಶಾಲೆ ಮುಚ್ಚಲು ಬಿಡುವುದಿಲ್ಲ ಎಂದು ಘೋಷಣೆ ಕೂಗುತ್ತಾ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಈ ಕೂಗು ಹಂತ ಹಂತವಾಗಿ ಜಿಲ್ಲೆಯಾದ್ಯಂತ ವಿರೋಧದ ಅಲೆ ಹೆಚ್ಚಾಗುತ್ತಿದ್ದು, ಸರ್ಕಾರದ ನಿರ್ಧಾರ ಹಿಂಪಡೆಯುವಂತೆ ಆಗ್ರಹ ಹೆಚ್ಚಾಗಿದೆ.

ಇದನ್ನೂ ಓದಿ: ಚಲಿಸುವ ಬಸ್ ಕಿಟಕಿಯಲ್ಲಿ ಬ್ಯಾಗ್ ಇಡಲು ಹೋಗಿ ಚಕ್ರಕ್ಕೆ ಸಿಲುಕಿದ ವಿದ್ಯಾರ್ಥಿನಿ ಕಾಲು: ಸೆರೆಯಾಯ್ತು ಭೀಕರ ದೃಶ್ಯ

ಸದ್ಯ ದಿನದಿಂದ ದಿನಕ್ಕೆ ಕೆಪಿಎಸ್ ಮ್ಯಾಗ್ನೆಟ್ ಶಾಲಾ ನೀತಿಗೆ ತುಮಕೂರಿನಲ್ಲಿ ವಿರೋಧ ಹೆಚ್ಚಾಗುತ್ತಿದೆ. ಸರ್ಕಾರ ಈ ಚಿಂತನೆ ನಿಲ್ಲಿಸುವಂತೆ ಒತ್ತಾಯ ಕೇಳಿಬರುತ್ತಿದೆ. ಸದ್ಯ ಈ ಬೆಳವಣಿಗೆ ಮುಂದಿನ ದಿನಗಳಲ್ಲಿ ಇನ್ನಷ್ಟು ತೀವ್ರ ಸ್ವರೂಪ ಪಡೆಯುವ ಸಾಧ್ಯತೆಯಿದ್ದು, ಸರ್ಕಾರ ಈ ವಿಚಾರವಾಗಿ ಯಾವ ನಿರ್ಧಾರ ಕೈಗೊಳ್ಳಲಿದೆ ಎನ್ನುವುದನ್ನು ಕಾದುನೋಡಬೇಕಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

ಜಗದೀಶ ಬಿ.

ಜಗದೀಶ್​ ಬಸವರಾಜು ಟಿವಿ9 ಕನ್ನಡದ ಜಿಲ್ಲಾ ವರದಿಗಾರರಾಗಿದ್ದಾರೆ. ಪ್ರಸ್ತುತ ಅವರು ತುಮಕುರು ಜಿಲ್ಲಾ ಸುದ್ದಿಗಳ ವರದಿ ಮಾಡುತ್ತಿದ್ದಾರೆ. ಹುಟ್ಟಿದ್ದು, ಬೆಳೆದಿದ್ದು ಬೆಂಗಳೂರಿನಲ್ಲಿ. ಪತ್ರಿಕೋದ್ಯಮ ಓದಿದ್ದು, ವೃತ್ತಿ ಬದುಕು ಆರಂಭಿಸಿದ್ದು ಕೂಡಾ ಬೆಂಗಳೂರಿನಲ್ಲಿ. ಟಿವಿ9ನಲ್ಲಿ ಎಂಟು ವರ್ಷ ಸಹಿತ ಹತ್ತು ವರ್ಷದ ಕ್ರೈಂ ವರದಿಗಾರಿಕೆಯ ಅನುಭವದ ಜೊತೆ ಸದ್ಯ ೨೦೨೫ರಿಂದ ತುಮಕೂರು ಜಿಲ್ಲಾವರದಿಗಾರನಾಗಿ ಮಾದ್ಯಮದ ವೃತ್ತಿ ಬದುಕು ಮುಂದುವರೆದಿದೆ.

Read More
Loading...
Unable to load recommendations.
Follow Us