
ತುಮಕೂರು, ಏಪ್ರಿಲ್ 06: ಸದ್ಯ ಇಸ್ರೇಲ್ ಹಾಗೂ ಇರಾನ್ ನಡುವಿನ ಯುದ್ಧದ ಹೊಡೆತ ಎಲ್ಲೆಡೆ ತಟ್ಟಿದೆ. ಅನಿಲ ಅಭಾವದಿಂದ ಜನ ತತ್ತರಿಸಿದ್ದಾರೆ. ಅತ್ತ ಅಡುಗೆ ಅನಿಲ ಕೊರತೆ ಉಂಟಾದರೆ, ಇತ್ತ ಅಗತ್ಯ ವಸ್ತುಗಳ ಬೆಲೆ ಏರಿಕೆ ಆಗಿದೆ. ಇದರ ಮಧ್ಯೆ ಮುಂದೇನಾಗುತ್ತೋ ಎಂಬ ಆತಂಕದಲ್ಲಿರುವ ತುಮಕೂರು (tumakuru) ನಗರದ ಜನರಿಗೆ ಪಾಲಿಕೆ ಈಗ ಶಾಕ್ ಕೊಟ್ಟಿದೆ. ತುಮಕೂರು ಮಹಾನಗರ ಪಾಲಿಕೆ ತೆರಿಗೆ ದರವನ್ನು (tax hike) ದಿಢೀರ್ ಏರಿಕೆ ಮಾಡಿದೆ. ಯುಜಿಡಿ, ನೀರಿನ ತೆರಿಗೆ ಸೇರಿದಂತೆ ಹಲವು ಶುಲ್ಕಗಳಲ್ಲಿ ಭಾರೀ ಏರಿಕೆಯಾಗಿದ್ದು, ಜನ ಕಂಗಾಲಾಗಿದ್ದಾರೆ.
ತುಮಕೂರು ನಗರದ ಜನರಿಗೆ ಪಾಲಿಕೆಯಿಂದ ತೆರಿಗೆ ಶಾಕ್ ಎದುರಾಗಿದೆ. ಕಳೆದ 10 ವರ್ಷಗಳಿಂದ ಏರಿಕೆಯಾಗದ ಯುಜಿಡಿ ಮತ್ತು ನೀರಿನ ತೆರಿಗೆ ದರವನ್ನು ಮಹಾನಗರ ಪಾಲಿಕೆ ಈ ವರ್ಷ ದಿಢೀರ್ ಹೆಚ್ಚಳ ಮಾಡಿದೆ. ಈ ಮೂಲಕ 2026-27ನೇ ಸಾಲಿನ ಆಸ್ತಿ ತೆರಿಗೆಯ ಮೇಲೂ ಶೇಕಡ 5ರಷ್ಟು ಹೆಚ್ಚಳ ಮಾಡಲಾಗಿದ್ದು, ಏಪ್ರಿಲ್ 1ರಿಂದಲೇ ಹೊಸ ದರ ಜಾರಿಯಾಗಿದೆ. ಆದರೆ ಜನರಿಗೆ ತುಮಕೂರು ಮಹಾನಗರ ಪಾಲಿಕೆಯ ಈ ಲೆಕ್ಕಾಚಾರವೇ ಕಂಗಾಲಾಗಿಸಿದೆ.
ಇದನ್ನೂ ಓದಿ: ಹೊಸ ಚರ್ಚೆ ಹುಟ್ಟುಹಾಕಿದ KPS ಮ್ಯಾಗ್ನೆಟ್ ಶಾಲೆ ಯೋಜನೆ: ಆರಂಭಕ್ಕೂ ಮುನ್ನವೇ ಅಪಸ್ವರ ಏಕೆ?
ಯುಜಿಡಿ ತೆರಿಗೆ 480 ರೂ ಇಂದ ನೇರವಾಗಿ 1,440 ರೂ.ಗೆ ಏರಿಕೆಯಾಗಿದೆ. ಇದೇ ರೀತಿ ನೀರಿನ ತೆರಿಗೆ 2,400 ರೂ, ಇಂದ 3,600 ರೂ. ಗೆ ಹೆಚ್ಚಳ ಕಂಡಿದೆ. ಖಾತಾ ವರ್ಗಾವಣೆ ಶುಲ್ಕವೂ 100 ರೂಪಾಯಿಯಿಂದ 200 ರೂಪಾಯಿಗೆ ಡಬಲ್ ಆಗಿದೆ. ದಿಢೀರ್ ಏರಿಕೆಯ ಈ ನಿರ್ಧಾರಕ್ಕೆ ಸಾರ್ವಜನಿಕರಿಂದ ತೀವ್ರ ವಿರೋಧ ವ್ಯಕ್ತವಾಗುತ್ತಿದೆ.
ಒಂದು ಕಡೆ ಹಣ ಕೊಡುತ್ತೇವೆ ಅಂತ ಹೇಳಿ ಗ್ಯಾರಂಟಿ ಯೋಜನೆ ಅಂತ ಎರಡು ಸಾವಿರ ರೂ ಕೊಟ್ಟು, ಇನ್ನೊಂದು ಕಡೆ ತೆರಿಗೆ ರೂಪದಲ್ಲಿ ನಮ್ಮಿಂದಲೇ ಹಣ ವಾಪಸ್ ಪಡೆಯುತ್ತಿದ್ದಾರೆ. ಪಾಶ್ಚಿಮಾತ್ಯದ ಯುದ್ಧ ಪರಿಸ್ಥಿತಿ, ಬೆಲೆ ಏರಿಕೆ ಸಮಸ್ಯೆಗಳ ನಡುವೆ ಈ ತೆರಿಗೆ ಹೆಚ್ಚಳ ಸರಿಯಲ್ಲ ಎಂದು ಚಾಂದ್ ಪಾಷ ಎನ್ನುವವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಮಹಾನಗರ ಪಾಲಿಕೆ ಆಯುಕ್ತೆ ಶುಭ ಅವರು ಈ ಕ್ರಮವನ್ನು ಸಮರ್ಥಿಸಿಕೊಂಡಿದ್ದಾರೆ. 10 ವರ್ಷಗಳಿಂದ ಏರಿಕೆಯಾಗದ ಯುಜಿಡಿ ಮತ್ತು ನೀರಿನ ತೆರಿಗೆ ದರವನ್ನು ಸರ್ಕಾರದ ನಿಯಮದಂತೆ ಈ ವರ್ಷ ಹೆಚ್ಚಿಸಲಾಗಿದೆ ಎಂದಿದ್ದಾರೆ. ಜೊತೆಗೆ, ಪ್ರತಿ ವರ್ಷದಂತೆ ಶೇಕಡ 5ರಷ್ಟು ಆಸ್ತಿ ತೆರಿಗೆ ಏರಿಕೆಯಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ. ಏಪ್ರಿಲ್ ತಿಂಗಳಲ್ಲೇ ತೆರಿಗೆ ಪಾವತಿಸಿದರೆ ಶೇಕಡ 5ರಷ್ಟು ರಿಯಾಯಿತಿ ನೀಡಲಾಗುತ್ತಿದ್ದು, ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳುವಂತೆ ಮನವಿ ಮಾಡಿದ್ದಾರೆ.
ಇದನ್ನೂ ಓದಿ: ಅರಣ್ಯ ಇಲಾಖೆ ಹೆಸರಲ್ಲಿ ನಕಲಿ ತರಬೇತಿ ಕೇಂದ್ರ: ಖದೀಮರ ಸೆಟ್ ಅಪ್ ಕಂಡು ಅಧಿಕಾರಿಗಳೇ ಕಂಗಾಲು
ಒಟ್ಟಾರೆ, ತೆರಿಗೆ ಏರಿಕೆಗೆ ಕಾರಣ ಕೊಟ್ಟ ಪಾಲಿಕೆ ಕಡ್ಡಾಯ ಪಾವತಿಗೆ ಸೂಚಿಸಿದ್ದು, ಏಪ್ರಿಲ್ ವಿನಾಯಿತಿಯ ಲೆಕ್ಕಾಚಾರ ನೀಡಿದೆ. ಆದರೆ ತೆರಿಗೆ ಹೆಚ್ಚಳದ ಬಳಿಕ ಕೊಟ್ಟ ಈ ಆಫರ್ ಜನರಿಗೆ ನುಂಗಲಾರದ ತುತ್ತಾಗಿದ್ದು, ಪಾಲಿಕೆಯ ಚಿಂತನೆಗೆ ಜನ, ಸರ್ಕಾರಕ್ಕೆ ಹಿಡಿಶಾಪ ಹಾಕುತ್ತಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.