ಅರಣ್ಯ ಇಲಾಖೆ ಹೆಸರಲ್ಲಿ ನಕಲಿ ತರಬೇತಿ ಕೇಂದ್ರ: ಖದೀಮರ ಸೆಟ್ ಅಪ್ ಕಂಡು ಅಧಿಕಾರಿಗಳೇ ಕಂಗಾಲು
ತುಮಕೂರಿನಲ್ಲಿ ಅರಣ್ಯ ಇಲಾಖೆ ನೇಮಕಾತಿ ಹೆಸರಿನಲ್ಲಿ ನಕಲಿ ತರಬೇತಿ ಕೇಂದ್ರ ಪತ್ತೆಯಾಗಿದೆ. ಖದೀಮರ ತಂಡವು ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಯ ನಕಲಿ ಲೆಟರ್‌ಹೆಡ್ ಮತ್ತು ಲೋಗೋ ಬಳಸಿ ಯುವಕರನ್ನು ವಂಚಿಸಿದೆ. 15 ಯುವಕರಿಗೆ ನಕಲಿ ನೇಮಕಾತಿ ಆದೇಶ ಪತ್ರಗಳನ್ನೂ ನೀಡಿದ್ದು, ಸ್ಥಳೀಯರ ಮಾಹಿತಿ ಮೇರೆಗೆ ಅಧಿಕಾರಿಗಳು ದಾಳಿ ನಡೆಸಿ ಜಾಲವನ್ನು ಭೇದಿಸಿದ್ದಾರೆ. ಈ ಬಗ್ಗೆ ಅರಣ್ಯ ಇಲಾಖೆ ಪೊಲೀಸರಿಗೆ ದೂರು ನೀಡಿದೆ.

ತುಮಕೂರು, ಮಾರ್ಚ್ 27: ಅರಣ್ಯ ಇಲಾಖೆ ನೇಮಕಾತಿ ಹೆಸರಲ್ಲಿ ನಕಲಿ ತರಬೇತಿ ಕೇಂದ್ರ ನಡೆಸುತ್ತಿದ್ದ ಜಾಲವೊಂದು ತುಮಕೂರಿನಲ್ಲಿ ಪತ್ತೆಯಾಗಿದೆ. ಬೆಳಗಾವಿ, ಬಾಗಲಕೋಟೆ ಸೇರಿದಂತೆ ಉತ್ತರ ಕರ್ನಾಟಕದ ಕೆಲ ಜಿಲ್ಲೆಗಳ 15 ಯುವಕರ ಕರೆತಂದಿದ್ದ ತಂಡ, ಇವರನ್ನು ಮೈಸೂರು ವಿಭಾಗದ ಅರಣ್ಯ ಇಲಾಖೆಯ ವಿವಿಧ ಹಂತಗಳ ಸೇವೆಗೆ ನೇಮಕಾತಿ ಪ್ರಕ್ರಿಯೆಯಲ್ಲಿ ಕೆಲಸದ ಆದೇಶ ಸಿಕ್ಕಿರುವ ರೀತಿ ನಂಬಿಸಿತ್ತು. ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಮೀನಾಕ್ಷಿ ನೇಗಿಯವರ ಲೆಟರ್ ಹೆಡ್, ಅರಣ್ಯ ಇಲಾಖೆಯ ಲೋಗೊ ಸೇರಿದಂತೆ ಪ್ರಧಾನ ಕಾರ್ಯದರ್ಶಿ ಸಹಿ ಹಾಗೂ ಸೀಲ್ನ ನಕಲು ಮಾಡಿದ್ದ ಖದೀಮರು, ನೇಮಕಾತಿ ಆದೇಶ ಪತ್ರಗಳನ್ನು ಯುವಕರಿಗೆ ವಾಟ್ಸ್ ಆ್ಯಪ್ ಮುಖಾಂತರ ಕಳುಹಿಸಿದ್ದರು ಎಂಬುದು ಬಯಲಾಗಿದೆ.
ತುಮಕೂರು ತಾಲೂಕಿನ ವಡ್ಡರಹಳ್ಳಿಯ ಪ್ರಭಾವಿ ವ್ಯಕ್ತಿ ವಾಲೆ ಚಂದ್ರರವರ ಪುತ್ರನ ತೋಟದ ಮನೆಯನ್ನು ಬಾಡಿಗೆ ಪಡೆದ ಗ್ಯಾಂಗ್ ಈ ರೀತಿಯ ಕೃತ್ಯ ಎಸಗಿದ್ದು, ಆರಂಭದಲ್ಲೇ ವಿಚಾರ ಬೆಳಕಿಗೆ ಬಂದಿದೆ. ತಿಂಗಳಿಗೆ 30 ಸಾವಿರ ಬಾಡಿಗೆಯಂತೆ ಮಾತನಾಡಿದ್ದ ಕೆಲವೇ ದಿನದಲ್ಲಿ ತೋಟದ ಮನೆಯಲ್ಲಿ ನಾನಾ ಬದಲಾವಣೆಯಾಗಿದ್ದವು. ಗೋಡೆಗಳಿಗೆ ಬಳಿದ ಬಣ್ಣ, ಬೋರ್ಡ್, ಅಪರಿಚಿತ 15 ಯುವಕರ ವಾಸ ಅನುಮಾನ ಮೂಡಿಸಿದ್ದ ಕಾರಣ, ತೋಟದ ಮಾಲೀಕ ಹಾಗೂ ಸ್ಥಳೀಯರು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಈ ಬಗ್ಗೆ ಮಾಹಿತಿ ನೀಡಿದ್ದಾರೆ. ಹೀಗಾಗಿ ಸ್ಥಳ ಪರಿಶೀಲನೆಗೆ ಬಂದ ಅರಣ್ಯ ಅಧಿಕಾರಿಗಳೇ ಇವರ ಸೆಟ್ ಅಪ್ ಕಂಡು ಒಂದು ಕ್ಷಣ ದಂಗಾಗಿದ್ದಾರೆ. ವ್ಯವಸ್ಥಿತವಾಗಿ 15 ಯುವಕರ ಯಾಮಾರಿಸಿ ಹಣ ಪಡೆದ ಜೊತೆಗೆ ಇಲಾಖೆ ಹೆಸರು ಬಳಸಿಕೊಂಡು ತರಬೇತಿ ನೆಪದಲ್ಲಿ ಕರೆತಂದು ವಂಚಿಸಿರೋದು ಈ ವೇಳೆ ಗೊತ್ತಾಗಿದೆ. ಕೂಡಲೇ ಈ ಬಗ್ಗೆ ಪೊಲೀಸರಿಗೆ ಅರಣ್ಯ ಇಲಾಖೆ ಮಾಹಿತಿ ನೀಡಿದೆ.
ಇದನ್ನೂ ಓದಿ: ಕ್ಲಾಸಲ್ಲೇ ಮೆಡಿಕಲ್ ವಿದ್ಯಾರ್ಥಿನಿಗೆ ಲವ್ ಯು ಎಂದ ಪ್ರೊಪೋಸರ್ ಅರೆಸ್ಟ್
ಇನ್ನು ಈ ವಂಚನೆ ಜಾಲದಲ್ಲಿ ತುಮಕೂರಿನ ನಮಸ್ತೆ ಕೆಫೆಯ ಪವನ್, ನೆಲಮಂಗಲದ ಕಿರಣ್ ಹಾಗೂ ವಿನಯ್ ಎಂಬ ಮೂವರ ಹೆಸರು ಕೇಳಿ ಬಂದಿದೆ. ಸದ್ಯ ಘಟನೆ ಸಂಬಂಧ ಅರಣ್ಯ ಇಲಾಖೆ ಅಧಿಕಾರಿಗಳು ತುಮಕೂರು ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ನೀಡಿದ್ದರೆ, ತರಬೇತಿಗೆಂದು ಬಂದಿದ್ದ ಯುವಕರು ಮೋಸ ಹೊದ ಬಗ್ಗೆ ತಿಳಿದು ಕಂಗಾಲಾಗಿ ಊರಿನತ್ತ ತೆರಳಿದ್ದಾರೆ. ಆದರೇ ಹೀಗೆ ವ್ಯವಸ್ಥಿತವಾಗಿ ಹಾಗೂ ಅಕ್ರಮವಾಗಿ ತರಬೇತಿ ಕೇಂದ್ರ ನಡೆಸುತಿದ್ದವರ ಹಿಂದೆ ಇರೋದ್ಯಾರು? ಯುವಕರು ವಂಚಕರ ಬಲೆಗೆ ಬಿದ್ದಿರೋದು ಹೇಗೆ? ಈ ರೀತಿಯ ಹಲವು ಪ್ರಶ್ನೆಗಳು ಮೂಡಿದ್ದು, ಪ್ರಕರಣದ ಮತ್ತಷ್ಟು ಮಾಹಿತಿ ಪೊಲೀಸರ ತನಿಖೆ ನಂತರವಷ್ಟೇ ತಿಳಿದು ಬರಬೇಕಿದೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.