ತಹಶೀಲ್ದಾರ್ ಕಚೇರಿಯಲ್ಲಿಯಿದ್ದ ಕಡತಕ್ಕೇ ಇಲ್ಲ ಸೇಫ್ಟಿ: ರಾಜ್ಯ ಮಾಹಿತಿ ಆಯೋಗದ ಸೂಚನೆ ಬೆನ್ನಲ್ಲೇ FIR
ತುಮಕೂರು ತಹಶೀಲ್ದಾರ್ ಕಚೇರಿಯಲ್ಲಿ ಇನಾಂ ಜಮೀನಿನ ಪ್ರಮುಖ ಕಡತ ನಾಪತ್ತೆಯಾಗಿದ್ದು, ರಾಜ್ಯ ಮಾಹಿತಿ ಆಯೋಗದ ಖಡಕ್ ನಿರ್ದೇಶನದ ಬೆನ್ನಲ್ಲೇ ತಹಶೀಲ್ದಾರ್ ರಾಜೇಶ್ವರಿ ನಗರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಿಸಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಅರ್ಜಿದಾರರು, ದಾಖಲೆಗೆ ಸಂಬಂಧಿತ ಜಾಗ ತನಗೆ ದಕ್ಕಬಾರದು ಎಂದೇ ಕಡತ ನಾಪತ್ತೆ ಆಗಿದೆ ಎಂದು ಸೃಷ್ಟಿಸಿದ್ದಾರೆ. ಇದರ ಹಿಂದೆ ಹಲವರ ಕೈವಾಡವಿದೆ ಎಂಬ ಗಂಭೀರ ಆರೋಪ ಮಾಡಿದ್ದಾರೆ.

ತುಮಕೂರು, ಮೇ 21: ತಹಶೀಲ್ದಾರ್ ಕಚೇರಿಯಲ್ಲಿಯಿದ್ದ ಸರ್ಕಾರಿ ಕಡತ ನಾಪತ್ತೆಯಾಗಿರುವ ಘಟನೆ ತುಮಕೂರಲ್ಲಿ (Tumakuru) ನಡೆದಿದೆ. ಈ ಸಂಬಂಧ ಅರ್ಜಿದಾರ ರಾಜ್ಯ ಮಾಹಿತಿ ಆಯೋಗದ ಮೊರೆಹೋದ ಹಿನ್ನೆಲೆ, ಪರಿಶೀಲಿಸುವಂತೆ ಆಯೋಗ ಖಡಕ್ ಸೂಚನೆ ಕೊಟ್ಟ ಕಾರಣ ತುಮಕೂರು ತಹಶೀಲ್ದಾರ್ ರಾಜೇಶ್ವರಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ಕಡತ ನಾಪತ್ತೆ ಸಂಬಂಧ ಅವರು ದೂರು ನೀಡಿದ್ದು, ಅದರನ್ವಯ ತುಮಕೂರು ನಗರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
ಹೆಬ್ಬೂರು ಹೋಬಳಿಯ ಜೋಡಿ ಕಲ್ಕರೆ ಗ್ರಾಮದ ದೊಡ್ಡಶಾನಯ್ಯ ಎಂಬುವರ ಸಹಿ ಇದ್ದ ಮೂಲ ಅರ್ಜಿ, ವಂಶವೃಕ್ಷ ಮರಣ ಪ್ರಮಾಣ ಪತ್ರಗಳಿದ್ದ ಕಡತ ನಾಪತ್ತೆಯಾಗಿದ್ದು, ಈ ಬಗ್ಗೆ ಅರ್ಜಿದಾರರು ಹಲವು ಬಾರಿ ಗಮನಕ್ಕೆ ತಂದರು ಅಧಿಕಾರಿಗಳು ತಲೆಕೆಡಿಸಿಕೊಂಡಿರಲಿಲ್ಲ. ಇದರಿಂದ ಬೇಸತ್ತ ಅರ್ಜಿದಾರರಿಂದ ಮಾಹಿತಿ ಆಯೋಗಕ್ಕೆ ದೂರು ನೀಡಿದ್ದರು. ಆ ಬೆನ್ನಲ್ಲೇ ದೂರು ಪರಿಶೀಲಿಸಿದ ನಾಪತ್ತೆಯಾದ ಫೈಲ್‌ಗಳ ಬಗ್ಗೆ ಅಫಿಡವಿಟ್ ಸಲ್ಲಿಸಲು ಆಯೋಗ ಡೆಡ್‌ಲೈನ್ ಕೊಟ್ಟ ಹಿನ್ನೆಲೆ ಎಚ್ಚೆತ್ತ ತಹಶೀಲ್ದಾರ್ ಕಡತ ನಾಪತ್ತೆ ಬಗ್ಗೆ ರಾಜ್ಯ ಸಾರ್ವಜನಿಕ ದಾಖಲೆಗಳ ಕಾಯ್ದೆ ಅಡಿ ಪ್ರಕರಣ ದಾಖಲಿಸಿದ್ದಾರೆ.
ಇದನ್ನೂ ಓದಿ: ಬೆಂಗಳೂರು ಉತ್ತರ ಜಿಲ್ಲೆಯಾಗುವುದೇ ತುಮಕೂರು? ಮತ್ತೆ ಮುನ್ನೆಲೆಗೆ ಬರಲು ಕಾರಣವೇನು?
ಇನ್ನು ಈ ಬಗ್ಗೆ ಪ್ರತಿಕ್ರಿಯಿಸಿರುವ ತಹಶೀಲ್ದಾರ್ ರಾಜೇಶ್ವರಿ, ಅರ್ಜಿದಾರರು ವಂಶವೃಕ್ಷದ ಮೂಲ ದಾಖಲಾತಿಗಳನ್ನು ಕೇಳಿ 2023ರ ಮಾರ್ಚ್ 11ರಂದು ಅರ್ಜಿ ಸಲ್ಲಿಸಿದ್ದರು. ಆ ವೇಳೆ ಹಿಂದಿನ ತಹಶೀಲ್ದಾರ್ ಮತ್ತು ಕಚೇರಿ ಸಿಬ್ಬಂದಿ ಈ ಬಗ್ಗೆ ಹುಡುಕಾಡಿದಾಗ ಕಾಗದಪತ್ತ ನಾಪತ್ತೆ ಆಗಿರುವುದು ಗೊತ್ತಾಗಿದ್ದು, ಈ ಬಗ್ಗೆ ಅರ್ಜಿದಾರರಿಗೆ ಹಿಂಬರಹ ನೀಡಲಾಗಿತ್ತು. ಈ ವಿಚಾರ ಆರ್ಟಿಐ ಕಮಿಷನ್ಗೆ ಹೋಗಿದ್ದು, ಅವರು ಕಾಗಪತ್ರಗಳನ್ನು ಅರ್ಜಿದಾರರಿಗೆ ಹುಡುಕಿಕೊಡಿ. ಇಲ್ಲದಿದ್ದರೆ ಆ ಬಗ್ಗೆ ಪೊಲೀಸ್ ದೂರು ದಾಖಲಿಸುವಂತೆ ನಿರ್ದೇಶನ ಬಂದಿತ್ತು. ಆ ಕಾರಣ ಕಂಪ್ಲೇಂಟ್ ನೀಡಿರೋದಾಗಿ ಅವರು ತಿಳಿಸಿದ್ದಾರೆ.
ಇನ್ನು ಈ ಬಗ್ಗೆ ಪ್ರತಿಕ್ರಿಯಿಸಿರುವ ಅರ್ಜಿದಾರ ಶ್ರೀನಿವಾಸ ಕಲ್ಕೆರೆ, 4 ಸರ್ವೇ ನಂಬರ್ಗಳನ್ನು ಹೊಂದಿರುವ ಈ ಜಾಗ ಇನಾಂ ಲ್ಯಾಂಡ್ ಆಗಿದ್ದು ಅದು ತನಗೆ ದಕ್ಕಬಾರದು ಎಂದೇ ಕಡತ ನಾಪತ್ತೆ ಆಗಿದೆ ಎಂದು ಸೃಷ್ಟಿಸಿದ್ದಾರೆ. 2020-21 ಆರ್ಐ ಮತ್ತು ವಿಎ ಇಬ್ಬರೂ ಈ ಕಡತಗಳನ್ನ ಪರಿಶೀಲನೆ ಮಾಡಿದ್ದಾರೆ. ಆ ಬಳಿಕ ಅವರೇ ಕದ್ದುಹೋಗಿದ್ದು, ಈಗ ಅದು ಕಳವಾಗಿದೆ ಎಂದು ತಹಶೀಲ್ದಾರ್ ಪೊಲೀಸ್ ದೂರು ನೀಡಿದ್ದಾರೆ. 5 ಎಕ್ರೆ 28 ಗುಂಟೆ ಜಮೀನಿಗೆ ಸೇರಿದ ದಾಖಲೆ ಅದಾಗಿದ್ದು, ನನಗೆ ಈ ಕಡತ ಯಾವ ಕಾರಣಕ್ಕೆ ಬೇಕು ಎಂಬುದನ್ನು ಕೂಡ ಅರ್ಜಿಯಲ್ಲಿ ತಿಳಿಸಿದ್ದೆ ಎಂಬುದಾಗಿ ಅವರು ಮಾಹಿತಿ ನೀಡಿದ್ದಾರೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.




