
ತುಮಕೂರು, ಮೇ 18: ಭೀಕರ ರಸ್ತೆ ಅಪಘಾತದಲ್ಲಿ (accident) ತಾಯಿ ಮತ್ತು ಮಗಳು ಸ್ಥಳದಲ್ಲೇ ಸಾವನ್ನಪ್ಪಿರುವ (death) ದಾರುಣ ಘಟನೆ ತುಮಕೂರು ಜಿಲ್ಲೆಯ ಕುಣಿಗಲ್ ತಾಲ್ಲೂಕಿನ ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಸಂಭವಿಸಿದೆ. ಮೃತ ದುರ್ದೈವಿಗಳನ್ನು ಬೆಂಗಳೂರು ನಿವಾಸಿಗಳಾದ ಜಯಮಾಲಾ (60) ಮತ್ತು ರಾಜೇಶ್ವರಿ (40) ಎಂದು ಗುರುತಿಸಲಾಗಿದೆ. ಮೂಲತಃ ರಾಯಚೂರು ಜಿಲ್ಲೆಯವರಾದ ಜಯಮಾಲಾ ಅವರು ಹಲವು ವರ್ಷಗಳಿಂದ ಮಗಳು ರಾಜೇಶ್ವರಿಯೊಂದಿಗೆ ಬೆಂಗಳೂರಿನಲ್ಲಿ ವಾಸವಿದ್ದರು. ಕುಣಿಗಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ರಾಜೇಶ್ವರಿ ತಮ್ಮ ಮಗ ಪ್ರೀತಮ್‌ನನ್ನು ಶ್ರವಣಬೆಳಗೊಳದ ಶಾಲೆಗೆ ಸೇರಿಸಲು ಕಾರಿನಲ್ಲಿ ತೆರಳುತ್ತಿದ್ದರು. ಜೊತೆಗೆ ತಾಯಿ ಜಯಮಾಲಾ ಕೂಡ ಇದ್ದರು. ಕುಣಿಗಲ್ ತಾಲ್ಲೂಕಿನ ಉರ್ಕೆಹಳ್ಳಿ ಬಳಿ ಕಾರು ಚಾಲಕನ ನಿಯಂತ್ರಣ ತಪ್ಪಿ ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಜಯಮಾಲಾ ಹಾಗೂ ರಾಜೇಶ್ವರಿ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ. ಕಾರು ಚಾಲಕ ಮಾರುತಿ ಹಾಗೂ ರಾಜೇಶ್ವರಿ ಮಗ ಪ್ರೀತಮ್ ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದೆ. ಸದ್ಯ ಸ್ಥಳಕ್ಕೆ ಕುಣಿಗಲ್ ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ.
ಗ್ಲಾಸ್ ಏರಿಸಿಕೊಂಡು ಎಸಿ ಹಾಕಿಕೊಂಡು ಕಾರಿನಲ್ಲಿ ಮಲಗಿದ್ದ ಚಾಲಕ ಸಾವನ್ನಪ್ಪಿರುವಂತಹ ಘಟನೆ ಬೆಂಗಳೂರಿನ ಪೀಣ್ಯ ಬಳಿ ನೆಲಗೆದರಹಳ್ಳಿಯಲ್ಲಿ ನಡೆದಿದೆ. ಇಂದು ಬೆಳಗ್ಗೆ ಸುಮಾರು 10 ಗಂಟೆಗೆ ಖಾಸಗಿ ಕಂಪನಿಯೊಂದರ ಕಾರು ಚಾಲಕ ರಸ್ತೆ ಪಕ್ಕ ಕಾರು ನಿಲ್ಲಿಸಿ, ಎಲ್ಲಾ ಕಿಟಕಿಗಳನ್ನು ಏರಿಸಿ AC ಹಾಕಿಕೊಂಡು ಮಲಗಿದ್ದರು. ತುಂಬಾ ಹೊತ್ತು ಕಾರು ಅದೇ ಸ್ಥಳದಲ್ಲಿ ನಿಂತಿದ್ದರಿಂದ ಅನುಮಾನಗೊಂಡ ಸಾರ್ವಜನಿಕರು ಕಾರಿನ ಬಳಿ ಹೋಗಿ ಪರಿಶೀಲಿಸಿದ್ದಾರೆ. ಚಾಲಕ ಯಾವುದೇ ಪ್ರತಿಕ್ರಿಯೆ ನೀಡದಿದ್ದಾಗ ಕಲ್ಲಿನಿಂದ ಕಿಟಕಿ ಗಾಜು ಒಡೆದು ನೋಡಿದಾಗ, ಕಾರಿನೊಳಗೆ ಚಾಲಕ ಮೃತಪಟ್ಟಿರುವುದು ಪತ್ತೆಯಾಗಿದೆ. ತಕ್ಷಣ ಪೀಣ್ಯ ಪೊಲೀಸರಿಗೆ ಮಾಹಿತಿ ನೀಡಲಾಗಿದೆ.
ಸಿಡಿಲಿನ ಅಬ್ಬರಕ್ಕೆ ಹೃದಯಾಘಾತವಾಗಿ ಶಿಕ್ಷಕ ಸಾವನ್ನಪ್ಪಿರುವಂತಹ ಘಟನೆ ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲೂಕಿನ ಮಲೆಕುಂಬಳೂರು ಗ್ರಾಮದಲ್ಲಿ ನಡೆದಿದೆ. ಸರ್ಕಾರಿ ಶಾಲೆಯ ಮುಖ್ಯ ಶಿಕ್ಷಕ ನಾಗರಾಜಪ್ಪ(56) ಮೃತ ದುರ್ದೈವಿ. ಮನೆ ಮುಂದೆ ನಿಂತಿದ್ದಾಗ ಸಿಡಿಲಿನ ಶಬ್ದಕ್ಕೆ ಹೃದಯಾಘಾತವಾಗಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಹೊನ್ನಾಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ಖಾಸಗಿ ಬಸ್ ಡಿಕ್ಕಿಯಾಗಿ ಗೂಡ್ಸ್ ಆಟೋ ಚಾಲಕ ಸಾವನ್ನಪ್ಪಿರುವಂತಹ ಘಟನೆ ಕೋಲಾರ ತಾಲೂಕಿನ ಸಿಂಗೇಹಳ್ಳಿ ಗೇಟ್ ಬಳಿ ನಡೆದಿದೆ. ಆಂಧ್ರಪ್ರದೇಶ ಮೂಲದ ರಾಮುಡು ಮೃತ ಆಟೋ ಚಾಲಕ. ಕೋಲಾರದಲ್ಲಿ ಬಿಸ್ಕತ್ ತುಂಬಿಕೊಂಡು ಆಂಧ್ರಕ್ಕೆ ತೆರಳುತ್ತಿದ್ದ ಗೂಡ್ಸ್ ಆಟೋಗೆ ಖಾಸಗಿ ಬಸ್ ಡಿಕ್ಕಿ ಹೊಡೆದಿದೆ. ಡಿಕ್ಕಿ ರಭಸಕ್ಕೆ ಆಟೋ ಚಾಲಕ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಅಪಘಾತದ ದೃಶ್ಯ ಬಸ್ನಲ್ಲಿ ಅಳವಡಿಸಿದ್ದ ಕ್ಯಾಮರಾದಲ್ಲಿ ಸೆರೆ ಆಗಿದೆ. ಸದ್ಯ ವೇಮಗಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 9:34 pm, Mon, 18 May 26