AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಶಿರಾ ಕಾರು ಸ್ಫೋಟಕ್ಕೆ ಬಿಗ್ ಟ್ವಿಸ್ಟ್: ಭಗ್ನ ಪ್ರೇಮಿಯ ಕೊನೆಯ 72 ಗಂಟೆಗಳ ಮಿಸ್ಟರಿ ರಿವೀಲ್!

ತುಮಕೂರು ಜಿಲ್ಲೆಯ ಶಿರಾ ತಾಲೂಕಿನಲ್ಲಿ ನಡೆದ ಕಾರು ಸ್ಫೋಟ ಹಾಗೂ ಪಾಗಲ್ ಪ್ರೇಮಿ ನಾಗೇಂದ್ರನ ಆತ್ಮಹತ್ಯೆ ಪ್ರಕರಣಕ್ಕೆ ಹೊಸ ಟ್ವಿಸ್ಟ್ ಸಿಕ್ಕಿದೆ. ಸಾಮಾನ್ಯ ಡೆಲಿವರಿ ಬಾಯ್ ಕೈಗೆ ನಾಡಬಾಂಬ್ ಸಿಕ್ಕಿದ್ದು ಹೇಗೆ ಎಂಬ ರಹಸ್ಯವನ್ನು ಬೇಧಿಸಲು ಕಳ್ಳಂಬೆಳ್ಳ ಪೊಲೀಸರು ನಾಗೇಂದ್ರನ ಕೊನೆಯ 72 ಗಂಟೆಗಳ ಟ್ರಾವೆಲ್ ಹಿಸ್ಟರಿಯನ್ನು ಪತ್ತೆ ಹಚ್ಚಿದ್ದಾರೆ.

ಶಿರಾ ಕಾರು ಸ್ಫೋಟಕ್ಕೆ ಬಿಗ್ ಟ್ವಿಸ್ಟ್: ಭಗ್ನ ಪ್ರೇಮಿಯ ಕೊನೆಯ 72 ಗಂಟೆಗಳ ಮಿಸ್ಟರಿ ರಿವೀಲ್!
ನಾಗೇಂದ್ರ ಹಾಗೂ ಕಾರು ಸ್ಫೋಟ ಸಂಭವಿಸಿದ್ದ ಸ್ಥಳದ ಚಿತ್ರImage Credit source: tv9
Jagadisha B
| Edited By: |

Updated on: Jun 29, 2026 | 2:19 PM

Share

ಮುಖ್ಯಾಂಶಗಳು

  • ಬಯಲಾಯ್ತು ಕಾರು ಸ್ಫೋಟದ ರಹಸ್ಯ
  • ನಾಗೇಂದ್ರನ ಕೊನೆಯ 3 ದಿನಗಳ ಟ್ರಾವೆಲ್ ಹಿಸ್ಟರಿ ರಿವೀಲ್
  • ನಾಡಬಾಂಬ್ ಮೂಲದ ಪತ್ತೆಗೆ ಪೊಲೀಸರ ತೀವ್ರ ತನಿಖೆ

ತುಮಕೂರು, ಜೂನ್ 29: ತುಮಕೂರು (Tumakuru) ಜಿಲ್ಲೆ ಶಿರಾ ತಾಲೂಕಿನ ಜೋಗಿಹಳ್ಳಿ ಬಳಿ ನಡೆದ ಭೀಕರ ಕಾರು ಸ್ಫೋಟ ಪ್ರಕರಣ ಇಡೀ ರಾಜ್ಯವನ್ನೇ ನಡುಗಿಸಿತ್ತು. ರಮ್ಯಾ ಎಂಬ ಯುವತಿಯ ಅತಿಯಾದ ವ್ಯಾಮೋಹಕ್ಕೆ ಬಿದ್ದಿದ್ದ ನಾಗೇಂದ್ರ ಎಂಬ ಪಾಗಲ್ ಪ್ರೇಮಿ, ಆಕೆ ತನಗೆ ಸಿಗುವುದಿಲ್ಲ ಎಂಬ ಕಾರಣಕ್ಕೆ ನಾಡಬಾಂಬ್ ಸ್ಫೋಟಿಸಿಕೊಂಡು ಕಾರಿನಲ್ಲೇ ಸುಟ್ಟು ಬೂದಿಯಾಗಿದ್ದ. ಕೇವಲ ಎಸ್‌ಎಸ್‌ಎಲ್‌ಸಿ ಓದಿದ್ದ ನಾಗೇಂದ್ರ, ಅಂಕೋಲಾದಲ್ಲಿ ಡೆಲಿವರಿ ಬಾಯ್ ಆಗಿ ಕೆಲಸ ಮಾಡುತ್ತಿದ್ದ. ಆದರೆ, ಒಬ್ಬ ಸಾಮಾನ್ಯ ಯುವಕನ ಕೈಗೆ ನಾಡಬಾಂಬ್ ಹೇಗೆ ಸಿಕ್ಕಿತು? ಜೂನ್ 27 ರಂದು ಆತ್ಮಹತ್ಯೆ ಮಾಡಿಕೊಳ್ಳುವುದಕ್ಕೂ ಮುನ್ನ ನಾಗೇಂದ್ರ ಎಲ್ಲೆಲ್ಲಿ ಓಡಾಡಿದ್ದ ಎಂಬ ಪ್ರಶ್ನೆಗಳಿಗೆ ಉತ್ತರ ಹುಡುಕ ಹೊರಟ ಕಳ್ಳಂಬೆಳ್ಳ ಪೊಲೀಸರಿಗೆ ದಿಗಿಲು ಮೂಡಿಸುವ ಆಘಾತಕಾರಿ ಮಾಹಿತಿ ಲಭ್ಯವಾಗಿವೆ.

ನಾಗೇಂದ್ರನ ಕೊನೆಯ 3 ದಿನಗಳ ಟ್ರಾವೆಲ್ ಹಿಸ್ಟರಿ ಪತ್ತೆ

ಪೊಲೀಸರ ತನಿಖೆಯ ವೇಳೆ ನಾಗೇಂದ್ರನ ಕೊನೆಯ ಮೂರು ದಿನಗಳ ಸಂಪೂರ್ಣ ಟ್ರಾವೆಲ್ ಹಿಸ್ಟರಿ ರಿವೀಲ್ ಆಗಿದೆ. ಜೂನ್ 25 ರಂದು ಬೆಂಗಳೂರಿಗೆ ಬಂದು ರಮ್ಯಾಳನ್ನು ಭೇಟಿಯಾಗಿದ್ದ ನಾಗೇಂದ್ರ, ಅಂದು ರಾತ್ರಿಯೇ ಅಂಕೋಲಾಗೆ ವಾಪಸ್ ಆಗಿದ್ದ. ಜೂನ್ 26 ರಂದು ಇಡೀ ದಿನ ಅಂಕೋಲಾದ ಗಲ್ಲಿ ಗಲ್ಲಿಗಳಲ್ಲಿ ಸುತ್ತಾಡಿ, ಅದೇ ರಾತ್ರಿ ಮತ್ತೆ ಬೆಂಗಳೂರಿಗೆ ಬಂದಿದ್ದ. ಜೂನ್ 27 ರ ಬೆಳಗ್ಗೆ ಬೆಂಗಳೂರಿನ ಸಿದ್ದಾಪುರದಲ್ಲಿರುವ ರಮ್ಯಾಳ ಮನೆಯ ಬಾಗಿಲು ತಟ್ಟಿದ್ದ ನಾಗೇಂದ್ರ, ರಮ್ಯಾಳನ್ನು ಮಾತನಾಡಿಸಿಕೊಂಡು ಹೋದವನು ನೇರವಾಗಿ ಶಿರಾದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದ. ಆದರೆ, ಈ ಮೂರು ದಿನಗಳ ಅವಧಿಯಲ್ಲಿ ನಾಗೇಂದ್ರ 10 ಜನರನ್ನು ಖುದ್ದಾಗಿ ಭೇಟಿಯಾಗಿದ್ದ ಹಾಗೂ 8 ಜನರ ಜೊತೆ ಫೋನ್ ಕಾಲ್ ಮೂಲಕ ಮಾತನಾಡಿದ್ದ ಎಂಬುದು ದೃಢಪಟ್ಟಿದೆ.

ಬೇಟೆಗಾರರ ನಾಡಬಾಂಬ್ ಸಿಕ್ಕಿದ್ದು ಹೇಗೆ?

ವಿಪರ್ಯಾಸವೆಂದರೆ, ಪೊಲೀಸರು ನಾಗೇಂದ್ರನ ಸಂಪರ್ಕದಲ್ಲಿದ್ದ ಆ 10 ಜನರನ್ನು ವಿಚಾರಣೆ ನಡೆಸಿದರೂ ನಾಡಬಾಂಬ್ ಬಗ್ಗೆ ಯಾವುದೇ ಸುಳಿವು ಸಿಕ್ಕಿಲ್ಲ. ಏಕೆಂದರೆ, ಅವರೆಲ್ಲರೂ ನಾಗೇಂದ್ರನ ಸಂಬಂಧಿಕರು ಮತ್ತು ಸ್ನೇಹಿತರಾಗಿದ್ದಾರೆ. ಹಾಗಾದರೆ ಈ ನಾಡಬಾಂಬ್ ಎಲ್ಲಿಂದ ಬಂತು? ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ, ಹಳಿಯಾಳ, ಜೋಯಿಡಾ ಮತ್ತು ದಾಂಡೇಲಿ ಅರಣ್ಯ ಭಾಗದಲ್ಲಿ ಕಾಡುಪ್ರಾಣಿಗಳ ಬೇಟೆಗೆ ಬಳಸುವ ನಾಡಬಾಂಬ್ ನಾಗೇಂದ್ರನ ಕೈಗೆ ಸಿಕ್ಕಿದ್ದು ಹೇಗೆ ಎಂಬುದು ಸದ್ಯದ ಯಕ್ಷಪ್ರಶ್ನೆಯಾಗಿದೆ. ಹಲವು ಜನರನ್ನು ವಿಚಾರಣೆ ನಡೆಸಿದರೂ ಬಾಂಬ್‌ನ ಸುಳಿವು ಸಿಗದ ಹಿನ್ನೆಲೆಯಲ್ಲಿ, ಕಚ್ಚಾ ವಸ್ತುಗಳನ್ನು ತಂದು ನಾಗೇಂದ್ರನೇ ಸ್ವತಃ ನಾಡಬಾಂಬ್ ತಯಾರಿಸಿದ್ದನೇ? ಅಥವಾ ಯೂಟ್ಯೂಬ್ ನೋಡಿ, ಪಟಾಕಿ ಮದ್ದನ್ನು ಬಳಸಿ ತಾನೇ ಬಾಂಬ್ ತಯಾರು ಮಾಡಿಕೊಂಡಿದ್ದನೇ ಎಂಬ ಆಯಾಮದಲ್ಲೂ ತನಿಖೆ ತೀವ್ರಗೊಂಡಿದೆ.

ಪ್ರೀತಿಯ ಜಾಲಕ್ಕೆ ಬಿದ್ದು ಯುವಕನ ದಾರುಣ ಅಂತ್ಯ

ನಾಗೇಂದ್ರ ತನಗೆ ಚಿತ್ರಹಿಂಸೆ ಕೊಡುತ್ತಿದ್ದ, ತನ್ನ ಮೇಲೆ ಅನುಮಾನ ಪಡುತ್ತಿದ್ದ ಎಂದು ರಮ್ಯಾ ಆರೋಪ ಮಾಡುತ್ತಿದ್ದರೆ, ಇತ್ತ ನಾಗೇಂದ್ರನ ಸಂಬಂಧಿಕರು ಹಾಗೂ ಪರಿಚಯಸ್ಥರು ಆತನ ವ್ಯಕ್ತಿತ್ವಕ್ಕೆ ಫುಲ್ ಮಾರ್ಕ್ಸ್ ಕೊಟ್ಟಿದ್ದಾರೆ. ಊರಿನಲ್ಲಿ ಯಾರ ತಂಟೆಗೂ ಹೋಗದ ಉತ್ತಮ ವ್ಯಕ್ತಿಯಾಗಿದ್ದ ನಾಗೇಂದ್ರ ಹಾಳಾಗಿದ್ದೇ ರಮ್ಯಾಳನ್ನು ಪ್ರೀತಿ ಮಾಡಿದ ಮೇಲೆ ಎಂದು ಆತನ ನೆಂಟರು ಮತ್ತು ಆಪ್ತರು ಆಕ್ರೋಶ ಹೊರಹಾಕಿದ್ದಾರೆ.

ಇದನ್ನೂ ಓದಿ: ಪ್ರೇಯಸಿ ಜೊತೆ ಕಾರಿನಲ್ಲಿ ಹೋಗುತ್ತಿರುವಾಗಲೇ ನಾಡಬಾಂಬ್​ ಸ್ಫೋಟಿಸಿದ ಪ್ರಿಯಕರ: ಆಗಿದ್ದೇನು?

ಸದ್ಯ ಕಳ್ಳಂಬೆಳ್ಳ ಪೊಲೀಸರು ಪಾಗಲ್ ಪ್ರೇಮಿಯ ಸಾವಿನ ರಹಸ್ಯದ ಜೊತೆಗೆ, ಆತ ಬಳಸಿದ ನಾಡಬಾಂಬ್‌ನ ಮೂಲ ಪತ್ತೆ ಮಾಡಲು ತನಿಖೆ ಚುರುಕುಗೊಳಿಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us