ಶ್ರೀಗಂಧ ಚೋರರನ್ನು ಕಟ್ಟಿ ಹಾಕಿ ಥಳಿಸಿದ ಅರಣ್ಯ ಇಲಾಖೆ ಸಿಬ್ಬಂದಿ; ತುಮಕೂರಿನಲ್ಲಿ ನಡೆದ ಘಟನೆಯ ದೃಶ್ಯ ವೈರಲ್
ಗಾಳಿಯಲ್ಲಿ ಗುಂಡು ಹಾರಿಸಿ ಕಳ್ಳರನ್ನ ಹಿಡಿದಿರುವ ಸಿಬ್ಬಂದಿಗೆ ಸ್ಥಳದಲ್ಲಿ ಅಡುಗೆ ಸಾಮಾಗ್ರಿಗಳು ಸೇರಿದಂತೆ ಕೋಳಿ, ಮಚ್ಚು ಸಿಕ್ಕಿದ್ದವು. ಬಳಿಕ ಆರೋಪಿಗಳನ್ನು ಮನಬಂದಂತೆ ಥಳಿಸಿರುವ ಸಿಬ್ಬಂದಿ. ಕೈ ಕಾಲು ಕಟ್ಟಿ ಹಾಕಿ ಬೂಟು ಕಾಲಿನಿಂದ ಒದ್ದು ತಮ್ಮ ಸಿಟ್ಟು ಹೊರಹಾಕಿದ್ದಾರೆ.
ತುಮಕೂರು: ತುಮಕೂರು ಜಿಲ್ಲೆ ಗುಬ್ಬಿ ತಾಲೂಕಿನ ಹರಗಲದೇವಿ ಗುಡ್ಡ ಕಾವಲು ಮೀಸಲು ಅರಣ್ಯ ಪ್ರದೇಶದಲ್ಲಿ ಶ್ರೀಗಂಧ ಚೋರರನ್ನು ಹಿಡಿದ ಅರಣ್ಯ ಇಲಾಖೆ ಸಿಬ್ಬಂದಿ ಅವರಿಗೆ ಮನಬಂದಂತೆ ಥಳಿಸಿರುವ ದೃಶ್ಯ ಇದೀಗ ವೈರಲ್ ಆಗಿದೆ. ಭಾನುವಾರ ಸಂಜೆ ಅರಣ್ಯ ಪ್ರದೇಶದಲ್ಲಿ ಮರ ಕಡಿಯುವ ಶಬ್ದ ಕೇಳಿಸಿದ್ದು ಅದನ್ನು ಆಲಿಸಿಕೊಂಡು ಹೋದ ಸಿಬ್ಬಂದಿ ಫೈರಿಂಗ್ ಮಾಡಿ ಮೂವರನ್ನು ಬಂಧಿಸಿದ್ದರು. ಒಟ್ಟು 12 ಜನರ ತಂಡದಲ್ಲಿ ಮೂವರು ಮಾತ್ರ ಸಿಬ್ಬಂದಿ ಕೈಗೆ ಸಿಕ್ಕು ಮತ್ತುಳಿದವರು ಪರಾರಿಯಾಗಿದ್ದರು. ಇದೀಗ ಬಂಧಿತ ಆರೋಪಿಗಳಿಗೆ ಅರಣ್ಯ ಇಲಾಖೆ ಸಿಬ್ಬಂದಿ ಮನಬಂದಂತೆ ಥಳಿಸಿದ್ದು ಆ ದೃಶ್ಯ ವೈರಲ್ ಆಗಿದೆ.
ಭಾನುವಾರ ಸಂಜೆ ಶ್ರೀ ಗಂಧ ಕಳ್ಳರ ಮೇಲೆ ಫೈರಿಂಗ್ ಮಾಡಲಾಗಿದ್ದು, ಈ ವೇಳೆ ಮೂರ್ತಿ ಎಂಬುವನಿಗೆ ಗುಂಡು ತಗಲಿ, ತಲೆಗೆ ಗಾಯವಾಗಿತ್ತು. ಕೃಷ್ಣ ಮತ್ತು ಮಲ್ಲಪ್ಪ ಎಂಬ ಕಳ್ಳರನ್ನು ಬಂಧಿಸಲಾಗಿತ್ತು. ಗಾಯಗೊಂಡ ಮೂರ್ತಿಯನ್ನು ತುಮಕೂರು ಜಿಲ್ಲಾಸ್ಪತ್ರೆ ಗೆ ದಾಖಲು ಮಾಡಲಾಗಿತ್ತು. ಶ್ರೀ ಗಂಧದ ಕಳ್ಳರು ತಮಿಳುನಾಡು ಮೂಲದವರು ಎನ್ನಲಾಗಿದೆ.
ಗುಬ್ಬಿ ವಲಯ ಅರಣ್ಯಾಧಿಕಾರಿ ದುಗ್ಗಪ್ಪ ಹಾಗೂ ಸಿಬ್ಬಂದಿ ಫೈರಿಂಗ್ ಮಾಡಿದ್ದಾರೆ. ತುಮಕೂರು ಜಿಲ್ಲೆಯಲ್ಲಿ ಇತ್ತಿಚೆಗೆ ಶ್ರೀಗಂದ ಮರಗಳ್ಳರ ಹಾವಳಿ ಹೆಚ್ಚಾಗಿದೆ.ಕಳೆದ 15 ದಿನಗಳ ಹಿಂದೆ ಕುಣಿಗಲ್ ತಾಲೂಕಿನ ಕಂಪ್ಲಾಪುರ ಮೀಸಲು ಅರಣ್ಯ ಪ್ರದೇಶದಲ್ಲಿ ಶ್ರೀ ಗಂಧ ಕಡಿಯಲು ಮೂರು ಜನರ ತಂಡ ಹೋಗಿತ್ತು, ಈ ವೇಳೆ ಓರ್ವ ಶಿವರಾಜ್ ಅನ್ನೋ ವ್ಯಕ್ತಿ ಅರಣ್ಯ ಸಿಬ್ಬಂದಿ ಹೊಡೆದ ಗುಂಡಿಗೆ ಬಲಿಯಾಗಿದ್ದ, ಆ ಘಟನೆ ಮಾಸುವ ಮುನ್ನವೇ ಗುಬ್ಬಿ ತಾಲೂಕಿನ ಕಡಬ ಹೋಬಳಿ ಹರಗಲದೇವಿ ಗುಡ್ಡ ಸಂಖ್ಯೆ 1 ರ 1500 ಎಕರೆ ವಿಸ್ತೀರ್ಣದ ಮೀಸಲು ಅರಣ್ಯ ಪ್ರದೇಶದಲ್ಲಿ ಮತ್ತೆ ಘಟನೆ ನಡೆದಿದೆ.
ಕಳೆದ ಭಾನುವಾರ ಶ್ರೀಗಂಧ ಚೋರರ ಜಾಡು ಹಿಡಿದು ಹೊರಟ ಅರಣ್ಯ ಇಲಾಖೆ ಸಿಬ್ಬಂದಿ ಮೂವರನ್ನು ಹಿಡಿದರಾದರೂ ಸುಮಾರು 12 ಜನರ ತಂಡ ಬಂದಿದ್ದು ಉಳಿದವರು ಪರಾರಿಯಾಗಿದ್ದಾರೆ ಎನ್ನಲಾಗಿದೆ. ಗಾಳಿಯಲ್ಲಿ ಗುಂಡು ಹಾರಿಸಿ ಕಳ್ಳರನ್ನ ಹಿಡಿದಿರುವ ಸಿಬ್ಬಂದಿಗೆ ಸ್ಥಳದಲ್ಲಿ ಅಡುಗೆ ಸಾಮಾಗ್ರಿಗಳು ಸೇರಿದಂತೆ ಕೋಳಿ, ಮಚ್ಚು ಸಿಕ್ಕಿದ್ದವು. ಬಳಿಕ ಆರೋಪಿಗಳನ್ನು ಮನಬಂದಂತೆ ಥಳಿಸಿರುವ ಸಿಬ್ಬಂದಿ. ಕೈ ಕಾಲು ಕಟ್ಟಿ ಹಾಕಿ ಬೂಟು ಕಾಲಿನಿಂದ ಒದ್ದು ತಮ್ಮ ಸಿಟ್ಟು ಹೊರಹಾಕಿದ್ದಾರೆ. ಆರೋಪಿಗಳಿಗೆ ಸಿಬ್ಬಂದಿ ಮನಬಂದಂತೆ ಥಳಿಸಿರುವ ವಿಡಿಯೋ ಟಿವಿ9 ಗೆ ಲಭ್ಯವಾಗಿದೆ.
ಇದನ್ನೂ ಓದಿ: ತುಮಕೂರಿನಲ್ಲಿ ಶ್ರೀಗಂಧದ ಮರ ಕಡಿಯುತ್ತಿದ್ದವರ ಮೇಲೆ ಅರಣ್ಯ ಇಲಾಖೆಯ ಅಧಿಕಾರಿಯಿಂದ ಫೈರಿಂಗ್; ಓರ್ವ ಸಾವು
(Tumakuru Forest officers beaten up sandalwood thieves video gone viral)