
ತುಮಕೂರು, ಆ.28: ಕೇಂದ್ರ ರೈಲ್ವೆ ರಾಜ್ಯ ಸಚಿವ ವಿ. ಸೋಮಣ್ಣ ಅವರು ಇಂದು ತುಮಕೂರು ನಗರದಲ್ಲಿ ನಡೆಯುತ್ತಿರುವ ವಿವಿಧ ರೈಲ್ವೆ ಅಭಿವೃದ್ಧಿ ಕಾಮಗಾರಿಗಳ ಸ್ಥಳಕ್ಕೆ ಭೇಟಿ ನೀಡಿ ಪ್ರಗತಿ ಪರಿಶೀಲನೆ ನಡೆಸಿದರು. ಅಮೃತ ಭಾರತ್ ನಿಲ್ದಾಣ ಯೋಜನೆಯಡಿ (Amrit Bharat Station Scheme) ಒಟ್ಟು 90 ಕೋಟಿ ರೂಪಾಯಿ ವೆಚ್ಚದಲ್ಲಿ ಅತ್ಯಾಧುನಿಕವಾಗಿ ರೂಪುಗೊಳ್ಳುತ್ತಿರುವ ತುಮಕೂರು ರೈಲ್ವೆ ನಿಲ್ದಾಣ ಕಾಮಗಾರಿಯನ್ನು ಮೊದಲು ವೀಕ್ಷಿಸಿದ ಸಚಿವರು, ಬಳಿಕ ನಗರದ ಬಟವಾಡಿ, ಬಂಡಿಹಳ್ಳಿ ಹಾಗೂ ಮೈದಾಳ ಬಳಿ ನಿರ್ಮಾಣವಾಗುತ್ತಿರುವ ರೈಲ್ವೆ ಅಂಡರ್‌ಪಾಸ್ ಮತ್ತು ಮೇಲ್ಸೇತುವೆ (ROB/RUB) ಕಾಮಗಾರಿಗಳನ್ನು ಪರಿಶೀಲಿಸಿದರು.
ಈ ಸಂದರ್ಭದಲ್ಲಿ ಶಾಸಕರಾದ ಬಿ. ಸುರೇಶ್ ಗೌಡ, ಜಿ.ಬಿ. ಜ್ಯೋತಿ ಗಣೇಶ್, ಪ್ರಮುಖ ಪಕ್ಷದ ಮುಖಂಡರು ಹಾಗೂ ರೈಲ್ವೇ ಇಲಾಖೆಯ ಹಿರಿಯ ಅಧಿಕಾರಿಗಳು ಮತ್ತು ಜಿಲ್ಲಾ ಮಟ್ಟದ ಅಧಿಕಾರಿಗಳು ಸಚಿವರಿಗೆ ಸಾಥ್ ನೀಡಿದರು. ಕಾಮಗಾರಿ ಪರಿಶೀಲನೆ ನಡೆಸಿದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಕೇಂದ್ರ ಸಚಿವ ವಿ. ಸೋಮಣ್ಣ ಅವರು ಪ್ರಮುಖ ಮಾಹಿತಿಗಳನ್ನು ಹಂಚಿಕೊಂಡರು.
ರೈಲ್ವೆ ನಿಲ್ದಾಣದ ಪುನರ್ ಅಭಿವೃದ್ಧಿ ಕಾಮಗಾರಿಗಳು ಪೂರ್ಣಗೊಂಡು ಉದ್ಘಾಟನೆಯಾದ ತಕ್ಷಣವೇ ನಿಲ್ದಾಣಕ್ಕೆ ‘ನಡೆದಾಡುವ ದೇವರು’, ಶ್ರೀ ಶಿವಕುಮಾರ ಮಹಾಸ್ವಾಮೀಜಿಗಳ ಹೆಸರನ್ನು ಅಧಿಕೃತವಾಗಿ ನಾಮಕರಣ ಮಾಡಲಾಗುವುದು. ಕಾಮಗಾರಿಯನ್ನು 2027 ಜೂನ್ 27 ರೊಳಗಾಗಿ ಪೂರ್ಣಗೊಳಿಸಲು ಅಧಿಕಾರಿಗಳಿಗೆ ಕಟ್ಟಾಜ್ಞೆ ಮಾಡಲಾಗಿದೆ. ಬರುವ ವರ್ಷ ಮೇ ಅಥವಾ ಜೂನ್ ತಿಂಗಳಿನಲ್ಲಿ ನವೀಕೃತ ನಿಲ್ದಾಣವನ್ನು ಲೋಕಾರ್ಪಣೆಗೊಳಿಸಲು ತೀರ್ಮಾನಿಸಲಾಗಿದೆ.
ಅಮೃತ್ ಭಾರತ್ ರೈಲು ನಿಲ್ದಾಣ ಯೋಜನೆಯಡಿ ಮರು ಅಭಿವೃದ್ಧಿ ಪಡಿಸಲಾಗುತ್ತಿರುವ ತುಮಕೂರು ರೈಲು ನಿಲ್ದಾಣದ ಕಾಮಗಾರಿಯ ಪ್ರಗತಿ ಪರಿವೀಕ್ಷಣೆ ಮಾಡಲಾಯಿತು.
ಬರೋಬ್ಬರಿ 90 ಕೋಟಿ ರೂ.ಗಳ ಅನುದಾನದಲ್ಲಿ ತುಮಕೂರು ರೈಲು ನಿಲ್ದಾಣವನ್ನು ಸುಕ್ಷೇತ್ರ ಶ್ರೀ ಸಿದ್ದಗಂಗಾ ಮಠದ ಥೀಮ್ ಆಧಾರಿತ ವಿನ್ಯಾಸದಲ್ಲಿ ಮರುಅಭಿವೃದ್ಧಿಗೊಳಿಸಲಾಗುತ್ತಿದೆ. ಈ ಯೋಜನೆಯಡಿ… pic.twitter.com/QtnC0FOqFO
— V. Somanna (@VSOMANNA_BJP) August 28, 2026
ಸಾರ್ವಜನಿಕರು ಹಾಗೂ ಪ್ರಯಾಣಿಕರ ಅನುಕೂಲಕ್ಕಾಗಿ 100 ಕಾರುಗಳನ್ನು ನಿಲ್ಲಿಸಬಹುದಾದ ಅತ್ಯಾಧುನಿಕ ಮಲ್ಟಿಲೇಯರ್ ಪಾರ್ಕಿಂಗ್ ವ್ಯವಸ್ಥೆಯನ್ನು ಕಲ್ಪಿಸಲಾಗುತ್ತಿದೆ. ಪ್ರಯಾಣಿಕರಿಗೆ ಸರಿಯಾದ ಸುರಕ್ಷತೆ ಹಾಗೂ ಸೌಲಭ್ಯಗಳ ಕೊರತೆಯಿದ್ದುದನ್ನು ಗಮನಿಸಿದ್ದು, ತಕ್ಷಣವೇ ಪ್ಲಾಟ್‌ಫಾರ್ಮ್‌ಗಳನ್ನು ಮೇಲ್ದರ್ಜೆಗೆ ಏರಿಸಲು ಮತ್ತು ಸರಿಪಡಿಸಲು ಸೂಚಿಸಲಾಗಿದೆ. ಬೆಳೆಯುತ್ತಿರುವ ತುಮಕೂರು ನಗರಕ್ಕೆ ಸಾರಿಗೆ ಸಂಪರ್ಕ ಹೆಚ್ಚಿಸಲು 3,400 ಕೋಟಿ ರೂ. ವೆಚ್ಚದಲ್ಲಿ 3 ಮತ್ತು 4ನೇ ರೈಲ್ವೆ ಪಥವನ್ನು ಅಭಿವೃದ್ಧಿಪಡಿಸಲಾಗುತ್ತಿದೆ.
ಇದನ್ನೂ ಓದಿ; ತುಮಕೂರಿಗೆ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಭಾಗ್ಯ ಇಲ್ವಾ?: ಸಚಿವ ಎಂ.ಬಿ. ಪಾಟೀಲ್ ಹೇಳಿದ್ದೇನು?
ದೆಹಲಿಯಲ್ಲಿ ಈಗಾಗಲೇ 2 ಸಭೆಗಳು ನಡೆದಿದ್ದು, ಡಿಪಿಆರ್ (DPR) ಸಿದ್ಧಗೊಳ್ಳುತ್ತಿದ್ದು ಶೀಘ್ರದಲ್ಲೇ ಕೆಲಸ ಆರಂಭವಾಗಲಿದೆ. ನಿಲ್ದಾಣದ ಅಭಿವೃದ್ಧಿ ಜೊತೆಗೆ ರೈಲ್ವೆ ಸಿಬ್ಬಂದಿಗಳಿಗೆ ಸುಸಜ್ಜಿತ ವಸತಿ ವ್ಯವಸ್ಥೆಯನ್ನು ಕೂಡ ಕಲ್ಪಿಸಲಾಗುತ್ತಿದೆ. ತುಮಕೂರಿನ ಇತಿಹಾಸವನ್ನು ಮರುಕಳಿಸುವ ರೀತಿಯಲ್ಲಿ ವಿಶ್ವದರ್ಜೆಯ ಮೂಲಸೌಕರ್ಯಗಳೊಂದಿಗೆ ಈ ರೈಲ್ವೆ ನಿಲ್ದಾಣ ಹಾಗೂ ರಸ್ತೆ-ರೈಲ್ವೆ ಸಂಪರ್ಕಗಳನ್ನು ಅಭಿವೃದ್ಧಿಪಡಿಸಲಾಗುತ್ತಿದೆ.
ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 5:07 pm, Fri, 28 August 26