ತುಮಕೂರು: ಜಾತಿ ಗಣತಿಗೆ ಮ್ಯಾಪ್ ನೋಡಿಕೊಂಡು ಹೋಗಿ ಮೂಳೆ ಮುರಿದುಕೊಂಡ ಶಿಕ್ಷಕ
ಜಾತಿಗಣತಿ ಆರಂಭದಿಂದಲೂ ಒಂದಿಲ್ಲೊಂದು ಸಮಸ್ಯೆಗಳು ಕಂಡುಬರುತ್ತಿವೆ. ಜಾತಿಗಣತಿ ಮಾಡಲು ಹೋದ ಶಿಕ್ಷಕರು ಸಮಸ್ಯೆಗಳು ತಪ್ಪಿಲ್ಲ. ಇತ್ತೀಚೆಗೆ ಸಮೀಕ್ಷೆಗೆ ತೆರಳಿದ್ದ ಶಿಕ್ಷಕಿ ಮೇಲೆ 10ಕ್ಕೂ ಹೆಚ್ಚು ನಾಯಿಗಳು ದಾಳಿ ಮಾಡಿದ್ದವು. ಇದೀಗ ತುಮಕೂರಿನಲ್ಲಿ ಗಣತಿಗೆ ತೆರಳಿದ್ದ ಶಿಕ್ಷಕನ ಮೇಲೆ ನಾಯಿ ದಾಳಿಗೆ ಮುಂದಾಗಿದ್ದು, ಅದರಿಂದ ತಪ್ಪಿಸಿಕೊಳ್ಳಲು ಹೋಗಿ ಬೈಕ್ ಸ್ಕಿಡ್ ಆಗಿ ಬಿದ್ದು ಕೈಮುದಿರುವಂತಹ ಘಟನೆ ನಡೆದಿದೆ.

ತುಮಕೂರು, ಅಕ್ಟೋಬರ್ 10: ಆರಂಭದಿಂದಲೂ ಗೊಂದಲದ ಗೂಡಾದ ಜಾತಿಗಣತಿಗೆ (survey) ಹಲವು ಅಡತಡೆಗಳು ಸೃಷ್ಟಿಯಾಗಿದ್ದವು. ಆ್ಯಪ್ ಸಮಸ್ಯೆಯಿಂದ ಹಿಡಿದು ಸಿಬ್ಬಂದಿಗಳಿಗೆ ಎದುರಾದ ಸಮಸ್ಯೆಗಳು ಜಾತಿಗಣತಿ ಬಗ್ಗೆ ದೊಡ್ಡ ಚರ್ಚೆಯನ್ನೇ ಸೃಷ್ಟಿಸಿತ್ತು. ಇದರ ನಡುವೆ ಈಗ ತುಮಕೂರಿನಲ್ಲಿ (Tumakuru) ಗಣತಿಗೆ ತೆರಳಿದ್ದ ಶಿಕ್ಷಕ ಬೈಕ್ನಿಂದ ಬಿದ್ದು ಕೈ ಮೂಳೆ ಮುರಿದಿದ್ದು, ಪತಿಯ ನರಳಾಟ ಕಂಡು ಪತ್ನಿ ಕೆಲಸದ ಒತ್ತಡದ ಬಗ್ಗೆ ಬೇಸರ ಹೊರಹಾಕಿದ್ದಾರೆ.
ಜಾತಿಗಣತಿ ಆರಂಭವಾದಾಗಿನಿಂದಲೂ ಸಮಸ್ಯೆ ಮೇಲೆ ಸಮಸ್ಯೆಗಳು ಕಂಡುಬರುತ್ತಿವೆ. ಮಾಹಿತಿ ನೀಡಲು ಜನರು ಅಪಸ್ವರ ತೆಗೆಯುತ್ತಿದ್ದಾರೆ. ಜೊತೆಗೆ ಲೊಕೇಶನ್ ಸಮಸ್ಯೆ. ಹೀಗೆ ಹತ್ತಾರು ಸಮಸ್ಯೆಗಳ ನಡುವೆ ಆರಂಭವಾದ ಜಾತಿಗಣತಿ ನಿಗದಿತ ದಿನಾಂಕದಂದು ಪೂರ್ಣಗೊಂಡಿರಲಿಲ. ಹೀಗಾಗಿ ದಿನಾಂಕ ವಿಸ್ತರಿಸಿದ ಸರ್ಕಾರದ ನಿರ್ಧಾರದ ನಡುವೆ ಜಾತಿಗಣತಿ ಮುಂದುವರೆದಿತ್ತು. ಆದರೆ ಇದರ ನಡುವೆ ನಿನ್ನೆ ತುಮಕೂರಿನಲ್ಲಿ ಜಾತಿಗಣತಿಯಲ್ಲಿ ತೊಡಗಿದ್ದ ಸಂಗಪ್ಪ ನೇಗಲಿ ಎಂಬ ಶಿಕ್ಷಕ ಲೊಕೇಶನ್ ಆಧರಿಸಿ ಮನೆಯೊಂದರ ಬಳಿ ತೆರಳಲು ಮಣ್ಣಿನ ಕಾಲು ದಾರಿ ಬಳಸಿ ಹೊಗುವಾಗ ಬೈಕ್ನಿಂದ ಬಿದಿದ್ದು, ಕೈ ಮೂಳೆ ಮುರಿದಿದೆ. ನಿನ್ನೆ ಮಧ್ಯಾಹ್ನ 12 ಗಂಟೆ ಸುಮಾರಿಗೆ ತುಮಕೂರು ತಾಲೂಕಿನ ಕಳ್ಳಿಪಾಳ್ಯದಲ್ಲಿ ಈ ಘಟನೆ ನಡೆದಿದೆ.
ಇದನ್ನೂ ಓದಿ: ಜಾತಿ ಗಣತಿಗೆ ಹೋಗಿದ್ದ ಶಿಕ್ಷಕಿ ಮೇಲೆ ನಾಯಿ ದಾಳಿ
ಸಂಗಪ್ಪ ನಿನ್ನೆ ಎಂದಿನಂತೆ ಬೆಳಿಗ್ಗೆ 8 ರಿಂದಲೇ ಜಾತಿಗಣತಿ ಆರಂಭಿಸಿದ್ದು, ಆರು ಮನೆ ಮುಗಿಸಿದ್ದರು. ನಂತರ ತೋಟದ ಸಾಲಿನಲ್ಲಿದ್ದ ಮನೆಯ ಬಳಿ ತೆರಳುತಿದ್ದರಂತೆ. ಈ ವೇಳೆ ಮಣ್ಣಿನ ಕಾಲು ದಾರಿ ಬಳಿಸಿ ಬೈಕ್ನಲ್ಲಿ ತೆರಳುವಾಗ ಹಿಂದೆಯಿಂದ ನಾಯಿ ಕಚ್ಚಲು ಬಂದಿತ್ತಂತೆ. ನಾಯಿಯಿಂದ ತಪ್ಪಿಸಿಕೊಳ್ಳಲು ವೇಗವಾಗಿ ಬೈಕ್ ಚಲಾಯಿಸಿದ ಪರಿಣಾಮ ಬೈಕ್ ಸ್ಕಿಡ್ ಆಗಿ ಬಿದಿದ್ದಾರೆ. ಈ ವೇಳೆ ಸಂಗಪ್ಪ ಅವರ ಎಡಗೈ ಮೇಲೆ ಬೈಕ್ ಬಿದ್ದು, ಮೂಳೆ ಮುರಿದಿದೆ.
ಮತ್ತೊಂದೆಡೆ ಪತಿಯ ಈ ಸ್ಥಿತಿ ಕಂಡು ಪತ್ನಿ ಆತಂಕಗೊಂಡಿದ್ದಾರೆ. ದಸರಾ ರಜೆ ಇದ್ದರೂ ಸಹ ಕೆಲಸ ಮಾಡುತಿದ್ದಾರೆ. ಪ್ರತಿದಿನ ಬೆಳಿಗ್ಗೆ 6 ಗಂಟೆಗೆ ಹೊದರೇ ಮತ್ತೆ ಸಂಜೆ 6 ಗಂಟೆಗೆ ವಾಪಾಸ್ ಆಗುತ್ತಾರೆ. ಮನೆಗೆ ಬಂದಾಗ ಸುಸ್ತಾಗಿರುತ್ತಾರೆ. ನನಗೆ ಹಾಗೂ ಮಗುವಿಗೆ ಸಮಯ ನೀಡಲು ಆಗುತ್ತಿಲ್ಲ. ಕೊಟ್ಟಿರುವ ಮನೆಗಳ ಟಾರ್ಗೆಟ್ ಹೆಚ್ಚಾಗಿದೆ. ಅದರ ನಡುವೆಯೂ ಅವರು ಒತ್ತಡದಲ್ಲಿ ಕೆಲಸ ಮಾಡುತಿದ್ದಾರೆ. ಆದರೆ ನಡುವೆ ಮ್ಯಾಪ್ ದಾರಿ ಹಿಡಿದು ಹೊದಾಗ ಈ ಘಟನೆ ಆಗಿದೆ. ಮನೆಯಲ್ಲಿ ನನ್ನ ಗಂಡ ಒಬ್ಬರೇ ದುಡಿಯುತ್ತಾರೆ. ಅವರಿಗೆ ಹೀಗಾಗಿರುವುದು ಆಂತಕ ಮೂಡಿಸಿದೆ ಎಂದು ಶಿಕ್ಷಕನ ಪತ್ನಿ ಭೂಮಿಕಾ ಹೇಳಿದ್ದಾರೆ.
ಇದನ್ನೂ ಓದಿ: ಹಾಸನ: ಸಮೀಕ್ಷೆಗೆ ತೆರಳಿದ್ದ ಶಿಕ್ಷಕಿ ಮೇಲೆರಗಿದ 10ಕ್ಕೂ ಹೆಚ್ಚು ನಾಯಿಗಳು, ರಕ್ಷಣೆಗೆ ಬಂದವರ ಮೇಲೂ ದಾಳಿ
ಇನ್ನು ಶಿಕ್ಷಕ ಸಂಗಪ್ಪನಿಗೆ 254 ಮನೆಗಳ ಟಾರ್ಗೆಟ್ ನೀಡಲಾಗಿದೆಯಂತೆ. ಸದ್ಯ 160 ಮನೆಗಳನ್ನು ಒತ್ತಡದಲ್ಲೇ ಮುಗಿಸಿದ್ದಾರಂತೆ. ಪತಿ ಇಷ್ಟು ಕಷ್ಟ ಪಟ್ಟು ಕರ್ತವ್ಯ ನಿರ್ವಹಿಸಿದ್ದು, ಅವರಿಗೆ ಪ್ರತಿಫಲ ಸಿಗಲೇಬೇಕೆಂದು ಭೂಮಿಕಾ ಮನವಿ ಮಾಡಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.



