
ತುಮಕೂರು, ಜೂ.4: ತುಮಕೂರು ವಿಶ್ವವಿದ್ಯಾಲಯದ 19ನೇ ಘಟಿಕೋತ್ಸವ ಸಮಾರಂಭದಲ್ಲಿ ಭಾರಿ ಎಡವಟ್ಟು ನಡೆದಿದೆ. ವರ್ಷಗಟ್ಟಲೆ ಕಷ್ಟಪಟ್ಟು ಓದಿ ಪ್ರಥಮ ಸ್ಥಾನ ಗಳಿಸಿ, ಚಿನ್ನದ ಪದಕ (Gold Medal) ಪಡೆಯುವ ಕನಸು ಹೊತ್ತು ಬಂದಿದ್ದ ನೂರಾರು ರ್ಯಾಂಕ್ ವಿದ್ಯಾರ್ಥಿಗಳ ಆಸೆಗೆ ವಿಶ್ವವಿದ್ಯಾಲಯವು ತಣ್ಣೀರೆರಚಿದೆ. ಚಿನ್ನದ ಪದಕ ನೀಡುವ ಬದಲು ಕೇವಲ ಪ್ರಮಾಣ ಪತ್ರ ಮತ್ತು ನಗದು ಹಣದ ಚೆಕ್ ನೀಡಿ ಕೈತೊಳೆದುಕೊಳ್ಳಲು ಮುಂದಾದ ವಿವಿಯ ನಡೆಗೆ ವಿದ್ಯಾರ್ಥಿಗಳು ಹಾಗೂ ಪೋಷಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಿನ್ನೆ ವಿಶ್ವವಿದ್ಯಾಲಯದ ಆವರಣದಲ್ಲಿ ಘಟಿಕೋತ್ಸವ ನಡೆಯುತ್ತಿದ್ದಾಗಲೇ ಈ ಗೊಂದಲ ಸೃಷ್ಟಿಯಾಗಿದೆ. ತಮಗೆ ಚಿನ್ನದ ಪದಕ ನೀಡದಿದ್ದನ್ನು ಕಂಡು ರೊಚ್ಚಿಗೆದ್ದ ರ್ಯಾಂಕ್ ವಿದ್ಯಾರ್ಥಿಗಳು, ಸಮಾರಂಭ ನಡೆಯುತ್ತಿದ್ದ ಸ್ಥಳದಲ್ಲೇ ಪ್ರತಿಭಟನೆಗೆ ಕೂತರು. “ನಮಗೆ ನಗದು ಹಣ ಬೇಡವೇ ಬೇಡ, ನಮ್ಮ ಸಾಧನೆಗೆ ಸಿಗಬೇಕಾದ ಚಿನ್ನದ ಪದಕವೇ ಬೇಕು. ನಾವು ನಿಗದಿತ ಶುಲ್ಕ (Fees) ಪಾವತಿಸಿದ್ದರೂ ನಮಗೆ ಪದಕ ನೀಡಿಲ್ಲ” ಎಂದು ಕಿಡಿಕಾರಿದರು. ವಿದ್ಯಾರ್ಥಿಗಳ ಆಕ್ರೋಶದ ಹಿನ್ನೆಲೆಯಲ್ಲಿ ಘಟಿಕೋತ್ಸವ ಸಮಾರಂಭವು ಕೆಲವು ನಿಮಿಷಗಳ ಕಾಲ ಸ್ಥಗಿತಗೊಂಡಿತ್ತು. ಮಕ್ಕಳ ಸಾಧನೆಯ ಸಂಕೇತವಾದ ಪದಕ ಸಿಗದಿರುವುದನ್ನು ಕಂಡು ಪೋಷಕರೂ ಕೂಡ ತೀವ್ರ ಬೇಸರ ವ್ಯಕ್ತಪಡಿಸಿದರು.
ಇನ್ನು ವಿಶ್ವವಿದ್ಯಾಲಯವು ಪದವಿ ಪ್ರಮಾಣ ಪತ್ರಗಳನ್ನು ಬೇಕಾಬಿಟ್ಟಿಯಾಗಿ ನೀಡಿದೆ ಎಂದು ವಿದ್ಯಾರ್ಥಿಗಳು ಗಂಭೀರ ಆರೋಪ ಮಾಡಿದ್ದಾರೆ. ಕಳೆದ 17 ಮತ್ತು 18ನೇ ಘಟಿಕೋತ್ಸವದ ಹಳೆಯ ಫೈಲ್‌ಗಳಲ್ಲೇ ಇಂದಿನ ಪ್ರಮಾಣ ಪತ್ರಗಳನ್ನು ಇಟ್ಟು ಕೊಡಲಾಗಿದೆ. ಪದಕ ನೀಡಲು ವಿವಿಗೆ ಸಾಧ್ಯವಿರಲಿಲ್ಲ ಎಂದರೆ ಘಟಿಕೋತ್ಸವವನ್ನೇ ಮುಂದೂಡಬಹುದಿತ್ತಲ್ಲವೇ? ಎಂದು ವಿದ್ಯಾರ್ಥಿಗಳು ಪ್ರಶ್ನಿಸಿದ್ದಾರೆ. “ಪದಕ ಸಿಗುವವರೆಗೂ ನಾವು ಈ ಸ್ಥಳದಿಂದ ಕದಲುವುದಿಲ್ಲ” ಎಂದು ಪಟ್ಟು ಹಿಡಿದು ವಿದ್ಯಾರ್ಥಿಗಳು ಕಾದು ಕುಳಿತಿದ್ದರು.
ಇದನ್ನೂ ಓದಿ: ಪರಮೇಶ್ವರ್, ರಾಜಣ್ಣಗೆ ಗೌರವ ಡಾಕ್ಟರೇಟ್ ನೀಡದಿರಲು ತುಮಕೂರು ವಿವಿ ನಿರ್ಧಾರ
ವಿದ್ಯಾರ್ಥಿಗಳಿಗೆ ಚಿನ್ನದ ಪದಕದ ಬದಲಾಗಿ ನಗದು ಚೆಕ್ ನೀಡಿ ಗೊಂದಲ ಸೃಷ್ಟಿಯಾಗಿರುವ ಇಡೀ ವಿವಾದಕ್ಕೆ ಸಂಬಂಧಿಸಿದಂತೆ ತುಮಕೂರು ವಿವಿ ಕುಲಪತಿ ಪ್ರೊ. ವೆಂಕಟೇಶ್ವರಲು ಅವರು ಇದೀಗ ಸ್ಪಷ್ಟನೆ ನೀಡಿದ್ದಾರೆ. ಬಂಗಾರದ ದರ ಗಗನಕ್ಕೇರಿರುವುದು ಹಾಗೂ ಆರ್ಡರ್ ನೀಡಿದ್ದ ವ್ಯಾಪಾರಿ ಸರಿಯಾದ ಸಮಯಕ್ಕೆ ಪದಕಗಳನ್ನು ಪೂರೈಸದ ಕಾರಣ ಈ ಎಡವಟ್ಟು ಆಗಿದೆ ಎಂದು ಹೇಳಿದ್ದಾರೆ. ಪ್ರಸ್ತುತ ಮಾರುಕಟ್ಟೆಯಲ್ಲಿ ಬಂಗಾರದ ಬೆಲೆ ಭಾರಿ ಏರಿಕೆಯಾಗಿದೆ. ಹೀಗಾಗಿ ಪದಕಗಳನ್ನು ಸಿದ್ಧಪಡಿಸುವುದು ನಮಗೆ ಕಷ್ಟವಾಗಿತ್ತು. ಆದರೂ ನಾವು ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಮಧ್ಯಪ್ರದೇಶದ ಇಂದೋರ್‌ನ (Indore) ಚಿನ್ನದ ವ್ಯಾಪಾರಿಯೊಬ್ಬರಿಗೆ ಕಡಿಮೆ ದರದಲ್ಲಿ ಪದಕ ಮಾಡಿಕೊಡುವಂತೆ ಆರ್ಡರ್ ನೀಡಿದ್ದೆವು. ಆದರೆ ಆ ವ್ಯಾಪಾರಿ ನಾವು ಕೇಳಿದ ಸಮಯಕ್ಕೆ ಪದಕಗಳನ್ನು ತಲುಪಿಸದೆ ‘ಇವತ್ತು ಕೊಡುತ್ತೇನೆ, ನಾಳೆ ಕೊಡುತ್ತೇನೆ’ ಎಂದು ದಿನ ದೂಡುತ್ತಾ ಮೋಸ ಮಾಡಿದ್ದಾನೆ”. ನಿನ್ನೆ ಕೂಡ ಆ ವ್ಯಾಪಾರಿಗೆ ಫೋನ್ ಮಾಡಿದಾಗ, ಮೊದಲು ಮಧ್ಯಾಹ್ನ 2 ಗಂಟೆಯ ವಿಮಾನದಲ್ಲಿ ಪದಕಗಳು ಬರುತ್ತವೆ ಎಂದಿದ್ದ. ಆಮೇಲೆ ಸಂಜೆ 7 ಗಂಟೆಯ ಫ್ಲೈಟ್‌ನಲ್ಲಿ ಬರುತ್ತದೆ ಎಂದು ನಂಬಿಸಿದ್ದ. ಆದರೆ ಕೊನೆಗೂ ಪದಕಗಳು ನಮಗೆ ತಲುಪಲೇ ಇಲ್ಲ. ಘಟಿಕೋತ್ಸವದ ಸಮಯ ಹತ್ತಿರ ಬಂದಿದ್ದರಿಂದ, ನಾವು ಅನಿವಾರ್ಯವಾಗಿ ಪದಕದ ಮೌಲ್ಯಕ್ಕೆ ಸರಿಯಾಗುವಂತೆ ನಗದು ಚೆಕ್ ನೀಡಲು ನಿರ್ಧರಿಸಿದೆವು” ಎಂದು ಕುಲಪತಿಗಳು ಅಸಹಾಯಕತೆ ವ್ಯಕ್ತಪಡಿಸಿದರು
ಸ್ಥಳದಲ್ಲಿ ಪರಿಸ್ಥಿತಿ ಕೈಮೀರುತ್ತಿರುವುದನ್ನು ಅರಿತ ವಿಶ್ವವಿದ್ಯಾಲಯದ ಕುಲಪತಿಗಳು ಹಾಗೂ ಹಿರಿಯ ಅಧಿಕಾರಿಗಳು ತಕ್ಷಣವೇ ವಿದ್ಯಾರ್ಥಿಗಳ ಮನವೊಲಿಸುವ ಕಾರ್ಯಕ್ಕೆ ಮುಂದಾದರು. ಪ್ರಸ್ತುತ ನೀಡಿರುವ ಚೆಕ್ ಬದಲಿಗೆ ಶೀಘ್ರದಲ್ಲೇ ಅಧಿಕೃತವಾಗಿ ಚಿನ್ನದ ಪದಕಗಳನ್ನೇ (Medals) ಮಾಡಿಸಿಕೊಡುವುದಾಗಿ ಅಧಿಕಾರಿಗಳು ಲಿಖಿತ ಭರವಸೆ ನೀಡಿದರು. ಅಧಿಕಾರಿಗಳ ಈ ಭರವಸೆಯ ಬಳಿಕ ವಿದ್ಯಾರ್ಥಿಗಳು ಹಾಗೂ ಪೋಷಕರು ಪ್ರತಿಭಟನೆಯನ್ನು ಕೈಬಿಟ್ಟು ಅಲ್ಲಿಂದ ತೆರಳಿದರು.
ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 9:10 am, Thu, 4 June 26