AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೊನೆಗೂ ಎಚ್ಚೆತ್ತ ಸರ್ಕಾರ: ತುಮಕೂರಿನ ಸಿದ್ಧಗಂಗಾ ಮಠಕ್ಕೆ ಎದುರಾಗಿದ್ದ ನೀರಿನ ಆತಂಕ ದೂರ

ತುಮಕೂರಿನ ಸಿದ್ಧಗಂಗಾ ಮಠಕ್ಕೆ ಎದುರಾಗಿದ್ದ ನೀರು ಕೊರತೆಯ ಆತಂಕ ಇದೀಗ ದೂರವಾಗಿದೆ. ಬಾಕಿ ಉಳಿದಿದ್ದ ಸುಮಾರು 1.96 ಕೋಟಿ ರೂ ಬಿಲ್​​ ಅನ್ನು ಇದೀಗ ಬೆಸ್ಕಾಂಗೆ ಕೆಐಎಡಿಬಿ ಪಾವತಿಸಿದೆ. ಬಿಲ್ ಪಾವತಿಸದ ಹಿನ್ನೆಲೆ ಹೊನ್ನೇನಹಳ್ಳಿ ಕೆರೆಯಿಂದ ದೇವರಾಯಪಟ್ಟಣ ಗ್ರಾಮದ ಕೆರೆಗೆ ನೀರು ಸರಬರಾಜು ಮಾಡುವ ವಿದ್ಯುತ್ ಸಂಪರ್ಕ ಸ್ಥಗಿತಗೊಳಿಸಲಾಗಿತ್ತು.

ಕೊನೆಗೂ ಎಚ್ಚೆತ್ತ ಸರ್ಕಾರ: ತುಮಕೂರಿನ ಸಿದ್ಧಗಂಗಾ ಮಠಕ್ಕೆ ಎದುರಾಗಿದ್ದ ನೀರಿನ ಆತಂಕ ದೂರ
ಸಿದ್ಧಗಂಗಾ ಮಠImage Credit source: tv9 kannada
Jagadisha B
| Edited By: |

Updated on: Jan 29, 2026 | 5:55 PM

Share

ತುಮಕೂರು, ಜನವರಿ 29: ಪಂಪ್ ಹೌಸ್​ನ ವಿದ್ಯುತ್ ಬಿಲ್ (Electricity bill) ಪಾವತಿಸದ ಪರಿಣಾಮ ಹೊನ್ನೇನಹಳ್ಳಿ ಕೆರೆಯಿಂದ ದೇವರಾಯಪಟ್ಟಣ ಕೆರೆಗೆ ನೀರಿನ ಸಂಪರ್ಕವನ್ನು ಕೆಐಎಡಿಬಿ ಅಧಿಕಾರಿಗಳು ಕಡಿತಗೊಳಿಸಿದ್ದರು. ಹೀಗಾಗಿ ಸಿದ್ಧಗಂಗಾ ಮಠಕ್ಕೆ ನೀರಿನ (Water) ಸಮಸ್ಯೆ ಆಗುವ ಆತಂಕ ಎದುರಾಗಿತ್ತು. ಈ ಬಗ್ಗೆ ಸೋಶಿಯಲ್​ ಮೀಡಿಯಾದಲ್ಲಿ ವ್ಯಾಪಕ ಚರ್ಚೆ, ಟೀಕೆ ನಡೆದಿತ್ತು. ಟಿವಿ9 ವರದಿ ಕೂಡ ಮಾಡಿತ್ತು. ಇದೀಗ ವರದಿ ಬೆನ್ನಲ್ಲೇ ಬಾಕಿ ಉಳಿದಿದ್ದ ಸುಮಾರು 1.96 ಕೋಟಿ ರೂ ಹಣವನ್ನು ಬೆಸ್ಕಾಂಗೆ ಕೆಐಎಡಿಬಿ ಪಾವತಿಸಿದೆ. ಆ ಮೂಲಕ ಸಿದ್ದಗಂಗಾ ಮಠಕ್ಕೆ ಎದುರಾಗಿದ್ದ ನೀರಿನ ಆತಂಕ ಇದೀಗ ದೂರವಾಗಿದೆ.

ಕಳೆದ ವರ್ಷ ಕೈಗಾರಿಕಾ ಸಚಿವ ಎಂಬಿ ಪಾಟೀಲ್ ಸಿದ್ದಗಂಗಾ ಮಠಕ್ಕೆ ಕೊಟ್ಟ ಮಾತನ್ನು ಉಳಿಸಿಕೊಂಡಿಲ್ಲ. ಅದರ ಪರಿಣಾಮ ಈ ವರ್ಷ ಮಠಕ್ಕೆ ನೀರಿನ ಅಭಾವ ಎದುರಾಗಿದೆ. ಹೊನ್ನೆನಹಳ್ಳಿ ಕೆರೆಯಿಂದ ದೇವರಾಯಪಟ್ಟಣ ಕೆರೆಗೆ ನೀರು ಹರಿಸಿ, ದೇವರಾಯಪಟ್ಟಣ ಕೆರೆಯಿಂದ ಮಠಕ್ಕೆ ನೀರು ಪಂಪ್ ಮಾಡಲಾಗುತ್ತದೆ.

ಇದನ್ನೂ ಓದಿ: ಮೆರವಣಿಗೆಗಳಲ್ಲಿ ಆನೆಗಳನ್ನು ಬಳಸುವುದು ಸರಿಯೇ? ಹೈಕೋರ್ಟ್​​​ ಆದೇಶದಲ್ಲಿ ಏನಿದೆ?

ಕಳೆದ ವರ್ಷ ಕೆಐಎಡಿಬಿ ಅಧಿಕಾರಿಗಳು ಹೊನ್ನೆನಹಳ್ಳಿ ಕೆರೆಯಿಂದ ದೇವರಾಯಪಟ್ಟಣ ಕೆರೆಗೆ ಪಂಪ್ ಮಾಡಿದ 70 ಲಕ್ಷ ರೂ ವಿದ್ಯುತ್ ಬಿಲ್ ಪಾವತಿಸುವಂತೆ ಮಠಕ್ಕೆ ನೋಟಿಸ್ ಕೊಟ್ಟಿತ್ತು. ಅಸಲಿಗೆ ಶ್ರೀಮಠ ಒಂದು ಹನಿ ನೀರನ್ನೂ ಉಪಯೋಗಿಸಿರಲಿಲ್ಲ. ಅಧಿಕಾರಿಗಳ ಈ ಎಡವಟ್ಟು ಗಮನಿಸಿದ ಕೈಗಾರಿಕಾ ಸಚಿವ ಎಂಬಿ ಪಾಟೀಲ್​, ಹಣವನ್ನು ನಾವೇ ಭರಿಸುತ್ತೇವೆ ಎಂದಿದ್ದರು. ಆದರೆ ಸಚಿವರು ಭರವಸೆ ಕೊಟ್ಟು ಒಂದು ವರ್ಷ ಆದರೂ ಕೆಐಎಡಿಬಿ ವಿದ್ಯುತ್ ಬಿಲ್ ಪಾವತಿ ಮಾಡಿರಲಿಲ್ಲ. ಬೆಸ್ಕಾಂ ಅಧಿಕಾರಿಗಳು ಹೊನ್ನೆನಹಳ್ಳಿಯಲ್ಲಿ ಇರುವ ನೀರು ಪಂಪ್ ಮಾಡುವ ಘಟಕದ ವಿದ್ಯುತ್ ಸಂಪರ್ಕ ಕಡಿತಗೊಳಿಸಿದ್ದರು. ಪ್ರತಿದಿನ ಲಕ್ಷಾಂತರ ಭಕ್ತರು ಬರುತ್ತಾರೆ. ಬಂದ ಭಕ್ತಾಧಿಗಳಿಗೆ ಊಟ‌, ವಸತಿ, ಸ್ನಾನಾದಿಗಳಿಗೆ ನೀರಿನ ಕೊರತೆ‌ ಉಂಟಾಗಬಹುದು. ಅಲ್ಲದೆ ನಿತ್ಯ 10 ಸಾವಿರ ವಿದ್ಯಾರ್ಥಿಗಳ ಉಪಯೋಗಕ್ಕೆ ನೀರಿನ ಅವಶ್ಯಕತೆ ಇದೆ. ಹಾಗಾಗಿ ಸಿದ್ದಗಂಗಾ ಮಠಕ್ಕೆ ಮತ್ತೆ ನೀರಿನ ಹಾಹಾಕಾರ ಎದುರಾಗಲಿದೆ ಎನ್ನಲಾಗುತ್ತಿತ್ತು.

ಇದನ್ನೂ ಓದಿ: ಶಿವಕುಮಾರ ಸ್ವಾಮೀಜಿ 7ನೇ ಪುಣ್ಯ ಸಂಸ್ಮರಣೆ: ನಾಳೆ ತುಮಕೂರಿಗೆ ಉಪರಾಷ್ಟ್ರಪತಿ

ದೇವರಾಯಪಟ್ಟಣ ಕೆರೆಗೆ ಆರು ತಿಂಗಳಿಂದ ನೀರು ಬಾರದ ಹಿನ್ನೆಲೆ ಮಠ ಸೇರಿದಂತೆ ಸ್ಥಳೀಯ ರೈತರಿಗೂ ನೀರು ಸಿಗದ ಆತಂಕ ಶುರುವಾಗಿತ್ತು. ಹೀಗಾಗಿ ಸರ್ಕಾರ ಇದರ ಬಗ್ಗೆ ಗಮನ ಹರಿಸುವಂತೆ ಒತ್ತಾಯಿಸಿದ್ದರು. ಟಿವಿ9 ಕೂಡ ಈ ಕುರಿತು ವರದಿ ಮಾಡಿತ್ತು. ವರದಿ ಬಳಿಕ ಬಾಕಿ ಉಳಿದಿದ್ದ ಸುಮಾರು 1.96 ಕೋಟಿ ರೂ ಹಣವನ್ನು ಬೆಸ್ಕಾಂಗೆ ಕೆಐಎಡಿಬಿ ಪಾವತಿಸಿದೆ. ಇದರಿಂದ ಮಠಕ್ಕೆ ನೀರಿನ ಕೊರತೆಯ ಆತಂಕ ದೂರುವಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.