ತಾಜಾ ಮಾಹಿತಿಗಳ ಪ್ರಕಾರ ಕಂಪ್ಯೂಟರ್ ಆಪರೇಟರ್ ಜಯಲಕ್ಷ್ಮೀಗೆ 1 ತಿಂಗಳ ಸಂಬಳವನ್ನು ಶಿರಾ ತಾಲೂಕು ಪಂಚಯಾತಿ ಇಒ ನೀಡಿದ್ದಾರೆ. ಬಾಕಿಸಂಬಳವನ್ನು ಶೀಘ್ರದಲ್ಲೇ ವಿತರಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.
ಏನಿದು ಸಂಬಳ ಬಡವಾಡೆ ಆಗದ ಕತೆ?
ತನ್ನ ಎರಡು ಮಕ್ಕಳೊಂದಿಗೆ ಆಗಮಿಸಿದ್ದ ಜಯಲಕ್ಷ್ಮೀ ಎನ್ನುವ ಮಹಿಳೆ ತಾನು ಹುಲಿಕುಂಟೆ ಗ್ರಾಮ ಪಂಚಾಯಿತಿಯಲ್ಲಿ ಕ್ಲರ್ಕ್ ಕಂ ಡಾಟಾ ಎಂಟ್ರಿ ಆಪರೇಟರ್ ಆಗಿ ಕೆಲಸ ನಿರ್ವಹಿಸುತ್ತಿದ್ದು, ಎರಡು ವರ್ಷಗಳಿಂದ ವೇತನ ನೀಡಲಾಗಿಲ್ಲ. ಈ ಬಗ್ಗೆ ಜಿಲ್ಲಾ ಪಂಚಾಯಿತಿ ಸಿಇಓ ರವರಿಗೆ ದೂರು ಸಲ್ಲಿಸಿದ್ದೇನೆ. ಮೊನ್ನೆಯಷ್ಟೇ ನಡೆದ ಕೆಡಿಪಿ ಸಭೆಯಲ್ಲಿ ವಿಷಯವನ್ನು ಶಾಸಕರು ಹಾಗೂ ತಹಸೀಲ್ದಾರ್‌ರವರ ಗಮನಕ್ಕೂ ತಂದಿದ್ದೇನೆ. ಶಾಸಕರು 12 ಗಂಟೆಯೊಳಗಾಗಿ ವೇತನ ಸಮಸ್ಯೆ ಬಗೆಹರಿಸುವಂತೆ ತಾಲೂಕು ಪಂಚಾಯತಿ ಈಓ ರವರಿಗೆ ಸೂಚಿಸಿದರೂ, ತಮಗೆ ಈವರೆವಿಗೆ ವೇತನ ನೀಡಲಾಗಿಲ್ಲ ಎಂದು ಅಳಲು ತೋಡಿಕೊಂಡಿದ್ದಾರೆ.
ಸ್ಥಳದಲ್ಲಿದ್ದ ಈಓ ಅವರಿಗೆ ಸೂಚನೆ ನೀಡಿದ ಶಾಸಕರು, ಸಮಸ್ಯೆ ಬಗೆಹರಿಸುವಂತೆ ಸೂಚಿಸಿ, ಸಭೆಯಿಂದ ಹೊರನಡೆದರು. ಶಾಸಕರು, ತಹಸೀಲ್ದಾರ್ ಎಲ್ಲರೂ ತೆರಳಿದರೂ ವೇದಿಕೆ ಬಿಟ್ಟು ಇಳಿಯಲು ಒಪ್ಪದ ಮಹಿಳೆ, ತನಗೆ ನ್ಯಾಯ ಕೊಡಿಸಿ ಎಂದು ಕಣ್ಣೀರು ಸುರಿಸಿದರು. ಈ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿದ ಮಹಿಳೆ, ತನ್ನ ವೇತನ ತಡೆ ಹಿಡಿಯಲು ಪಂಚಾಯಿತಿ ಅಧ್ಯಕ್ಷೇ ಅಕ್ಕಮ್ಮ ಹಾಗೂ ಮಗನು ಪಾಂಡುರಂಗಪ್ಪ ಕಾರಣ. ತಾನು ಕೆಲಸ ನಿರ್ವಹಿಸುತ್ತಿರುವ ಪಂಚಾಯಿತಿ ವ್ಯಾಪ್ತಿಯಿಂದ ಹೊರತಾದ ಪ್ರದೇಶದಿಂದ ಓಡಾಡುತ್ತಿದ್ದೇನೆ ಎನ್ನುವ ವಿಚಾರದಿಂದ ಹಿಡಿದು, ನನಗೆ ಮುಜುಗುರ ಆಗುವಂತೆ ಮಾತನಾಡುತ್ತಾನೆ. ಗಂಡನನ್ನು ಕಳೆದುಕೊಂಡಿರುವ ನನಗೆ ಇರುವ ಇಬ್ಬರು ಮಕ್ಕಳನ್ನು ಸಾಕಲು ವೇತನದ ಅವಶ್ಯಕತೆ ಇದೆ. ನನಗೆ ಬರಬೇಕಾಗಿರುವ ಸಂಬಳ ಕೊಡಿಸಿ ಇಲ್ಲವೇ ವಿಷವನ್ನಾದರೂ ಕೊಡಿ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಅಧಿಕಾರಿಗಳ ವೈಫಲ್ಯ:
ಸ್ಥಳದಲ್ಲಿದ್ದ ನಗರಸಭೆ ಸದಸ್ಯೆ ಉಮಾ ವಿಜಯರಾಜ್ ಮಹಿಳೆಯನ್ನು ಸಾಂತ್ವನಗೊಳಿಸಿ, ಶಾಸಕರ ಜೊತೆಯಲ್ಲಿ ಚರ್ಚಿಸಿ ಶೀಘ್ರದಲ್ಲೇ ವೇತನ ಬಿಡುಗಡೆ ಮಾಡಿಸಿ ಕೊಡುವ ಭರವಸೆ ನೀಡಿದರೂ ಮಹಿಳೆ ಅವರ ಮಾತನ್ನು ನಂಬಲು ಸಿದ್ಧರಿರಲಿಲ್ಲ. ಕಾರಣ ಈ ಹಿಂದೆ ನಾಲ್ಕು ತಿಂಗಳ ಹಿಂದೆ ಸಿಇಓ ರವರಿಗೆ ದೂರು ಸಲ್ಲಿಸಿದ್ದ ಸಮಯದಲ್ಲಿ ಅಧಿಕಾರಿಗಳು ಚೆಕ್ ರೆಡಿ ಮಾಡಿದ್ದು, ಈವರೆವಿಗೆ ಅಧ್ಯಕ್ಷರ ಸಹಿ ಮಾಡಿಸಲು ಅಧಿಕಾರಿಗಳು ವಿಫಲರಾಗಿದ್ದಾರೆ ಎಂದು ಮಹಿಳೆ ತಿಳಿಸಿದ್ದಾರೆ.
ಸರ್ಕಾರದ ನಿಯಮಾವಳಿಗಳ ಅಡಿಯಲ್ಲಿ ನೇಮಕಾತಿಗೊಂಡಿರುವ ಮಹಿಳೆಯೊಬ್ಬರಿಗೆ ಸಿಗಬೇಕಾದ ನ್ಯಾಯಯುತ ವೇತನ ಬಿಡುಗಡೆ ಮಾಡಿಕೊಡುವಲ್ಲಿ ಇಲಾಖೆಯ ಅಧಿಕಾರಿಗಳ ನಿರ್ಲಕ್ಷ, ಬೇಜವಾಬ್ದಾರಿತನ, ವೈಫಲ್ಯ ಎದ್ದು ಕಾಣಿಸುತ್ತಿದೆ ಎನ್ನುವುದು ಮಾತ್ರ ಸತ್ಯ.
ಕಂಪ್ಯೂಟರ್ ಆಪರೇಟರ್‌ಗೆ ಕೊನೆಗೂ ಸಿಕ್ತು ಸಂಬಳ
ಕಂಪ್ಯೂಟರ್ ಆಪರೇಟರ್ ಜಯಲಕ್ಷ್ಮೀಗೆ 1 ತಿಂಗಳ ಸಂಬಳವನ್ನು ಶಿರಾ ತಾಲೂಕು ಪಂಚಯಾತಿ ಇಒ ನೀಡಿದ್ದಾರೆ. 7.5 ಸಾವಿರ ರೂಪಾಯಿ ಸಂಬಂಳದ ಚೆಕ್ ವಿತರಣೆ. ಅಲ್ಲದೇ ಬಾಕಿ ಸಂಬಳ ಶೀಘ್ರದಲ್ಲೇ ನೀಡುವುದಾಗಿ ಇಒ ಭರವಸೆ ನೀಡಿದ್ದಾರೆ. ಮಹಿಳೆಗೆ 2 ವರ್ಷದಿಂದ ಸಂಬಳ ನೀಡದ ಹಿನ್ನೆಲೆ ಕಣ್ಣೀರಿಟ್ಟದ್ದರು. ಟಿವಿ9ನಲ್ಲಿ ಈ ಬಗ್ಗೆ ವರದಿ ಪ್ರಸಾರವಾದ ಬೆನ್ನಲ್ಲೇ ಜಯಲಕ್ಷ್ಮೀಗೆ ಸಂಬಳ ವಿತರಣೆ ಮಾಡಲಾಗಿದೆ.
ವರದಿ: ಮಹೇಶ್
ಇದನ್ನೂ ಓದಿ:
ಮೈಸೂರು: ಬಾಲ್ಯ ವಿವಾಹ ಪ್ರಶ್ನಿಸಿದ್ದಕ್ಕೆ ಚಾಕು ಇರಿತ; ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷನ ಮೇಲೆ ಹಲ್ಲೆ