
Breaking News Today Live Updates in Kannada: ನೆರೆರಾಜ್ಯ ಆಂಧ್ರಪ್ರದೇಶದ ಕಡಪಾದಲ್ಲಿ ಕೋವಿಡ್‌ಗೆ ಇಬ್ಬರು ಬಲಿಯಾಗಿದ್ದು, ಕರ್ನಾಟಕದಲ್ಲೂ ಜುಲೈನಲ್ಲಿ ಪ್ರಕರಣಗಳ ಸಂಖ್ಯೆ 32ಕ್ಕೆ ಏರಿಕೆಯಾಗಿದೆ. ಸೋಂಕಿನ ಗಂಭೀರತೆ ಕಡಿಮೆ ಇದ್ದರೂ ರಾಜ್ಯದಲ್ಲಿ ಮತ್ತೊಮ್ಮೆ ಕೊರೊನಾ ಭೀತಿ ಶುರುವಾಗಿದೆ. ಮಂಗಳೂರಿನ ಉರ್ವಾ ಸಮೀಪ ಪೊಲೀಸರು ಕಾರ್ಯಾಚರಣೆ ನಡೆಸಿ 11 ಅಕ್ರಮ ಬಾಂಗ್ಲಾದೇಶಿ ವಲಸಿಗರನ್ನು ಬಂಧಿಸಿದ್ದು, ಒಟ್ಟು ಬಂಧಿತರ ಸಂಖ್ಯೆ 17ಕ್ಕೆ ಏರಿಕೆಯಾಗಿದೆ. ಇತ್ತ ಅಮೆರಿಕ ಅಧ್ಯಕ್ಷ ಟ್ರಂಪ್ ಹಾರ್ಮುಜ್ ಜಲಸಂಧಿಯಲ್ಲಿ ಶೇ20ರಷ್ಟು ಸುರಕ್ಷತಾ ಶುಲ್ಕ ವಿಧಿಸಿದ್ದು, ಇರಾನ್ ತೀವ್ರ ವಿರೋಧ ವ್ಯಕ್ತಪಡಿಸಿದೆ. ಈ ಸುಂಕದ ಸಮರದಿಂದ ಕಚ್ಚಾ ತೈಲ ಬೆಲೆ ಏರಿಕೆ ಹಾಗೂ ಭಾರತದ ಆರ್ಥಿಕತೆಗೆ ಪೆಟ್ಟು ಬೀಳುವ ಆತಂಕ ಎದುರಾಗಿದೆ. ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜ್ಯ, ರಾಜಕೀಯ, ಸಿನಿಮಾ, ಕ್ರೀಡೆ ಇತ್ಯಾದಿ ಲೇಟೆಸ್ಟ್ ಮಾಹಿತಿ ತಿಳಿಯಲು ಈ ಪುಟವನ್ನು ರಿಫ್ರೆಶ್ ಮಾಡುತ್ತಿರಿ.
ದೇಶಾದ್ಯಂತ ಭಾರಿ ಸಂಚಲನ ಮೂಡಿಸಿದ್ದ ಆಲ್-ಹಿಂದ್ ಐಸಿಸ್ (Al-Hind ISIS) ಮಾಡ್ಯೂಲ್‌ನ ಭಯೋತ್ಪಾದನಾ ಸಂಚು ಪ್ರಕರಣಕ್ಕೆ ಸಂಬಂಧಿಸಿದಂತೆ ಎನ್‌ಐಎ (NIA) ವಿಶೇಷ ನ್ಯಾಯಾಲಯವು ಮಹತ್ವದ ತೀರ್ಪು ಪ್ರಕಟಿಸಿದೆ. ಪ್ರಕರಣದ ಪ್ರಮುಖ ಆರೋಪಿಯಾದ ಮೊಹಮ್ಮದ್ ಹನೀಫ್ ಖಾನ್‌ಗೆ 7 ವರ್ಷಗಳ ಕಠಿಣ ಜೈಲು ಶಿಕ್ಷೆ ಹಾಗೂ 48,000 ರೂಪಾಯಿ ದಂಡ ವಿಧಿಸಿ ನ್ಯಾಯಾಲಯ ಆದೇಶ ಹೊರಡಿಸಿದೆ.
ಕರ್ನಾಟಕ ರಾಜ್ಯದ ಹಲವು ಜಿಲ್ಲೆಗಳಲ್ಲಿ ಸೃಷ್ಟಿಯಾಗಿರುವ ಬರ ಪರಿಸ್ಥಿತಿಯನ್ನು ರಾಜ್ಯ ಸರ್ಕಾರವು ಅತ್ಯಂತ ಗಂಭೀರವಾಗಿ ಪರಿಗಣಿಸಿದೆ. ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ದೇಶದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ಅಧಿಕೃತವಾಗಿ ಪತ್ರ ಬರೆಯುವ ಮೂಲಕ ಕೇಂದ್ರ ಸರ್ಕಾರದ ತುರ್ತು ಹಸ್ತಕ್ಷೇಪಕ್ಕೆ ಆಗ್ರಹಿಸಿದ್ದಾರೆ. ಇಲ್ಲಿದೆ ನೋಡಿ ಸ್ಟೋರಿ
ಕರ್ನಾಟಕ ಲೋಕಸೇವಾ ಆಯೋಗದ (KPSC) ನೂತನ ಹಂಗಾಮಿ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡಿರುವ ಡಾ. ಬಿ. ಪ್ರಭುದೇವ್ ಅವರು ಇಂದು ರಾಜಭವನದ ಲೋಕಭವನದಲ್ಲಿ ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ ಅವರನ್ನು ಅಧಿಕೃತವಾಗಿ ಭೇಟಿ ಮಾಡಿದ್ದಾರೆ. ಇದು ಕೇವಲ ಸೌಜನ್ಯದ ಭೇಟಿಯಾಗಿದ್ದು, ನೂತನ ಹಂಗಾಮಿ ಅಧ್ಯಕ್ಷರಾಗಿ ನೇಮಕಗೊಂಡ ಬಳಿಕ ರಾಜ್ಯಪಾಲರನ್ನು ಭೇಟಿ ಮಾಡಿ ಗೌರವ ಸಲ್ಲಿಸಿದ್ದಾರೆ.
ಜಿಲ್ಲೆಯ ಜೈಲು ಇಲಾಖೆಯಲ್ಲಿ ಭಾರಿ ಸಂಚಲನ ಮೂಡಿಸಿರುವ ಘಟನೆಯೊಂದರಲ್ಲಿ, ಕಲಬುರಗಿ ಕೇಂದ್ರ ಕಾರಾಗೃಹದಿಂದ ಮೂವರು ಕೈದಿಗಳು ಜೈಲು ಸಿಬ್ಬಂದಿಯ ಕಣ್ಣು ತಪ್ಪಿಸಿ ಪರಾರಿಯಾಗಿದ್ದಾರೆ. ಈ ಹೈ-ಪ್ರೊಫೈಲ್ ಜೈಲ್ ಬ್ರೇಕ್ ಪ್ರಕರಣ ಇಡೀ ಪೊಲೀಸ್ ಇಲಾಖೆಯನ್ನು ಬೆಚ್ಚಿಬೀಳಿಸಿದೆ.
ಹಸಿರು ಪೈರಿನ ನಡುವೆ ಕಷ್ಟಪಟ್ಟು ದುಡಿಯುತ್ತಿದ್ದ ದಂಪತಿಗಳ ಮೇಲೆ ವಿಧಿ ವಿದ್ಯುತ್ ರೂಪದಲ್ಲಿ ಎರಗಿದೆ. ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ವೇಳೆ ತುಂಡಾಗಿ ಬಿದ್ದಿದ್ದ ವಿದ್ಯುತ್ ತಂತಿ ಸ್ಪರ್ಶಿಸಿ ರೈತ ದಂಪತಿಗಳು ಸ್ಥಳದಲ್ಲೇ ಸಾವನ್ನಪ್ಪಿರುವ ಅತ್ಯಂತ ದಾರುಣ ಘಟನೆ ಬೆಳಗಾವಿ ಜಿಲ್ಲೆಯ ಮೂಡಲಗಿ ತಾಲೂಕಿನ ನಾಗನೂರ ಗ್ರಾಮದ ಹೊರವಲಯದಲ್ಲಿ ನಡೆದಿದೆ.
ಕರ್ನಾಟಕ ಲೋಕಸೇವಾ ಆಯೋಗದ (KPSC) ಅಧ್ಯಕ್ಷ ಸ್ಥಾನದಿಂದ ಶಿವಶಂಕರಪ್ಪ ಸಾಹುಕಾರ್ ಅವರನ್ನು ಅಮಾನತುಗೊಳಿಸಿರುವ ರಾಜ್ಯಪಾಲರ ಆದೇಶದ ವಿರುದ್ಧ ಇದೀಗ ಕಾನೂನು ಹೋರಾಟ ತೀವ್ರಗೊಂಡಿದೆ. ರಾಜ್ಯಪಾಲರ ಅಮಾನತು ಆದೇಶವನ್ನು ಪ್ರಶ್ನಿಸಿ ಶಿವಶಂಕರಪ್ಪ ಅವರು ಕರ್ನಾಟಕ ಹೈಕೋರ್ಟ್‌ಗೆ ರಿಟ್ ಅರ್ಜಿ ಸಲ್ಲಿಸಿದ್ದು, ಹಿರಿಯ ನ್ಯಾಯವಾದಿಗಳ ನಡುವೆ ನ್ಯಾಯಾಲಯದಲ್ಲಿ ಭಾರಿ ವಾದ-ವಿವಾದ ನಡೆದಿದೆ.
ರಾಷ್ಟ್ರಕವಿ ಕುವೆಂಪು ಅವರು ರಚಿಸಿರುವ ಕರ್ನಾಟಕದ ಹೆಮ್ಮೆಯ ನಾಡಗೀತೆ ‘ಜೈ ಭಾರತ ಜನನಿಯ ತನುಜಾತೆ’ಯಲ್ಲಿ ಇನ್ಮುಂದೆ ಮಹತ್ವದ ಬದಲಾವಣೆಯೊಂದು ಆಗುವ ಸಾಧ್ಯತೆ ದಟ್ಟವಾಗಿದೆ. ನಾಡಗೀತೆಯಲ್ಲಿ ಜೈನ ಧರ್ಮದ ಉಲ್ಲೇಖದ ಜೊತೆಗೆ ಇದೀಗ ‘ಬೌದ್ಧ ಧರ್ಮ’ದ ಹೆಸರನ್ನು ಸೇರ್ಪಡೆಗೊಳಿಸಲು ಚಿಂತನೆ ನಡೆಸಲಾಗುತ್ತಿದೆ. ಇಲ್ಲಿದೆ ನೋಡಿ ಸ್ಟೋರಿ
ಫಿಫಾ ವಿಶ್ವಕಪ್ (FIFA World Cup) ಫುಟ್‌ಬಾಲ್ ಪಂದ್ಯಗಳ ರೋಮಾಂಚನ ಕಣ್ತುಂಬಿಕೊಳ್ಳುತ್ತಿರುವ ಸಿಲಿಕಾನ್ ಸಿಟಿ ಜನತೆಗೆ ಬೆಂಗಳೂರು ನಗರ ಪೊಲೀಸರು ಭರ್ಜರಿ ಸಿಹಿ ಸುದ್ದಿ ನೀಡಿದ್ದಾರೆ. ತಡರಾತ್ರಿ ನಡೆಯುವ ವಿಶ್ವಕಪ್ ಪಂದ್ಯಗಳ ಹಿನ್ನೆಲೆಯಲ್ಲಿ ನಗರದ ಹೋಟೆಲ್ ಹಾಗೂ ರೆಸ್ಟೋರೆಂಟ್‌ಗಳಲ್ಲಿ ಮಧ್ಯರಾತ್ರಿ 3:30 ರವರೆಗೆ ಆಹಾರ ಸೇವೆ ಒದಗಿಸಲು ಬೆಂಗಳೂರು ಪೊಲೀಸ್ ಇಲಾಖೆ ವಿಶೇಷ ರಿಯಾಯಿತಿ ನೀಡಿ ಆದೇಶ ಹೊರಡಿಸಿದೆ.
Football inspires millions across the world, and the FIFA World Cup is a celebration that fans eagerly look forward to. Following a request from the National Restaurant Association of India, our government has permitted hotels and restaurants in Bengaluru to extend food service…
— DK Shivakumar (@DKShivakumar) July 14, 2026
ಪತ್ನಿಗೆ ವರದಕ್ಷಿಣೆ ಕಿರುಕುಳ ನೀಡಿ, ಮಚ್ಚಿನಿಂದ ಕೊಲೆಗೆ ಯತ್ನಿಸಿದ ಆರೋಪದಡಿ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಪಿಎಸ್ಐ ಭೈರಪ್ಪ ಎಂಬಾತನನ್ನು ಕೆಂಗೇರಿ ಪೊಲೀಸರು ಬಂಧಿಸಿದ್ದಾರೆ. ಮೊದಲು ಎನ್‌ಸಿಆರ್ ದಾಖಲಿಸಿದ್ದ ಪೊಲೀಸರು, ಇದೀಗ ಕೊಲೆ ಯತ್ನ ಹಾಗೂ ಅಕ್ರಮ ಶಸ್ತ್ರಾಸ್ತ್ರ ಕಾಯ್ದೆಯಡಿ ಎಫ್‌ಐಆರ್ ದಾಖಲಿಸಿ ಆರೋಪಿಯನ್ನು ಬಂಧಿಸಿದ್ದಾರೆ.
ಹಲವು ವಿವಾದಾತ್ಮಕ ಹಾಗೂ ಸೈದ್ಧಾಂತಿಕ ಸಿನಿಮಾಗಳಲ್ಲಿ ನಟಿಸಿರುವ ಹಿರಿಯ ನಟ ಅನುಪಮ್ ಖೇರ್, ಇದೀಗ ಹೊಸದಾಗಿ ಘೋಷಣೆಯಾಗಿರುವ ‘ಶ್ರೀ ರಾಮ ಭೂಮಿ’ ಸಿನಿಮಾದಲ್ಲಿ ಪ್ರಮುಖ ಪಾತ್ರಧಾರಿಯಾಗಿದ್ದಾರೆ. ರಾಮಜನ್ಮಭೂಮಿ ಹೋರಾಟದ ಮುಂಚೂಣಿ ನಾಯಕ ಅಶೋಕ್ ಸಿಂಘಾಲ್ ಅವರ ಪಾತ್ರದಲ್ಲಿ ಅನುಪಮ್ ಖೇರ್ ಬಣ್ಣ ಹಚ್ಚುತ್ತಿರುವುದು ವಿಶೇಷವಾಗಿದೆ. ಮತ್ತಷ್ಟು ಓದಿ
ಮಲೆನಾಡು ಭಾಗದಲ್ಲಿ ಸುರಿದ ಮಳೆಯಿಂದಾಗಿ ಸಕಲೇಶಪುರ ತಾಲ್ಲೂಕಿನ ಹಾನ್‌ಬಾಳ್ ಬಳಿಯ ಅಬ್ಬಿ ಜಲಪಾತ ತುಂಬಿ ಹರಿಯುತ್ತಿದ್ದು, ಪ್ರವಾಸಿಗರನ್ನು ಆಕರ್ಷಿಸುತ್ತಿದೆ. ಆದರೆ, ಜಲಪಾತದಲ್ಲಿ ನೀರಿಗಿಳಿಯದಂತೆ ಎಚ್ಚರಿಕೆ ಸೂಚನಾ ಫಲಕಗಳಿದ್ದರೂ ಪ್ರವಾಸಿಗರು ನಿಯಮಗಳನ್ನು ಸಂಪೂರ್ಣವಾಗಿ ಕಡೆಗಣಿಸಿ ನೀರಿಗಿಳಿಯುತ್ತಿರುವುದು ತೀವ್ರ ಆತಂಕಕ್ಕೆ ಕಾರಣವಾಗಿದೆ. ವೀಡಿಯೋ ನೋಡಿ
ಕಾವೇರಿ ಜಲಾನಯನ ಪ್ರದೇಶದಲ್ಲಿ ತೀವ್ರ ಮಳೆ ಕೊರತೆಯಿರುವ ಹಿನ್ನೆಲೆಯಲ್ಲಿ ನಾಳೆ ದೆಹಲಿಯಲ್ಲಿ ಮಹತ್ವದ CWRC ಸಭೆ ನಡೆಯಲಿದೆ. ಜೂನ್ ಮತ್ತು ಜುಲೈ ಕೋಟಾದಡಿ 40.43 ಟಿಎಂಸಿ ನೀರಿಗಾಗಿ ತಮಿಳುನಾಡು ಪಟ್ಟು ಹಿಡಿದಿದ್ದು, ಜಲಾಶಯಗಳು ಬರಿದಾಗಿ ಬೆಂಗಳೂರಿನ ಕುಡಿಯುವ ನೀರಿಗೇ ಆಭಾವವಿರುವುದರಿಂದ ನೀರು ಬಿಡಲು ಸಾಧ್ಯವಿಲ್ಲ ಎಂದು ಕರ್ನಾಟಕ ವಾದಿಸಲಿದೆ.
ಗೃಹ ಸಚಿವರ ತವರಾದ ಕಲಬುರಗಿಯ ಕೇಂದ್ರ ಕಾರಾಗೃಹದ ಬ್ಯಾರಕ್ ಕಂಬಿ ಕತ್ತರಿಸಿ, ಟವೆಲ್ ಹಾಗೂ ಹಾಸಿಗೆ ನೆರವಿನಿಂದ ಮೂವರು ಸಜಾ ಕೈದಿಗಳು ಕಾಂಪೌಂಡ್ ಗೋಡೆ ಹಾರಿ ಪರಾರಿಯಾಗಿದ್ದಾರೆ. ಈ ಘಟನೆ ಜೈಲಿನ ಭದ್ರತಾ ವ್ಯವಸ್ಥೆಯನ್ನು ಪ್ರಶ್ನಿಸುವಂತೆ ಮಾಡಿದ್ದು, ಪೊಲೀಸರು ಕೈದಿಗಳಿಗಾಗಿ ವ್ಯಾಪಕ ಶೋಧ ನಡೆಸುತ್ತಿದ್ದಾರೆ. ಮತ್ತಷ್ಟು ಓದಿ
ಕಲ್ಟ್ ಕ್ಲಾಸಿಕ್ ಸಿನಿಮಾ ‘ತುಂಬಾಡ್’ ಸೀಕ್ವೆಲ್ ನಿರ್ಮಾಣವಾಗುತ್ತಿದ್ದು, ನಟಿ ಸಮಂತಾ ಅವರ ಬದಲಿಗೆ ಆಲಿಯಾ ಭಟ್ ಮುಖ್ಯ ಪಾತ್ರಕ್ಕೆ ಆಯ್ಕೆಯಾಗಿದ್ದಾರೆ. ಇತ್ತೀಚೆಗೆ ಮರು ಬಿಡುಗಡೆಯಾಗಿ ದಾಖಲೆ ಗಳಿಕೆ ಮಾಡಿದ್ದ ಈ ಚಿತ್ರದ ಸೀಕ್ವೆಲ್ ಮೂಲಕ ಆಲಿಯಾ ಇದೀಗ ‘ತುಂಬಾಡ್’ ಪ್ರಪಂಚ ಪ್ರವೇಶಿಸುತ್ತಿದ್ದಾರೆ. ಮತ್ತಷ್ಟು ಓದಿ
ಮಾದಾವರದ ಬಿಐಇಸಿಯಲ್ಲಿ ನಡೆಯುತ್ತಿರುವ ‘ಗೂಗಲ್ ಐಓ ಕನೆಕ್ಟ್’ ಕಾರ್ಯಕ್ರಮದಲ್ಲಿ ಸಿಎಂ ಡಿ.ಕೆ. ಶಿವಕುಮಾರ್ ಭಾಗವಹಿಸಿ ಮಾತನಾಡಿದ್ದಾರೆ. ಎಐ ತಂತ್ರಜ್ಞಾನದ ಜಾಗತಿಕ ರಾಜಧಾನಿಯಾಗಿ ಬೆಂಗಳೂರು ಬೆಳೆಯುತ್ತಿದ್ದು, ಶಾಲೆ ಹಂತದಿಂದಲೇ ಸರ್ಕಾರ ಎಐ ಕಲಿಕೆಗೆ ಬೆಂಬಲ ನೀಡಲಿದೆ ಎಂದು ಸಿಎಂ ತಿಳಿಸಿದ್ದು, ಗೂಗಲ್ ಸಂಸ್ಥೆಗೆ ಧನ್ಯವಾದ ಅರ್ಪಿಸಿದ್ದಾರೆ.
ಕಾನೂನುಬಾಹಿರವಾಗಿ ಬಾಂಗ್ಲಾದೇಶ ಪ್ರಜೆಗಳನ್ನು ಮಂಗಳೂರಿಗೆ ಕೆಲಸಕ್ಕೆ ಕರೆತಂದ ಆರೋಪದಡಿ ಪಶ್ಚಿಮ ಬಂಗಾಳ ಮೂಲದ ಮೊಯ್ದಿನ್ ಇಸ್ಲಾಂ, ರಸುಲ್ ಇಸ್ಲಾಂ ಹಾಗೂ ದಿಲ್ವಾರ್ ಹುಸೇನ್ ವಿರುದ್ಧ ಎಫ್ಐಆರ್ ದಾಖಲಾಗಿದೆ. ಇವರಲ್ಲಿ ಇಬ್ಬರನ್ನು ಮಂಗಳೂರಿನಲ್ಲಿ ಬಂಧಿಸಲಾಗಿದ್ದು, ಕೋಲ್ಕತ್ತಾದಲ್ಲಿ ಬಂಧನಕ್ಕೊಳಗಾಗಿರುವ ಮತ್ತೊಬ್ಬ ಆರೋಪಿ ರಸುಲ್ ಇಸ್ಲಾಂನನ್ನು ವಶಕ್ಕೆ ಪಡೆಯಲು ಪೊಲೀಸರು ಕೋಲ್ಕತ್ತಾಕ್ಕೆ ತೆರಳಿದ್ದಾರೆ.
ಮಣ್ಣೆತ್ತಿನ ಅಮಾವಾಸ್ಯೆ ಹಿನ್ನೆಲೆ ಚಾಮರಾಜನಗರದ ಮಲೆಮಹದೇಶ್ವರ ಬೆಟ್ಟಕ್ಕೆ ಸಾವಿರಾರು ಭಕ್ತರು ಹರಿದುಬಂದಿದ್ದು, ಮುಖ್ಯ ದ್ವಾರ ತೆರೆಯದ ಪ್ರಾಧಿಕಾರದ ಬೇಜವಾಬ್ದಾರಿತನಕ್ಕೆ ರೊಚ್ಚಿಗೆದ್ದಿದ್ದಾರೆ. ಟಿಕೆಟ್ ಪಡೆದೂ ದರ್ಶನ ಸಿಗದೆ ಸುಸ್ತಾದ ಭಕ್ತರು ಬ್ಯಾರಿಕೇಡ್ ಹಾಗೂ ಗ್ರಿಲ್ಸ್ ಹತ್ತಿ ಒಳಪ್ರವೇಶಿಸಲು ಹರಸಾಹಸ ಪಟ್ಟ ಘಟನೆ ನಡೆದಿದೆ.
ಗದಗ-ಬೆಟಗೇರಿ ಅವಳಿ ನಗರಕ್ಕೆ ನೀರು ಪೂರೈಸುವ ತುಂಗಭದ್ರಾ ಪೈಪ್‌ಲೈನ್‌ಗೆ ಅಡವಿಸೋಮಾಪುರ ಬಳಿ ದುಷ್ಕರ್ಮಿಗಳು ಕಲ್ಲು ತುಂಬಿದ್ದು, ನೀರು ಸರಬರಾಜಿನಲ್ಲಿ ವ್ಯತ್ಯಯವಾಗಿದೆ. ನಗರಸಭೆ ಅಧಿಕಾರಿಗಳು ಹಾಗೂ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಕಲ್ಲು ತೆರವುಗೊಳಿಸಿದ್ದು, ಗದಗ ಗ್ರಾಮೀಣ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.
ಹಾವೇರಿಯಿಂದ ದಾಬಸ್‌ಪೇಟೆಗೆ ಸಿಮೆಂಟ್ ಶೀಟ್ ಹೊತ್ತು ಸಾಗುತ್ತಿದ್ದ ಲಾರಿ ಬ್ರೇಕ್ ಫೇಲ್ ಆಗಿ ದಾವಣಗೆರೆಯ ತುಂಗಭದ್ರಾ ಬಡಾವಣೆ ಬಳಿ ಪಲ್ಟಿಯಾಗಿದೆ. ಸಿಮೆಂಟ್ ಶೀಟ್‌ಗಳ ಅಡಿ ಸಿಲುಕಿ ಚಾಲಕ ರಮೇಶ್ (55) ಸ್ಥಳದಲ್ಲೇ ಸಾವನ್ನಪ್ಪಿದ್ದು, ದಾವಣಗೆರೆ ದಕ್ಷಿಣ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನೆಲಮಂಗಲದ ಮೋಟಗಾನಹಳ್ಳಿ ಗ್ರಾಮದಲ್ಲಿ ಚಿರತೆ ಪ್ರತ್ಯಕ್ಷವಾಗಿದ್ದು, ಸಿಸಿಕ್ಯಾಮರಾದಲ್ಲಿ ದೃಶ್ಯ ಸೆರೆಯಾಗಿದೆ. ಚಿರತೆ ಹಾವಳಿಯಿಂದ ಗ್ರಾಮಸ್ಥರು ಮನೆಯಿಂದ ಹೊರಬರಲು ಭೀತಿಗೊಂಡಿದ್ದು, ಸಾರ್ವಜನಿಕರ ಹಿತದೃಷ್ಟಿಯಿಂದ ಅರಣ್ಯ ಇಲಾಖೆ ಅಧಿಕಾರಿಗಳು ಕೂಡಲೇ ಕಾರ್ಯಾಚರಣೆ ನಡೆಸಿ ಚಿರತೆಯನ್ನು ಸೆರೆಹಿಡಿಯಬೇಕೆಂದು ಗ್ರಾಮಸ್ಥರು ತೀವ್ರವಾಗಿ ಆಗ್ರಹಿಸಿದ್ದಾರೆ.
ಕೋಲಾರ ಎಪಿಎಂಸಿ ಮಾರುಕಟ್ಟೆ ಬಳಿ ಗಾಂಜಾ ಮಾರುತ್ತಿದ್ದ ಉತ್ತರ ಪ್ರದೇಶ ಮೂಲದ ಬೋಲಾನಾಥ್ ಪಾಲ್ (45) ಎಂಬಾತನನ್ನು ನಗರ ಪೊಲೀಸರು ಬಂಧಿಸಿದ್ದಾರೆ. ಬಂಧಿತನಿಂದ ₹2.5 ಲಕ್ಷ ಮೌಲ್ಯದ 4.5 ಕೆಜಿ ಗಾಂಜಾ ವಶಪಡಿಸಿಕೊಳ್ಳಲಾಗಿದ್ದು, ಕೋಲಾರ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿದ್ದ ಹಿರಿಯ ರಾಜಕಾರಣಿ, ಮಾಜಿ ಸಚಿವ ರಾಮಚಂದ್ರೇಗೌಡ (88) ನಿನ್ನೆ ರಾತ್ರಿ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. 6 ಬಾರಿ ಎಂಎಲ್ಸಿ ಹಾಗೂ ಸಚಿವರಾಗಿ ಸೇವೆ ಸಲ್ಲಿಸಿದ್ದ ಅವರ ನಿಧನಕ್ಕೆ ಗಣ್ಯರು ಕಂಬನಿ ಮಿಡಿದಿದ್ದಾರೆ.
ಕಲಬುರಗಿ ಕೇಂದ್ರ ಕಾರಾಗೃಹದ ಕಾಂಪೌಂಡ್ ಹಾರಿ ಬೀದರ್ ಕೊಲೆ ಪ್ರಕರಣದ ಸಜಾ ಕೈದಿಗಳಾದ ಮಸ್ತಾನ್, ಸಂತೋಷ್ ಮತ್ತು ಸಾಗರ್ ತಡರಾತ್ರಿ ಪರಾರಿಯಾಗಿದ್ದಾರೆ. ಈ ಕುರಿತು ಫರತಹಬಾದ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಕೈದಿಗಳಿಗಾಗಿ ತೀವ್ರ ಹುಡುಕಾಟ ನಡೆದಿದೆ.
Published On - 8:27 am, Tue, 14 July 26