TV9 Kannada News Live: 40 ವಲಯ ಅರಣ್ಯಾಧಿಕಾರಿಗಳ ವರ್ಗಾವಣೆ; ಇಂದಿನ ಪ್ರಮುಖ ಸುದ್ದಿಗಳು

Karnataka News Today Live Updates:ಬೆಂಗಳೂರಿನಲ್ಲಿ ಫ್ಲಾಟ್ ವಂಚನೆ, ಶಾಲೆ ಮಗುವಿನ ಸಾವು; ಚಿಕ್ಕಮಗಳೂರಿನಲ್ಲಿ ಮಾನವ ಕಳ್ಳಸಾಗಣೆ, ಕೋಲಾರದಲ್ಲಿ ಚಿನ್ನಾಭರಣ ಕಳವು ಪ್ರಕರಣಗಳು ವರದಿಯಾಗಿವೆ. ಇದಲ್ಲದೆ, ಪಶ್ಚಿಮ ಏಷ್ಯಾದಲ್ಲಿ ಅಮೆರಿಕ-ಇರಾನ್ ಸಂಘರ್ಷದ ಕುರಿತು ಮಹತ್ವದ ಮಾಹಿತಿ ಇಲ್ಲಿದೆ. ಅಪರಾಧ, ಪ್ರಾದೇಶಿಕ ಹಾಗೂ ಅಂತರಾಷ್ಟ್ರೀಯ ಘಟನೆಗಳ ಕ್ಷಣಕ್ಷಣದ ಅಪ್ಡೇಟ್‌ಗಳಿಗಾಗಿ ಈ ವರದಿಯನ್ನು ಓದಿ.

TV9 Kannada News Live: 40 ವಲಯ ಅರಣ್ಯಾಧಿಕಾರಿಗಳ ವರ್ಗಾವಣೆ; ಇಂದಿನ ಪ್ರಮುಖ ಸುದ್ದಿಗಳು
Vidhanasoudha
Image Credit source: Getty Images
Edited By:

Updated on: Jul 16, 2026 | 10:56 PM

Breaking News Today Live Updates in Kannada: ರಾಜಧಾನಿಯಲ್ಲಿ ಫ್ಲ್ಯಾಟ್ ಕೊಡಿಸುವುದಾಗಿ ನಂಬಿಸಿ ಸಾರ್ವಜನಿಕರಿಂದ ಕೋಟ್ಯಾಂತರ ರೂಪಾಯಿ ಹಣ ಪಡೆದು ವಂಚಿಸಿರುವ ಗಂಭೀರ ಆರೋಪದ ಮೇಲೆ ತಾಯಿ ಹಾಗೂ ಮಗಳ ವಿರುದ್ಧ ಹೆಬ್ಬಾಳ ಪೊಲೀಸ್ ಠಾಣೆಯಲ್ಲಿ ವಂಚನೆ ಪ್ರಕರಣ ದಾಖಲಾಗಿದೆ. ಬನ್ನೇರುಘಟ್ಟ ರಸ್ತೆಯ ವಿವರ್ಸ್ ಕಾಲೋನಿಯಲ್ಲಿರುವ ನ್ಯೂ ಬ್ಲಾಸಮ್ ಖಾಸಗಿ ಶಾಲೆಯಲ್ಲಿ 5ನೇ ತರಗತಿ ಓದುತ್ತಿದ್ದ ಅರ್ಹನ್ ಪಾಷಾ (12) ಎಂಬ ಬಾಲಕ ಕ್ಲಾಸ್ ರೂಮ್‌ನಲ್ಲೇ ಕುಸಿದು ಬಿದ್ದು ಮೃತಪಟ್ಟಿರುವ ದಾರುಣ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಇನ್ನು ಇಂದು ದೆಹಲಿಯಲ್ಲಿ ಸಿಎಂ ಡಿಕೆ ಶಿವಕುಮಾರ್​ ಅವರು ಹೈಕಮಾಂಡ್​​​ನ್ನು ಭೇಟಿಯಾಗಿ ಸಚಿವ ಸಂಪುಟದ ಬಗ್ಗೆ ಚರ್ಚೆ ನಡೆಸಲಿದ್ದಾರೆ. ಮನೆಗೆ ನೆಂಟಸ್ತನಕ್ಕೆ ಬಂದು ಉಪಹಾರ ಸವಿದು, ಅದೇ ಮನೆಯ ಬೀಗತಿಯ ಕುತ್ತಿಗೆಯಲ್ಲಿದ್ದ 5 ಲಕ್ಷ ರೂಪಾಯಿ ಮೌಲ್ಯದ 45 ಗ್ರಾಂ ತೂಕದ ಚಿನ್ನದ ಸರವನ್ನು ಕಳ್ಳತನ ಮಾಡಿದ್ದ ಕಿರಾತಕಿ ಸುಶೀಲಮ್ಮ ಎಂಬಾಕೆಯನ್ನು ಶ್ರೀನಿವಾಸಪುರ ಪೊಲೀಸರು ಬಂಧಿಸಿದ್ದಾರೆ. ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲೂಕಿನ ಯಲ್ಲೂರು ಗ್ರಾಮದಲ್ಲಿ ಈ ವಿಚಿತ್ರ ಹಾಗೂ ರೋಚಕ ಕಳ್ಳತನ ನಡೆದಿತ್ತು. ಪಶ್ಚಿಮ ಏಷ್ಯಾದಲ್ಲಿ ಅಮೆರಿಕ ಮತ್ತು ಇರಾನ್ ನಡುವಿನ ಮಿಲಿಟರಿ ಸಂಘರ್ಷವು ರಕ್ತಸಿಕ್ತ ಕ್ರಾಂತಿಗೆ ಕಾರಣವಾಗಿದೆ. ಕೇವಲ 24 ಗಂಟೆಗಳಲ್ಲಿ ಇರಾನ್ ಮೇಲೆ 3ನೇ ಬಾರಿಗೆ ಭೀಕರ ವಾಯುದಾಳಿ ನಡೆಸಿರುವ ಅಮೆರಿಕ ಪಡೆಗಳು, ಇರಾನ್ ಬಂದರುಗಳಿಗೆ ಕಠಿಣ ನೌಕಾ ದಿಗ್ಬಂಧನ ವಿಧಿಸಿವೆ. ಹೀಗೆ ಇಂದಿನ ಪ್ರಮುಖ ಸುದ್ದಿಗಳ ಕ್ಷಣಕ್ಷಣದ ಮಾಹಿತಿ ಇಲ್ಲಿದೆ ನೋಡಿ

LIVE NEWS & UPDATES

The liveblog has ended.
  • 16 Jul 2026 10:00 PM (IST)

    ವೇಣುಗೋಪಾಲ್ ಮನೆಯಲ್ಲಿ ಮತ್ತೊಂದು ಸಭೆ

    ಸಚಿವ ಸಂಪುಟ ವಿಸ್ತರಣೆ ಸಂಬಂಧ ದೆಹಲಿಯಲ್ಲಿ ಮತ್ತೊಂದು ಸುತ್ತಿನ ಸಭೆ ನಡೆದಿದೆ. ಸೋನಿಯಾ ಗಾಂಧಿ ನಿವಾಸದಲ್ಲಿ ಬಳಿಕ ಎಐಸಿಸಿ ಪ್ರಧಾನ ಕಾರ್ಯದರ್ಶಿ ವೇಣುಗೋಪಾಲ್ ಮನೆಯಲ್ಲೂ ಸಹ ಮತ್ತೊಂದು ಸಭೆ ನಡೆಸಿದ್ದು, ಸಭೆಯಲ್ಲಿ ಸಚಿವ ಸಂಪುಟ ವಿಸ್ತರಣೆ ಸಂಬಂಧ ಮಾತುಕತೆ ನಡೆಸಿದ್ದಾರೆ. ಎಐಸಿಸಿ ಪ್ರಧಾನ ಕಾರ್ಯದರ್ಶಿ ವೇಣುಗೋಪಾಲ್, ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಮಾಜಿ ಸಿಎಂ ಸಿದ್ದರಾಮಯ್ಯ, ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ, ಕೆಪಿಸಿಸಿ ಅಧ್ಯಕ್ಷ ಬಿ.ಕೆ.ಹರಿಪ್ರಸಾದ್ ಸಭೆಯಲ್ಲಿ ಭಾಗಿಯಾಗಿದ್ದಾರೆ.

  • 16 Jul 2026 07:32 PM (IST)

    ಸಂಪುಟ ವಿಸ್ತರಣೆ ಸಭೆ ಮಧ್ಯೆಯೂ ಬೆಂಗಳೂರಿಗೆ ಬಂದ ಖರ್ಗೆ

    ಸಂಪುಟ ವಿಸ್ತರಣೆ ಸಂಬಂಧ ಹೈಕಮಾಂಡ್ ನಾಯಕರ ಜೊತೆ ಚರ್ಚಿಸಲು ಸಿಎಂ ಡಿಕೆ ಶಿವಕುಮಾರ್ ಹಾಗೂ ಮಾಜಿ ಸಿಎಂ ಸಿದ್ದರಾಮಯ್ಯ ದೆಹಲಿಗೆ ತೆರಳಿದ್ದಾರೆ. ಆದ್ರೆ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಬೆಂಗಳೂರಿಗೆ ಆಗಮಿಸಿದ್ದಾರೆ. ಹೀಗಾಗಿ ಸಂಪುಟ ವಿಸ್ತರಣೆ ಸಭೆ ಮುಂದೂಡಲಾಗಿದೆ. ಇನ್ನು ಈ ಬಗ್ಗೆ ಬೆಂಗಳೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಖರ್ಗೆ, ನಾನು ನನ್ನ ಪರ್ಸನಲ್ ಕೆಲಸದ ಮೇಲೆ ಬಂದಿದ್ದೇನೆ ಎಂದು ಸ್ಪಷ್ಟಪಡಿಸಿದ್ದಾರೆ.

  • 16 Jul 2026 06:54 PM (IST)

    40 ವಲಯ ಅರಣ್ಯಾಧಿಕಾರಿಗಳನ್ನು ವರ್ಗಾವಣೆ

    ಕರ್ನಾಟಕ 40 ವಲಯ ಅರಣ್ಯಾಧಿಕಾರಿಗಳನ್ನು ವರ್ಗಾವಣೆ ಮಾಡಲಾಗಿದೆ. 40 RFO ಗಳನ್ನು ಬೇರೆ ಬೇರೆ ಜಿಲ್ಲೆಗಳಿಗೆ ವರ್ಗಾವಣೆಗೊಳಿಸಿ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳ ಆದೇಶ ಹೊರಡಿಸಿದ್ದಾರೆ.

  • 16 Jul 2026 06:23 PM (IST)

    ರೈತರ ಬೆಳೆ ವಿಮೆ ನೋಂದಣಿ ಜು.31ರವರೆಗೂ ವಿಸ್ತರಿಸುವಂತೆ ಪ್ರಸ್ತಾವನೆ

    ರೈತರ ಬೆಳೆ ವಿಮೆ ನೋಂದಣಿ ಜುಲೈ 31ರವರೆಗೂ ವಿಸ್ತರಣೆ ಮಾಡುವಂತೆ ರಾಜ್ಯ ಕೃಷಿ ಇಲಾಖೆ, ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸಿದೆ. ಧಾರವಾಡ, ಗದಗ, ಹಾವೇರಿ, ಬಾಗಲಕೋಟೆ ಜಿಲ್ಲೆಗಳಲ್ಲಿ ಬೆಳೆ ವಿಮೆ ನೋಂದಣಿ ವೇಳೆ ತಾಂತ್ರಿಕ ತೊಂದರೆ ಹಿನ್ನೆಲೆ ಜುಲೈ 15ರವರೆಗೆ ಇದ್ದ ಅವಧಿ ಜು.31ರವರೆಗೆ ವಿಸ್ತರಿಸುವಂತೆ ಪ್ರಸ್ತಾವಣೆ ಸಲ್ಲಿಸಿದೆ.

  • 16 Jul 2026 06:14 PM (IST)

    ಅಮಾನತು ಆದೇಶ ಪ್ರಶ್ನಿಸಿ ಕೋರ್ಟ್​ಗೆ ಶಿವಶಂಕರಪ್ಪ ಸಾಹುಕಾರ್ ರಿಟ್

    ಕೆಪಿಎಸ್​ಸಿ ಅಧ್ಯಕ್ಷ ಸ್ಥಾನದಿಂದ ಅಮಾನತು ಮಾಡಿದ ಆದೇಶವನ್ನು ಪ್ರಶ್ನಿಸಿ ಶಿವಶಂಕರಪ್ಪ ಸಾಹುಕಾರ್ ಅವರು ಹೈಕೋರ್ಟ್ ಮೆಟ್ಟಿಲೇರಿದ್ದಾರೆ. ಅರ್ಜಿದಾರರ ಪರ ಹಿರಿಯ ವಕೀಲ‌ ಅರುಣ್ ಶ್ಯಾಮ್ ವಾದ ಮಂಡನೆ ಮಾಡಿದ್ದು, ಸಚಿವ ಸಂಪುಟದ ಶಿಫಾರಸು ಇಲ್ಲದೇ ಅಮಾನತು ಮಾಡಲಾಗಿದೆ. ಹೀಗಾಗಿ ರಾಜ್ಯಪಾಲರ ಕ್ರಮ ಕಾನೂನುಬಾಹಿರ. ಕೆಪಿಎಸ್​ಸಿ ಅಧ್ಯಕ್ಷರನ್ನು ಅಮಾನತು ಮಾಡಲಾಗಿದೆ. ರಾಜ್ಯ ಸರ್ಕಾರ ಶಿಫಾರಸು ಇಲ್ಲದೇ ಅಮಾನತು ಎಂದು ವಾದಿಸಿದ್ದಾರೆ. ಇನ್ನು ರಾಜ್ಯಪಾಲರ ಕಾರ್ಯದರ್ಶಿ ಪರ ಹಿರಿಯ ವಕೀಲ ಉದಯ್ ಹೊಳ್ಳ ವಾದ ಮಂಡಿಸಿದರು. ಈ ವಾದ ಪ್ರತಿವಾದ ಆಲಿಸಿದ ಹೈಕೋರ್ಟ್, ಸರ್ಕಾರವನ್ನು ಪ್ರತಿವಾದಿ ಮಾಡುವ ಬಗ್ಗೆ ನಿರ್ಧರಿಸಲು ಅರ್ಜಿದಾರರಿಗೆ ಸೂಚನೆ ನೀಡಿದೆ.

  • 16 Jul 2026 05:08 PM (IST)

    ಸಾರ್ವತ್ರಿಕ ವರ್ಗಾವಣೆ ದಿನಾಂಕ ಹಿಂಪಡೆದ ಸರ್ಕಾರ

    ಸಾರ್ವತ್ರಿಕ ವರ್ಗಾವಣೆ ದಿನಾಂಕವನ್ನು ರಾಜ್ಯ ಸರ್ಕಾರ ಹಿಂಪಡೆದುಕೊಂಡಿದೆ. ನಿನ್ನೆ (ಜುಲೈ 15) ಅಷ್ಟೇ ಸಾರ್ವತ್ರಿಕ ವರ್ಗಾವಣೆ ದಿನಾಂಕವನ್ನು ಜುಲೈ 31 ರವರೆಗೆ ವಿಸ್ತರಣೆ ಮಾಡಿ ಆದೇಶ ಹೊರಡಿಸಲಾಗಿತ್ತು. ಆದ್ರೆ, ಇದೀಗ ಆ ಆದೇಶವನ್ನು ವಾಪಸ್ ಪಡೆದುಕೊಂಡಿದೆ.

  • 16 Jul 2026 04:54 PM (IST)

    ಕೃಷ್ಣರಾಜಸಾಗರ ಜಲಾಶಯದಿಂದ ನಾಲೆಗಳಿಗೆ ನೀರು ಬಿಡುಗಡೆ

    ಕುಡಿಯುವ ನೀರಿನ ಉದ್ದೇಶಕ್ಕೆ ಮಾತ್ರ ಕೃಷ್ಣರಾಜಸಾಗರ ಜಲಾಶಯದಿಂದ ನಾಲೆಗಳಿಗೆ ನೀರು ಬಿಡುಗಡೆ ಮಾಡಲಾಗಿದೆ. ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲೂಕಿನಲ್ಲಿರುವ ಕೆಆರ್​​ಎಸ್ ಜಲಾಶಯದಿಂದ ಕುಡಿಯಲು, ಜಾನುವಾರುಗಳಿಗೆ ಕೆರೆಕಟ್ಟೆ ತುಂಬಿಸಲು ಮಾತ್ರ ನೀರು ಬಿಡುಗಡೆ ಮಾಡಲಾಗಿದೆ. ಕೆಆರ್​ಎಸ್ ಜಲಾಶಯದಿಂದ ಸದ್ಯ ಬೆಳೆಗಳಿಗೆ ನೀರು ಹರಿಸುವುದಿಲ್ಲ. ಕೇವಲ ಕುಡಿಯುವ ನೀರಿನ ಉದ್ದೇಶಕ್ಕೆ ಮಾತ್ರ ಎಂದು ಸರ್ಕಾರ ಪ್ರಕಟಣೆ ಹೊರಡಿಸಿದೆ.

  • 16 Jul 2026 04:06 PM (IST)

    ಕೊಪ್ಪಳ ಜಿಲ್ಲೆಯಲ್ಲಿ ವರ್ಷಧಾರೆ

    ಒಂದೂವರೆ ತಿಂಗಳ ನಂತರ ಕೊಪ್ಪಳ ಜಿಲ್ಲೆಯಲ್ಲಿ ಮಳೆಯಾಗಿದೆ. ಈ ಮೂಲಕ ಮಳೆಯಿಲ್ಲದೆ ಕಾದ ಕಾವಲಿಯಂತಾಗಿದ್ದ ಇಳೆಗೆ ತಂಪೆರೆದಿದೆ. ಕೊಪ್ಪಳ ಜಿಲ್ಲೆಯಲ್ಲಿ ಮೇ ತಿಂಗಳ ಕೊನೆ ವಾರದಲ್ಲಿ ಮಳೆಯಾಗಿತ್ತು. ಹೀಗಾಗಿ ರೈತರು ಮಳೆಗಾಗಿ ಹಲವು ರೀತಿಯಲ್ಲಿ ಪೂಜೆ, ಪುನಸ್ಕಾರಗಳನ್ನು ಮಾಡಿದ್ದರು. ಸದ್ಯ ಮಳೆಯಾಗುತ್ತಿರುವುದರಿಂದ ರೈತರು ಫುಲ್ ಖುಷ್ ಆಗಿದ್ದಾರೆ.

  • 16 Jul 2026 03:48 PM (IST)

    ಸಂಪುಟ ವಿಸ್ತರಣೆ ಸಭೆ ಮತ್ತೆ ವಿಳಂಬ

    ತೀವ್ರ ಕುತೂಹಲ ಮೂಡಿಸಿರುವ ಸಂಪುಟ ವಿಸ್ತರಣೆ ಮತ್ತೆ ವಿಳಂಬವಾಗುವ ಸಾಧ್ಯತೆಗಳಿವೆ.ಎಐಸಿಸಿ ಅಧ್ಯಕ್ಷರು ಬೆಂಗಳೂರಿಗೆ ಬರುತ್ತಿರುವ ಹಿನ್ನೆಲೆಯಲ್ಲಿ ಸಂಪುಟ ವಿಸ್ತರಣೆ ಸಂಬಂಧ ನಡೆಯುವ ಸಭೆ ಎರಡ್ಮೂರು ದಿನಗಳ ಕಾಲ ಮುಂದೆ ಹೋಗಿದೆ. ಹೀಗಾಗಿ ಸಂಪುಟ ವಿಸ್ತರಣೆ ಮತ್ತೆ ಕಗ್ಗಾಂಟಾಗಿಯೇ ಉಳಿದಿದ್ದು,ಸಚಿವಾಕ್ಷಾಂಕ್ಷಿಗಳಿಗೆ ಕೊಂಚ ನಿರಾಸೆಯಾಗಿದೆ

  • 16 Jul 2026 02:26 PM (IST)

    ಗದಗದಲ್ಲಿ ಅನ್ನಭಾಗ್ಯ ಅಕ್ಕಿ ಅಕ್ರಮವಾಗಿ ಮಹಾರಾಷ್ಟ್ರಕ್ಕೆ ಸಾಗಣೆ ಯತ್ನ

    ಗದಗದಲ್ಲಿ ಅನ್ನಭಾಗ್ಯ ಯೋಜನೆಯ 32 ಟನ್ ಅಕ್ಕಿಯನ್ನು ಅಕ್ರಮವಾಗಿ ಮಹಾರಾಷ್ಟ್ರಕ್ಕೆ ಸಾಗಿಸುತ್ತಿದ್ದ ಜಾಲವನ್ನು ಆಹಾರ ಇಲಾಖೆ ಮತ್ತು ಪೊಲೀಸರು ಭೇದಿಸಿದ್ದಾರೆ. ಬಿಂಕದಕಟ್ಟೆ ಗ್ರಾಮದಲ್ಲಿ ಲಾರಿ ವಶಪಡಿಸಿಕೊಂಡಿದ್ದು, ನಕಲಿ ದಾಖಲೆಗಳನ್ನು ಸೃಷ್ಟಿಸಿ ಹಾವೇರಿ ಎಪಿಎಂಸಿ ಹೆಸರಲ್ಲಿ ಸಾಗಾಟ ಮಾಡಲಾಗುತ್ತಿತ್ತು. ಪ್ರಕರಣ ಸಂಬಂಧ ಚಾಲಕ ಮತ್ತು ಕ್ಲೀನರ್‌ನನ್ನು ಬಂಧಿಸಲಾಗಿದ್ದು, ಗದಗ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

  • 16 Jul 2026 01:40 PM (IST)

    ಮಂಗಳೂರು ಸಿಸಿಬಿ ಪೊಲೀಸರ ಮೆಗಾ ಆಪರೇಷನ್: ದೆಹಲಿಯಿಂದ ತರುತ್ತಿದ್ದ 5 ಕೋಟಿ ಮೌಲ್ಯದ 5 ಕೆಜಿ ಡ್ರಗ್ಸ್ ಬಾಗಲಕೋಟೆಯಲ್ಲಿ ಜಪ್ತಿ

    ಮಾದಕ ಮುಕ್ತ ಕರ್ನಾಟಕ ನಿರ್ಮಾಣಕ್ಕಾಗಿ ಹಗಲಿರುಳು ಶ್ರಮಿಸುತ್ತಿರುವ ಮಂಗಳೂರು ಸಿಸಿಬಿ ಪೊಲೀಸರು ಅಂತರರಾಜ್ಯ ಡ್ರಗ್ಸ್ ಜಾಲದ ಬೆನ್ನೆಲುಬನ್ನೇ ಮುರಿದಿದ್ದಾರೆ. ದೇಶದ ರಾಜಧಾನಿ ದೆಹಲಿಯಿಂದ ಕರ್ನಾಟಕಕ್ಕೆ ಅಕ್ರಮವಾಗಿ ಸಾಗಿಸಲಾಗುತ್ತಿದ್ದ ಬರೋಬ್ಬರಿ 5 ಕೋಟಿ ರೂಪಾಯಿ ಮೌಲ್ಯದ 5 ಕೆಜಿ ತೂಕದ ಹೈಟೆಕ್ ಡ್ರಗ್ಸ್ ಅನ್ನು ವಶಪಡಿಸಿಕೊಳ್ಳಲಾಗಿದ್ದು, ಇಬ್ಬರು ಕುಖ್ಯಾತ ಪೆಡ್ಲರ್‌ಗಳನ್ನು ಬಾಗಲಕೋಟೆಯಲ್ಲಿ ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

  • 16 Jul 2026 01:38 PM (IST)

    ಕೌಟುಂಬಿಕ ಕಿರುಕುಳಕ್ಕೆ ಬೇಸತ್ತು ಪತ್ನಿ ಆತ್ಮಹತ್ಯೆ ಯತ್ನ; ಸಬ್ ಇನ್ಸ್‌ಪೆಕ್ಟರ್ ಈಗ ಜೈಲು ಪಾಲು

    ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಬೇಕಾದ ಸಬ್ ಇನ್ಸ್‌ಪೆಕ್ಟರ್ ಒಬ್ಬರು ಕೌಟುಂಬಿಕ ದೌರ್ಜನ್ಯ ಹಾಗೂ ಎರಡು ಮದುವೆ ಪ್ರಕರಣದಲ್ಲಿ ಸಿಲುಕಿ ಜೈಲು ಪಾಲಾಗಿದ್ದಾರೆ. ಎರಡನೇ ಪತ್ನಿ ಕೌಟುಂಬಿಕ ಕಲಹದಿಂದ ಬೇಸತ್ತು ಆತ್ಮಹತ್ಯೆಗೆ ಯತ್ನಿಸಿದ ಹಿನ್ನೆಲೆಯಲ್ಲಿ, ಹಗರಿಬೊಮ್ಮನಹಳ್ಳಿ ಪಟ್ಟಣದ ಪೊಲೀಸ್ ಠಾಣೆಯ ಪ್ರೊಬೇಷನರಿ ಪಿಎಸ್ಐ (Probationary PSI) ದೊರೆನಾಯ್ಕ್‌ನನ್ನು ಪೊಲೀಸರು ಬಂಧಿಸಿ ಜೈಲಿಗಟ್ಟಿದ್ದಾರೆ.

  • 16 Jul 2026 01:26 PM (IST)

    ಹೆಚ್​ಡಿಕೆ ಹೆಚ್​ಎಂಟಿಗೆ ಭೇಟಿ ಕೊಟ್ಟಿದ್ದು ಖುಷಿ ತಂದಿದೆ: ಸಚಿವ ಈಶ್ವರ ಖಂಡ್ರೆ

    ಬೆಂಗಳೂರಿನಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿರುವ ಹೆಚ್.ಎಂ.ಟಿ ಸಂಸ್ಥೆಯ ವಶದಲ್ಲಿರುವ ವಿವಾದಿತ ಅರಣ್ಯ ಭೂಮಿಯ ವಿಷಯದಲ್ಲಿ ಹೊಸ ರಾಜಕೀಯ ಬೆಳವಣಿಗೆಗಳು ಆರಂಭವಾಗಿವೆ. ಕೇಂದ್ರ ಭಾರಿ ಕೈಗಾರಿಕೆಗಳ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರು ಹೆಚ್​ಎಂಟಿ ಆವರಣಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದನ್ನು ರಾಜ್ಯ ಅರಣ್ಯ ಹಾಗೂ ಗ್ರಾಮೀಣಾಭಿವೃದ್ಧಿ ಸಚಿವ ಈಶ್ವರ ಖಂಡ್ರೆ ಸ್ವಾಗತಿಸಿದ್ದಾರೆ. ಆದರೆ, ಇದರ ಜೊತೆಯಲ್ಲೇ “ಭೇಟಿ ನೀಡಿದ ಮೇಲಾದರೂ ಕುಮಾರಸ್ವಾಮಿ ಅವರು ತಮ್ಮ ನಿಲುವು ಬದಲಾಯಿಸಿ, ಅರಣ್ಯ ಭೂಮಿಯನ್ನು ರಾಜ್ಯ ಸರ್ಕಾರಕ್ಕೆ ಬಿಟ್ಟುಕೊಡಲಿ” ಎಂದು ತೀಕ್ಷ್ಣವಾಗಿ ಹೇಳಿದ್ದಾರೆ.

  • 16 Jul 2026 01:24 PM (IST)

    ಸಿಎಂ ಡಿಕೆಶಿ ಬೆನ್ನಲ್ಲೇ ಪ್ರಧಾನಿಗೆ ಡಿಸಿಎಂ ಪರಮೇಶ್ವರ್ ಪತ್ರ

    ರಾಜ್ಯದಲ್ಲಿ ತೀವ್ರಗೊಳ್ಳುತ್ತಿರುವ ಬರ ಪರಿಸ್ಥಿತಿಯನ್ನು ನಿಭಾಯಿಸಲು ಕೇಂದ್ರ ಸರ್ಕಾರದಿಂದ ಹೆಚ್ಚಿನ ಅನುದಾನ ಕೋರಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಪತ್ರ ಬರೆದ ಬೆನ್ನಲ್ಲೇ, ಇದೀಗ ಉಪಮುಖ್ಯಮಂತ್ರಿ (ಕಂದಾಯ ಸಚಿವರೂ ಆಗಿರುವ) ಡಾ. ಜಿ. ಪರಮೇಶ್ವರ್ ಅವರೂ ಸಹ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮಹತ್ವದ ಪತ್ರವೊಂದನ್ನು ಬರೆದಿದ್ದಾರೆ. ರಾಜ್ಯದ ಕಷ್ಟದ ಪರಿಸ್ಥಿತಿಯನ್ನು ವಿವರಿಸಿ, ಹೆಚ್ಚುವರಿ ಆರ್ಥಿಕ ನೆರವು ಬಿಡುಗಡೆ ಮಾಡುವಂತೆ ಅವರು ಪ್ರಧಾನಿಯವರಲ್ಲಿ ಮನವಿ ಮಾಡಿದ್ದಾರೆ.

  • 16 Jul 2026 01:21 PM (IST)

    ದಕ್ಷಿಣ ಕನ್ನಡದಲ್ಲಿ ಅಕ್ರಮ ನೋಟು ಮುದ್ರಣ ಜಾಲ ಪತ್ತೆ

    ಸಾರ್ವಜನಿಕ ವಲಯ ಹಾಗೂ ಬ್ಯಾಂಕಿಂಗ್ ವ್ಯವಸ್ಥೆಗೆ ದೊಡ್ಡ ತಲೆನೋವಾಗಿದ್ದ ನಕಲಿ ನೋಟು ತಯಾರಿಸುವ ಬೃಹತ್ ಜಾಲವೊಂದನ್ನು ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿ ಪೊಲೀಸರು ಯಶಸ್ವಿಯಾಗಿ ಭೇದಿಸಿದ್ದಾರೆ. ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿರುವ ಪೊಲೀಸರು, ನಕಲಿ ನೋಟು ಮುದ್ರಣಕ್ಕೆ ಬಳಸುತ್ತಿದ್ದ ಸುಧಾರಿತ ಮುದ್ರಣ ಯಂತ್ರಗಳನ್ನು ಜಪ್ತಿ ಮಾಡಿದ್ದಾರಲ್ಲದೆ, ಅಂತರರಾಜ್ಯ ಸಂಪರ್ಕ ಹೊಂದಿದ್ದ ಬರೋಬ್ಬರಿ 7 ಮಂದಿ ಖತರ್ನಾಕ್ ಆರೋಪಿಗಳನ್ನು ಬಂಧಿಸಿದ್ದಾರೆ.

  • 16 Jul 2026 12:51 PM (IST)

    ಸೆಪ್ಟೆಂಬರ್ ಒಳಗಾಗಿ ಧಾರ್ಮಿಕ ಕ್ಷೇತ್ರದಿಂದ ಆರಂಭವಾಗಲಿದೆ ಸಮಾಜವಾದಿ ಪಕ್ಷದ ಬೃಹತ್ ರಥಯಾತ್ರೆ

    ಉತ್ತರ ಪ್ರದೇಶದಲ್ಲಿ ಮುಂಬರುವ ಅತ್ಯಂತ ನಿರ್ಣಾಯಕ ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿ ರಾಜಕೀಯ ರಣಕಣ ರಂಗೇರಿದೆ. ಆಡಳಿತಾರೂಢ ಬಿಜೆಪಿಗೆ ಪ್ರಬಲ ಟಕ್ಕರ್ ನೀಡಲು ಸಜ್ಜಾಗಿರುವ ಸಮಾಜವಾದಿ ಪಕ್ಷದ (SP) ಮುಖ್ಯಸ್ಥ ಹಾಗೂ ಯುಪಿಯ ಮಾಜಿ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಅವರು ಇಡೀ ರಾಜ್ಯಾದ್ಯಂತ ಬೃಹತ್ ರಥಯಾತ್ರೆ ಕೈಗೊಳ್ಳಲು ಭರ್ಜರಿ ತಾಲೀಮು ನಡೆಸಿದ್ದಾರೆ.

  • 16 Jul 2026 12:25 PM (IST)

    ಉಪಸಭಾಪತಿ ಎಂ.ಕೆ. ಪ್ರಾಣೇಶ್‌ಗೆ ಸುಪ್ರೀಂ ಕೋರ್ಟ್‌ನಲ್ಲಿ ಬಿಗ್ ಶಾಕ್: ಪರಿಷತ್ ಸದಸ್ಯತ್ವ ರದ್ದು

    ವಿಧಾನ ಪರಿಷತ್ತಿನ ಉಪಸಭಾಪತಿ ಎಂ.ಕೆ. ಪ್ರಾಣೇಶ್ ಅವರಿಗೆ ದೇಶದ ಅತ್ಯುನ್ನತ ನ್ಯಾಯಾಲಯವಾದ ಸುಪ್ರೀಂ ಕೋರ್ಟ್‌ನಲ್ಲಿ ಭಾರಿ ಆಘಾತ ಎದುರಾಗಿದೆ. ಅವರ ವಿಧಾನ ಪರಿಷತ್ (ವಿಧಾನ ಪರಿಷತ್ತ್) ಸದಸ್ಯತ್ವವನ್ನು ರದ್ದುಗೊಳಿಸಿ ಸುಪ್ರೀಂ ಕೋರ್ಟ್ ಆದೇಶ ಹೊರಡಿಸಿದೆ. ಹೈಕೋರ್ಟ್ ತೀರ್ಪನ್ನು ಪ್ರಶ್ನಿಸಿ ಪ್ರಾಣೇಶ್ ಅವರು ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿದ್ದು, ಇದರೊಂದಿಗೆ ಅವರ ಎದುರಾಳಿಯಾಗಿದ್ದ ಗಾಯತ್ರಿ ಶಾಂತೇಗೌಡ ಅವರ ಕಾನೂನು ಹೋರಾಟಕ್ಕೆ ಕೊನೆಗೂ ಬಿಗ್ ವಿಕ್ಟರಿ ಸಿಕ್ಕಂತಾಗಿದೆ. ಇಲ್ಲಿದೆ ನೋಡಿ ಸ್ಟೋರಿ

  • 16 Jul 2026 10:58 AM (IST)

    ಆಧಾರ್, ಪಾಸ್‌ಪೋರ್ಟ್ ಮಾಡಿಸಿ ರಾಜಾರೋಷವಾಗಿ ತಿರುಗುತ್ತಿದ್ದ ಬಾಂಗ್ಲಾ ಪ್ರಜೆ ಈಗ ಜೈಲು ಪಾಲು

    ಭಾರತದ ಗಡಿ ದಾಟಿ ಅಕ್ರಮವಾಗಿ ದೇಶದೊಳಗೆ ನುಗ್ಗಿ, ನಕಲಿ ದಾಖಲೆಗಳನ್ನು ಸೃಷ್ಟಿಸಿ ದಶಕಕ್ಕೂ ಹೆಚ್ಚು ಕಾಲ ನೆಲೆಸಿದ್ದ ಬಾಂಗ್ಲಾದೇಶದ ಪ್ರಜೆಗೆ ಸಿಂಧನೂರಿನ ನ್ಯಾಯಾಲಯವು 3 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ಹಾಗೂ 5 ಸಾವಿರ ರೂಪಾಯಿ ದಂಡ ವಿಧಿಸಿ ಆದೇಶ ಹೊರಡಿಸಿದೆ. ರಾಯಚೂರು ಜಿಲ್ಲೆಯ ಸಿಂಧನೂರಿನ 2ನೇ ಹೆಚ್ಚುವರಿ ಸಿವಿಲ್ ಮತ್ತು ಜೆಎಂಎಫ್‌ಸಿ (JMFC) ನ್ಯಾಯಾಲಯವು ಈ ಮಹತ್ವದ ತೀರ್ಪನ್ನು ಪ್ರಕಟಿಸಿದೆ.

  • 16 Jul 2026 10:08 AM (IST)

    ರೀಲ್ಸ್ ಸ್ಟಾರ್ ‘ಅಮುಕು ಡುಮುಕು’ ಮಂಜು ಕುಡಿದು ಬಾರ್ ಬಿಲ್ ಕೊಡದೆ ಮಹಿಳಾ ಸಿಬ್ಬಂದಿಗೆ ಕಾಟ

    ಸಾಮಾಜಿಕ ಜಾಲತಾಣಗಳಲ್ಲಿ ರೀಲ್ಸ್ ಹಾಗೂ ವಿಡಿಯೋಗಳ ಮೂಲಕವೇ ಗುರುತಿಸಿಕೊಂಡಿದ್ದ ಪ್ರಖ್ಯಾತ ಇನ್‌ಫ್ಲುಯೆನ್ಸರ್ ಮಂಜು ಅಲಿಯಾಸ್ ‘ಅಮುಕು ಡುಮುಕು’ ಮತ್ತು ಆತನ ಸ್ನೇಹಿತರ ವಿರುದ್ಧ ಬೆಂಗಳೂರಿನಲ್ಲಿ ಗಂಭೀರ ಪ್ರಕರಣ ದಾಖಲಾಗಿದೆ. ರೆಸ್ಟೋ ಬಾರ್‌ಗೆ ಹೋಗಿ ಮದ್ಯ ಹಾಗೂ ಊಟ ಸವಿದು ಬಿಲ್ ನೀಡಲು ನಿರಾಕರಿಸಿದಲ್ಲದೆ, ಅಲ್ಲಿನ ಸಿಬ್ಬಂದಿಗೆ ಜೀವ ಬೆದರಿಕೆ ಹಾಕಿದ ಆರೋಪದ ಮೇಲೆ ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ (FIR) ದಾಖಲಾಗಿದೆ.

  • 16 Jul 2026 09:49 AM (IST)

    ಕೊಡಗು ಹೋಂಸ್ಟೇ ಅತ್ಯಾಚಾರ ಪ್ರಕರಣ: ಮಾಲೀಕ ವಿಶಾಲ್ ಪೊನ್ನಪ್ಪಗೆ ಬಿಗ್ ರಿಲೀಫ್

    ಕೊಡಗು ಜಿಲ್ಲೆಯ ಹೋಂಸ್ಟೇ ಒಂದರಲ್ಲಿ ಅಮೆರಿಕ ಮೂಲದ ಮಹಿಳೆಯ ಮೇಲೆ ಅತ್ಯಾಚಾರ ನಡೆದಿದೆ ಎನ್ನಲಾದ ಪ್ರಕರಣದಲ್ಲಿ ಕರ್ನಾಟಕ ಹೈಕೋರ್ಟ್ ಬಿಗ್ ಟ್ವಿಸ್ಟ್ ನೀಡಿದೆ. ಪ್ರಕರಣದ ಆರೋಪ ಎದುರಿಸುತ್ತಿದ್ದ ಹೋಂಸ್ಟೇ ಮಾಲೀಕನ ಬಂಧನ ಹಾಗೂ ಅವರಿಗೆ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿರುವುದು ಸಂಪೂರ್ಣ ಅಕ್ರಮ ಎಂದು ಹೈಕೋರ್ಟ್‌ನ ಏಕಸದಸ್ಯ ಪೀಠವು ತೀರ್ಪು ನೀಡಿದೆ.

  • 16 Jul 2026 09:23 AM (IST)

    ಮನೆಗೆ ಬಂದು ಉಪಹಾರ ಸವಿದು 5 ಲಕ್ಷದ ಚಿನ್ನದ ಸರ ಎಗರಿಸಿದ ಸುಶೀಲಮ್ಮ ಬಂಧನ

    ಮನೆಗೆ ನೆಂಟಸ್ತನಕ್ಕೆ ಬಂದು ಉಪಹಾರ ಸವಿದು, ಅದೇ ಮನೆಯ ಬೀಗತಿಯ ಕುತ್ತಿಗೆಯಲ್ಲಿದ್ದ 5 ಲಕ್ಷ ರೂಪಾಯಿ ಮೌಲ್ಯದ 45 ಗ್ರಾಂ ತೂಕದ ಚಿನ್ನದ ಸರವನ್ನು ಕಳ್ಳತನ ಮಾಡಿದ್ದ ಕಿರಾತಕಿ ಸುಶೀಲಮ್ಮ ಎಂಬಾಕೆಯನ್ನು ಶ್ರೀನಿವಾಸಪುರ ಪೊಲೀಸರು ಬಂಧಿಸಿದ್ದಾರೆ. ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲೂಕಿನ ಯಲ್ಲೂರು ಗ್ರಾಮದಲ್ಲಿ ಈ ವಿಚಿತ್ರ ಹಾಗೂ ರೋಚಕ ಕಳ್ಳತನ ನಡೆದಿತ್ತು.

  • 16 Jul 2026 09:22 AM (IST)

    ಹಣಕ್ಕಾಗಿ ಆಫ್ರಿಕಾದ ಸೆನಗಲ್ ದೇಶಕ್ಕೆ ಮಗಳನ್ನೇ ಮಾರಿದ ಪೋಷಕರು

    ಹಣದ ಆಸೆಗಾಗಿ ಹೆತ್ತ ಮಗಳನ್ನೇ ಪಶ್ಚಿಮ ಆಫ್ರಿಕಾದ ಸೆನಗಲ್ ದೇಶಕ್ಕೆ ವೇಶ್ಯಾವಾಟಿಕೆ ದಂಧೆಗೆ ಮಾರಾಟ ಮಾಡಿದ ಅಮಾನವೀಯ ಘಟನೆ ಚಿಕ್ಕಮಗಳೂರಿನಲ್ಲಿ ನಡೆದಿದೆ. ಚಿಕ್ಕಮಗಳೂರು ತಾಲೂಕಿನ ಮಲ್ಲೇನಹಳ್ಳಿ ಸಮೀಪವಿರುವ ಹಕ್ಕಿಪಿಕ್ಕಿ ಕಾಲೋನಿಯ ನಿವಾಸಿಗಳಾದ ಕ್ರಾಂತಿ ಮತ್ತು ರಾಜಶೇಖರ್ ಎಂಬುವವರೇ ಮಗಳು ನಂದಿತಾ (20) ಇಂಟರ್ನ್ಯಾಷನಲ್ ದಂಧೆಗೆ ಮಾರಿದ ತಂದೆ-ತಾಯಿ. ಹೆಚ್ಚಿನ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ

  • 16 Jul 2026 09:19 AM (IST)

    ಕ್ಲಾಸ್ ರೂಮ್‌ನಲ್ಲೇ ಕುಸಿದು ಬಿದ್ದು 5ನೇ ತರಗತಿ ವಿದ್ಯಾರ್ಥಿ ಸಾವು

    ಬನ್ನೇರುಘಟ್ಟ ರಸ್ತೆಯ ವಿವರ್ಸ್ ಕಾಲೋನಿಯಲ್ಲಿರುವ ನ್ಯೂ ಬ್ಲಾಸಮ್ ಖಾಸಗಿ ಶಾಲೆಯಲ್ಲಿ 5ನೇ ತರಗತಿ ಓದುತ್ತಿದ್ದ ಅರ್ಹನ್ ಪಾಷಾ (12) ಎಂಬ ಬಾಲಕ ಕ್ಲಾಸ್ ರೂಮ್‌ನಲ್ಲೇ ಕುಸಿದು ಬಿದ್ದು ಮೃತಪಟ್ಟಿರುವ ದಾರುಣ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಇದ್ದ ಒಬ್ಬನೇ ಮಗನನ್ನು ಕಳೆದುಕೊಂಡ ಕುಟುಂಬಸ್ಥರು ಕಣ್ಣೀರಲ್ಲಿ ಮುಳುಗಿದ್ದು, ಶಾಲಾ ಸಿಬ್ಬಂದಿಯ ಘೋರ ನಿರ್ಲಕ್ಷ್ಯವೇ ಮಗುವಿನ ಸಾವಿಗೆ ಕಾರಣ ಎಂದು ಆಕ್ರೋಶ ಹೊರಹಾಕಿದ್ದಾರೆ.

Published On - 9:19 am, Thu, 16 July 26

Loading...
Unable to load recommendations.
Follow Us