
Breaking News Today Highlights Updates in Kannada: ರಾಜ್ಯದ ತೀವ್ರ ಬರ ಪರಿಸ್ಥಿತಿ ಮತ್ತು ಪಶ್ಚಿಮ ಘಟ್ಟಗಳ ಕಸ್ತೂರಿರಂಗನ್ ವರದಿ ಜಾರಿ ಕುರಿತು ಚರ್ಚಿಸಲು ಇಂದಿನಿಂದ 3 ದಿನಗಳ ಕಾಲ ವಿಧಾನಮಂಡಲ ವಿಶೇಷ ಅಧಿವೇಶನ ನಡೆಯಲಿದೆ. ಸರ್ಕಾರದ ವೈಫಲ್ಯಗಳನ್ನು ಎತ್ತಿಹಿಡಿಯಲು ವಿಪಕ್ಷ ಬಿಜೆಪಿ ಸಜ್ಜಾಗಿದ್ದರೆ, ಸೂಕ್ತ ತಿರುಗೇಟು ನೀಡಲು ಆಡಳಿತಾರೂಢ ಕಾಂಗ್ರೆಸ್ ಅಸ್ತ್ರಗಳನ್ನು ಸಿದ್ಧಪಡಿಸಿಕೊಂಡಿದೆ. ‘ಬಿಗ್ ಬಾಸ್ ಕನ್ನಡ – 13’ ರೋಚಕ ಹಂತ ತಲುಪಿದ್ದು, ಶೋನಲ್ಲಿ ತುರ್ತು ಪರಿಸ್ಥಿತಿ ಘೋಷಿಸಲಾಗಿದೆ. ಕಿಚ್ಚ ಸುದೀಪ್ ನೀಡಿದ ‘ನೇರ ನಾಮಿನೇಷನ್’ ಹಾಗೂ ‘ಎಮರ್ಜೆನ್ಸಿ ಎಕ್ಸಿಟ್’ ಆಫರ್‌ನಿಂದಾಗಿ ದೊಡ್ಮನೆಯ ಸ್ಪರ್ಧಿಗಳು ತೀವ್ರ ಆತಂಕಕ್ಕೆ ಒಳಗಾಗಿದ್ದಾರೆ. ಸೆಪ್ಟೆಂಬರ್ 21 ಮತ್ತು 22ರಂದು ಕರಾವಳಿ ಹಾಗೂ ಒಳನಾಡಿನ ಹಲವು ಜಿಲ್ಲೆಗಳಲ್ಲಿ ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ರಾಷ್ಟ್ರೀಯ, ಅಂತಾರಾಷ್ಟ್ರೀಯ, ರಾಜ್ಯ, ರಾಜಕೀಯ, ಸಿನಿಮಾ, ಕ್ರೀಡೆ ಇತ್ಯಾದಿ ಲೇಟೆಸ್ಟ್ ಮಾಹಿತಿ ತಿಳಿಯಲು ಈ ಪುಟವನ್ನು ರಿಫ್ರೆಶ್ ಮಾಡುತ್ತಿರಿ.
ಶಿವಮೊಗ್ಗದ ತುಂಗಾ ತೀರದಲ್ಲಿ ನಡೆದ ಟ್ರಯಲ್ ಬ್ಲಾಸ್ಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಕರಣದ ಮತ್ತೊಬ್ಬ ಆರೋಪಿ ಹುಜೈರ್ ಫರಾನ್ ಬೇಗ್ ಅಲಿಯಾಸ್ ಮುಜೈರ್‌ಗೆ 6 ವರ್ಷ ಕಠಿಣ ಜೈಲು ಶಿಕ್ಷೆ ವಿಧಿಸಲಾಗಿದ್ದು, 58 ಸಾವಿರ ದಂಡ ವಿಧಿಸಿ NIA ವಿಶೇಷ ನ್ಯಾಯಾಲಯ ಆದೇಶಿಸಿದೆ. ಈ ಪ್ರಕರಣವು 2022ರ ಸೆಪ್ಟೆಂಬರ್ 19ರಂದು ದಾಖಲಾಗಿತ್ತು.
ವಿಧಾನಪರಿಷತ್ ಕಲಾಪವನ್ನು ನಾಳೆ ಬೆಳಗ್ಗೆ 11 ಗಂಟೆಗೆ ಮುಂದೂಡಲಾಗಿದೆ. ಇಂದು ಬೆಳಗ್ಗೆ 11ರಿಂದ ರಾತ್ರಿ 9.30ರವರೆಗೆ ಭೋಜನ ವಿರಾಮವೂ ಇಲ್ಲದೆ ಸುದೀರ್ಘವಾಗಿ ಕಲಾಪ ನಡೆಯಿತು. ವಿಧಾನಪರಿಷತ್‌ನಲ್ಲಿ ಕಸ್ತೂರಿ ರಂಗನ್ ವರದಿ ಬಗ್ಗೆ ಚರ್ಚೆ ನಡೆದಿದೆ.
ಪಶುವೈದ್ಯಾಧಿಕಾರಿಗಳ ನೇಮಕಾತಿ ಹಗರಣ ವಿಚಾರಕ್ಕೆ ಸಂಬಂಧಿಸಿದಂತೆ ಕೆಪಿಎಸ್‌ಸಿ ಕರ್ಮಕಾಂಡದ ಬಗ್ಗೆ ಎಸ್‌ಐಟಿ ಸರ್ಕಾರಕ್ಕೆ ಪೂರ್ಣ ವರದಿ ಸಲ್ಲಿಸಿದೆ. ತನಿಖೆಯ ಸಂಪೂರ್ಣ ವಿವರ ಹಾಗೂ ಕಾನೂನು ಹೋರಾಟದ ವರದಿಯನ್ನು ಸಲ್ಲಿಸಿದೆ. ಮುಖ್ಯಮಂತ್ರಿ ಹಾಗೂ ಗೃಹ ಸಚಿವರಿಗೆ ತನಿಖೆಯ ಪೂರ್ಣ ವಿವರವನ್ನು ರವಾನಿಸಲಾಗಿದೆ ಎಂದು ಟಿವಿ9ಗೆ ಸರ್ಕಾರದ ಉನ್ನತ ಮೂಲಗಳು ಮಾಹಿತಿ ನೀಡಿವೆ.
ಬಿಡದಿ ಟೌನ್‌ಶಿಪ್ ಯೋಜನೆಯನ್ನು ವಿರೋಧಿಸಿ ರೈತರು ಪ್ರತಿಭಟನೆ ಮುಂದುವರಿಸಿದ್ದು, ಬೆಂಗಳೂರು ದಕ್ಷಿಣ ಜಿಲ್ಲೆಯ ರಾಮನಗರ ತಾಲೂಕಿನ ಬೈರಮಂಗಲ ಗ್ರಾಮದಲ್ಲಿ ರೈತರ ಧರಣಿ ಮುಂದುವರಿದಿದೆ. ಬಿಡದಿ-ಹಾರೋಹಳ್ಳಿ ರಸ್ತೆ ತಡೆದು ರೈತರು ಪ್ರತಿಭಟನೆ ನಡೆಸುತ್ತಿದ್ದು, ಮಳೆಯಲ್ಲೂ ಪ್ರತಿಭಟನೆಯನ್ನು ಮುಂದುವರಿಸಿದ್ದಾರೆ.
ಸಿಡಿಲು ಬಡಿದು ಇಬ್ಬರು ಮಹಿಳೆಯರು ಸಾವನ್ನಪ್ಪಿರುವಂತಹ ಘಟನೆ ಕಲಬುರಗಿ ಜಿಲ್ಲೆಯ ಕಮಲಾಪುರ ತಾಲೂಕಿನ ನಾಗೂರು ಗ್ರಾಮದಲ್ಲಿ ನಡೆದಿದೆ. ಲಕ್ಷ್ಮೀ ಗುತ್ತೇದಾರ್(45), ಸೈಜಾದ್ ಬಿ(60) ಮೃತರು. ಮರದಡಿ ಕುಳಿತು ಊಟ ಮಾಡುತ್ತಿದ್ದಾಗ ಸಿಡಿಲು ಬಡಿಲು ಸಾವನ್ನಪ್ಪಿದ್ದಾರೆ. ಕಮಲಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬೆಂಗಳೂರು ನಗರ ಹಾಗೂ ಗ್ರಾಮಾಂತರದಲ್ಲಿ ಒಂದು ಗಂಟೆಗಳ ಕಾಲ ಮಳೆ ಸುರಿದಿದೆ. ದಾಸರಹಳ್ಳಿ, ಬಾಗಲಗುಂಟೆ, ಮಾದನಾಯನಹಳ್ಳಿ, ನೆಲಮಂಗಲ ಸುತ್ತಮುತ್ತ ಮಳೆಯಾಗಿದ್ದು, ಡಾಬಸ್ ಪೇಟೆಯ ಶಿವಗಂಗೆ ಸರ್ಕಲ್ ನೀರಿನಿಂದ ಜಲಾವೃತಗೊಂಡಿದೆ. ರಸ್ತೆಯಲ್ಲಿ ನೀರು ನಿಂತ ಪರಿಣಾಮ ವಾಹನ ಸವಾರರು ಪರದಾಡುವಂತಾಗಿದ್ದು, ಮಕ್ಕಳು ಹಾಗೂ ಮಹಿಳೆಯರು ಓಡಾಡದ ಪರಿಸ್ಥಿತಿ ನಿರ್ಮಾಣವಾಗಿದೆ.
ಲಂಚದ ಹೇಳಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹಾಸನದಲ್ಲಿ ಅಬಕಾರಿ ಸಚಿವ ಶಿವಲಿಂಗೇಗೌಡ ವಿರುದ್ಧ ಲೋಕಾಯುಕ್ತಕ್ಕೆ ದೂರು ನೀಡಲಾಗಿದೆ. ವಕೀಲ ಎಂ.ಡಿ.ಗೋಪಾಲಗೌಡ ನೇತೃತ್ವದಲ್ಲಿ ಹಾಸನ ಲೋಕಾಯುಕ್ತ ಕಚೇರಿಗೆ ತೆರಳಿ ವಕೀಲರು ದೂರು ನೀಡಿದ್ದು, ಸಚಿವರ ವಿರುದ್ಧ ಕೇಸ್ ದಾಖಲಿಸಿ ತನಿಖೆಗೆ ಮನವಿ ಮಾಡಿದ್ದಾರೆ.
ಕರ್ತವ್ಯದಲ್ಲಿದ್ದ ಮಹಿಳಾ ಪಿಎಸ್‌ಐ ಮೇಲೆ ಹಲ್ಲೆ ನಡೆಸಿ ಕಪಾಳಮೋಕ್ಷ ಮಾಡಿದ ಆರೋಪದಡಿ ಎಫ್‌ಐಆರ್ ದಾಖಲಾಗಿ, ಶ್ರೀರಂಗಪಟ್ಟಣದ ಸೆಷನ್ಸ್ ಕೋರ್ಟ್‌ನಲ್ಲಿ ನಿರೀಕ್ಷಣಾ ಜಾಮೀನು ತಿರಸ್ಕೃತಗೊಂಡ ಹಿನ್ನೆಲೆಯಲ್ಲಿ ತುಮಕೂರು ಗ್ರಾಮಾಂತರ ಶಾಸಕ ಸುರೇಶ್ ಗೌಡ ಅವರ ಪುತ್ರಿ ಐಶ್ವರ್ಯಾ ಹೈಕೋರ್ಟ್‌ಗೆ ನಿರೀಕ್ಷಣಾ ಜಾಮೀನು ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯ ವಿಚಾರಣೆ ನಡೆಸಿದ ನ್ಯಾ. ಎಸ್. ವಿಶ್ವಜಿತ್ ಶೆಟ್ಟಿ ಅವರಿದ್ದ ಹೈಕೋರ್ಟ್ ಏಕಸದಸ್ಯ ಪೀಠವು ಅರ್ಜಿದಾರರ ವರ್ತನೆಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. ಮಹಿಳಾ ಪಿಎಸ್‌ಐ ಬಳಿ ಕ್ಷಮೆಯಾಚಿಸಿದರೆ ಮಾತ್ರ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಪರಿಗಣಿಸುವುದಾಗಿ ಅಭಿಪ್ರಾಯಪಟ್ಟಿದೆ. ಇದಕ್ಕೆ ಪ್ರತಿಕ್ರಿಯಿಸಲು ಐಶ್ವರ್ಯಾ ಪರ ವಕೀಲರು ನ್ಯಾಯಾಲಯದ ಬಳಿ ನಾಳೆಯವರೆಗೆ ಸಮಯ ಕೋರಿದ್ದಾರೆ.
ಕಡಿಮೆ ದರ್ಜೆಯ ಹಾಗೂ ಕೆಟ್ಟ ಅಡಿಕೆಗೆ ಪ್ರಾಣಾಂತಿಕ ರಸಾಯನಿಕ ಬಣ್ಣಗಳನ್ನು ಬಳಸಿ ರಾಜ್ಯ ಮತ್ತು ಹೊರರಾಜ್ಯಗಳಿಗೆ ಪೂರೈಕೆ ಮಾಡುತ್ತಿದ್ದ ಬೃಹತ್ ಅಕ್ರಮ ಜಾಲವನ್ನು ಶಿವಮೊಗ್ಗ ಜಿಲ್ಲಾಡಳಿತ ಯಶಸ್ವಿಯಾಗಿ ಪತ್ತೆ ಹಚ್ಚಿದೆ. ಶಿವಮೊಗ್ಗ ನಗರದ ಹೊರವಲಯದ ಬುಳ್ಳಾಪುರದಲ್ಲಿರುವ ಅಡಿಕೆ ಗೋಡೌನ್ ಮೇಲೆ ಉಪವಿಭಾಗಾಧಿಕಾರಿ (AC) ಡಾ. ಮೈತ್ರಿ ಅವರ ನೇತೃತ್ವದಲ್ಲಿ ಕಂದಾಯ ಇಲಾಖೆ ಅಧಿಕಾರಿಗಳು ದಿಢೀರ್ ದಾಳಿ ನಡೆಸಿ ಪರಿಶೀಲನೆ ನಡೆಸಿದ್ದಾರೆ. ಕೆಟ್ಟ ಹಾಗೂ ಗುಣಮಟ್ಟವಿಲ್ಲದ ಅಡಿಕೆಗೆ ಆಕರ್ಷಕ ನೋಟ ನೀಡಲು ಅಪಾಯಕಾರಿ ಕೈಗಾರಿಕಾ ರಸಾಯನಿಕ ಬಣ್ಣಗಳನ್ನು (Industrial Dyes) ಬಳಸಲಾಗುತ್ತಿದ್ದು, ಈ ಕುರಿತು ಜಿಲ್ಲಾಡಳಿತ ಅತ್ಯಂತ ಗಂಭೀರವಾಗಿ ಪರಿಗಣಿಸಿದೆ.
ರಾಷ್ಟ್ರ ರಾಜಧಾನಿಯ ಕಟ್ಟುನಿಟ್ಟಿನ ಭದ್ರತೆಗೆ ಹೆಸರುವಾಸಿಯಾದ ರೋಹಿಣಿ ಜೈಲಿನಲ್ಲಿ ವಿಚಾರಣಾಧೀನ ಕೈದಿಯೊಬ್ಬನನ್ನು ಸಹ ಕೈದಿಗಳೇ ಹರಿತವಾದ ಆಯುಧದಿಂದ ಇರಿದು ಭೀಕರವಾಗಿ ಹತ್ಯೆ ಮಾಡಿರುವ ಘಟನೆ ಬೆಳಕಿಗೆ ಬಂದಿದೆ. ಶಸ್ತ್ರಾಸ್ತ್ರ ಕಾಯ್ದೆಯಡಿ ಜೈಲು ಪಾಲಾಗಿದ್ದ ಪ್ರಮೋದ್ ಎಂಬ ಕೈದಿಯೇ ಕೊಲೆಯಾದ ದುರದೃಷ್ಟಕರ. ರೋಹಿಣಿ ಜೈಲಿನ ವಾರ್ಡ್ ನಂಬರ್ 3ರಲ್ಲಿ ಈ ಭೀಕರ ಕೃತ್ಯ ನಡೆದಿದೆ.
ಕರ್ನಾಟಕ ಲೋಕಸೇವಾ ಆಯೋಗ ನಡೆಸಿದ ಪಶುವೈದ್ಯಾಧಿಕಾರಿಗಳ ನೇಮಕಾತಿ ಹಗರಣಕ್ಕೆ ಸಂಬಂಧಿಸಿದಂತೆ ಕರ್ನಾಟಕ ಹೈಕೋರ್ಟ್ ಅತ್ಯಂತ ಮಹತ್ವದ ಹಾಗೂ ಕ್ರಾಂತಿಕಾರಿ ಆದೇಶ ಹೊರಡಿಸಿದೆ. ಪ್ರಕರಣದ ಸಮಗ್ರ ತನಿಖೆಗಾಗಿ ಹಿರಿಯ ಪೊಲೀಸ್ ಅಧಿಕಾರಿ ಅಲೋಕ್ ಕುಮಾರ್ ಅವರ ನೇತೃತ್ವದಲ್ಲಿ ವಿಶೇಷ ತನಿಖಾ ತಂಡ (SIT) ರಚಿಸಿ ಹೈಕೋರ್ಟ್ ಪೀಠ ಆದೇಶಿಸಿದೆ. ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ಹೈಕೋರ್ಟ್ ಪೀಠವು ಈ ಐತಿಹಾಸಿಕ ಆದೇಶವನ್ನು ನೀಡಿ, ಹಗರಣದ ಬೇರುಗಳನ್ನು ತಲುಪಿ ಸತ್ಯಾಸತ್ಯತೆ ಹೊರತರುವಂತೆ ಸ್ಪಷ್ಟ ನಿರ್ದೇಶನ ನೀಡಿದೆ.
ಕಳೆದೆರಡು ದಿನಗಳಿಂದ ಬಿಸಿಲಿನ ಬೇಗೆಯಿಂದ ಕಂಗೆಟ್ಟಿದ್ದ ಯಾದಗಿರಿ ಜಿಲ್ಲೆಯ ಜನತೆಗೆ ಕೊನೆಗೂ ವರುಣದೇವ ತಂಪು ಎರರೆದಿದ್ದಾನೆ. ಯಾದಗಿರಿ ನಗರ ಸೇರಿದಂತೆ ಜಿಲ್ಲೆಯ ವಿವಿಧ ಭಾಗಗಳಲ್ಲಿ ಸತತವಾಗಿ ಸುರಿದ ಭಾರಿ ಮಳೆಯಿಂದಾಗಿ ರೈತರ ಹಾಗೂ ಸಾರ್ವಜನಿಕರ ಮೊಗದಲ್ಲಿ ಸಂತಸ ಅರಳಿದೆ. ಕಳೆದ ಒಂದು ಗಂಟೆಯಿಂದ ಜಿಲ್ಲಾದ್ಯಂತ ಬಿಡದೇ ನಿರಂತರವಾಗಿ ಮಳೆ ಸುರಿಯುತ್ತಿದ್ದು, ವಾತಾವರಣ ಸಂಪೂರ್ಣವಾಗಿ ತಂಪಾಗಿದೆ.
ಜಿಲ್ಲೆಯಲ್ಲಿ ಬಡವರಿಗಾಗಿ ವಿತರಿಸಲಾಗುವ ‘ಅನ್ನಭಾಗ್ಯ’ ಯೋಜನೆಯ ಅಕ್ಕಿಯನ್ನು ಅಕ್ರಮವಾಗಿ ಮಹಾರಾಷ್ಟ್ರಕ್ಕೆ ಕಾಳಸಂತೆಯಲ್ಲಿ ಸಾಗಾಟ ಮಾಡುತ್ತಿದ್ದ ಬೃಹತ್ ಯತ್ನವನ್ನು ಪೊಲೀಸರು ಯಶಸ್ವಿಯಾಗಿ ಭೇದಿಸಿದ್ದಾರೆ. ನಗರದ ಆರ್‌ಟಿಒ (RTO) ಕ್ರಾಸ್ ಬಳಿ ದಾಳಿ ನಡೆಸಿದ ಪೊಲೀಸರು ಸುಮಾರು 50 ಕ್ವಿಂಟಾಲ್‌ಗೂ ಹೆಚ್ಚು ಅಕ್ಕಿಯನ್ನು ವಶಪಡಿಸಿಕೊಂಡಿದ್ದಾರೆ.
ಧರ್ಮಸ್ಥಳದ ಬಹುಚರ್ಚಿತ ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಮಹತ್ವದ ಆದೇಶ ಹೊರಡಿಸಿದ್ದು, ಈ ಬಗ್ಗೆ ಅರ್ಜಿದಾರರ ಪರ ವಕೀಲೆ ತಸ್ಮಿತಾ ಅವರು ಪ್ರಮುಖ ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಸುಪ್ರೀಂ ಕೋರ್ಟ್‌ನ ಆದೇಶದ ಕುರಿತು ಮಾಧ್ಯಮಗಳಿಗೆ ಮಾಹಿತಿ ನೀಡಿದ ವಕೀಲೆ ತಸ್ಮಿತಾ, ಪ್ರಕರಣದ ನಿಷ್ಪಕ್ಷಪಾತ ತನಿಖೆಗೆ ಕೋರ್ಟ್ ನೀಡಿರುವ ನಿರ್ದೇಶನಗಳ ವಿವರಗಳನ್ನು ಸ್ಪಷ್ಟಪಡಿಸಿದ್ದಾರೆ.
ಕರ್ನಾಟಕ ವಿಧಾನ ಮಂಡಲದ ಅಧಿವೇಶನದಲ್ಲಿ ‘ವಂದೇ ಮಾತರಂ’ ರಾಷ್ಟ್ರೀಯ ಗೀತೆಯನ್ನು ಕಾನೂನುಬಾಹಿರವಾಗಿ ಕತ್ತರಿಸಿ, ಕೇವಲ ಎರಡು ಚರಣಗಳನ್ನು ಮಾತ್ರ ಹಾಡಿಸಲಾಗಿದೆ ಎಂದು ಆರೋಪಿಸಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರು ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಈ ಕುರಿತು ತಮ್ಮ ಸಾಮಾಜಿಕ ಜಾಲತಾಣ ‘ಎಕ್ಸ್’ (ಟ್ವಿಟರ್) ಖಾತೆಯಲ್ಲಿ ಪೋಸ್ಟ್ ಮಾಡಿರುವ ಅವರು, “ಕಾಂಗ್ರೆಸ್‌ನ ನಕಲಿ ದೇಶಭಕ್ತಿಯ ಮುಖವಾಡ ಇಂದು ಸಂಪೂರ್ಣವಾಗಿ ಕಳಚಿದೆ. ಇದು ಅತ್ಯಂತ ಖಂಡನೀಯ ಹಾಗೂ ನಾಚಿಕೆಗೇಡಿನ ಸಂಗತಿಯಾಗಿದೆ” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ವಿಧಾನಸಭೆಯಲ್ಲಿ ಕಸ್ತೂರಿರಂಗನ್ ವರದಿ ಕುರಿತ ಚರ್ಚೆ ವೇಳೆ ಸಚಿವ ಈಶ್ವರ ಖಂಡ್ರೆ ಪ್ರಸ್ತಾಪಕ್ಕೆ ಬಿಜೆಪಿ ಸದಸ್ಯರಾದ ಆರಗ ಜ್ಞಾನೇಂದ್ರ ಹಾಗೂ ಸುನೀಲ್ ಕುಮಾರ್ ಆಕ್ಷೇಪ ವ್ಯಕ್ತಪಡಿಸಿದರು. “ಕ್ಯಾಬಿನೆಟ್ ಸಚಿವರಾಗಿ ನೀವು ನೇರವಾಗಿ ಸಿಎಂಗೆ ಸಲಹೆ ನೀಡಿ, ಶಾಸಕರಿಗೆ ಚರ್ಚಿಸಲು ಅವಕಾಶ ಕೊಡಿ” ಎಂದು ವಿಪಕ್ಷ ನಾಯಕ ಆರ್. ಅಶೋಕ್ ಆಗ್ರಹಿಸಿದರು. ನಂತರ ಸ್ಪೀಕರ್ ಸೂಚನೆಯಂತೆ ಶಾಸಕ ಬೇಳೂರು ಗೋಪಾಲಕೃಷ್ಣ ಚರ್ಚೆ ಮುಂದುವರಿಸಿದರು.
ವಿಧಾನಪರಿಷತ್‌ನಲ್ಲಿ ಕಸ್ತೂರಿರಂಗನ್ ವರದಿ ಕುರಿತ ಚರ್ಚೆಯಲ್ಲಿ ಭಾಗವಹಿಸಿ ಮಾತನಾಡಿದ ಬಿಜೆಪಿ ಸದಸ್ಯ ಸಿ.ಟಿ. ರವಿ, “ರೈತರ ಭೂಮಿ ಕಸಿದುಕೊಳ್ಳುತ್ತಾರೆ, ಕೃಷಿ ಮಾಡಲು ಬಿಡುವುದಿಲ್ಲ ಎಂಬ ವದಂತಿಗಳು ಹರಡುತ್ತಿವೆ. ಈ ಬಗ್ಗೆ ರಾಜ್ಯ ಸರ್ಕಾರ ತಕ್ಷಣವೇ ಸ್ಪಷ್ಟನೆ ನೀಡಬೇಕು ಹಾಗೂ ಏನು ಮಾಡಬೇಕು, ಏನು ಮಾಡಬಾರದು ಎಂಬುದರ ಕುರಿತು ವಿವರಣೆ ಕೊಡಬೇಕು” ಎಂದು ಆಗ್ರಹಿಸಿದರು.
ವಿಧಾನಪರಿಷತ್ ಕಲಾಪವನ್ನು ಇಂದು ರಾತ್ರಿ 8 ಗಂಟೆಯವರೆಗೆ ನಡೆಸಲಾಗುವುದು ಹಾಗೂ ವಿಪಕ್ಷ ಸದಸ್ಯರಿಗೆ ಚರ್ಚಿಸಲು ಹೆಚ್ಚು ಅವಕಾಶ ನೀಡಲಾಗುವುದು ಎಂದು ಪೀಠಾಸೀನ ಸಭಾಪತಿ ಸಲೀಂ ಅಹ್ಮದ್ ಘೋಷಿಸಿದ್ದಾರೆ. ಸಮಯದ ಅಭಾವವಿರುವುದರಿಂದ ಇಂದು ಮಧ್ಯಾಹ್ನದ ಊಟಕ್ಕೆ ವಿರಾಮ ಇರುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.
ಬೆಂಗಳೂರಿನಲ್ಲಿ ಬಯಲಾದ ನಕಲಿ ಔಷಧ ದಂಧೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮೊದಲ ತಲೆದಂಡವಾಗಿದ್ದು, ಸರ್ಕಲ್-1ರ ಸಹಾಯಕ ಔಷಧ ನಿಯಂತ್ರಕ (ADC) ಓಂಕಾರೇಶ್ವರ್ ಅವರನ್ನು ಸರ್ಕಾರ ಅಮಾನತುಗೊಳಿಸಿದೆ. ಚಾಮರಾಜಪೇಟೆಯ ಕೃಪಾ ಹೆಲ್ತ್ ಕೇರ್ ನಕಲಿ ಔಷಧ ಪ್ರಕರಣದಲ್ಲಿ ಸೂಕ್ತ ಕ್ರಮ ಕೈಗೊಳ್ಳದೆ ಕರ್ತವ್ಯಲೋಪ ಎಸಗಿದ ಆರೋಪದ ಮೇಲೆ ಈ ಕಠಿಣ ಕ್ರಮ ಕೈಗೊಳ್ಳಲಾಗಿದೆ.
ಜನರ ಭಾವನೆಯನ್ನು ಅರ್ಥ ಮಾಡಿಕೊಂಡು ಕಸ್ತೂರಿರಂಗನ್ ವರದಿ ಕುರಿತು ಚರ್ಚಿಸಲು ವಿಶೇಷ ಅಧಿವೇಶನ ಕರೆದಿದ್ದೇವೆ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ. ಇದು ನನ್ನ ಒಬ್ಬನ ಸರ್ಕಾರವಲ್ಲ, ಎಲ್ಲರ ಸರ್ಕಾರ. ಜನರ ಕಷ್ಟಗಳನ್ನು ಕಣ್ಣಾರೆ ಕಂಡಿದ್ದು, ವಿಪಕ್ಷಗಳು ನಿಲುವಳಿ ಸೂಚನೆ ಇಲ್ಲದೆ ನೇರವಾಗಿ ಚರ್ಚೆಯಲ್ಲಿ ಭಾಗವಹಿಸಲು ಅವಕಾಶ ನೀಡಲಾಗಿದೆ ಎಂದು ಸದನದಲ್ಲಿ ಸ್ಪಷ್ಟಪಡಿಸಿದರು.
ವಂದೇ ಮಾತರಂ ಗೀತೆ ಗಾಯನ ಹಾಗೂ ಸಂವಿಧಾನದ ಪೀಠಿಕೆ ಬೋಧನೆ ವಿಚಾರವಾಗಿ ಆಡಳಿತ ಮತ್ತು ವಿಪಕ್ಷಗಳ ನಡುವೆ ಉಂಟಾದ ತೀವ್ರ ಕೋಲಾಹಲ, ಗದ್ದಲದ ಹಿನ್ನೆಲೆಯಲ್ಲಿ ವಿಧಾನಪರಿಷತ್ ಕಲಾಪವನ್ನು 10 ನಿಮಿಷಗಳ ಕಾಲ ಮುಂದೂಡಲಾಗಿದೆ.
ರಾಜ್ಯಾದ್ಯಂತ ತೀವ್ರ ಕುತೂಹಲ ಮೂಡಿಸಿದ್ದ ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಮರು ತನಿಖೆಗೆ ಸುಪ್ರೀಂ ಕೋರ್ಟ್ ಆದೇಶಿಸಿದೆ. ಪ್ರಕರಣದ ಕುರಿತು ಹೊಸದಾಗಿ ತನಿಖೆ ನಡೆಸಿ, ಮುಂದಿನ 3 ತಿಂಗಳೊಳಗೆ ತನಿಖೆಯನ್ನು ಪೂರ್ಣಗೊಳಿಸಿ ವರದಿ ಸಲ್ಲಿಸುವಂತೆ ಉನ್ನತ ನ್ಯಾಯಾಲಯ ಸೂಚನೆ ನೀಡಿದೆ. ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ
ವಿಧಾನಮಂಡಲ ಅಧಿವೇಶನದಲ್ಲಿ ರಾಜ್ಯ ಸರ್ಕಾರದ ಪ್ರಮುಖ ಹಣಕಾಸು ಹಾಗೂ ಆಡಳಿತಾತ್ಮಕ ಲೆಕ್ಕ ಪರಿಶೋಧನೆಯ ಮಹತ್ವದ ಸಿಎಜಿ (CAG) ವರದಿಯನ್ನು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಸದನದಲ್ಲಿ ಮಂಡಿಸಿದರು.
ಏಷ್ಯನ್ ಕ್ರೀಡಾಕೂಟದ ಪುರುಷರ 10 ಮೀಟರ್ ಏರ್ ರೈಫಲ್ ಸ್ಪರ್ಧೆಯಲ್ಲಿ ಭಾರತದ ಶೂಟರ್‌ಗಳು ಪದಕಗಳ ಬೇಟೆ ಮುಂದುವರಿಸಿದ್ದಾರೆ. ಶೂಟಿಂಗ್ ವೈಯಕ್ತಿಕ ವಿಭಾಗದಲ್ಲಿ ಹಿಮಾಂಶು ಧಿಲ್ಲೋನ್ ಬೆಳ್ಳಿ ಪದಕ ಗೆದ್ದರೆ, ರುದ್ರಾಂಕ್ಷ್ ಪಾಟೀಲ್ ಕಂಚಿನ ಪದಕಕ್ಕೆ ಕೊರಳೊಡ್ಡಿದ್ದಾರೆ. ಇದಕ್ಕೂ ಮುನ್ನ ಈ ಜೋಡಿ ತಂಡ ವಿಭಾಗದಲ್ಲೂ ಬೆಳ್ಳಿ ಪದಕ ಜಯಿಸಿ ಭಾರತದ ಕೀರ್ತಿ ಹೆಚ್ಚಿಸಿತ್ತು.
‘ವಂದೇ ಮಾತರಂ’ ವಿಚಾರವಾಗಿ ಸಭಾನಾಯಕ ಯತೀಂದ್ರ ಸಿದ್ದರಾಮಯ್ಯ ಅವರಿಗೆ ಛೀಮಾರಿ ಹಾಕುವಂತೆ ವಿಪಕ್ಷ ನಾಯಕ ಚಲವಾದಿ ನಾರಾಯಣಸ್ವಾಮಿ ಆಕ್ರೋಶ ವ್ಯಕ್ತಪಡಿಸಿದ್ದರಿಂದ ವಿಧಾನಪರಿಷತ್‌ನಲ್ಲಿ ತೀವ್ರ ಗದ್ದಲ ಉಂಟಾಯಿತು. ಇದರ ನಡುವೆಯೇ ಉಪಮುಖ್ಯಮಂತ್ರಿ ಜಿ. ಪರಮೇಶ್ವರ್ ಅವರು ವಿಪಕ್ಷಗಳ ವಿರೋಧದ ಮಧ್ಯೆಯೂ ಕಸ್ತೂರಿರಂಗನ್ ವರದಿ ಕುರಿತು ಚರ್ಚೆ ಆರಂಭಿಸಿದರು.
ವಿಶ್ವಪ್ರಸಿದ್ಧ ಮೈಸೂರು ದಸರಾ ಮಹೋತ್ಸವದ ಗೋಲ್ಡ್ ಕಾರ್ಡ್ ಹಾಗೂ ವಿವಿಧ ಕಾರ್ಯಕ್ರಮಗಳ ಟಿಕೆಟ್ ಮಾರಾಟ ಇಂದು ಬೆಳಿಗ್ಗೆ 11:30 ರಿಂದ ಅಧಿಕೃತ ವೆಬ್‌ಸೈಟ್‌ನಲ್ಲಿ ಆನ್‌ಲೈನ್ ಮೂಲಕ ಆರಂಭಗೊಂಡಿದೆ. ಗೋಲ್ಡ್ ಕಾರ್ಡ್‌ಗೆ 6,500 ರೂ., ಜಂಬೂ ಸವಾರಿಗೆ 3,500 ರೂ., ಪಂಜಿನ ಕವಾಯತಿಗೆ 1,500 ರೂ. ಹಾಗೂ ಡ್ರೋನ್ ಶೋ ವೀಕ್ಷಣೆಗೆ 1,000 ರೂ. ದರ ನಿಗದಿಪಡಿಸಲಾಗಿದೆ. ಗೋಲ್ಡ್ ಕಾರ್ಡ್ ಖರೀದಿದಾರರಿಗೆ ಎಲ್ಲಾ ಸಾರ್ವಜನಿಕ ಕಾರ್ಯಕ್ರಮಗಳ ಜೊತೆಗೆ ಅರಮನೆ, ಮೃಗಾಲಯ ಹಾಗೂ ಚಾಮುಂಡಿ ಬೆಟ್ಟಕ್ಕೆ ತಲಾ ಒಂದು ಬಾರಿ ಉಚಿತ ಪ್ರವೇಶ ಸಿಗಲಿದೆ.
ವಿಧಾನಸಭೆಯಲ್ಲಿ ವಂದೇ ಮಾತರಂ ಗೀತೆಯನ್ನು ಬಿಜೆಪಿ ಹಾಗೂ ಜೆಡಿಎಸ್ ಶಾಸಕರು ಪೂರ್ಣವಾಗಿ ಹಾಡುವುದನ್ನು ಮುಂದುವರಿಸಿದರು. ವಿಪಕ್ಷ ಸದಸ್ಯರು ಗೀತೆ ಹಾಡುತ್ತಿದ್ದ ವೇಳೆಯಲ್ಲೇ ಸ್ಪೀಕರ್ ಅವರು ಸಂತಾಪ ಸೂಚನಾ ಪ್ರಕ್ರಿಯೆಯನ್ನು ಕೈಗೆತ್ತಿಕೊಂಡರು. ಸ್ಪೀಕರ್ ಕ್ರಮದ ನಡುವೆಯೂ ವಿಪಕ್ಷ ಸದಸ್ಯರು ಪೂರ್ಣ ಗೀತೆಯನ್ನು ಹಾಡಿ ಮುಗಿಸಿದರು.
‘ವಂದೇ ಮಾತರಂ’ ಪೂರ್ಣವಾಗಿ ಹಾಡದ ಸರ್ಕಾರಕ್ಕೆ ಧಿಕ್ಕಾರ ಎಂದು ಬಿಜೆಪಿ ಸದಸ್ಯರು ಘೋಷಣೆ ಕೂಗಿದರೆ, ಸಂವಿಧಾನ ಪೀಠಿಕೆ ಓದದ ಬಿಜೆಪಿ ನಾಯಕರಿಗೆ ಧಿಕ್ಕಾರ ಎಂದು ಸಭಾನಾಯಕ ಯತೀಂದ್ರ ಪ್ರತಿಘೋಷಣೆ ಕೂಗಿದರು. “ಇದುವರೆಗೂ ಪೂರ್ಣವಾಗಿ ಹಾಡಲಾಗುತ್ತಿದ್ದ ವಂದೇ ಮಾತರಂ ಗೀತೆಯನ್ನು ಈಗೇಕೆ ಎರಡು ಪ್ಯಾರಾಗಳಿಗೆ ಮುಕ್ತಾಯಗೊಳಿಸಿದ್ರಿ?” ಎಂದು ಬಿಜೆಪಿ ಸದಸ್ಯರು ಸರ್ಕಾರವನ್ನು ಪ್ರಶ್ನಿಸಿ ತೀವ್ರ ಆಕ್ರೋಶ ಹೊರಹಾಕಿದರು.
ವಿಧಾನಪರಿಷತ್‌ನಲ್ಲಿ 2 ಚರಣಗಳ ವಂದೇ ಮಾತರಂ ಗಾಯನ ಮುಗಿದರೂ ಬಿಜೆಪಿ ಸದಸ್ಯರು ಸಂಪೂರ್ಣ ಗೀತೆ ಹಾಡುವುದನ್ನು ಮುಂದುವರಿಸಿದರು. ಈ ಗದ್ದಲದ ನಡುವೆಯೇ ಸಭಾಪತಿಯವರು ತಕ್ಷಣವೇ ಸಂವಿಧಾನ ಪೀಠಿಕೆ ಬೋಧನೆ ಆರಂಭಿಸಿದ್ದು, ಕಾಂಗ್ರೆಸ್ ಸದಸ್ಯರು ಪೀಠಿಕೆ ಓದಿದರು. ಇದರಿಂದಾಗಿ ಸದನದಲ್ಲಿ ಕೋಲಾಹಲದ ವಾತಾವರಣ ನಿರ್ಮಾಣವಾಯಿತು.
ವಿಧಾನಪರಿಷತ್ ಕಲಾಪ ಆರಂಭವಾಗುತ್ತಿದ್ದಂತೆಯೇ ‘ವಂದೇ ಮಾತರಂ’ ಗೀತೆ ವಿಚಾರವಾಗಿ ಆಡಳಿತ ಮತ್ತು ವಿಪಕ್ಷಗಳ ನಡುವೆ ತೀವ್ರ ಗದ್ದಲ ಏರ್ಪಟ್ಟಿದೆ. ಗೀತೆಯನ್ನು ಪೂರ್ಣವಾಗಿ ಹಾಡುವಂತೆ ವಿಪಕ್ಷಗಳು ಪಟ್ಟು ಹಿಡಿದಿದ್ದು, ಕಲಾಪದ ಆರಂಭದಲ್ಲೇ ಉಭಯ ನಾಯಕರ ನಡುವೆ ಸಭಾಂಗಣದಲ್ಲಿ ತೀವ್ರ ವಾಕ್ಸಮರ ಹಾಗೂ ಕೋಲಾಹಲ ಉಂಟಾಗಿದೆ.
ವಿದ್ಯಾರ್ಥಿಯೊಬ್ಬರ ಆತ್ಮಹತ್ಯೆ ಹಾಗೂ ಪರೀಕ್ಷಾ ನಕಲು ತಡೆ ಕ್ರಮಗಳ ವಿರುದ್ಧ ವಿದ್ಯಾರ್ಥಿಗಳಿಂದ ನಿರಂತರ ಪ್ರತಿಭಟನೆ ವ್ಯಕ್ತವಾದ ಹಿನ್ನೆಲೆಯಲ್ಲಿ, ಐಐಟಿ ಬಾಂಬೆ ನಿರ್ದೇಶಕ ಪ್ರೊ. ಶಿರೀಶ್ ಕೇದಾರೆ ರಾಜೀನಾಮೆ ನೀಡಿದ್ದಾರೆ “ಪರೀಕ್ಷೆಯಲ್ಲಿ ಕಾಪಿ ತಡೆದಿದ್ದೇ ನಾವು ಮಾಡಿದ ತಪ್ಪಾಯ್ತಾ?” ಎಂದು ಬೇಸರ ವ್ಯಕ್ತಪಡಿಸಿದ ಅವರು, ವಿದ್ಯಾರ್ಥಿಗಳು ಪ್ರತಿಭಟನೆ ಬಿಟ್ಟು ಭವಿಷ್ಯದ ಕಡೆ ಗಮನಹರಿಸಬೇಕೆಂದು ಕಿವಿಮಾತು ಹೇಳಿದ್ದಾರೆ.
ವಿಧಾನಮಂಡಲ ಅಧಿವೇಶನದ ಆರಂಭದಲ್ಲೇ ವಂದೇ ಮಾತರಂ ಗೀತೆ ವಿಚಾರವಾಗಿ ಭಾರಿ ಗದ್ದಲ ಏರ್ಪಡುವ ಸಾಧ್ಯತೆಯಿದೆ. ಕಲಾಪದ ವೇಳೆ ಎರಡು ಪ್ಯಾರಾ ಮಾತ್ರ ಹಾಡಲು ಸರ್ಕಾರ ಆದೇಶಿಸಿದ್ದು, ಸಂಪೂರ್ಣ ಗೀತೆ ಹಾಡಬೇಕೆಂದು ಬಿಜೆಪಿ-ಜೆಡಿಎಸ್ ವಿಪಕ್ಷಗಳು ಒಟ್ಟಾಗಿ ಪಟ್ಟುಹಿಡಿಯಲು ಸಜ್ಜಾಗಿವೆ. ಸರ್ಕಾರ ಅರ್ಧಕ್ಕೆ ನಿಲ್ಲಿಸಿದರೂ ತಾವೇ ಪೂರ್ಣ ಗೀತೆ ಹಾಡಲು ವಿಪಕ್ಷಗಳು ನಿರ್ಧರಿಸಿವೆ.
ಸಚಿವ ಪ್ರಿಯಾಂಕ್ ಖರ್ಗೆ ಅವರ ಸವಾಲನ್ನು ಸ್ವೀಕರಿಸಿದ್ದೇವೆ ಎಂದಿರುವ ಬಿಜೆಪಿ ಶಾಸಕ ಎಸ್‌ಆರ್ ವಿಶ್ವನಾಥ್, ಸೋನಿಯಾ ಗಾಂಧಿ ಅವರನ್ನು ಮೆಚ್ಚಿಸಲು ಕಾಂಗ್ರೆಸ್ ವಂದೇ ಮಾತರಂ ಗೀತೆಯನ್ನು ಅರ್ಧಕ್ಕೆ ಮೊಟಕುಗೊಳಿಸಿದೆ ಎಂದು ಆರೋಪಿಸಿದ್ದಾರೆ. ಸದನದಲ್ಲಿ ಕಡಿತಗೊಳಿಸಿದರೂ ನಾವು ಪೂರ್ಣ ಗೀತೆ ಹಾಡುತ್ತೇವೆ ಎಂದು ವಿಧಾನಸೌಧದಲ್ಲಿ ಕಿಡಿಕಾರಿದ್ದಾರೆ.
ಗದಗ ಶಾಸಕ ಹೆಚ್.ಕೆ.ಪಾಟೀಲ್ ಅವರು ರಾಜ್ಯದ ಬರ ಪರಿಸ್ಥಿತಿ ಹಾಗೂ ಅಧಿಕಾರಿಗಳ ನಿರ್ಲಕ್ಷ್ಯ ಕುರಿತು ಸರ್ಕಾರಕ್ಕೆ ಬರೆದ ಪತ್ರವನ್ನು ಉಲ್ಲೇಖಿಸಿ ಜೆಡಿಎಸ್ ತೀವ್ರ ವ್ಯಂಗ್ಯವಾಡಿದೆ. “ಇದು ಐಟಿ-ಬಿಟಿ ರಾಜ್ಯವೋ ಅಥವಾ ಶಿಲಾಯುಗದ ಆಡಳಿತವೋ” ಎಂದು ಎಕ್ಸ್ ಮೂಲಕ ಕಾಂಗ್ರೆಸ್‌ಗೆ ಟೀಕಿಸಿದೆ.
ಕಸ್ತೂರಿರಂಗನ್ ವರದಿ ಆಕ್ಷೇಪಣೆಗೆ ಸೆಪ್ಟೆಂಬರ್ 27ರವರೆಗೆ ಕಾಲಾವಕಾಶವಿದೆ. ಈ ಹಿನ್ನೆಲೆಯಲ್ಲಿ ವರದಿಯನ್ನು ಸಂಪೂರ್ಣ ತಿರಸ್ಕರಿಸಿ ಸರ್ವಪಕ್ಷ ನಿಯೋಗ ಒಯ್ಯುವುದು, ಕೇರಳ ಮಾದರಿಯಲ್ಲಿ ಭೌತಿಕ ಸಮೀಕ್ಷೆ ನಡೆಸಿ ಜನವಸತಿ ಪ್ರದೇಶ ಹೊರಗಿಡುವುದು ಅಥವಾ ರೈತರಿಗೆ ತೊಂದರೆಯಾಗದಂತೆ ತಾಂತ್ರಿಕ ಆಕ್ಷೇಪಣೆ ಸಲ್ಲಿಸುವ 3 ಪ್ರಮುಖ ಆಯ್ಕೆಗಳು ರಾಜ್ಯ ಸರ್ಕಾರದ ಮುಂದಿವೆ.
ಬರ ಪರಿಸ್ಥಿತಿ ಹಾಗೂ ಕಸ್ತೂರಿ ರಂಗನ್ ವರದಿ ಕುರಿತು ಚರ್ಚಿಸಲು ಕರೆದಿರುವ ವಿಶೇಷ ಅಧಿವೇಶನಕ್ಕೆ ಕಂದಾಯ ಸಚಿವರೂ ಆಗಿರುವ ಡಿಸಿಎಂ ಡಾ.ಜಿ.ಪರಮೇಶ್ವರ್ ವಿಧಾನಸೌಧಕ್ಕೆ ಆಗಮಿಸಿದರು. ಈಗಾಗಲೇ ರಾಜ್ಯದ ಬರ ಪೀಡಿತ ಪ್ರದೇಶಗಳ ವರದಿ ಪಡೆದುಕೊಂಡಿರುವ ಅವರು, ಇಂದಿನ ಅಧಿವೇಶನದಲ್ಲಿ ಪ್ರಮುಖ ಪಾತ್ರ ವಹಿಸಲಿದ್ದಾರೆ.
Published On - 9:33 am, Mon, 21 September 26