
ಬೆಂಗಳೂರು, ಮೇ 25: ಕಪ್ಪೆಚಿಪ್ಪು ಹೆಕ್ಕಲು ಹೋಗಿ ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನ ಅಳ್ವೆಕೋಡಿಯಲ್ಲಿ 10 ಜನ ದಾರುಣವಾಗಿ ಮೃತಪಟ್ಟ ಘಟನೆ ನಿನ್ನೆ ನಡೆದಿತ್ತು. ಇವರ ಜೊತೆಗಿದ್ದ ಮತ್ತೋರ್ವ ವ್ಯಕ್ತಿ ಇನ್ನೂ ನಾಪತ್ತೆಯಾಗಿದ್ದು, ಮಿಸ್ ಆಗಿರುವ ಮಾದೇವ ನಾಯ್ಕ್ ಅವರಿಗಾಗಿ ಇಂದು ಶೋಧಕಾರ್ಯ ನಡೆಯಲಿದೆ. 11 ಜನರ ಪೈಕಿ ನಿನ್ನೆ 10 ಮೃತದೇಹಗಳು ಸಿಕ್ಕಿದ್ದವು. ಆದರೆ ಒಬ್ಬರ ಬಗ್ಗೆ ಮಾತ್ರ ಸುಳಿವು ಸಿಕ್ಕಿರಲಿಲ್ಲ. ಹೀಗಾಗಿ ಸ್ಥಳೀಯ ಮೀನುಗಾರ ಸಹಾಯದಿಂದ NDRF, ಕರಾವಳಿ ಕಾವಲು ಪಡೆ, ಆಗ್ನಿ ಶಾಮಕ ಹಾಗೂ ಸ್ಥಳೀಯರ ಪೊಲೀಸರಿಂದ ಕಾರ್ಯಾಚರಣೆ ನಡೆಯಲಿದೆ.
ಇದನ್ನೂ ಓದಿ: ಕಪ್ಪೆ ಚಿಪ್ಪುಗಾಗಿ ಹೋದವರು ಜಲಸಮಾಧಿ, ಸಾವಿನ ಸಂಖ್ಯೆ 10ಕ್ಕೆ ಏರಿಕೆ
ಮೂರಿನ ಕಟ್ಟೆ ಧ್ವಂಸ ಪ್ರಕರಣ ಸಂಬಂಧ ಉತ್ತರ ಕನ್ನಡ ಜಿಲ್ಲೆಯ ಭಟ್ಕಳದ ಸ್ಥಿತಿ ಸದ್ಯ ಬೂದಿ ಮುಚ್ಚಿದ ಕೆಂಡದಂತಿದೆ. ಕಟ್ಟೆ ಧ್ವಂಸ ಪ್ರಕರಣವನ್ನ ಗಂಭೀರವಾಗಿ ಪರಿಗಣಿಸಿರುವ ಹಿಂದೂ ಸಂಘಟನೆಗಳು, ನಿನ್ನೆ ರಾತ್ರಿ ಮೂರಿನ ಕಟ್ಟೆ ಬಳಿ ಪ್ರತಿಭಟನೆ ಮಾಡಿದ್ದರು. ಪೊಲೀಸರು ವಶಕ್ಕೆ ಪಡೆದು ಬಿಟ್ಟುಕಳುಹಿಸಿದ ಬಳಿಕ ಮತ್ತೆ ಹೋರಾಟಕ್ಕೆ ಮುಂದಾಗಿದ್ದರು. ಈ ವೇಳೆ ಪೊಲೀಸರು ಅವರ ಮನವೊಲಿಸಿ ಕಳುಹಿಸಿದ್ದರು. ಆದರೆ ಇಂದು ಮತ್ತೆ ಅವರು ಪ್ರತಿಭಟನೆ ನಡೆಸುವ ಸಾಧ್ಯತೆ ಇರುವ ಕಾರಣ, ಮುನ್ನೆಚ್ಚರಿಕೆ ಕ್ರಮವಾಗಿ ಭಟ್ಕಳದಲ್ಲಿ ಪೊಲೀಸ್ ಸರ್ಪಗಾವಲು ಹಾಕಲಾಗಿದೆ. 300ಕ್ಕೂ ಹೆಚ್ಚು ಪೊಲೀಸರ ನಿಯೋಜನೆ ಮಾಡಲಾಗಿದ್ದು, ಹೆಚ್ಚುವರಿಯಾಗಿ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಪೊಲೀಸರನ್ನು ಕರೆಸಲಾಗಿದೆ.
ಮೈಸೂರು ಜಿಲ್ಲೆ ಟಿ.ನರಸೀಪುರ ತಾಲೂಕಿನ ಕೊಡಗಹಳ್ಳಿ ಗ್ರಾಮದಲ್ಲಿ ಅಕ್ರಮವಾಗಿ ಯೂರಿಯ ಸಂಗ್ರಹಿಸಿದ್ದ ತೋಟದ ಮೇಲೆ ದಾಳಿ ನಡೆಸಿರುವ ಕೃಷಿ ಇಲಾಖೆ ಅಧಿಕಾರಿಗಳು, ಬರೋಬ್ಬರಿ 602 ಬ್ಯಾಗ್ ಯೂರಿಯಾ ವಶಕ್ಕೆ ಪಡೆದಿದ್ದಾರೆ. ಕೊಡಗಹಳ್ಳಿಯ ಇದಾಯತ್ ಉಲ್ಲಾ ಎಂಬುವರ ತೋಟದ ಮೇಲೆ ದಾಳಿ ನಡೆಸಲಾಗಿದ್ದು, ಕಾಳಸಂತೆಯಲ್ಲಿ ಅಕ್ರಮವಾಗಿ ಮಾರಾಟ ಮಾಡಲು ಇದನ್ನು ಸಂಗ್ರಹಿಸಲಾಗಿತ್ತು ಎನ್ನಲಾಗಿದೆ. ಖಚಿತ ಮಾಹಿತಿ ಮೇರೆಗೆ ಕೃಷಿ ಅಧಿಕಾರಿಗಳು ಕಾರ್ಯಾಚರಣೆ ನಡೆಸಿದ್ದು, ಬನ್ನೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಚಾಮರಾಜನಗರದ ನಾಗಮಲೆ ಹಾಡಿಯಲ್ಲಿ ಚಿರತೆ ದಾಳಿ ಮುಂದುವರಿದಿದ್ದು, ತಡರಾತ್ರಿ 1.30ರ ವೇಳೆ ಕೊಟ್ಟಿಗೆಗೆ ನುಗ್ಗಿರುವ ಚಿರತೆ ಮೇಕೆಯನ್ನು ಕೊಂದು ತಿಂದಿದೆ. ನಿನ್ನೆಯಷ್ಟೇ ಇಂಡಿಗನತ್ತದಲ್ಲಿಟ್ಟಿದ್ದ ಪಂಚರದಲ್ಲಿ ಹೆಣ್ಣು ಚಿರತೆ ಸೆರೆಯಾಗಿತ್ತು. ಚಿರತೆ ಸೆರೆಯಾದ ಬೆನ್ನಲ್ಲೆ ನಿಟ್ಟುಸಿರು ಹಾಡಿಯ ಜನತೆ, ಅರಣ್ಯ ಸಿಬ್ಬಂದಿ ಬಿಟ್ಟಿದ್ದರು. ಘಟನೆ ನಡೆದು 2 ಗಂಟೆಗಳ ಒಳಗಾಗಿ ಸೊಪ್ಪು ತರಲು ಹೋದ ರೈತನ ಮೇಲೆ ಮತ್ತೊಂದು ಚಿರತೆ ದಾಳಿಯತ್ನ ನಡೆಸಿತ್ತು.ಈ ಘಟನೆ ಮಾಸುವ ಮುನ್ನವೇ ಮತ್ತೆ ನಾಗಮಲೆ ಹಾಡಿಯಲ್ಲಿ ಚಿರತೆ ಪ್ರತ್ಯಕ್ಷವಾಗಿದೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 8:00 am, Mon, 25 May 26