AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಉಡುಪಿ: ಮೈಕ್ರೋ ಫೈನಾನ್ಸ್ ಕಿರುಕುಳ ಆರೋಪ, 20 ಸಾವಿರ ಸಾಲಕ್ಕೆ 2 ಲಕ್ಷ ರೂ ವಸೂಲಿಗಿಳಿದ ಬ್ಯಾಂಕ್ ಸಿಬ್ಬಂದಿ

ಉಡುಪಿಯ ಮಹಾಲಕ್ಷ್ಮೀ ಕೋ-ಆಪರೇಟಿವ್ ಬ್ಯಾಂಕ್ ವಿರುದ್ಧ ಮೈಕ್ರೋಫೈನಾನ್ಸ್ ಸಾಲದಲ್ಲಿ ದೊಡ್ಡ ಪ್ರಮಾಣದ ವಂಚನೆ ಆರೋಪ ಕೇಳಿಬಂದಿದೆ. 20 ಸಾವಿರ ರೂ. ಸಾಲಕ್ಕೆ 2 ಲಕ್ಷ ರೂ ವರೆಗೆ ಬ್ಯಾಂಕ್ ಸಿಬ್ಬಂದಿಗಳು ವಸೂಲಿ ಮಾಡುತ್ತಿದ್ದಾರೆ ಎನ್ನಲಾಗುತ್ತಿದೆ. ಹೀಗಾಗಿ ಸಂತ್ರಸ್ತರು ನ್ಯಾಯಕ್ಕಾಗಿ ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿದ್ದಾರೆ.

ಉಡುಪಿ: ಮೈಕ್ರೋ ಫೈನಾನ್ಸ್ ಕಿರುಕುಳ ಆರೋಪ, 20 ಸಾವಿರ ಸಾಲಕ್ಕೆ 2 ಲಕ್ಷ ರೂ ವಸೂಲಿಗಿಳಿದ ಬ್ಯಾಂಕ್ ಸಿಬ್ಬಂದಿ
ಉಡುಪಿ: ಮೈಕ್ರೋ ಫೈನಾನ್ಸ್ ಕಿರುಕುಳ ಆರೋಪ, 20 ಸಾವಿರ ಸಾಲಕ್ಕೆ 2 ಲಕ್ಷ ರೂ ವಸೂಲಿಗಿಳಿದ ಬ್ಯಾಂಕ್ ಸಿಬ್ಬಂದಿ
ಪ್ರಜ್ವಲ್ ಅಮೀನ್​, ಉಡುಪಿ
| Edited By: |

Updated on:Nov 03, 2024 | 2:43 PM

Share

ಉಡುಪಿ, ನವೆಂಬರ್​ 01: ಕೃಷ್ಣ ನಗರಿ ಉಡುಪಿಯಲ್ಲಿ ಮೈಕ್ರೋ ಫೈನಾನ್ಸ್ (Micro finance) ಕಿರುಕುಳದ ಬಗ್ಗೆ ಆರೋಪ ಕೇಳಿ ಬಂದಿದೆ. ಚಿಕ್ಕ ಮೊತ್ತದಲ್ಲಿ ಸಾಲ ನೀಡಿ ಲಕ್ಷಗಟ್ಟಲೇ ವಾಪಾಸ್ ನೀಡುವಂತೆ ಜನರನ್ನು ಪೀಡಿಸಲಾಗುತ್ತಿದೆಯಂತೆ. ಇದರಿಂದ ಹೈರಾಣಾದ ಜನರು ಉಡುಪಿ ಜಿಲ್ಲಾಧಿಕಾರಿಗೆ ದೂರು ನೀಡಿದ್ದಾರೆ. ಉಡುಪಿ ಹಾಲಿ ಶಾಸಕನ ಸುಪರ್ದಿಯಲ್ಲಿರುವ ಈ ಬ್ಯಾಂಕ್ ವಿರುದ್ಧ ವಂಚನೆ ಆರೋಪ ಕೇಳಿ ಬಂದಿರುವುದು ಸದ್ಯ ಸಾಕಷ್ಟು ಅನುಮಾನಗಳಿಗೆ ಕಾರಣವಾಗಿದೆ.

ಎಷ್ಟೇ ಕಂತು ಕಟ್ಟಿದರೂ ಮುಗಿಯದ ಸಾಲ

ಕೃಷ್ಣನಗರಿ ಉಡುಪಿಯ ಪ್ರತಿಷ್ಠಿತ ಮಹಾಲಕ್ಷ್ಮಿ ಕೋ ಆಪರೇಟಿವ್ ಬ್ಯಾಂಕ್ ಇದರ ಮಲ್ಪೆ ಶಾಖೆಯ ವಿರುದ್ಧ ಈ ಆರೋಪ ಕೇಳಿ ಬಂದಿದೆ. ಮೊದಲಿಗೆ ಮನೆ ಬಾಗಿಲಿಗೆ ಬಂದು ಸಾಲ ನೀಡುತ್ತೇವೆ ಸದುಪಯೋಗಪಡಿಸಿಕೊಳ್ಳಿ ಎಂದು ಜನರನ್ನ ಕಾಡಿ ಬೇಡಿ ಸಾಲ ನೀಡುತ್ತಾರೆ. ಸಾಲ ಪಡೆದವರೂ ನಿಷ್ಠೆಯಿಂದ ಪಡೆದ ಸಾಲವನ್ನ ವಾಪಸ್ ಮಾಡುತ್ತಿರುತ್ತಾರೆ. ಆದರೆ ಎಷ್ಟೇ ಕಂತು ಕಟ್ಟಿದರೂ ಸಾಲ ಮರುಪಾವತಿಯಾಗೋದೇ ಇಲ್ಲ. ಏನಪ್ಪ ಈ ಕಥೆ ಎಂದು ಚೆಕ್ ಮಾಡೋದಕ್ಕೆ ಮುಂದಾದ ಸಾಲಗಾರರಿಗೆ ಶಾಕ್ ಎದುರಾಗಿದೆ. ತಾವು ಪಡೆದ ಸಾಲ ಸಾವಿರಗಳಲ್ಲಿ ಇದ್ರೆ, ಬ್ಯಾಂಕ್​ನಲ್ಲಿ ಹತ್ತು ಪಟ್ಟು ಅಂದರೆ ಲಕ್ಷಗಳಲ್ಲಿ ಸಾಲ ಬಾಕಿ ಇದೆ ಎಂದು ನಮೂದು ಮಾಡಲಾಗಿದೆಯಂತೆ. ಬ್ಯಾಂಕ್​ನವರು ಆದಷ್ಟು ಬೇಗ ಸಾಲ ಕಟ್ಟಿ ಎಂದು ಮನೆ ಮುಂದೆ ರಂಪಾಟ ಮಾಡುತ್ತಿದ್ದಾರೆ ಅನ್ನೋ ಆರೋಪ ಕೇಳಿ ಬಂದಿದೆ. ಕಂಗಾಲದ ಸಾಲಗಾರರು ನಮಗೆ ನ್ಯಾಯ ನೀಡಿ. ಈ ಇಕ್ಕಟ್ಟಿನಿಂದ ಪಾರು ಮಾಡಿ ಎಂದು ಬೀದಿಗಿಳಿದಿದ್ದಾರೆ.

ಇದನ್ನೂ ಓದಿ: ವಿಧಾನಪರಿಷತ್​​ ಉಪಚುನಾವಣೆಯಲ್ಲಿ ಬಿಜೆಪಿಗೆ ಗೆಲುವು, ಕಾಂಗ್ರೆಸ್​​ಗೆ​ ಮುಖಭಂಗ

ಕೊರೊನಾ ಸಂದರ್ಭ ಈ ಬ್ಯಾಂಕ್​ನಿಂದ ಸಾಲ ಪಡೆದವರಿಗೆ ಶಾಕ್ ಎದುರಾಗಿದೆ. ಅಂದು ಇಪ್ಪತ್ತು ಸಾವಿರ ರೂ. ಸಾಲ ಪಡೆದವರಿಗೆ ನೀವು ಎರಡು ಲಕ್ಷ ರೂ. ಸಾಲ ಪಡೆದಿದ್ದೀರ ಬೇಗ ವಾಪಸ್ ಮಾಡಿ ಎಂದು ಬ್ಯಾಂಕ್ ಸಿಬ್ಬಂದಿ ಗದುರುತ್ತಿದ್ದಾರಂತೆ. ಮನೆ ಮುಂದೆ ಬಂದು ರಂಪಾಟ ಮಾಡುತ್ತಿದ್ದಾರಂತೆ. ಪಡೆದ ಸಾಲವನ್ನ ನ್ಯಾಯಯುತವಾಗಿ ಹಿಂದಿರುಗಿಸಿದರೂ ಹೆಚ್ಚುವರಿ ಹಣ ಕಟ್ಟುವಂತೆ ನಮ್ಮ ಮೇಲೆ ದಬ್ಬಾಳಿಕೆ ನಡೆಸಲಾಗುತ್ತಿದೆ ಎಂದು ಸಾಲ ಪಡೆದ ಸಂತ್ರಸ್ತೆ ಬಿಂದು ಎನ್ನುವವರು ಅಳಲು ತೋಡಿಕೊಂಡಿದ್ದಾರೆ.

ಅದರಲ್ಲೂ ಇನ್ನೊಂದು ಪ್ರಮುಖ ವಿಚಾರ ಏನು ಅಂದ್ರೆ ಉಡುಪಿ ಶಾಸಕ ಯಶ್ ಪಾಲ್ ಸುವರ್ಣ ಈ ಬ್ಯಾಂಕ್​ನ ಚೇರ್ ಮೆನ್. ತಮ್ಮ ಉಸ್ತುವಾರಿಯ ಬ್ಯಾಂಕ್ ಮೇಲೆ ಇಷ್ಟು ದೊಡ್ಡ ಗುರತರ ಆರೋಪ ಬಂದಿದ್ರು ಶಾಸಕರು ಮಾತ್ರ ಚಕಾರ ಎತ್ತುತ್ತಿಲ್ಲ. ಹೀಗಾಗಿ ಸಂತ್ರಸ್ತರು ಉಡುಪಿ ಮಾಜಿ ಶಾಸಕ ರಘುಪತಿ ಭಟ್ ರವರ ಬಳಿ ನ್ಯಾಯ ಕೊಡಿಸುವಂತೆ ಮೊರೆ ಹೋಗಿದ್ದಾರೆ.

ಬ್ಯಾಂಕ್ ಮ್ಯಾನೇಜರ್ ಆತ್ಮಹತ್ಯೆ: ಆಣೆ ಪ್ರಮಾಣದ ಸವಾಲ್!

ಮಾಜಿ ಶಾಸಕರು ಬ್ಯಾಂಕ್ ಅವ್ಯವಹಾರ ಆರೋಪದ ವಿರುದ್ಧ ಧ್ವನಿ ಎತ್ತಿದ್ದೆ ತಡ ಹಾಲಿ ಹಾಗೂ ಮಾಜಿ ಶಾಸಕರ ನಡುವೆ ಕೆಸರೆರೆಚಾಟ ಶುರುವಾಗಿದೆ. ಆಣೆ ಪ್ರಮಾಣದ ಹಂತಕ್ಕೂ ಬಂದು ಈ ವಿಚಾರ ಮುಟ್ಟಿದೆ. ಮಹಾಲಕ್ಷ್ಮಿ ಬ್ಯಾಂಕ್​ನ ವ್ಯವಸ್ಥಾಪನ ನಿರ್ದೇಶಕರು ರಘುಪತಿ ಭಟ್​ಗೆ ದೇವರ ಕ್ಷೇತ್ರದಲ್ಲಿ ಆಣೆ ಪ್ರಮಾಣಕ್ಕೆ ಬರುವಂತೆ ಸವಾಲ್ ಹಾಕಿದ್ದಾರೆ. ಇದನ್ನ ನಯವಾಗೆ ಸ್ವೀಕರಿಸುವ ರಘುಪತಿ ಭಟ್. ನಾನು ಕೂಡ ಆಣೆ ಪ್ರಮಾಣಕ್ಕೆ ಸಿದ್ದನಿದ್ದೇನೆ. ದಿನ ನಿಗದಿಪಡಿಸಿ ಬರತ್ತೇನೆ ಎಂದು ಒಂದಿಷ್ಟು ದಾಖಲೆಗಳನ್ನ ಮುಂದಿಟ್ಟು ತಮ್ಮ ಸೋಶಿಯಲ್ ಮೀಡಿಯಾದ ಮೂಲಕ ಬ್ಯಾಂಕ್​ನವರಿಗೆ ಕರೆ ಕೊಟ್ಟಿದ್ದಾರೆ.

ಇದನ್ನೂ ಓದಿ: ದೀಪಾವಳಿ: ಆರ್​ಟಿಒ ಎಚ್ಚರಿಕೆಗೂ ಬಗ್ಗದ ಖಾಸಗಿ ಬಸ್​ಗಳು, ಗಗನಕ್ಕೇರಿದ ಟಿಕೆಟ್ ದರ

ಈಗಾಗಲೇ ಸಹಕಾರಿ ಸಂಘಗಳ ಲೆಕ್ಕಪರಿಶೋಧಕರು 2023ರಲ್ಲೇ ಈ ಬಗ್ಗೆ ತನಿಖೆ ನಡೆಸಿದ್ದಾರೆ. ಬ್ಯಾಂಕ್​ನಲ್ಲಿ ಅವ್ಯವಹಾರ ನಡೆದಿರುವ ಬಗ್ಗೆ ಅಂದಿನ ಮಲ್ಪೆ ಶಾಖೆಯ ಮ್ಯಾನೇಜರ್ ಸುಬ್ಬಣ್ಣ ಎಂಬುವವರಿಗೆ ನೋಟಿಸ್ ಕೂಡ ನೀಡಲಾಗುತ್ತಿದೆ . ಆದರೆ ಬಳಿಕ ಸುಬ್ಬಣ್ಣ ಆತ್ಮಹತ್ಯೆಗೈದು ಸಾವಿಗೆ ಶರಣಾಗಿದ್ರು. ಇದೀಗ ಈ ಪ್ರಕರಣ ಮತ್ತೆ ಭುಗಿಲೆದ್ದಿದ್ದು SIT ತನಿಖೆಗೂ ಅಗ್ರಹ ಕೇಳಿ ಬಂದಿದೆ. ರಾಜಕೀಯ ತಿರುವು ಪಡೆದುಕೊಂಡಿರುವ ಈ ಪ್ರಕರಣ ಬಗೆದಷ್ಟು ರೋಚಕ ತಿರುವು ಪಡೆದುಕೊಳ್ಳುತ್ತಿದೆ. ಮುಂದೇನಾಗುತ್ತೆ ಅನ್ನೋದನ್ನ ಕಾದುನೋಡಬೇಕಿದೆ. ವಂಚನೆ ನಡೆದಿದ್ದೆ ಆದಲ್ಲಿ ಬಡ ಜನರನ್ನ ಸುಲಿಗೆ ಗೈಯ್ಯುವ ಮೈಕ್ರೋ ಫೈನಾನ್ಸ್ ಗಳಿಗೆ ಒಂದು ಪಾಠವಾಗಬೇಕಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 8:09 pm, Fri, 1 November 24