
ಉಡುಪಿ, ಅಕ್ಟೋಬರ್ 8: ಭಾರತೀಯ ಚಿತ್ರರಂಗದ ಹಿರಿಯ ನಟ ನಾನಾ ಪಾಟೇಕರ್ ಅವರ ನಿಧನದ ಬೆನ್ನಲ್ಲೇ, ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಮುಂಡ್ಕೂರಿನಲ್ಲೂ ಅವರ ಅಭಿಮಾನಿಗಳು ಕಂಬನಿ ಮಿಡಿದಿದ್ದಾರೆ. ಹಲವು ವರ್ಷಗಳ ಹಿಂದೆ ಮುಂಡ್ಕೂರಿಗೆ ಭೇಟಿ ನೀಡುತ್ತಿದ್ದ ನಾನಾ ಪಾಟೇಕರ್, ಇಲ್ಲಿನ ಧಾರ್ಮಿಕ ಹಾಗೂ ಶೈಕ್ಷಣಿಕ ಕಾರ್ಯಗಳಿಗೆ ಸಾಕಷ್ಟು ಕೊಡುಗೆ ನೀಡಿದ್ದರು. ಅವರ ಅಗಲಿಕೆಯ ಬಳಿಕವೂ ಮುಂಡ್ಕೂರಿನಲ್ಲಿ ಅವರ ನೆನಪು ಅಮರವಾಗಿದೆ. ಸುಮಾರು 25 ವರ್ಷಗಳ ಹಿಂದೆ ಮುಂಡ್ಕೂರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಅಭಿವೃದ್ಧಿಗೆ ನಾನಾ ಪಾಟೇಕರ್ ಸಹಾಯಹಸ್ತ ಚಾಚಿದ್ದರು.
ಮುಂಡ್ಕೂರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಜೀರ್ಣೋದ್ಧಾರ ಹಾಗೂ ಬ್ರಹ್ಮಕಲಶೋತ್ಸವಕ್ಕೂ ದೇಣಿಗೆ ನೀಡಿದ್ದರು. ಅವರ ಕೊಡುಗೆಯಿಂದ ನಿರ್ಮಾಣವಾಗಿರುವ ನಾನಾ ಪಾಟೇಕರ್ ಸಭಾಗೃಹ ಇಂದು ಅವರ ಸೇವೆಯ ನೆನಪನ್ನು ಉಳಿಸಿಕೊಂಡಿದೆ. ಕೋಟಿ ರೂಪಾಯಿ ಮೌಲ್ಯದ ಈ ಸಭಾಗೃಹ ಮುಂಡ್ಕೂರಿನ ಪ್ರಮುಖ ನೆನಪುಗಳಲ್ಲಿ ಒಂದಾಗಿದೆ.
ಮುಲ್ಲಡ್ಕದ ಗುರುಪ್ರಸಾದ್ ಸುಧಾಕರ ಶೆಟ್ಟಿ ಅವರ ಸ್ನೇಹಿತರಾಗಿದ್ದ ನಾನಾ ಪಾಟೇಕರ್, ಮುಂಡ್ಕೂರಿಗೆ ಆಗಾಗ್ಗೆ ಭೇಟಿ ನೀಡುತ್ತಿದ್ದರು. ಮುಲ್ಲಡ್ಕ ಬ್ರಹ್ಮ ಬೈದರ್ಕಳ ಗರಡಿ ಹಾಗೂ ಮುಂಡ್ಕೂರು ಕಜೆ ಶ್ರೀ ಮಹಾಮ್ಮಾಯಿ ದೇವಸ್ಥಾನದ ಧಾರ್ಮಿಕ ಕಾರ್ಯಗಳಿಗೂ ಅವರು ನೆರವು ನೀಡಿದ್ದರು.

ನಾನಾ ಪಾಟೇಕರ್ ಸಭಾಗೃಹ ಲೋಕಾರ್ಪಣೆ ಸಂದರ್ಭದ ಚಿತ್ರ
ಮುಂಡ್ಕೂರಿನ ಶತಮಾನ ಕಂಡ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ 60ನೇ ವರ್ಷದ ಸಂಭ್ರಮದಲ್ಲೂ ನಾನಾ ಪಾಟೇಕರ್ ಕೊಡುಗೆ ನೀಡಿದ್ದರು. ಮುಂಡ್ಕೂರಿನ ವಿದ್ಯಾವರ್ಧಕ ಪದವಿಪೂರ್ವ ಕಾಲೇಜಿನ ಗ್ರಂಥಾಲಯ ಹಾಗೂ ಕಂಪ್ಯೂಟರ್ ಕೊಠಡಿ ನಿರ್ಮಾಣಕ್ಕೂ ನೆರವು ನೀಡಿದ್ದ ಅವರು, ಕಂಪ್ಯೂಟರ್‌ಗಳನ್ನೂ ಕೊಡುಗೆಯಾಗಿ ನೀಡಿದ್ದರು.
ಮುಂಡ್ಕೂರಿನಲ್ಲಿ ಗುರುಕುಲ ಮಾದರಿಯ ಶಿಕ್ಷಣ ವ್ಯವಸ್ಥೆ ಆರಂಭಿಸಬೇಕು ಎಂಬ ಆಶಯವನ್ನೂ ನಾನಾ ಪಾಟೇಕರ್ ವ್ಯಕ್ತಪಡಿಸಿದ್ದರು. ಹೀಗಾಗಿ ಮುಂಡ್ಕೂರಿನ ಪಾಲಿಗೆ ಕರ್ಣನಂತಿದ್ದ ನಾನಾ ಪಾಟೇಕರ್ ಅವರ ಅಗಲಿಕೆಯ ನೋವಿನ ನಡುವೆಯೂ, ಅವರು ನೀಡಿದ ಕೊಡುಗೆಗಳು ಹಾಗೂ ನೆನಪುಗಳು ಶಾಶ್ವತವಾಗಿ ಉಳಿಯಲಿವೆ.
ಇದನ್ನೂ ಓದಿ: ಕನ್ನಡ ಸಿನಿಮಾ, ‘ಮೀಟೂ’ ಗಲಾಟೆ, ಸಮಾಜಸೇವೆ: ನಾನಾ ಪಾಟೇಕರ್ ‘ಕ್ರಾಂತಿಕಾರಿ’ ಜೀವನ ಪಥ
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ