AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಉಡುಪಿ ಜಿಲ್ಲೆಯಲ್ಲಿ ಮತ್ತೆ ನಕ್ಸಲ್ ಚಟುವಟಿಕೆ ಶಂಕೆ: ಕಾರ್ಕಳದಲ್ಲಿ ಶೋಧ ಕಾರ್ಯಾಚರಣೆ

ಉಡುಪಿ ಜಿಲ್ಲೆಯ ಕಾರ್ಕಳದಲ್ಲಿ ಮತ್ತೆ ನಕ್ಸಲರ ಚಟುವಟಿಕೆ ಶುರುವಾಗಿರುವ ಬಗ್ಗೆ ಅನುಮಾನ ವ್ಯಕ್ತವಾಗಿದ್ದು, ನಕ್ಸಲ್​ ನಿಗ್ರಹ ಪಡೆ ಶೋಧ ಕಾರ್ಯ ಆರಂಭಿಸಿದೆ. ಡ್ರೋನ್, ಶ್ವಾನ ದಳದ ನೆರವಿನಿಂದ ಕಾರ್ಯಾಚರಣೆ ನಡೆಯುತ್ತಿದೆ. ಆದಾಗ್ಯೂ, ಈವರೆಗೆ ನಕ್ಸಲರ ಸುಳಿವು ಪತ್ತೆಯಾಗಿಲ್ಲ. ಆತಂಕಪಡುವ ಅಗತ್ಯವಿಲ್ಲ ಎಂದು ನಕ್ಸಲ್​ ನಿಗ್ರಹ ಪಡೆ ಹೇಳಿದೆ.

ಉಡುಪಿ ಜಿಲ್ಲೆಯಲ್ಲಿ ಮತ್ತೆ ನಕ್ಸಲ್ ಚಟುವಟಿಕೆ ಶಂಕೆ: ಕಾರ್ಕಳದಲ್ಲಿ ಶೋಧ ಕಾರ್ಯಾಚರಣೆ
ಸಾಂದರ್ಭಿಕ ಚಿತ್ರ
ಪ್ರಜ್ವಲ್ ಅಮೀನ್​, ಉಡುಪಿ
| Edited By: |

Updated on: Nov 08, 2024 | 12:04 PM

Share

ಉಡುಪಿ, ನವೆಂಬರ್ 8: ಉಡುಪಿ ಜಿಲ್ಲೆಯಲ್ಲಿ ಮತ್ತೆ ನಕ್ಸಲರ ಓಡಾಟದ ಬಗ್ಗೆ ಮಾಹಿತಿ ದೊರೆತಿದ್ದು, ಕಾರ್ಕಳ ತಾಲೂಕಿನ ಈದು ಗ್ರಾಮದಲ್ಲಿ ನಕ್ಸಲರ ಓಡಾಟದ ಶಂಕೆ ವ್ಯಕ್ತವಾಗಿದೆ. ಹೀಗಾಗಿ ನಕ್ಸಲ್​ ನಿಗ್ರಹ ಪಡೆ (ಎಎನ್​ಎಫ್) ಸಿಬ್ಬಂದಿ ಶೋಧ ಕಾರ್ಯಾಚರಣೆ ಆರಂಭಿಸಿದ್ದಾರೆ. ಈದು ಗ್ರಾಮದಲ್ಲಿ ಕೆಲ ದಿನಗಳಿಂದ ಅನುಮಾನಾಸ್ಪದ ವ್ಯಕ್ತಿಗಳ ಓಡಾಟದ ಬಗ್ಗೆ ಮಾಹಿತಿ ದೊರೆತಿತ್ತು. ಈ ಸಂಬಂಧ ಸ್ಥಳೀಯರ ಬಳಿ ಎಎನ್​ಎಫ್​​ ಮಾಹಿತಿ ಸಂಗ್ರಹಿಸಲು ಪ್ರಯತ್ನಿಸಿದೆ. ಆದರೆ, ನಕ್ಸಲ್​ ಓಡಾಟದ ಬಗ್ಗೆ ಸ್ಥಳೀಯರಿಂದ ಯಾವುದೇ ಮಾಹಿತಿ ಸಿಕ್ಕಿಲ್ಲ.

ಪಶ್ಚಿಮಘಟ್ಟದ ತಪ್ಪಲಿನಲ್ಲಿ ನಕ್ಸಲರು ನುಸುಳಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ. ಸದ್ಯ ಉಡುಪಿ, ದಕ್ಷಿಣ ಕನ್ನಡ ಜಿಲ್ಲೆ ವ್ಯಾಪ್ತಿಯ ಅರಣ್ಯ ಪ್ರದೇಶದಲ್ಲಿ ಶೋಧ ಕಾರ್ಯ ನಡೆಸಲಾಗುತ್ತಿದೆ. ನಕ್ಸಲ್​ ಬಗ್ಗೆ ಅರಣ್ಯವಾಸಿಗಳಿಂದಲೂ ಮಾಹಿತಿ ಸಂಗ್ರಹ ಕಾರ್ಯ ನಡೆಯುತ್ತಿದೆ. ಡ್ರೋಣ್​​​, ಶ್ವಾನದಳ ಸಿಬ್ಬಂದಿ ಬಳಸಿಕೊಂಡು ಶೋಧ ಕಾರ್ಯ ನಡೆಸಲಾಗುತ್ತಿದೆ.

ನಕ್ಸಲ್​ ಓಡಾಟದ ಬಗ್ಗೆ ಈವರೆಗೆ ಯಾವುದೇ ಸುಳಿವು ಪತ್ತೆಯಾಗಿಲ್ಲ. ಸಾರ್ವಜನಿಕರು ಆತಂಕಪಡುವುದು ಬೇಡ ಎಂದು ಎಎನ್​​ಎಫ್​​ ಅಧಿಕಾರಿಗಳು ಸ್ಥಳೀಯರಿಗೆ ಧೈರ್ಯ ತುಂಬಿದ್ದಾರೆ.

ಕಾರ್ಕಳದಲ್ಲಿ ಅತಿಥಿ ಶಿಕ್ಷಕಿ ಆತ್ಮಹತ್ಯೆ

ಮಾನಸಿಕ ಖಿನ್ನತೆಗೆ ಒಳಗಾಗಿದ್ದ ಅತಿಥಿ ಶಿಕ್ಷಕಿಯೊಬ್ಬರು ನವೆಂಬರ್ 6ರಂದು ಈದು ಗ್ರಾಮದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮೃತರನ್ನು ಈದು ಗ್ರಾಮದ ನಿವಾಸಿ ರಾಜೇಶ್ ಎಂಬವರ ಪತ್ನಿ ಪ್ರಸನ್ನ (29) ಎಂದು ಗುರುತಿಸಲಾಗಿದೆ. ಹೊಸ್ಮಾರ್ ಹೈಯರ್ ಪ್ರೈಮರಿ ಶಾಲೆಯಲ್ಲಿ ಅತಿಥಿ ಶಿಕ್ಷಕಿಯಾಗಿ ಕಾರ್ಯನಿರ್ವಹಿಸುತ್ತಿದ್ದರು.

ಇದನ್ನೂ ಓದಿ: ಫುಡ್ ಕಾಂಪಿಟಿಷನ್​ಗೆ ಲಗ್ಗೆ ಇಟ್ಟ ಭಾರತ: ಪ್ರಥಮ ಬಾರಿಗೆ ಅಡುಗೆ ವಿಭಾಗದಲ್ಲಿ ತಾಯ್ನಾಡಿಗೆ ಪ್ರಶಸ್ತಿ ತಂದುಕೊಟ್ಟ ದಕ್ಷಿಣ ಕನ್ನಡದ ಹರ್ಷವರ್ಧನ್

ಪ್ರಸನ್ನ ಅವರಿಗೆ 10 ತಿಂಗಳ ಹೆಣ್ಣು ಮಗುವಿದೆ. ಪತಿ ರಾಜೇಶ್ ಬೆಂಗಳೂರಿನ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದಾರೆ. ಪ್ರಸನ್ನ ತನ್ನ ಮಗುವಿನ ಆರೈಕೆಯ ಜವಾಬ್ದಾರಿಯಿಂದ ತನ್ನ ಕೆಲಸವನ್ನು ಪುನರಾರಂಭಿಸಲು ಸಾಧ್ಯವಾಗದ ಕಾರಣ ಖಿನ್ನತೆಯಿಂದ ಬಳಲುತ್ತಿದ್ದರು ಎಂದು ವರದಿಯಾಗಿದೆ. ಈ ಕುರಿತು ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕರ್ನಾಟಕದ  ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ