ಉಡುಪಿ: ದಾರಿ ತಪ್ಪಿ ಗಡಿಯೊಳಗೆ ನುಸುಳಿದ್ದ ಒಂಟಿ ಸಲಗ ಕೊನೆಗೂ ಸೆರೆ
ಉಡುಪಿ ಜಿಲ್ಲೆಯಲ್ಲಿ ಎರಡು ದಿನಗಳ ಕಾಲ ಆತಂಕ ಸೃಷ್ಟಿಸಿದ್ದ ಒಂಟಿ ಕಾಡಾನೆಯನ್ನು ಅರಣ್ಯ ಇಲಾಖೆಯ ಅಧಿಕಾರಿಗಳು ಯಶಸ್ವಿಯಾಗಿ ಸೆರೆ ಹಿಡಿದು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಿದ್ದಾರೆ. ಕುಂದಾಪುರ ತಾಲೂಕಿನ ಹೊಸಂಗಡಿ, ಸಿದ್ದಾಪುರ ಮತ್ತು ಕಮಲಶಿಲೆ ಗ್ರಾಮಗಳಲ್ಲಿ ಕಾಣಿಸಿಕೊಂಡಿದ್ದ ಈ ಆನೆಯನ್ನು ಹಿಡಿಯಲು ವಿಶೇಷ ಕಾರ್ಯಾಚರಣೆ ನಡೆಸಲಾಯಿತು. ಸದ್ಯ ಗ್ರಾಮಸ್ಥರ ಆತಂಕ ದೂರವಾಗಿದೆ.

ಉಡುಪಿ, ಜೂನ್ 07: ಜಿಲ್ಲೆಯ ಗಡಿಯನ್ನ ದಾಟಿ ಬಂದು ಆತಂಕ ಸೃಷ್ಟಿಸಿದ್ದ ಗಜರಾಜ (Elephant) ಕೊನೆಗೂ ಜಿಲ್ಲೆಯನ್ನ ಬೀಳ್ಕೊಟ್ಟಿದ್ದಾನೆ. ಎರಡು ದಿನಗಳ ಕಾಲ ಕಣ್ಣಿಗೆ ನಿದ್ದೆ ಬಿಟ್ಟು ಕಾರ್ಯಾಚರಣೆ ನಡೆಸಿದ್ದ ವಲಯ ಅರಣ್ಯ ಅಧಿಕಾರಿಗಳ ಶ್ರಮಕ್ಕೆ ಕೊನೆಗೂ ಫಲಸಿಕ್ಕಿದೆ. ರಣರೋಚಕ ಕಾರ್ಯಾಚರಣೆಗೆ ಉಡುಪಿ (Udupi) ಜಿಲ್ಲೆ ಸಾಕ್ಷಿಯಾಗಿದೆ.
ಜಿಲ್ಲೆಯ ಕುಂದಾಪುರ ತಾಲೂಕಿನ ಹೊಸಂಗಡಿ, ಸಿದ್ದಾಪುರ, ಕಮಲಶಿಲೆ ಭಾಗದಲ್ಲಿ ಎಂಟ್ರಿ ಕೊಟ್ಟಿದ್ದ ಒಂಟಿ ಸಲಗ, ಇಡೀ ಗ್ರಾಮದಲ್ಲಿ ಆತಂಕ ಹುಟ್ಟಿಸಿತ್ತು. ಯಾವುದೇ ಅಪಾಯಕಾರಿ ವರ್ತನೆ ಇಲ್ಲದಿದ್ದರೂ ಆತಂಕ ಸಹಜವಾಗಿಯೇ ಇತ್ತು. ಏಕೆಂದರೆ ಆನೆಯನ್ನ ಗ್ರಾಮದೊಳಗೆ ಕಂಡದ್ದೆ ಇದೇ ಮೊದಲು.
ಇದನ್ನೂ ಓದಿ: ಉಡುಪಿ: ಬೈಕ್ಗೆ ನಾಯಿ ಕಟ್ಟಿ ಎಳೆದೊಯ್ದ ವ್ಯಕ್ತಿ, ವಿಡಿಯೋ ವೈರಲ್, ಸಾರ್ವಜನಿಕರಿಂದ ಆಕ್ರೋಶ
ಹಾಸನ ಜಿಲ್ಲೆಯ ಭದ್ರ ವೈಲ್ಡ್ ಲೈಫ್ನಿಂದ ದಾರಿ ತಪ್ಪಿ ಶಿವಮೊಗ್ಗ ಜಿಲ್ಲೆಯ ಮೂಲಕ ಉಡುಪಿ ಜಿಲ್ಲೆಯ ಗಡಿಯೊಳಗೆ ನುಸುಳಿದ್ದ ಒಂಟಿ ಸಲಗ ಗ್ರಾಮದೊಳಗೆ ಓಡಾಡಿಕೊಂಡಿತ್ತು. ಕೊನೆಗೆ ಜನರ ಇರುವಿಕೆ ಹೆಚ್ಚಾದಂತೆ ಕಾಡಿನೊಳಗೆ ಅವಿತಿದ್ದ ಈ ಕಾಡಾನೆ ಅರಣ್ಯ ಅಧಿಕಾರಿಗಳ ನಿದ್ದೆಗೆಡಿಸಿತ್ತು. ಎಷ್ಟೇ ಹುಡುಕಾಡಿದರೂ ಆನೆ ಇರುವ ಸ್ಥಳ ಬಿಟ್ಟರೆ, ಆನೆಯ ಇರುವಿಕೆ ರಾತ್ರಿ ಮಾತ್ರ ಕಾಣಿಸುತ್ತಿತ್ತು. ಕೊನೆಗೆ ವಲಯ ಅರಣ್ಯ ಅಧಿಕಾರಿಗಳು ಒಂಟಿ ಸಲಗವನ್ನು ಸೆರೆ ಹಿಡಿಯುವ ಕಾರ್ಯಕ್ಕೆ ಮುಂದಾಗುತ್ತಾರೆ.
ಎರಡು ದಿನಗಳ ಕಾರ್ಯಾಚರಣೆಗೆ ಮುಂದಾದ ವನ್ಯಜೀವಿ ವಿಭಾಗ, ಅರಣ್ಯ ಇಲಾಖೆ, ಪೊಲೀಸ್ ಇಲಾಖೆ ಅಧಿಕಾರಿಗಳು, ಶಿವಮೊಗ್ಗ ಜಿಲ್ಲೆಯ ಸಕ್ರೆಬೈಲಿನ ಆನೆಬಿಡಾರದಿಂದ ಬಾಲಚಂದ್ರ, ಸೋಮಣ್ಣ ಮತ್ತು ಬಹದ್ದೂರ್ ಆನೆಗಳನ್ನು ಕರೆಸಿಕೊಂಡಿದ್ದಾರೆ. ಹೀಗೆ ಆನೆಗಳನ್ನ ಕರೆಸಿ ಅರವಳಿಕೆ ಚುಚ್ಚುಮದ್ದು ನೀಡಿ ಕಾಡಾನೆಯನ್ನು ಹತೋಟಿಗೆ ತಂದಿದ್ದಾರೆ.
ಇದನ್ನೂ ಓದಿ: ಮಂಗಳೂರು: ಅಬ್ಬರಿಸುತ್ತಿದೆ ಅರಬ್ಬೀ ಸಮುದ್ರ, ಕಡಲ್ಕೊರೆತ ಭೀತಿಯಲ್ಲಿ ತೀರದ ನಿವಾಸಿಗಳು
ಹೀಗೆ ಹತೋಟಿಗೆ ಬಂದ ಆನೆಯನ್ನ ಕ್ರೇನ್ ಮೂಲಕ ಎತ್ತಿ ಲಾರಿಯಲ್ಲಿ ಇಳಿಸಿ ಸಕ್ರೆಬೈಲಿಗೆ ಮೂರು ಆನೆಗಳ ಜೊತೆ ಕಳುಹಿಸಿಕೊಟ್ಟಿದ್ದಾರೆ. ಆ ಮೂಲಕ ಎರಡು ದಿನಗಳ ಆಪರೇಷನ್ ಒಂಟಿ ಸಲಗ ಯಶಸ್ವಿಯಾಗಿದ್ದು, ಸಿದ್ದಾಪುರ, ಕಮಲಶಿಲೆ, ಹೊಸಂಗಡಿ ನಿವಾಸಿಗಳು ಕೊನೆಗೂ ನಿಟ್ಟುಸಿರು ಬಿಟ್ಟಿದ್ದಾರೆ.
ಒಟ್ಟಾರೆ ಎರಡು ದಿನಗಳ ಕಾಲ ನಿದ್ದೆಗೆಡಿಸಿದ್ದ ಕಾಡಾನೆ ಕೊನೆಗೆ ಜಿಲ್ಲೆಯ ಬಿಟ್ಟು ಹೋಗಿದ್ದು, ಆತಂಕ ನಿವಾರಣೆಯಾಗಿದೆ. ಗ್ರಾಮಸ್ಥರು ವಲಯ ಅರಣ್ಯಾಧಿಕಾರಿಗಳಿಗೆ ಧನ್ಯವಾದ ಸಲ್ಲಿಸಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.