
ಬೆಂಗಳೂರು, ಫೆಬ್ರವರಿ 01: ಕೇಂದ್ರ ಸರ್ಕಾರದಿಂದ ಈ ಬಾರಿ ಸಮತೋಲನದ ಬಜೆಟ್ (Budget) ಮಂಡನೆ ಮಾಡಲಾಗಿದೆ. ಬಜೆಟ್ ಭಾಷಣದ ವೇಳೆ ಎಲ್ಲ ರಾಜ್ಯಗಳ ಹೆಸರು ಹೇಳಲು ಬರಲ್ಲ. ಕರ್ನಾಟಕ ರಾಜ್ಯಕ್ಕೆ ಸುಮಾರು 7 ಸಾವಿರ ಕೋಟಿ ರೂ. ಸಿಗಲಿದೆ. ಆದರೆ ರಾಜ್ಯದಲ್ಲಿರುವ ಕಾಂಗ್ರೆಸ್ ಸರ್ಕಾರ ಕ್ಯಾತೆ ತೆಗೆಯುತ್ತಿದೆ ಎಂದು ಬಿಜೆಪಿ ಸಂಸದ ಬಸವರಾಜ ಬೊಮ್ಮಾಯಿ ಕೇಂದ್ರ ಬಜೆಟ್ ಅನ್ನು ಸಮರ್ಥಿಸಿಕೊಂಡಿದ್ದಾರೆ.
ದೆಹಲಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಡಾಕ್ಯುಮೆಂಟ್ನಲ್ಲಿ ಎಲ್ಲ ರಾಜ್ಯಗಳ ಹೆಸರು ಬರಲಿದೆ. ರಾಜ್ಯದ ರೈಲ್ವೆ ಯೋಜನೆ, ಹೆದ್ದಾರಿ ಅಭಿವೃದ್ಧಿಗೆ ಅನುದಾನ ಸಿಗಲಿದೆ. ರಾಜ್ಯಗಳಿಗೆ ಬಡ್ಡಿರಹಿತ ಸಾಲ ನೀಡುವ ಯೋಜನೆ ಘೋಷಿಸಲಾಗಿದೆ ಎಂದಿದ್ದಾರೆ.
ಇದನ್ನೂ ಓದಿ: ಕೇಂದ್ರ ಬಜೆಟ್: ಕರ್ನಾಟಕಕ್ಕೆ ಬೆಟ್ಟದಷ್ಟು ನಿರೀಕ್ಷೆ, ಏನೇನು ಸಿಗಬಹುದು?
ದುಡಿಯುವ ಕೈಗಳಿಗೆ ಅನುಕೂಲಕರವಾದ ಬಜೆಟ್ ಮಂಡಿಸಲಾಗಿದೆ. ಬಡವರು, ಮಹಿಳೆಯರು, ಯುವಕರು, ದಲಿತರಿಗೆ ಅನುಕೂಲವಾಗಲಿದೆ. 16ನೇ ಹಣಕಾಸಿನ ಬಗ್ಗೆ ರಾಜ್ಯ ಸರ್ಕಾರ ಚಿಂತನೆ ಮಾಡಬೇಕು ಎಂದು ಹೇಳಿದ್ದಾರೆ.
ಬಿಜೆಪಿ ಸಂಸದ ಕೋಟ ಶ್ರೀನಿವಾಸ ಪೂಜಾರಿ ಹೇಳಿಕೆ ನೀಡಿದ್ದು, ವಿಕಸಿತ ಭಾರತ ಕಲ್ಪನೆಗೆ ಪೂರಕವಾದ ಬಜೆಟ್ ಮಂಡಿಸಲಾಗಿದೆ. ವೇತನದಾರರು, ಮಧ್ಯಮವರ್ಗಕ್ಕೆ 12 ಲಕ್ಷದವರೆ ತೆರಿಗೆಯಲ್ಲಿ ವಿನಾಯಿತಿ ಕ್ರಾಂತಿಕಾರಿ ನಿರ್ಧಾರ ಕೈಗೊಂಡಿದೆ. ಕಿಸಾನ್ ಕ್ರೆಡಿಟ್ ಕಾರ್ಡ್ ಸಾಲದ ಮಿತಿಯನ್ನು ಹೆಚ್ಚಳ ಮಾಡಲಾಗಿದೆ. ಬಡತನ ನಿರ್ಮೂಲನೆಗೆ ಕೇಂದ್ರ ಸರ್ಕಾರ ಸೂಕ್ತ ನಿರ್ಧಾರ ಕೈಗೊಂಡಿದೆ ಎಂದರು.
ಬಿಜೆಪಿ ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಪ್ರತಿಕ್ರಿಯಿಸಿದ್ದು, ಈ ಬಾರಿ ದೇಶದ ಸಮಗ್ರತೆಯ ಹಿತದೃಷ್ಟಿಯಿಂದ ಬಜೆಟ್ ಮಂಡಿಸಲಾಗಿದೆ. ಮಧ್ಯಮ ವರ್ಗ, ವೇತನದಾರರಿಗೆ 12 ಲಕ್ಷದವರೆಗೆ ತೆರಿಗೆ ವಿನಾಯಿತಿ ನೀಡಲಾಗುತ್ತಿದೆ. ಕಿಸಾನ್ ಕ್ರೆಡಿಟ್ ಕಾರ್ಡ್ ಮಿತಿ ಹೆಚ್ಚಿಸಿರುವುದು ಉತ್ತಮ ನಿರ್ಧಾರ ಎಂದಿದ್ದಾರೆ.
ಕೇಂದ್ರ ಸಚಿವ ವಿ.ಸೋಮಣ್ಣ ಪ್ರತಿಕ್ರಿಯಿಸಿದ್ದು, ಇದು ಆರ್ಥಿಕತೆಗೆ ಒತ್ತು ನೀಡುವ ಬಜೆಟ್. ರಸಗೊಬ್ಬರಕ್ಕೆ ಕೊರತೆಯಾಗಂತೆ ಯೋಜನೆ ರೂಪಿಸಲಾಗಿದೆ. ಜಲಜೀವನ್ ಮಿಷನ್ನಲ್ಲಿ ಶುದ್ಧ ಕುಡಿಯುವ ನೀರಿನ ಯೋಜನೆ. ಬಜೆಟ್ನಲ್ಲಿ ರೈಲ್ವೆ ಇಲಾಖೆಗೆ 2.60 ಲಕ್ಷ ಕೋಟಿ ಮೀಸಲಿಡಲಾಗಿದೆ. ರೈಲ್ವೆ ಸುರಕ್ಷತೆಗೆ ಹೆಚ್ಚಿನ ಹಣ ಮೀಸಲಾಡಲಾಗಿದೆ ಎಂದರು.
ವಂದೆ ಭಾರತ್ ಸ್ಲೀಪರ್ ರೈಲುಗಳ ಪರೀಕ್ಷಾರ್ಥ ಪ್ರಯೋಗ ನಡೆಯುತ್ತೆ. ಕರ್ನಾಟಕಕ್ಕೆ ಕಳೆದ ವರ್ಷ 7,559 ಕೋಟಿ ರೂ ಮೀಸಲಾಡಲಾಗಿತ್ತು. ಈ ಬಾರಿ 7,564 ಕೋಟಿ ರೂ. ಮೀಸಲಿಡಲಾಗಿದೆ. ಸಬ್ ಅರ್ಬನ್ ರೈಲಿಗೆ ಈ ಬಾರಿಯೂ 350 ಕೋಟಿ ರೂ. ನೀಡಲಾಗಿದೆ. ಕಾಂಗ್ರೆಸ್ನವರ ಅವಧಿಯಲ್ಲಿ ಏನು ಮಾಡಿದ್ದಾರೆ ಅನ್ನೋದನ್ನು ಹೇಳಲಿ ಎಂದು ಕಿಡಿಕಾರಿದ್ದಾರೆ.
ಬೆಂಗಳೂರಿನಲ್ಲಿ ಬಿಜೆಪಿ ಪ್ರಧಾನ ಕಾರ್ಯದರ್ಶಿ ಪಿ. ರಾಜೀವ್ ಮಾತನಾಡಿ, ಬಜೆಟ್ ವಿಕಸಿತ ಭಾರತವನ್ನು ಮತ್ತಷ್ಟು ಖಾತರಿಗೊಳಿಸಿದೆ. 2047ರ ಮುನ್ನೋಟ ಇರುವ ಬಜೆಟ್ ಇದು. ಭಾರತದಲ್ಲಿ ಮೊದಲ ಬಾರಿಗೆ 20% ಕ್ಯಾಪಿಟಲ್‌ಗೆ ಇಟ್ಟಿದ್ದಾರೆ. ಆರ್ಥಿಕ ಚಟುವಟಿಕೆ ಹೆಚ್ಚಾಗಲಿದೆ. ಎಲ್ಲರಿಗೂ ಉದ್ಯೋಗ, ಎಲ್ಲರ ಕೈಗೂ ಹಣ ಸಿಗಲಿದೆ. ಸಾಮಾಜಿಕವಾಗಿ ತುಳಿತಕ್ಕೆ ಒಳಗಾದವರನ್ನು ಮೇಲೆತ್ತುವ ಕೆಲಸ ಆಗಲಿದೆ. ಬಡವರನ್ನು ಮತ್ತಷ್ಟು ಆರ್ಥಿಕ ಸಬಲರನ್ನಾಗಿ ಮಾಡಲಾಗಿದೆ. ಕರ್ನಾಟಕ್ಕೆ ಎರಡೂವರೆ ಲಕ್ಷ ಕೋಟಿ ರೂ. ಹರಿದು ಬರಲಿದೆ ಎಂದು ತಿಳಿಸಿದ್ದಾರೆ.
ವಿಧಾನ ಪರಿಷತ್ ಸದಸ್ಯ ಎನ್. ರವಿಕುಮಾರ್ ಹೇಳಿಕೆ ನೀಡಿದ್ದು, ಕೇಂದ್ರ ಬಜೆಟ್ ಎಲ್ಲಾ ವಲಯಗಳಿಗೆ ಅನುಕೂಲವಾಗಿದೆ. ಬಜೆಟ್ ವಿಕಸಿತ ಭಾರತಕ್ಕೆ ದೊಡ್ಡ ಬೂಸ್ಟ್ ಕೊಟ್ಟಿದೆ. ಬೆಂಗಳೂರಿನ ಐಐಎಸ್ಸಿ ಅಭಿವೃದ್ಧಿಗೆ ಹಣ ಮೀಸಲಿಡಲಾಗಿದೆ. ಭದ್ರಾ ಮೇಲ್ದಂಡೆ ಯೋಜನೆಗೆ ಹಣ ಬಿಡುಗಡೆ ಮಾಡಿಲ್ಲ ಅಂತಾರೆ, ಇವರು ಯಾವ ಕಾಮಗಾರಿ ಮಾಡಿದ್ದಾರೆ? ಏನು ಕಾಮಗಾರಿ ಮಾಡುತ್ತಾರೋ ಅದಕ್ಕೆ ಹಣ ಬಿಡುಗಡೆ ಮಾಡುತ್ತಾರೆ. ಇದು ಕೃಷ್ಣಾ ಬೈರೇಗೌಡ, ಹೆಚ್.ಕೆ ಪಾಟೀಲ್ ಅವರಿಗೂ ಗೊತ್ತಿದೆ ಎಂದಿದ್ದಾರೆ.
ಇನ್ನು ಶಿವಮೊಗ್ಗದಲ್ಲಿ ಶಾಸಕ ಆರಗ ಜ್ಞಾನೇಂದ್ರ ಹೇಳಿಕೆ ನೀಡಿದ್ದು, ಇಡೀ ದೇಶ ಹೆಮ್ಮೆ ಪಡುವಂತಹ ಬಜೆಟ್ ಅನ್ನು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ನೀಡಿದ್ದಾರೆ. 10 ಲಕ್ಷ ರೂ. ವರೆಗಿನ ಆದಾಯಕ್ಕೆ ತೆರಿಗೆ ಮಿತಿ ಸಿಗಲಿದೆ ಎಂದುಕೊಂಡಿದ್ದೆವು. ಆದರೆ ಅದನ್ನು 12 ಲಕ್ಷ ರೂ. ಗೆ ಹೆಚ್ಚಿಸಿದ್ದಾರೆ. ಕ್ಯಾನ್ಸರ್ ಪೀಡಿತರಿಗೆ ಅನುಕೂಲವಾಗುವಂತಹ ಕ್ರಮವನ್ನು ಕೈಗೊಂಡಿದ್ದಾರೆ ಎಂದರು.
ಇದನ್ನೂ ಓದಿ: Union Budget 2025: ಕೇಂದ್ರ ಬಜೆಟ್ಗೆ ರಾಜ್ಯ ಕಾಂಗ್ರೆಸ್ ನಾಯಕರ ವಿರೋಧ, ರಾಜ್ಯಕ್ಕೆ ಚೊಂಬು ಸಿಕ್ಕಿದೆ ಎಂದ ಕೃಷ್ಣಭೈರೇಗೌಡ
ಕಿಸಾನ್ ಕಿಸಾನ್ ಕ್ರೆಡಿಟ್ ಮಿತಿಯನ್ನು 5 ಲಕ್ಷ ರೂ. ಗೆ ಹೆಚ್ಚಿಸಿದ್ದಾರೆ. ರೈತರ ಆದಾಯ ದ್ವಿಗುಣವಾಗಬೇಕು ಎಂಬ ಆಶಯಕ್ಕೆ ಇದು ಪೂರಕವಾಗಿದೆ. ಶಾಲೆಗಳಿಗೆ ಇಂಟರ್ನೆಟ್ ಸೌಲಭ್ಯ ನೀಡುವುದು ಶಿಕ್ಷಣ ಕ್ಷೇತ್ರಕ್ಕೆ ಹೆಚ್ಚಿನ ಅನುಕೂಲ ಆಗಲಿದೆ. ಬೀದಿಬದಿ ವ್ಯಾಪಾರಿಗಳಿಗೆ ಅನುಕೂಲವಾಗುವಂತ ಕ್ರಮವನ್ನು ಸರ್ಕಾರ ಘೋಷಿಸಿದೆ ಎಂದು ಹೇಳಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 4:34 pm, Sat, 1 February 25