Union Budget 2025: ಕೇಂದ್ರ ಬಜೆಟ್ಗೆ ರಾಜ್ಯ ಕಾಂಗ್ರೆಸ್ ನಾಯಕರ ವಿರೋಧ, ರಾಜ್ಯಕ್ಕೆ ಚೊಂಬು ಸಿಕ್ಕಿದೆ ಎಂದ ಕೃಷ್ಣಭೈರೇಗೌಡ
ಕೇಂದ್ರ ಸರ್ಕಾರದ 2024ನೇ ಸಾಲಿನ ಬಜೆಟ್ ಅನ್ನು ಕರ್ನಾಟಕ ರಾಜ್ಯದ ಕಾಂಗ್ರೆಸ್ ನಾಯಕರು ವಿರೋಧಿಸಿದ್ದಾರೆ.ಬಜೆಟ್ ರೈತ ವಿರೋಧಿ ಮತ್ತು ಬಿಹಾರ ಚುನಾವಣಾ ಪ್ರಣಾಳಿಕೆಯಂತಿದೆ ಎಂದು ಟೀಕಿಸಿದ್ದಾರೆ. ಭದ್ರಾ ಮೇಲ್ದಂಡೆ ಯೋಜನೆ ಸೇರಿದಂತೆ ಹಲವು ಪ್ರಮುಖ ಯೋಜನೆಗಳಿಗೆ ಅನುದಾನ ಘೋಷಿಸದಿರುವುದನ್ನು ಕಾಂಗ್ರೆಸ್ ನಾಯಕರು ಖಂಡಿಸಿದ್ದಾರೆ. ಕರ್ನಾಟಕದ ಜನರ ತೆರಿಗೆ ಹಣ ಬೇರೆ ರಾಜ್ಯಗಳ ಅಭಿವೃದ್ಧಿಗೆ ಬಳಕೆಯಾಗುತ್ತಿದೆ ಎಂಬ ಆರೋಪ ಕೇಳಿಬಂದಿದೆ.

ಬೆಂಗಳೂರು, ಫೆಬ್ರವರಿ 01: ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ (Niramala Sitaraman) ಅವರು 8ನೇ ಬಾರಿಗೆ ಬಜೆಟ್ (Budget) ಮಂಡಿಸಿದ್ದಾರೆ. ಆದರೆ, ಈ ಬಜೆಟ್ಗೆ ರಾಜ್ಯ ಕಾಂಗ್ರೆಸ್ (Congress) ನಾಯಕರು ವಿರೋಧ ವ್ಯಕ್ತಪಡಿಸಿದ್ದಾರೆ. ಇದು ಬಿಹಾರ ಚುನಾವಣೆಯ ಪ್ರಣಾಳಿಕೆ, ರೈತ ವಿರೋಧಿ ಬಜೆಟ್ ಎಂದು ಟೀಕಿಸಿದ್ದಾರೆ. ಕೇಂದ್ರದ ಬಜೆಟ್ ಕರ್ನಾಟಕದ ಪಾಲಿಗೆ ಕರಾಳವಾಗಿದೆ. ಕೇಂದ್ರದ ಬಜೆಟ್ನಿಂದ ರಾಜ್ಯದ ಯಾವುದೇ ಬೇಡಿಕೆ ಈಡೇರಿಲ್ಲ. ಕರ್ನಾಟಕ ರಾಜ್ಯಕ್ಕೆ ನ್ಯಾಯ ಕೊಡುವ ಕೆಲಸ ಆಗಿಲ್ಲ. ಕರ್ನಾಟಕ ರಾಜ್ಯದ ಜನರ ತೆರಿಗೆ ಬೇರೆ ರಾಜ್ಯದ ಪಾಲಾಗುತ್ತಿದೆ. ಬಿಹಾರ ರಾಜ್ಯಕ್ಕೆ ಐದಾರು ಯೋಜನೆಗಳನ್ನು ನೀಡಿದ್ದಾರೆ. ಹಾಗಾದರೆ ಕರ್ನಾಟಕದವರು ಕಡಲೆ ಬೀಜ ತಿನ್ನಬೇಕಾ? ಈ ಬಾರಿ ಕೇಂದ್ರದ ಬಜೆಟ್ನಲ್ಲಿ ರಾಜ್ಯಕ್ಕೆ ಚೊಂಬು ಸಿಕ್ಕಿದೆ ಎಂದು ಕಂದಾಯ ಸಚಿವ ಕೃಷ್ಣಭೈರೇಗೌಡ (Krishna Byre Gowda) ಆಕ್ರೋಶ ವ್ಯಕ್ತಪಡಿಸಿದರು.
ಭದ್ರಾ ಮೇಲ್ದಂಡೆ ಯೋಜನೆಗೆ ಒಂದು ಪೈಸೆ ಕೂಡ ನೀಡಿಲ್ಲ. ಕಲ್ಯಾಣ ಕರ್ನಾಟಕ, ಮಲೆನಾಡು ಕರ್ನಾಟಕಕ್ಕೆ ಏನೂ ನೀಡಿಲ್ಲ. ಬೆಂಗಳೂರು ನಗರ ಹೆಚ್ಚು ಉದ್ಯೋಗ ಅವಕಾಶ ನೀಡಿದೆ. ರಫ್ತಿನ ಮೂಲಕ ದೇಶಕ್ಕೆ ಹೆಚ್ಚಿನ ಆದಾಯ ನೀಡುತ್ತಿದೆ. ಆದರೆ ಬೆಂಗಳೂರಿಗೆ ಯಾವುದೇ ಅನುದಾನ ಘೋಷಿಸಿಲ್ಲ. ಸರ್ಕಾರದ ಪರವಾಗಿ ಇದನ್ನು ನಾನು ಖಂಡಿಸುತ್ತೇನೆ ಎಂದರು.
ಬಿಹಾರ ಚುನಾವಣೆಯ ಪ್ರಣಾಳಿಕೆ: ಹೆಚ್.ಕೆ. ಪಾಟೀಲ್
ಕಾನೂನು ಸಂಸದೀಯ ಸಚಿವ ಹೆಚ್.ಕೆ. ಪಾಟೀಲ್ (HK Patil) ಮಾತನಾಡಿ, ಈ ಬಜೆಟ್ ಬಿಹಾರ ಚುನಾವಣೆಯ ಪ್ರಣಾಳಿಕೆಯಾಗಿದೆ. ಸಾಕಷ್ಟು ನಿರೀಕ್ಷೆಗಳನ್ನು ಇಟ್ಟುಕೊಂಡಿದ್ದೇವು. ಆದರೆ, ನಮ್ಮ ನಿರೀಕ್ಷೆಯನ್ನು ಹುಸಿಗೊಳಿಸಿದ್ದಾರೆ. ಇದು ಸಂಪೂರ್ಣ ನಿರಾಶಾದಾಯಕ ಬಜೆಟ್ ಆಗಿದೆ ಎಂದರು.
ಕೃಷಿಕರಿಗೆ ಇರುವ ತೊಂದರೆ ಬಗ್ಗೆ ಗಮನಹರಿಸಿಲ್ಲ. ಮೈಕ್ರೋ ಫೈನಾನ್ಸ್ನಿಂದ ಜನರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಅದಕ್ಕೆ ಪರಿಹಾರ ಕೊಡಬೇಕು ಎಂಬ ಆಲೋಚನೆಯೂ ಬರಲಿಲ್ಲ. ಆಂಧ್ರ, ತೆಲಂಗಾಣ, ಕರ್ನಾಟಕದಲ್ಲಿ ಸಮಸ್ಯೆಯಾಗಿದೆ. ಆರ್ಬಿಐ ನೋಂದಾಯಿತ ಮೈಕ್ರೋ ಫೈನಾನ್ಸ್ಗಳಿಂದ ಆತ್ಮಹತ್ಯೆ ಮಾಡ್ಕೊಳ್ಳುವ ಪರಿಸ್ಥಿತಿ ಬರುತ್ತಿದೆ. ಇದರ ಬಗ್ಗೆ ಯಾವುದೇ ಚಕಾರ ಎತ್ತಿಲ್ಲ ಎಂದು ವಾಗ್ದಾಳಿ ಮಾಡಿದರು.
ಇದನ್ನೂ ಓದಿ: ನಿಮಗೆ ಎಷ್ಟು ವೇತನ ಇದ್ದರೆ ಎಷ್ಟು ಟ್ಯಾಕ್ಸ್? ಈಗೆಷ್ಟು ತೆರಿಗೆ ವಿನಾಯಿತಿ ಸಿಕ್ತು? ಇಲ್ಲಿದೆ ವಿವರ
ಇದೊಂದು ರೈತ ವಿರೋಧಿ ಬಜೆಟ್: ಕೆ.ಎನ್.ರಾಜಣ್ಣ
ಇದೊಂದು ರೈತ ವಿರೋಧಿ ಬಜೆಟ್ ಆಗಿದೆ. ಕಿಸಾನ್ ಕ್ರೆಡಿಟ್ ಕಾರ್ಡ್ ಲಿಮಿಟ್ ಅನ್ನು 5 ಲಕ್ಷ ರೂ.ಗೆ ಏರಿಸಿದ್ದಾರೆ. ನಮ್ಮ ರಾಜ್ಯದಲ್ಲಿ 2 ವರ್ಷ ಮುಂಚಿತವಾಗಿಯೇ ಏರಿಸಿದ್ದೇವೆ. ಪ್ರತಿ ವರ್ಷ ಕಿಸಾನ್ ಕಾರ್ಡ್‌ನಡಿ 5,560 ಕೋಟಿ ಬರುತ್ತಿತ್ತು. ಅನುಕೂಲ ಆಗದ ಯೋಜನೆ ಘೋಷಿಸುವುದು ಖಂಡನೀಯ. ಜನಪರವಾದ ಬಜೆಟ್ ಅಲ್ಲ, ದಕ್ಷಿಣ ಭಾರತಕ್ಕೆ ಅನ್ಯಾಯವಾಗಿದೆ. ರಾಜ್ಯದ ಕೇಂದ್ರ ಸಚಿವರೆಲ್ಲ ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂದು ವಾಗ್ದಾಳಿ ಮಾಡಿದರು.