ಸಿದ್ದರಾಮಯ್ಯ ರಾಜೀನಾಮೆ ಕೇಳಲು ಕಾಂಗ್ರೆಸ್ ಹೈಕಮಾಂಡ್‌ಗೆ ಮುಜುಗರ: ಜೋಶಿ ವ್ಯಂಗ್ಯ
ಸಿಎಂ ಸಿದ್ದರಾಮಯ್ಯ ವಿರುದ್ಧದ ಮುಡಾ ಹಗರಣದ ಸಂಬಂಧ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಸಿಎಂ ಸಿದ್ದರಾಮಯ್ಯ ಮತ್ತು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದು, ಸ್ವತಃ ಗಾಂಧಿ ಕುಟುಂಬಸ್ಥರೇ ಹಗರಣಗಳಲ್ಲಿ ಮುಳುಗಿದ್ದರಿಂದ ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ರಾಜೀನಾಮೆ ಕೇಳಲು ಕಾಂಗ್ರೆಸ್ ಹೈಕಮಾಂಡ್‌ಗೆ ಮುಜುಗರ ಎಂದು ಸಚಿವ ಜೋಶಿ ವ್ಯಂಗ್ಯವಾಡಿದ್ದಾರೆ. ಅಲ್ಲದೇ ಸಿದ್ದರಾಮಯ್ಯ ವಿರುದ್ಧ ಬಿಜೆಪಿ ಹೋರಾಟ ನಿಲ್ಲದು ಎಂದು ಸ್ಪಷ್ಟಪಡಿಸಿದ್ದಾರೆ.
ನವದೆಹಲಿ, (ಅಕ್ಟೋಬರ್ 16): ಇಡೀ ಕಾಂಗ್ರೆಸ್ ಪಕ್ಷವೇ (Congress Party) ಭೂ ಹಗರಣದಲ್ಲಿ ತೊಡಗಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ (Pralhad Joshi) ಆರೋಪಿಸಿದ್ದಾರೆ. ನವದೆಹಲಿಯಲ್ಲಿ ಇಂದು ಮಾಧ್ಯಮಗಳೊಂದಿಗೆ ಮಾತನಾಡಿರುವ ಜೋಶಿ, ಎಐಸಿಸಿ (AICC) ಅಧ್ಯಕ್ಷರ ಕುಟುಂಬ, ಮುಖ್ಯಮಂತ್ರಿ ಕುಟುಂಬ, ಸಚಿವರಾದಿಯಾಗಿ ಭೂ ಹಗರಣಗಳಲ್ಲಿ ಭಾಗಿಯಾಗಿದ್ದಾರೆ. ಕಾಂಗ್ರೆಸ್ ಪಕ್ಷದ ಹೈಕಮಾಂಡೇ ಸಂಪೂರ್ಣ ಭ್ರಷ್ಟಾಚಾರದಲ್ಲಿ ತೊಡಗಿದ್ದು, ಸೋನಿಯಾ, ರಾಹುಲ್ ಗಾಂಧಿದ್ವಯರು ಬೇಲ್ ಮೇಲೆ ಇದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮುಡಾ ಹಗರಣ ಮಾತ್ರವಲ್ಲ, ವಾಲ್ಮೀಕಿ ನಿಗಮದಲ್ಲಿ 89 ಕೋಟಿ ರೂಪಾಯಿ ಲಪಟಾಯಿಸಿದ್ದಾರೆ. ಇದಕ್ಕೆಲ್ಲಾ ಸಿಎಂ ಸಿದ್ದರಾಮಯ್ಯನವೇ ಉತ್ತರ ಕೊಡಬೇಕು ಮತ್ತು ಮಾಡಿದ ಅಪರಾಧಕ್ಕೆ ತಕ್ಕ ಬೆಲೆ ತೆರಬೇಕು ಎಂದರು.
ಸಿಎಂ ವಿರುದ್ಧದ ಮುಡಾ ಹಗರಣದಲ್ಲಿ ತನಿಖೆ ಅಗತ್ಯ ಎಂದು ಹೈಕೋರ್ಟ್ ಹೇಳಿದೆ. ಸಿಎಂ ಪ್ರಭಾವ ಇಲ್ಲದೆ, ಕುಟುಂಬಕ್ಕೆ ನಿವೇಶನ ಹಂಚಿಕೆಯಲ್ಲಿ ಮುಡಾ ಸ್ವಂತ ನಿರ್ಣಯ ಅಸಾಧ್ಯ. ಹಾಗಾಗಿ ಇದರ ತನಿಖೆ ಅವಶ್ಯಕ ಎಂದೇ ಕೋರ್ಟ್ ಹೇಳಿದೆ. ಇನ್ನು, ವಾಲ್ಮೀಕಿ ನಿಗಮದಲ್ಲೂ ಅಷ್ಟೇ, ಚುನಾವಣೆ ವೇಳೆ ಹಣಕಾಸು ಸಚಿವರೂ ಆಗಿರುವ ಸಿಎಂ ಗಮನಕ್ಕೆ ಬರದೇ ವಿವಿಧ ಬ್ಯಾಂಕ್ ಖಾತೆಗಳಿಗೆ ಕೋಟ್ಯಂತರ ರೂಪಾಯಿ ವರ್ಗಾವಣೆ ಸಾಧ್ಯವಿಲ್ಲ ಎಂದು ಹೇಳಿದರು.
ಇನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಬಿಜೆಪಿ ಹೋರಾಟ ನಿಲ್ಲದು. ಹಗರಣಗಳ ಹೊಣೆ ಹೊತ್ತು ಸಿದ್ದರಾಮಯ್ಯ ಅವರು ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಲೇಬೇಕು ಎಂದು ಪ್ರಲ್ಹಾದ್ ಜೋಶಿ ಆಗ್ರಹಿಸಿದರು.
ಸ್ವತಃ ಗಾಂಧಿ ಕುಟುಂಬಸ್ಥರೇ ಹಗರಣಗಳಲ್ಲಿ ಮುಳುಗಿರುವಾಗ ಸಿದ್ದರಾಮಯ್ಯನವರಿಗೆ ರಾಜೀನಾಮೆ ಕೇಳಲು ಅವರಿಗೆ ಮುಖವಿಲ್ಲ! ಸಿದ್ದರಾಮಯ್ಯನವರು ಮುಡಾ ಹಗರಣದ ಜೊತೆ ವಾಲ್ಮೀಕಿ ನಿಗಮದಲ್ಲಿ ರೂ. 89 ಕೋಟಿ ಲಪಟಾಯಿಸಿದ್ದಾರೆ. ಇದಕ್ಕೆಲ್ಲಾ ಅವರೇ ಉತ್ತರ ಕೊಡಬೇಕು, ಬೆಲೆ ತೆರಲೇಬೇಕು!
— Pralhad Joshi (@JoshiPralhad) October 16, 2024
ಇನ್ನು ಇದೇ ವಿಚಾರದ ಬಗ್ಗೆ ಟ್ವೀಟ್ ಮಾಡಿರುವ ಜೋಶೀ, ಸ್ವತಃ ಗಾಂಧಿ ಕುಟುಂಬಸ್ಥರೇ ಹಗರಣಗಳಲ್ಲಿ ಮುಳುಗಿರುವಾಗ ಸಿದ್ದರಾಮಯ್ಯನವರಿಗೆ ರಾಜೀನಾಮೆ ಕೇಳಲು ಅವರಿಗೆ ಮುಖವಿಲ್ಲ. ಸಿದ್ದರಾಮಯ್ಯನವರು ಮುಡಾ ಹಗರಣದ ಜೊತೆ ವಾಲ್ಮೀಕಿ ನಿಗಮದಲ್ಲಿ ರೂ. 89 ಕೋಟಿ ಲಪಟಾಯಿಸಿದ್ದಾರೆ. ಇದಕ್ಕೆಲ್ಲಾ ಅವರೇ ಉತ್ತರ ಕೊಡಬೇಕು, ಬೆಲೆ ತೆರಲೇಬೇಕು ಎಂದಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ