AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವಿದ್ಯಾರ್ಥಿನಿಯರ ಸಾವಿನ ಬಳಿಕ ಎಚ್ಚೆತ್ತ ಉತ್ತರ ಕನ್ನಡ ಜಿಲ್ಲಾಡಳಿತ: ಪ್ರವಾಸಿಗರ ಸುರಕ್ಷತೆಗೆ ವಿಶೇಷ ನಿಯಮ

ಉತ್ತರ ಕನ್ನಡ ಜಿಲ್ಲೆಯಲ್ಲಿ ಕಡಲ ತೀರದ ಅಪಾಯದ ಬಗ್ಗೆ ಮಾಧ್ಯಮಗಳು ವರದಿ ಮಾಡಿದ್ದರೂ, ಜಿಲ್ಲಾಡಳಿತ ನಿರ್ಲಕ್ಷ್ಯ ವಹಿಸಿತ್ತು. ಕೋಲಾರದ ವಿದ್ಯಾರ್ಥಿನಿಯರ ಸಾವಿನ ನಂತರ, ಜಿಲ್ಲಾಡಳಿತ ಎಚ್ಚೆತ್ತುಕೊಂಡು ಕಡಲ ತೀರಗಳಲ್ಲಿ ಸುರಕ್ಷತಾ ಕ್ರಮಗಳನ್ನು ಜಾರಿಗೆ ತರಲು ನಿರ್ಧರಿಸಿದೆ. ಆಯಾ ಪ್ರವಾಸಿ ತಾಣಕ್ಕೆ ವಿಶೇಷ ನಿಯಮ ಜಾರಿಗೆ ತಂದು ಪ್ರವಾಸಿಗರ ಸುರಕ್ಷತೆ ಕೈಗೊಳ್ಳಬೇಕೆಂದು ಡಿಸಿ ಖಡಕ್ ಸೂಚನೆ ನೀಡಿದ್ಧಾರೆ.

ವಿದ್ಯಾರ್ಥಿನಿಯರ ಸಾವಿನ ಬಳಿಕ ಎಚ್ಚೆತ್ತ ಉತ್ತರ ಕನ್ನಡ ಜಿಲ್ಲಾಡಳಿತ: ಪ್ರವಾಸಿಗರ ಸುರಕ್ಷತೆಗೆ ವಿಶೇಷ ನಿಯಮ
ವಿದ್ಯಾರ್ಥಿನಿಯರ ಸಾವಿನ ಬಳಿಕ ಎಚ್ಚೆತ್ತ ಉತ್ತರ ಕನ್ನಡ ಜಿಲ್ಲಾಡಳಿತ: ಪ್ರವಾಸಿಗರ ಸುರಕ್ಷತೆಗೆ ವಿಶೇಷ ನಿಯಮ
ಸೂರಜ್​, ಮಹಾವೀರ್​ ಉತ್ತರೆ
| Updated By: ಗಂಗಾಧರ​ ಬ. ಸಾಬೋಜಿ|

Updated on:Dec 22, 2024 | 9:45 PM

Share

ಉತ್ತರ ಕನ್ನಡ, ಡಿಸೆಂಬರ್ 22: ಕೆಟ್ಟ ಮೇಲೆ ಬುದ್ಧಿ ಬಂತು ಎಂಬ ಮಾತಿದೆ. ಕಡಲ ತೀರದ ಅಸುರಕ್ಷತೆ ಬಗ್ಗೆ ಮಾಧ್ಯಮದವರು ಎಷ್ಟೇ ಸುದ್ದಿ ಮಾಡಿದರೂ ಜಿಲ್ಲಾಡಳಿತ ಎಚ್ಚೆತ್ಕೊಂಡಿರಲಿಲ್ಲ. ಇತ್ತೀಚೆಗೆ ಕೊಲಾರ ಜಿಲ್ಲೆಯ ಅಮಾಯಕ ನಾಲ್ವರು ವಿದ್ಯಾರ್ಥಿನಿಯರು ಸಾವನಪ್ಪಿದಾಗ, ಜಿಲ್ಲಾ ಮಂತ್ರಿ ಸೇರಿದಂತೆ ಎಲ್ಲರನ್ನೂ ಕೋಲಾರ ಶಾಸಕ ಬಹಿರಂಗವಾಗಿ ತರಾಟೆಗೆ ತೆಗೆದುಕೊಂಡ ಬಳಿಕ ಎಚ್ಚೆತ್ತುಕೊಂಡಿರುವ ಉತ್ತರ ಕನ್ನಡ ಜಿಲ್ಲಾಡಳಿತ ಹೊಸ ನಿಯಮ ಜಾರಿಗೆ ತರಲು ಮುಂದಾಗಿದೆ.

ವಿದ್ಯಾರ್ಥಿನಿಯರ ಸಾವಿನ ಬಳಿಕ ಎಚ್ಚೆತ್ತ ಜಿಲ್ಲಾಡಳಿತ

ಎಲ್ಲಾ ವರ್ಗದ ಪ್ರವಾಸಿಗರಿಗೆ ನೆಚ್ಚಿನ ಜಿಲ್ಲೆ ಅಂದ್ರೆ ಅದು ಉತ್ತರ ಕನ್ನಡ. ಹಚ್ಚಹಸಿರು ಕಾಡು ಮತ್ತು ಕಾಡು ಪ್ರಾಣಿಗಳು ಹೀಗೆ ಪ್ರವಾಸಿಗರು ಬಯಸಿದ ಬಹುತೇಕ ತಾಣ ಸಿಗುವ ರಾಜ್ಯದ ಏಕೈಕ ಜಿಲ್ಲೆ ಅಂದ್ರೆ ಅದು ಉತ್ತರ ಕನ್ನಡ. ದೇಶ ವಿದೇಶಿಗರನ್ನ ಸೆಳೆಯುವ ಉತ್ತರ ಕನ್ನಡ ಜಿಲ್ಲೆಗೆ ಬರುವ ಪ್ರವಾಸಿಗರ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಲೆ ಇದೆ. ಹೀಗಾಗಿ ಪ್ರವಾಸಿಗರ ಸಂಖ್ಯೆಗೆ ಅನಗುಣವಾಗಿ ಸುರಕ್ಷತೆಯ ಬಗ್ಗೆ ಕ್ರಮಕೈಗೊಳ್ಳಬೇಕಿದ್ದ ಜಿಲ್ಲಾಡಳಿತ ಇಷ್ಟು ದಿನ ಕೈಕಟ್ಟಿ ಕುಳಿತಿತ್ತು. ಆದರೆ ಡಿಸೆಂಬರ್ 11 ರಂದು ಕೋಲಾರ ಜಿಲ್ಲೆಯ ಮುಳಬಾಗಿಲು ತಾಲೂಕಿನ ಕೊತ್ತುರು ಮುರಾರ್ಜಿ ದೇಸಾಯಿ ವಸತಿ ಶಾಲೆಯ ವಿದ್ಯಾರ್ಥಿನಿಯರು ಮುರುಡೇಶ್ವರ ಕಡಲ ತೀರದಲ್ಲಿ ಕೊಚ್ಚಿ ಹೋಗಿ ಸಾವನಪ್ಪಿದ ಬೆನ್ನಲ್ಲೇ ಮುರುಡೇಶ್ವರ ಕಡಲ ತೀರಕ್ಕೆ ಸಾರ್ವಜನಿಕರನ್ನ ಸಂಪೂರ್ಣ ನಿರ್ಬಂಧ ಹೇರಲಾಗಿದೆ.

ಇದನ್ನೂ ಓದಿ: ನಾಲ್ವರು ವಿದ್ಯಾರ್ಥಿಗಳ ಸಾವು ಬೆನ್ನಲ್ಲೇ ಮುರುಡೇಶ್ವರ ಕಡಲತೀರಕ್ಕೆ ಪ್ರವಾಸಿಗರಿಗೆ ನಿರ್ಬಂಧ

ಸದಾ ಪ್ರವಾಸಿಗರಿಂದ ತುಂಬಿರುತ್ತಿದ್ದ ಮುರುಡೇಶ್ವರ ಕಡಲ ತೀರ ಈಗ ಫುಲ್ ಖಾಲಿ ಖಾಲಿ ಹೊಡೆಯುತ್ತಿದೆ. ಪದೇ ಪದೇ ಅವಘಡಗಳು ಸಂಭವಿಸಿದಾಗಲೆಲ್ಲಾ ತಾತ್ಕಾಲಿಕ ಕಡಲ ತೀರ ಬಂದ ಮಾಡಿ ಮತ್ತೆ ಯಥಾವತ್ತಾಗಿ ಆರಂಭ ಮಾಡುತ್ತಿದ್ದರು. ಇದರ ಪರಿಣಾಮ ಪ್ರತಿ ಒಂದೆರಡು ತಿಂಗಳಿಗೊಮ್ಮೆ ಒಂದಿಬ್ಬರು ಪ್ರವಾಸಿಗರು ಸಾವನಪ್ಪುತ್ತಿದ್ದಾರೆ. ಸದ್ಯ ಪ್ರವಾಸಿಗರ ಸುರಕ್ಷತೆಯ ವಿಚಾರವನ್ನ ಗಂಭೀರವಾಗಿ ಪರಿಗಣಿಸಿರುವ ಜಿಲ್ಲಾಧಿಕಾರಿ ಲಕ್ಷ್ಮೀ ಪ್ರಿಯಾ, ಮುರುಡೇಶ್ವರ ಸೇರಿದಂತೆ ಜಿಲ್ಲೆಯ ಪ್ರಮುಖ ಕಡಲ ತೀರಗಳಲ್ಲಿ ಸರ್ವೇ ಮಾಡಿ ಅಪಾಯ ಹೊಂದಿರುವ ಮತ್ತು ಅಪಾಯವಲ್ಲದ ಜಾಗವನ್ನ ಗುರುತಿಸಿ ಪ್ರವಾಸಿಗರಿಗೆ ಅವಕಾಶ ಕಲ್ಪಿಸಲಾಗುವುದು ಎಂದು ತಿಳಿಸಿದ್ದಾರೆ.

ಇನ್ನೂ ವರ್ಷಾಂತ್ಯದ ಹಿನ್ನೆಲೆ ಜಿಲ್ಲೆಯ ಕಡಲ ತೀರ ಅಷ್ಟೆ ಅಲ್ಲ, ಇನ್ನೂಳಿದ ಪ್ರವಾಸಿತಾಣಗಳಿಗೂ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಭೇಟಿ ಕೊಡುವ ಸಾಧ್ಯತೆ ಇದೆ. ಹಾಗಾಗಿ ಕಳೆದ ಹತ್ತು ದಿನಗಳಿಂದ ಸರಣಿ ಸಭೆ ಮಾಡುತ್ತಿರುವ ಜಿಲ್ಲಾಧಿಕಾರಿ ಲಕ್ಷ್ಮೀ ಪ್ರಿಯಾ, ಅಪರ್ ಜಿಲ್ಲಾಧಿಕಾರಿ ಸೇರಿದಂತೆ ಕರಾವಳಿ ಕಾವಲು ಪಡೆ, ಪೊಲೀಸ್ ಇಲಾಖೆ, ಪ್ರವಾಸೋದ್ಯಮ ಇಲಾಖೆ ಹಾಗೂ ಕಂದಾಯ ಇಲಾಖೆ ಹಾಗೂ ಸಂಬಂಧ ಪಟ್ಟ ಸ್ಥಳಿಯ ಪಂಚಾಯತ ಅಧಿಕಾರಿಗಳ ಸೇರಿಸಿ ಒಂದು ಸಮಿತಿ ರಚನೆಗೆ ಮುಂದಾಗಿದ್ದಾರೆ. ಅವರ ಸಲಹೆ ಮೇರೆಗೆ ಆಯಾ ಪ್ರವಾಸಿ ತಾಣಕ್ಕೆ ವಿಶೇಷ ನಿಯಮ ಜಾರಿಗೆ ತಂದು ಪ್ರವಾಸಿಗರ ಸುರಕ್ಷತೆ ಕೈಗೊಳ್ಳಬೇಕೆಂದು ಖಡಕ್ ಸೂಚನೆ ನೀಡಿದ್ದಾರೆ.

ಇದನ್ನೂ ಓದಿ: ಪ್ರವಾಸ ತೆರಳಿದ್ದ ವಿದ್ಯಾರ್ಥಿನಿಯರು ಸಮುದ್ರ ಪಾಲು ಕೇಸ್​: ಮೂವರ ಮೃತದೇಹ ಪತ್ತೆ, ಸಿದ್ದರಾಮಯ್ಯ ಸಂತಾಪ

ಉತ್ತರ ಕನ್ನಡ ಜಿಲ್ಲೆಗೆ ಬರುವ ಪ್ರವಾಸಿಗರು ನಿಶ್ಚಿಂತೆಯಿಂದ ಜಿಲ್ಲೆಗೆ ಬಂದು ಹೋಗಲು ಜಿಲ್ಲಾಡಳಿತ ತಯಾರಿ ನಡೆಸಿದ್ದಾರೆ. ಆದರೆ ಜಿಲ್ಲಾಡಳಿತದ ಜೊತೆಗೆ ಬರುವ ಪ್ರವಾಸಿಗರು ಕೈ ಜೋಡಿಸಿ ಪ್ರವಾಸಿತಾಣಗಳಲ್ಲಿ ಮುನ್ನೆಚ್ಚರಿಕೆ ಕ್ರಮ ಕೈಗೊಂಡಾಗ ಮಾತ್ರ ಅನಾಹುತ ತಪ್ಪಿಸಲು ಸಾಧ್ಯ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 9:42 pm, Sun, 22 December 24