ಕಾರವಾರ, ನವೆಂಬರ್ 07: ಕೈಗೆ ಬಂದ ತುತ್ತು ಬಾಯಿಗೆ ಬರದ ಪರಿಸ್ಥಿತಿ ಉತ್ತರ ಕನ್ನಡ ಜಿಲ್ಲೆಯ ಜನರದ್ದಾಗಿದೆ. ಸರ್ಕಾರ ಕೆಲವು ವರ್ಷಗಳ ಬಳಿಕ ಬಡವರಿಗೆ ಮನೆಗಳನ್ನ ಮಂಜೂರು ಮಾಡಿದೆ. ಆದರೆ ಜಿಲ್ಲೆಯ ಮರಳುಗಾರಿಕೆ (sand) ಪ್ರಕರಣ ಕೋರ್ಟ್ ನಲ್ಲಿರುವುದರಿಂದ, ಜಿಲ್ಲೆಗೆ ಹೊರ ಜಿಲ್ಲೆಯ ಮರಳು ಬರಲು ಅವಕಾಶ ಕೊಡದ ಹಿನ್ನೆಲೆ, ಮನೆ ನಿರ್ಮಾಣ ಮಾಡುವುದು ಹೇಗೆ ಎಂಬ ಪ್ರಶ್ನೆ ಉಂಟಾಗಿದೆ.
ಸರ್ಕಾರ ವಸತಿ ಯೋಜನೆ ಅಡಿಯಲ್ಲಿ ನಿರಾಶ್ರಿತರಿಗೆ ಮಬೆ ನಿರ್ಮಾಣ ಕೊಡಲು ಮುಂದಾಗಿದೆ. ಸದ್ಯ ಫಲಾನುಭವಿಗಳ ಪಟದಟಿ ಕೂಡ ಬಿಡುಗಡೆ ಆಗಿದ್ದು, ಅರ್ಹ ಫಲಾನುಭವಿಗಳು ಹಂತ ಹಂತವಾಗಿ ಮನೆ ಕಟ್ಟಿಸಿದಂತೆ ಕಂತುಗಳಲ್ಲಿ ಹಣ ಖಾತೆಗೆ ಜಮೆ ಆಗುತ್ತೆ. ಆದರೆ ಜಿಲ್ಲೆಯಲ್ಲಿ ಮರಳು ಸಿಗದ ಹಿನ್ನೆಲೆ ಮನೆ ಕಟ್ಟಲು ಆಗದೆ ಕೈ ಕಟ್ಟಿ ಕುಳಿತುಕೊಳ್ಳುವ ಪರಿಸ್ಥಿತಿ ಉಂಟಾಗಿದೆ.
ಜಿಲ್ಲೆಯಲ್ಲಿ ಶರಾವತಿ, ಕಾಳಿ, ಅಘನಾಶಿನಿ ಹಾಗೂ ಗಂಗಾವಳಿ ನದಿಯಲ್ಲಿ ಸುಮಾರು ನೂರಕ್ಕೂ ಅಧಿಕ ಲೀಸ್ ದಾರರು ಮರಳನ್ನ ತೆಗೆಯುವ ಕೆಲಸ ಮಾಡುತ್ತಿದ್ದು, ಜಿಲ್ಲೆಯಲ್ಲಿ ಮರಳಿನ ಸಮಸ್ಯೆ ಆಗಿರಲಿಲ್ಲ. ಇನ್ನು ಉಡುಪಿಯ ವ್ಯಕ್ತಿಯೊಬ್ಬರು ರಾಷ್ಟ್ರಿಯ ಹಸಿರು ಪೀಠಕ್ಕೆ ಕರಾವಳಿಯ ಮರಳುಗಾರಿಕೆ ಬಗ್ಗೆ ಹೋಗಿದ್ದರಿಂದ ಸುಮಾರು ಎರಡು ವರ್ಷಕ್ಕೂ ಅಧಿಕ ಸಮಯ ಮರಳಿಲ್ಲದೇ ಜನರು ಪರದಾಡಿದ್ದರು. ಆದರೆ, ಕಳೆದ ವರ್ಷ ಮರಳುಗಾರಿಕೆಗೆ ಇದ್ದ ತೊಡಕು ಹೋಗಲಾಡಿಸಿ ಅವಕಾಶ ಕೊಟ್ಟಿದ್ದರು. ಸದ್ಯ ಹೊನ್ನಾವರದ ವ್ಯಕ್ತಿಯೋರ್ವರು ಎನ್.ಜಿ.ಟಿ ನ್ಯಾಯಾಲಯದ ಮೊರೆ ಹೋಗಿರುವುದರಿಂದ ಮರಳುಗಾರಿಕೆಯನ್ನ ನಿಲ್ಲಿಸಲಾಗಿದೆ. ಇದರಿಂದ ಸಣ್ಣಪುಟ್ಟ ಮನೆ ಕಟ್ಟುವವರಿಗೂ ಮರಳಿಲ್ಲದೇ ಜನರು ಪರದಾಡುವಂತಾಗಿದೆ.
ಇದನ್ನೂ ಓದಿ: ಬೇಲೆಕೇರಿ ಬಂದರಿನಲ್ಲಿರುವ ಗ್ರಾನೈಟ್ಗೆ ವಾರಸುದಾರರೇ ಇಲ್ಲ! ಹರಾಜಿನ ಮೂಲಕ ಖಜಾನೆ ತುಂಬಲು ಸರ್ಕಾರದ ಪ್ಲ್ಯಾನ್
ಸದ್ಯ ಮಳೆಗಾಲ ಮುಗಿದಿರುವುದರಿಂದ ಮನೆ ನಿರ್ಮಾಣ ಕಾರ್ಯ ಚುರುಕುಗೊಂಡಿದೆ. ಪ್ಲಾಸ್ಟ್ರಿಂಗ್ ಸೇರಿಂದಂತೆ ಎಲ್ಲಾ ಮನೆ ನಿರ್ಮಾಣ ಕೆಲಸಕ್ಕೆ ಮರಳು ಅನಿವಾರ್ಯವಾಗಿದ್ದು, ಆದರೆ ಮರಳು ಬೇಕು ಎಂದು ಜನರು ಹುಡುಕಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಹಿಂದೆ ಮೀಟರ್ ಮರಳು 1 ಸಾವಿರದಿಂದ 1200 ರೂಪಾಯಿಗೆ ಮಾರಾಟ ಮಾಡಲಾಗುತ್ತಿತ್ತು. ಸದ್ಯ ಮರಳು ಬಂದ್ ಇರುವ ಹಿನ್ನೆಲೆಯಲ್ಲಿ ಕದ್ದು ಮುಚ್ಚಿ ಮರಳು ತೆಗೆದುಕೊಳ್ಳುವಂತಾಗಿದ್ದು, ಅದು ಮೀಟರ್ ಮರಳಿಗೆ 2 ಸಾವಿರ ರೂ. ಗಡಿ ದಾಟಿದೆ. ಇನ್ನೊಂದೆಡೆ ನದಿಯ ದಡದಲ್ಲಿ ಇದ್ದ ಮರಳನ್ನ ತೆಗೆದು ಸಣ್ಣಪುಟ್ಟ ಮನೆ ಕಟ್ಟುವವರಿಗೆ ಕೊಡುವ ಕೆಲಸವನ್ನ ಕೆಲವರು ಮಾಡುತ್ತಿದ್ದರು. ಆದರೆ ಇದಕ್ಕೂ ಪೊಲೀಸರು ಬಂದ್ ಮಾಡಿಸಿದ್ದು ಸದ್ಯ ಮರಳಿಗಾಗಿ ಜನರು ಪರದಾಟ ನಡೆಸುವಂತಾಗಿದೆ.
ಇನ್ನು ಕಳೆದ ಒಂದು ತಿಂಗಳಿನಿಂದ ಜಿಲ್ಲೆಯಲ್ಲಿ ಮರಳಿನ ಸಮಸ್ಯೆ ಮಿತಿ ಮೀರಿದ್ದು, ಎಂ ಸ್ಯಾಂಡ್ ಸಹ ಸಿಗದೇ ಇರುವ ನಿಟ್ಟಿನಲ್ಲಿ ಮನೆಗಳನ್ನ ಕಟ್ಟುವ ಕೆಲಸವೇ ನಿಲ್ಲಿಸುವ ಪರಿಸ್ಥಿತಿ ಬಂದಿತ್ತು. ಸರ್ಕಾರ ಅಧಿಕೃತವಾಗಿಯೂ ಅನುಮತಿ ಕೊಡುವುದಿಲ್ಲ. ಅನಧಿಕೃತವಾಗಿ ಮರಳು ತೆಗೆದುಕೊಳ್ಳಲು ಪೊಲೀಸರು ಬಿಡುತ್ತಿಲ್ಲ. ಇದರಿಂದ ಜನರು ಪರದಾಡುವಂತಾಗಿದೆ ಎನ್ನುವುದು ಮನೆ ಕಟ್ಟುವವರು ಅಳಲಾಗಿದೆ. ಈ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ ಅವರನ್ನು ಕೇಳಿದರೆ, ಬಿಜೆಪಿಯವರೇ ಮರಳು ವಿಚಾರದಲ್ಲಿ ನ್ಯಾಯಾಲಯಕ್ಕೆ ಹೋಗಿದ್ದು ಇದರಿಂದ ಸಮಸ್ಯೆ ಆಗಿದೆ ಎಂದು ರಾಜಕೀಯ ಮಾತನಾಡುತ್ತಿದ್ದಾರೆ.
ಇದನ್ನೂ ಓದಿ: ಹಾಳು ಕೊಂಪೆಯಂತಾದ ಬೇಲೆಕೇರಿ ಬಂದರು: ಸೀಜ್ ಆದ ಕಬ್ಬಿಣ ಅದಿರಿನಲ್ಲಿ ಬೆಳೆಯಿತು ಗಿಡ ಗಂಟಿ
ಸದ್ಯ ಜಿಲ್ಲಾಡಳಿತದ ಅಧಿಕಾರಿಗಳಿಗೆ, ಪೊಲೀಸ್ ಇಲಾಖೆಯ ಅಧಿಕಾರಿಗಳಿಗೆ ಮರಳಿನ ಸಮಸ್ಯೆ ಹೆಚ್ಚಾಗಿರುವುದರಿಂದ ಜನರು ಹಿಡಿಶಾಪ ಹಾಕುವಂತಾಗಿದ್ದು, ಸರ್ಕಾರವೇ ಈ ಬಗ್ಗೆ ಗಮನಹರಿಸಿ ಉತ್ತರ ಕನ್ನಡ ಜಿಲ್ಲೆಯಲ್ಲಿ ಮರಳುಗಾರಿಕೆಗೆ ಅಧಿಕೃತ ಅನುಮತಿ ಕೊಡಲು ಕ್ರಮ ಕೈಗೊಳ್ಳಬೇಕಾಗಿದೆ. ಇಲ್ಲದಿದ್ದರೇ ಸರ್ಕಾರಿ ಕಟ್ಟಡಗಳಿಂದ ಹಿಡಿದು ಸಣ್ಣಪುಟ್ಟ ಮನೆ ಕಟ್ಟುವವರು ಜಿಲ್ಲೆಯಲ್ಲಿ ಮರಳಿಗಾಗಿ ಪರದಾಟ ನಡೆಸುವುದು ಹೆಚ್ಚಾಗಲಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.