ಹಾಳು ಕೊಂಪೆಯಂತಾದ ಬೇಲೆಕೇರಿ ಬಂದರು: ಸೀಜ್ ಆದ ಕಬ್ಬಿಣ ಅದಿರಿನಲ್ಲಿ ಬೆಳೆಯಿತು ಗಿಡ ಗಂಟಿ
ಬೆಂಗಳೂರಿನ ಜನಪ್ರತಿನಿಧಿಗಳ ನ್ಯಾಯಾಲಯವು ಕಾಂಗ್ರೆಸ್ ಶಾಸಕ ಸತೀಶ್ ಸೈಲ್ ಮತ್ತು ಇತರರಿಗೆ ಬೇಲೆಕೇರಿ ಬಂದರಿನ ಮೂಲಕ ಕಬ್ಬಿಣದ ಅದಿರು ಅಕ್ರಮ ಸಾಗಾಟ ಮಾಡಿದ್ದ ಪ್ರಕರಣದಲ್ಲಿ 7 ವರ್ಷಗಳಿಗೂ ಹೆಚ್ಚು ಜೈಲು ಶಿಕ್ಷೆ ಮತ್ತು 44 ಕೋಟಿಗೂ ಹೆಚ್ಚು ದಂಡ ವಿಧಿಸಿದೆ. ಈ ಪ್ರಕರಣದಿಂದಾಗಿ, ಒಂದು ಕಾಲದಲ್ಲಿ ಚಟುವಟಿಕೆಯ ತಾಣವಾಗಿದ್ದ ಬೇಲೆಕೇರಿ ಬಂದರು ಇಂದು ಅನಾಥವಾಗಿದೆ. ಮುಟ್ಟುಗೋಲು ಹಾಕಿಕೊಂಡಿದ್ದ ಲಕ್ಷಾಂತರ ಟನ್ ಅದಿರು ಸಮುದ್ರಕ್ಕೆ ಸೇರಿ ಹಾಳಾಗುತ್ತಿದೆ.
ಕಾರವಾರ, ಅಕ್ಟೋಬರ್ 28: ಬೇಲೆಕೇರಿ ಬಂದರಿನಿಂದ ಕಬ್ಬಿಣದ ಅದಿರು ಅಕ್ರಮ ಸಾಗಾಟ ಪ್ರಕರಣ ಸಂಬಂಧ ಕಾಂಗ್ರೆಸ್ ಶಾಸಕ ಸತೀಶ್ ಸೈಲ್ ಹಾಗೂ ಇತರ ಅಪರಾಧಿಗಳಿಗೆ ಬೆಂಗಳೂರಿನ ಜನ ಪ್ರತಿನಿಧಿಗಳ ನ್ಯಾಯಾಲಯ 7 ವರ್ಷಗಳಿಗೂ ಹೆಚ್ಚು ಜೈಲು ಶಿಕ್ಷೆ ಮತ್ತು 44 ಕೋಟಿ ರೂಪಾಯಿಗೂ ಹೆಚ್ಚು ದಂಡ ವಿಧಿಸಿದೆ. ಮತ್ತೊಂದೆಡೆ, ಪ್ರಕರಣದ ಪ್ರಮುಖ ಕೇಂದ್ರಬಿಂದುವಾಗಿದ್ದ ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಬೇಲೆಕೇರಿ ಬಂದರು ಇದೀಗ ಅನಾಥವಾಗಿದೆ. ಒಂದು ಕಾಲದಲ್ಲಿ ಕೊಟ್ಯಂತರ ರೂಪಾಯಿ ವ್ಯವಹಾರ ಮಾಡಿದ್ದ ಬೇಲೆಕೇರಿ ಬಂದರು ಇದೀಗ ಹಾಳು ಕೊಂಪೆಯಂತಾಗಿದೆ.
14 ವರ್ಷಗಳ ಹಿಂದೆ ತನಿಖಾ ಸಂಸ್ಥೆಗಳು ಮುಟ್ಟುಗೋಲು ಹಾಕಿಕೊಂಡಿದ್ದ ಕೊಟ್ಯಂತರ ರೂಪಾಯಿ ಮೌಲ್ಯದ ಕಬ್ಬಿಣದ ಅದಿರು ಸಮುದ್ರ ಪಾಲಾಗುತ್ತಿದೆ. ಬೇಲೆಕೇರಿ ಬಂದಿರಿನಲ್ಲಿ ಮುಟ್ಟುಗೋಲು ಹಾಕಿಕೊಳ್ಳಲಾದ ಸುಮಾರು 2 ಲಕ್ಷ ಮೇಟ್ರಿಕ್ ಟನ್ ಕಬ್ಬಿಣದ ಅದಿರು ಇದೆ. ಅದಿರಿನ ಗುಡ್ಡೆಯ ಮೇಲೆ ಹಾಕಿದ್ದ ಟಾರ್ಪಲ್ ಬಿಸಿಲಿನ ಶಾಖಕ್ಕೆ ಹರಿದು ಹೋಗಿ ಹಾಳಾಗಿದೆ. ಕಬ್ಬಿಣದ ಅದಿರಿನ ಗುಡ್ಡೆಯಲ್ಲಿ ಈಗ ಗಿಡ ಗಂಟಿಗಳು ಬೆಳೆದು ನಿಂತಿವೆ. ಸಮುದ್ರಕ್ಕೆ ಅಂಟಿಕೊಂಡು ಗುಡ್ಡೆಹಾಕಿರುವ ಅದಿರು ಸಮುದ್ರ ಪಾಲಾಗುತ್ತಿವೆ.
ಇದನ್ನೂ ಓದಿ: ಸತೀಶ್ ಸೈಲ್ಗೆ ಜೈಲು ಶಿಕ್ಷೆ: ಯಾವ ಪ್ರಕರಣದಲ್ಲಿ ಎಷ್ಟು ಶಿಕ್ಷೆ? ಇಲ್ಲಿದೆ ವಿವರ
ಒಟ್ಟು 8 ಲಕ್ಷ ಮೇಟ್ರಿಕ್ ಟನ್ ಮುಟ್ಟುಗೋಲು ಹಾಕಿಕೊಳ್ಳಲಾಗಿತ್ತು. ಆ ಪೈಕಿ ಸದ್ಯ 2 ಲಕ್ಷ ಮೆಟ್ರಿಕ್ ಟನ್ ಅದಿರು ಬಂದರಿನಲ್ಲಿದೆ ಎನ್ನಲಾಗಿದೆ. ಬಂದರಿನ ಮುಖ್ಯ ದ್ವಾರವನ್ನೂ ಸಹ ಪೂರ್ತಿಯಾಗಿ ಸೀಜ್ ಮಾಡಲಾಗಿದ್ದು, ಸಣ್ಣ ಕಿಂಡಿಯ ಮೂಲಕ ಬಂದರಿನ ಒಳಗೆ ಹೊಗಲು ಮಾತ್ರ ಅವಕಾಶವಿದೆ.
ಸದ್ಯ ಬೇಲೆಕೇರಿ ಬಂದರು ಹವ್ಯಾಸಿ ಮೀನುಗಾರರು ಹಾಗೂ ಯುವಕ ಯುವತಿಯರ ನೆಚ್ಚಿನ ತಾಣವಾಗಿದೆ.
ಇದನ್ನೂ ಓದಿ: ಬೇಲೆಕೇರಿ ಅದಿರು ಅಕ್ರಮ: ಸತೀಶ್ ಸೈಲ್ ಪಾತ್ರವೇನು? 14 ವರ್ಷ ಹಿಂದಿನ ಪ್ರಕರಣದ ಸಮಗ್ರ ಮಾಹಿತಿ ಇಲ್ಲಿದೆ
ಬೇಲೆಕೇರಿ ಬಂದರಿನಿಂದ ಅಕ್ರಮವಾಗಿ ಅದಿರು ಸಾಗಾಟ ಮಾಡಿದ ಆರೋಪ ಸಾಬೀತಾದ್ದರಿಂದ ಕಾಂಗ್ರೆಸ್ ಶಾಸಕ ಸತೀಶ್ ಸೈಲ್ ಹಾಗೂ ಇತರ ಆರೋಪಿಗಳನ್ನು ಬೆಂಗಳೂರಿನ ಜನಪ್ರತಿನಿಧಿಗಳ ನ್ಯಾಯಾಲಯ ದೋಷಿಗಳು ಎಂದು ಇತ್ತೀಚೆಗೆ ತೀರ್ಪು ನೀಡಿತ್ತು. ಶಿಕ್ಷೆಯ ಪ್ರಮಾಣವನ್ನು ಶನಿವಾರ ಪ್ರಕಟಿಸಲಾಗಿತ್ತು. ಸತೀಶ್ ಸೈಲ್ಗೆ ಒಳಸಂಚಿನ ಅಪರಾಧಕ್ಕೆ 5 ವರ್ಷ, ವಂಚನೆಗೆ 7 ವರ್ಷ, ಕಳ್ಳತನಕ್ಕೆ 3 ವರ್ಷ ಜೈಲು ಶಿಕ್ಷೆ ಪ್ರಕಟಿಸಲಾಗಿತ್ತು. ಒಟ್ಟು ಆರು ಪ್ರಕರಣಗಳಲ್ಲಿ 44 ಕೋಟಿ ರೂಪಾಯಿಗೂ ಹೆಚ್ಚು ದಂಡ ವಿಧಿಸಿತ್ತು. ಬಳ್ಳಾರಿ, ಹೊಸಪೇಟೆ, ಸಂಡೂರು, ಚಿತ್ರದುರ್ಗದ ಅರಣ್ಯ ಪ್ರದೇಶಗಳಿಂದ ಅಕ್ರಮವಾಗಿ ಅದಿರು ಸಾಗಾಟ ಮಾಡಿದ್ದ ಪ್ರಕರಣ ಇದಾಗಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ