ನೌಕಾನೆಲೆಗಾಗಿ ಭೂಮಿ ಕಳೆದುಕೊಂಡವರ ಪರದಾಟ: ಯಾರು ಕೇಳೋರಿಲ್ಲ ದೇಶದ ರಕ್ಷಣೆಗೆ ಭೂಮಿ ಕೊಟ್ಟವರ ಸಂಕಟ

Karwar News: ದೇಶದ ರಕ್ಷಣೆಗಾಗಿ ತಮ್ಮ ಸರ್ವಸ್ವವನ್ನೇ ತ್ಯಾಗ ಮಾಡಿ ಜಮೀನು ಬಿಟ್ಟುಕೊಟ್ಟ ಕುಟುಂಬಗಳ ಗೋಳನ್ನು ಕೇಳುವವರೇ ಇಲ್ಲದಂತಾಗಿದೆ. ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಅರಗಾ ಬಳಿ ಕದಂಬ ನೌಕಾನೆಲೆ ನಿರ್ಮಾಣಕ್ಕಾಗಿ ತಮ್ಮ ಫಲವತ್ತಾದ ಭೂಮಿಯನ್ನು ತ್ಯಾಗ ಮಾಡಿದ 400ಕ್ಕೂ ಹೆಚ್ಚು ಕುಟುಂಬಗಳು, ಇಂದು ಕನಿಷ್ಠ ಮೂಲಭೂತ ಸೌಕರ್ಯಗಳೂ ಇಲ್ಲದೆ ನರಕಯಾತನೆ ಅನುಭವಿಸುತ್ತಿವೆ.

ನೌಕಾನೆಲೆಗಾಗಿ ಭೂಮಿ ಕಳೆದುಕೊಂಡವರ ಪರದಾಟ: ಯಾರು ಕೇಳೋರಿಲ್ಲ ದೇಶದ ರಕ್ಷಣೆಗೆ ಭೂಮಿ ಕೊಟ್ಟವರ ಸಂಕಟ
ಮೂಲಭೂತ ಸೌಕರ್ಯಗಳ ಕೊರತೆ
Image Credit source: tv9 kannada
Edited By:

Updated on: Aug 21, 2026 | 10:24 PM

ಕಾರವಾರ, ಆಗಸ್ಟ್​ 21: ಉತ್ತರ ಕನ್ನಡ ಜಿಲ್ಲೆಯಲ್ಲಿ (uttara kannada) ದೇಶದ ರಕ್ಷಣೆಗೆ ಭೂಮಿ ಕೊಟ್ಟ ಕುಟುಂಬಗಳ ಗೋಳು ಕೇಳುವವರಿಲ್ಲದಂತಾಗಿದೆ. ಕದಂಬ ನೌಕಾನೆಲೆಗಾಗಿ ಭೂಮಿ ಕಳೆದುಕೊಂಡು ಪುನರ್ವಸತಿ ಕಾಲೋನಿಯಲ್ಲಿ ಬದುಕುತ್ತಿರುವ 400ಕ್ಕೂ ಹೆಚ್ಚು ಕುಟುಂಬಗಳು ಇಂದು ಮೂಲಭೂತ ಸೌಕರ್ಯಗಳಿಗಾಗಿ ಪರದಾಡುತ್ತಿವೆ. ಮೂರು ದಶಕ ಕಳೆದರೂ ರಸ್ತೆ, ಕುಡಿಯುವ ನೀರು ಮಾತ್ರವಲ್ಲ, ಗೌರವಯುತ ಅಂತ್ಯಸಂಸ್ಕಾರಕ್ಕೂ ಸೂಕ್ತ ಸ್ಮಶಾನ ಇಲ್ಲದ ಸ್ಥಿತಿ ನಿರ್ಮಾಣವಾಗಿದೆ.

ಮೂರು ದಶಕ ಕಳೆದರೂ ಸಿಗದ ಕನಿಷ್ಠ ಮೂಲಭೂತ ಸೌಲಭ್ಯ 

ದೇಶದ ರಕ್ಷಣೆಗೆ ಕಾರವಾರದ ಅರಗಾ ಎಂಬಲ್ಲಿ ಕದಂಬ ನೌಕಾನೆಲೆ ನಿರ್ಮಾಣವಾಗಬೇಕಿತ್ತು. ಅದಕ್ಕಾಗಿ ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಹಟ್ಟಿಕೇರಿ ಸೀಬರ್ಡ್ ನಿರಾಶ್ರಿತರ ಪುನರ್ವಸತಿ ಕಾಲೋನಿಯಲ್ಲಿನ ಕುಟುಂಬಗಳು ತಮ್ಮ ಜಮೀನು ಕಳೆದುಕೊಂಡರು. ಆ ಸಂದರ್ಭ ಭೂಮಿ ಕಳೆದುಕೊಂಡವರಿಗೆ ಸರ್ಕಾರವೇ ಪುನರ್ವಸತಿ ಕಾಲೋನಿ ನಿರ್ಮಿಸಿ, ಅಗತ್ಯ ಸೌಲಭ್ಯ ಕಲ್ಪಿಸುವ ಭರವಸೆ ನೀಡಿತ್ತು. ಆದರೆ ಕಾಲೋನಿ ನಿರ್ಮಾಣವಾಗಿ ಬರೋಬ್ಬರಿ ಮೂರು ದಶಕ ಕಳೆದರೂ ಕನಿಷ್ಠ ಮೂಲಭೂತ ಸೌಕರ್ಯವೇ ಕಲ್ಪಿಸಿಲ್ಲ ಎಂಬುದು ಇಲ್ಲಿನ ನಿವಾಸಿಗಳ ಆರೋಪ.

ಸಾವಿನಲ್ಲೂ ಸಿಗದ ಶಾಂತಿ: ಮಳೆ ನೀರಿನಲ್ಲಿ ಕೊಚ್ಚಿಹೋಗುತ್ತೆ ಚಿತಾಭಸ್ಮ!

ಇಲ್ಲಿನ ರಸ್ತೆಗಳ ಸ್ಥಿತಿ ನೋಡಿದರೆ ಅಭಿವೃದ್ಧಿ ಎಷ್ಟರಮಟ್ಟಿಗೆ ಆಗಿದೆ ಅನ್ನೋದು ಗೊತ್ತಾಗುತ್ತೆ. ಹದಗೆಟ್ಟ ರಸ್ತೆ, ಬೇಸಿಗೆ ಆರಂಭವಾಗುತ್ತಿದ್ದಂತೆ ಎದುರಾಗುವ ಕುಡಿಯುವ ನೀರಿನ ಸಮಸ್ಯೆ ಇಲ್ಲಿ ಮಾಮೂಲು ಎಂಬಂತೆ ಆಗಿದೆ. ಇನ್ನು‌ ಈ ಕಾಲೋನಿ ಜನರ ನೋವಿಗೆ ಮತ್ತೊಂದು ದೊಡ್ಡ ಸಾಕ್ಷಿ ಇಲ್ಲಿನ ಸ್ಮಶಾನ. ಸ್ಮಶಾನಕ್ಕೆಂದು ಜಾಗವಿದ್ದರೂ, ಎದುರು ಒಂದು ಗೋಡೆ ಮತ್ತು ಗೇಟ್ ಬಿಟ್ಟರೆ ಬೇರೆ ಯಾವುದೇ ವ್ಯವಸ್ಥೆ ಇಲ್ಲ. ಮಳೆ ಬಂದಾಗ ಅಂತ್ಯಸಂಸ್ಕಾರ ನಡೆಸುವುದೇ ಕಷ್ಟ. ಸುಟ್ಟ ಬೂದಿ, ಕಳೇಬರದ ಅವಶೇಷಗಳು ಮಳೆ ನೀರಿನಲ್ಲಿ ಕೊಚ್ಚಿಹೋಗುವ ಪರಿಸ್ಥಿತಿಯಿದೆ. ತೆರೆದ ಜಾಗದಲ್ಲೇ ಮೃತರಾದವರ ಮೃತದೇಹ ಸುಡಬೇಕಾದ ಪರಿಸ್ಥಿತಿಯಿದ್ದು, ಕನಿಷ್ಠ ಒಂದು ತಗಡು ಶೀಟ್​ನ ಮೇಲ್ಚಾವಣಿ ಕೂಡ ಇಲ್ಲ.

ಇದನ್ನೂ ಓದಿ: ತದಡಿ ಬಂದರಿನಲ್ಲಿ ಹೂಳಿನ ಕಂಟಕ: 2 ಬೋಟು ಮುಳುಗಡೆ, ಲಕ್ಷಾಂತರ ರೂ. ನಷ್ಟ; ಮೀನುಗಾರರ ಆಕ್ರೋಶ

ದೇಶಕ್ಕಾಗಿ ಭೂಮಿ ನೀಡಿದವರ ಬದುಕಿನ ಕೊನೆಯ ಘಟ್ಟದಲ್ಲೂ ಗೌರವಯುತ ಅಂತ್ಯಸಂಸ್ಕಾರಕ್ಕೆ ವ್ಯವಸ್ಥೆ ಇಲ್ಲದಿರುವುದು ಆಡಳಿತ ವ್ಯವಸ್ಥೆಯ ನಿರ್ಲಕ್ಷ್ಯಕ್ಕೆ ಹಿಡಿದ ಕನ್ನಡಿಯಾಗಿದೆ. ಈಗಲಾದರೂ ಅಧಿಕಾರಿಗಳು ಇತ್ತ ಗಮನಹರಿಸಿ‌ ಮೂಲಭೂತ ಸೌಕರ್ಯ ಕಲ್ಪಿಸಬೇಕೆಂಬುದು ಹಟ್ಟಿಕೇರಿ ನಿವಾಸಿಗಳ ಆಗ್ರಹವಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Loading...
Unable to load recommendations.
Follow Us