
ಕಾರವಾರ, ಅಕ್ಟೋಬರ್ 02: ಸ್ವಾತಂತ್ರ್ಯ ಬಂದು ಎಂಟು ದಶಕಗಳೇ ಕಳೆಯುತ್ತಾ ಬಂದರೂ ಇಂದಿಗೂ ಮೂಲಭೂತ ಸೌಕರ್ಯಗಳ ಕೊರತೆಯಿಂದ ಗ್ರಾಮೀಣ ಭಾಗದ ಜನರು ಪರದಾಡುತಲಿದ್ದಾರೆ. ಇದಕ್ಕೆ ಸಾಕ್ಷಿ ಎಂಬಂತೆ ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಗುಡ್ಡೆಹಳ್ಳಿ ಗ್ರಾಮ. ನಗರಸಭಾ ವ್ಯಾಪ್ತಿಯಲ್ಲಿ ಇದ್ದರೂ ಈ ಗ್ರಾಮ ಇಂದಿಗೂ ಕತ್ತಲೆಯಲ್ಲೇ ಉಳಿದುಹೋಗಿದೆ. ಗ್ರಾಮದ ದುಃಸ್ಥಿತಿಯನ್ನು ಖುದ್ದು ವೀಕ್ಷಿಸಿದ ಕರ್ನಾಟಕ ಉಪಲೋಕಾಯುಕ್ತ ನ್ಯಾಯಮೂರ್ತಿ ಕೆ.ಎನ್. ಫಣೀಂದ್ರ ಅವರು ಅಧಿಕಾರಿಗಳ ನಿರ್ಲಕ್ಷ್ಯದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, 15 ದಿನಗಳ ಖಡಕ್ ಗಡುವು ನೀಡಿದ್ದಾರೆ.
ಉತ್ತರ ಕನ್ನಡ ಜಿಲ್ಲೆಯ ಕಾರವಾರ ನಗರಸಭೆ ವ್ಯಾಪ್ತಿಗೆ ಬರುವ ಗುಡ್ಡೆಹಳ್ಳಿ ಗ್ರಾಮ ದಯನೀಯ ಸ್ಥಿತಿಗೆ ತಲುಪಿದೆ. ಹೆಸರಿಗೆ ಮಾತ್ರ ಇದು ನಗರಸಭೆ ವ್ಯಾಪ್ತಿ, ಆದರೆ ಪರಿಸ್ಥಿತಿ ಮಾತ್ರ ಯಾವುದೋ ಕಡುಗ್ರಾಮಕ್ಕಿಂತ ಕಡೆಯಾಗಿದೆ. ಈ ಊರಿಗೆ ಹೋಗಲು ಇಂದಿಗೂ ಸಮರ್ಪಕ ರಸ್ತೆಗಳಿಲ್ಲ. ಕಾಡು ದಾರಿಯಲ್ಲಿ, ಕಲ್ಲುಮಣ್ಣಿನ ರಸ್ತೆಯಲ್ಲೇ ಜೀವ ಕೈಯಲ್ಲಿ ಹಿಡಿದು ಇಲ್ಲಿನ ಜನರು ಸಂಚಾರ ಮಾಡುತ್ತಾರೆ.
ಇಲ್ಲಿ ಬುಡಕಟ್ಟು ಹಾಲಕ್ಕಿ ಸಮುದಾಯದ ಸುಮಾರು 28 ಕುಟುಂಬಗಳು ವಾಸವಾಗಿದ್ದು, ಪುರುಷರು ಕೂಲಿ ಕೆಲಸ ಮಾಡಿದರೆ, ಮಹಿಳೆಯರು ಒಣ ಕಟ್ಟಿಗೆ ವ್ಯಾಪಾರ ಮಾಡಿ ಜೀವನ ಸಾಗಿಸುತ್ತಿದ್ದಾರೆ. ಚುನಾವಣೆ ಬಂದಾಗ ಮಾತ್ರ ವೋಟ್ ಕೇಳಲು ಬರುವ ಜನಪ್ರತಿನಿಧಿಗಳು, ಆಮೇಲೆ ಈ ಗ್ರಾಮದ ಕಡೆ ಮುಖ ಕೂಡ ಹಾಕುವುದಿಲ್ಲ ಎನ್ನುವುದು ಇಲ್ಲಿನ ಜನರ ಮಾತು. ಕಳೆದ ಬಿಜೆಪಿ ಸರ್ಕಾರದ ಅವಧಿಯಲ್ಲಿ ಒಂದುವರೆ ಕಿ.ಮೀ ರಸ್ತೆ ಮಂಜೂರಾಗಿದ್ದು, ಜಲ್ಲಿ ಹಾಕಲಾಗಿದೆ. ಆದರೆ ಕಾಮಗಾರಿ ಮಾತ್ರ ಅರ್ಧಕ್ಕೆ ನಿಂತಿದ್ದು, ಜನರು ಇಂದಿಗೂ ನರಕಯಾತನೆ ಅನುಭವಿಸುತ್ತಿದ್ದಾರೆ. ಊರಿಗೆ ಯಾವುದೇ ವಾಹನ ಬಾರದ ಕಾರಣ ಯಾರಿಗಾದರೂ ಹುಷಾರಿಲ್ಲದಿದ್ದರೆ ಇಂದಿಗೂ ಕಂಬಳಿ ಅಥವಾ ಕೋಲಿನಲ್ಲಿ ಕಟ್ಟಿ ಹೊತ್ತುಕೊಂಡು ಹೋಗಬೇಕಾದ ದುಸ್ಥಿತಿ ಇಲ್ಲಿದೆ.
ಹಲವು ವರ್ಷಗಳಿಂದ ತಮ್ಮೂರಿಗೆ ರಸ್ತೆ ಮಾಡುವಂತೆ ಸರ್ಕಾರಕ್ಕೆ ಅಂಗಲಾಚುತ್ತಿದ್ದ, ಈ ಗ್ರಾಮಸ್ಥರ ಅಳಲು ಕೊನೆಗೂ ಲೋಕಾಯುಕ್ತರ ಕಿವಿಗೆ ಬಿದ್ದಿದೆ. ಈ ಬಗ್ಗೆ ಸ್ವತಃ ಗುಡ್ಡಳ್ಳಿ ಗ್ರಾಮಕ್ಕೆ ಭೇಟಿ ನೀಡಿದ ಉಪಲೋಕಾಯುಕ್ತ ನ್ಯಾಯಮೂರ್ತಿ ಕೆ.ಎನ್. ಫಣೀಂದ್ರ ಅವರು ಗ್ರಾಮಸ್ಥರ ಕಷ್ಟವನ್ನು ಖುದ್ದು ಪರಿಶೀಲಿಸಿದರು. ಗ್ರಾಮಸ್ಥರ ಜೊತೆ ಕುಳಿತು ಸಮಾಲೋಚನೆ ಮಾಡಿದರು.
ಈ ವೇಳೆ ರಸ್ತೆ ಸಂಪರ್ಕದ ಕುರಿತಾಗಿ ಹಲವು ವರ್ಷಗಳ ಬೇಡಿಕೆಯನ್ನ ಜನರು ಪ್ರಸ್ತಾಪಿಸಿದರು. ಇದನ್ನ ಕೇಳಿದ ಫಣೀಂದ್ರ ಅವರು ಅಧಿಕಾರಿಗಳ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಗುಡ್ಡಳ್ಳಿ ಗ್ರಾಮದ ಸಮಗ್ರ ಅಭಿವೃದ್ಧಿಗೆ ವಿವರವಾದ ಯೋಜನೆ ರೂಪಿಸಿ 15 ದಿನಗಳ ಒಳಗೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸುವಂತೆ ನಗರಸಭೆ, ಅರಣ್ಯ, ಲೋಕೊಪಯೋಗಿ ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದರು.
ಇನ್ನು ರಸ್ತೆ ಅಷ್ಟೇ ಅಲ್ಲದೆ ಇಡೀ ಗ್ರಾಮವೇ ನಾನಾ ಸಮಸ್ಯೆಗಳ ಆಗರವಾಗಿದೆ. ಇಲ್ಲಿನ ಶಾಲಾ ಮಕ್ಕಳು ಶಿಕ್ಷಣಕ್ಕಾಗಿ ಪ್ರತಿದಿನ ಕಡಿದಾದ ಅರಣ್ಯ ರಸ್ತೆಯ ಮೂಲಕ 8 ಕಿ.ಮೀ.ಗೂ ಹೆಚ್ಚು ದೂರ ನಡೆದುಕೊಂಡೆ ಹೋಗಬೇಕಾಗಿದೆ. ಹೀಗಾಗಿ ಮಕ್ಕಳಿಗೆ ತಕ್ಷಣವೇ ನಗರಸಭೆಯಿಂದ ವಾಹನ ವ್ಯವಸ್ಥೆ ಕಲ್ಪಿಸುವಂತೆ ಲೋಕಾಯುಕ್ತರು ಆದೇಶಿಸಿದ್ದಾರೆ.
ಇದನ್ನೂ ಓದಿ: ಕಾಳಿ ನದಿಯ ಒಡಲಿಗೆ ಕನ್ನ: ಕಾರವಾರದಲ್ಲಿ ಎಗ್ಗಿಲ್ಲದೆ ಅಕ್ರಮ ಮರಳುಗಾರಿಕೆ; ಗೋವಾಕ್ಕೂ ಸಾಗಾಟ!
ಇದರೊಂದಿಗೆ ತಿಂಗಳಿಗೊಮ್ಮೆ ಆರೋಗ್ಯ ಇಲಾಖೆ ಅಧಿಕಾರಿಗಳು ಗ್ರಾಮಕ್ಕೆ ಭೇಟಿ ನೀಡಿ ತಪಾಸಣೆ ನಡೆಸುವಂತೆ ಸೂಚಿಸಿದ್ದಾರೆ. ಈ ಬಗ್ಗೆ ಸ್ವಯಂಪ್ರೇರಿತವಾಗಿ ಪ್ರಕರಣವನ್ನು ದಾಖಲಿಸಿಕೊಂಡಿರುವ ಲೋಕಾಯುಕ್ತ ಸಂಸ್ಥೆ ಅಗತ್ಯ ಬಿದ್ದರೆ ಮುಖ್ಯಮಂತ್ರಿಗಳ ಜೊತೆ ಚರ್ಚಿಸಿ ಶಾಶ್ವತ ಪರಿಹಾರ ಒದಗಿಸುವುದಾಗಿ ಭರವಸೆ ನೀಡಿದೆ. ಒಟ್ಟಿನಲ್ಲಿ ಲೋಕಾಯುಕ್ತರ ಈ ಭೇಟಿಯ ಮೂಲಕವಾದರೂ ಹಾಲಕ್ಕಿ ಸಮುದಾಯದ ನೂರಾರು ವರ್ಷಗಳ ಕತ್ತಲೆಯ ಬದುಕಿಗೆ ಬೆಳಕು ಸಿಗುತ್ತಾ ಎಂಬುದನ್ನು ಕಾದುನೋಡಬೇಕಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.