
ಉತ್ತರಕನ್ನಡ, ಅಕ್ಟೋಬರ್ 31: ಮೀನಿನ ವಿಷಾನಿಲಕ್ಕೆ ಉಸಿರುಗಟ್ಟಿ ಮೂವರು ಮೀನುಗಾರರು ಸಾವನ್ನಪ್ಪಿದ ನೆನಪು ಮಾಸುವ ಮುನ್ನವೇ ಮತ್ತೊಂದು ಭೀಕರ ದುರಂತ ಉತ್ತರ ಕನ್ನಡ ಜಿಲ್ಲೆಯ ಕಾರವಾರ ತಾಲೂಕಿನ ಮುದಗಾ ಮೀನುಗಾರಿಕಾ ಬಂದರಿನಲ್ಲಿ ಸಂಭವಿಸಿದೆ. ಕಾರವಾರ ತಾಲೂಕಿನ ಮುದಗಾ ಮೀನುಗಾರಿಕಾ ಬಂದರಿನಲ್ಲಿ ಮೀನಿನ ವಿಷಾನಿಲ ಸೋರಿಕೆಯಿಂದ ಉಸಿರುಗಟ್ಟಿ ಒರಿಸ್ಸಾ ಮೂಲದ ಇಬ್ಬರು ಮೀನುಗಾರರು ದಾರುಣವಾಗಿ ಸಾವನ್ನಪ್ಪಿದ್ದಾರೆ. ಬೋಟ್‌ನ ಶೇಖರಣಾ ಘಟಕವನ್ನು ಸ್ವಚ್ಛಗೊಳಿಸುವಾಗ ಈ ದುರ್ಘಟನೆ ಸಂಭವಿಸಿದ್ದು, ಮತ್ತೊಬ್ಬ ಮೀನುಗಾರ ಗಂಭೀರಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ.
ಬೇಲೆಕೇರಿ ಮೂಲದ ‘ಮೂಕಾಂಬಿಕಾ’ ಹೆಸರಿನ ಬೋಟ್‌ನಲ್ಲಿ ಈ ದುರ್ಘಟನೆ ನಡೆದಿದೆ. ಚಮನ್ ಜಾತಿಯ ಮೀನುಗಳನ್ನು ಶಿಕಾರಿ ಮಾಡಿ ಬಂದರಿಗೆ ಬಂದಿದ್ದ ಮೀನುಗಾರರು, ಬೋಟ್‌ನ ಶೇಖರಣಾ ಘಟಕದಿಂದ (ಕೋಲ್ಡ್ ಸ್ಟೋರೇಜ್) ಮೀನುಗಳನ್ನು ಖಾಲಿ ಮಾಡಿ ಸ್ವಚ್ಛಗೊಳಿಸುತ್ತಿದ್ದ ವೇಳೆ ಈ ಅವಘಡ ಸಂಭವಿಸಿದೆ. ಘಟಕದಿಂದ ಹೊರಹೊಮ್ಮಿದ ತೀವ್ರ ವಿಷಾನಿಲ ಹಾಗೂ ದುರ್ವಾಸನೆಗೆ ಸಿಲುಕಿ ಒರಿಸ್ಸಾ ಮೂಲದ ಪುರಂದರ ಬಿಸರಾ (21) ಮತ್ತು ಆಕಾಶ ನಾಯ್ಕ (24) ಸ್ಥಳದಲ್ಲೇ ದುರ್ಮರಣಕ್ಕೀಡಾಗಿದ್ದಾರೆ. ಇದೇ ವೇಳೆ ಗಂಭೀರವಾಗಿ ಅಸ್ವಸ್ಥಗೊಂಡಿರುವ ಮತ್ತೊಬ್ಬ ಮೀನುಗಾರ ಲಾಲಿಂದರ ಧ್ರುವ (41) ಅವರನ್ನು ತಕ್ಷಣವೇ ಕಾರವಾರದ ಕ್ರಿಮ್ಸ್ ಆಸ್ಪತ್ರೆಗೆ ದಾಖಲಿಸಿ ತುರ್ತು ಚಿಕಿತ್ಸೆ ನೀಡಲಾಗುತ್ತಿದೆ. ಘಟನೆಯಲ್ಲಿ ಇಬ್ಬರು ಮೀನುಗಾರರನ್ನು ಸುರಕ್ಷಿತವಾಗಿ ರಕ್ಷಿಸಲಾಗಿದೆ.
ಕೇವಲ ಮೂರು ದಿನಗಳ ಹಿಂದಷ್ಟೇ ಜಿಲ್ಲೆಯ ಕುಮಟಾ ತಾಲೂಕಿನ ತದಡಿ ಬಂದರಿನಲ್ಲಿ ಚಮನ್ ಮೀನಿನ ವಿಷಾನಿಲ ದುರ್ವಾಸನೆಗೆ ಸಿಲುಕಿ ಮೂವರು ಮೀನುಗಾರರು ಪ್ರಾಣ ಕಳೆದುಕೊಂಡಿದ್ದರು. ಆ ಘಟನೆಯ ಬೆನ್ನಲ್ಲೇ ಈಗ ಮುದಗಾ ಬಂದರಿನಲ್ಲಿಯೂ ಅದೇ ರೀತಿಯ ದುರಂತ ಮರುಕಳಿಸಿರುವುದು ಜಿಲ್ಲೆಯ ಮೀನುಗಾರಿಕಾ ವಲಯದಲ್ಲಿ ತೀವ್ರ ಆತಂಕ ಹಾಗೂ ಭೀತಿಯನ್ನು ಹುಟ್ಟುಹಾಕಿದೆ. ಬೋಟ್‌ಗಳಲ್ಲಿ ಮೀನು ಸಂಗ್ರಹಣಾ ಘಟಕಗಳನ್ನು ಸ್ವಚ್ಛಗೊಳಿಸುವಾಗ ಕಡ್ಡಾಯವಾಗಿ ಸುರಕ್ಷತಾ ಮುನ್ನೆಚ್ಚರಿಕೆಗಳನ್ನು ಅನುಸರಿಸಬೇಕಾದ ಅಗತ್ಯತೆಯನ್ನು ಈ ಸರಣಿ ದುರಂತಗಳು ಮತ್ತೊಮ್ಮೆ ಮುನ್ನೆಲೆಗೆ ತಂದಿವೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 9:43 am, Sat, 31 October 26