
ಕಾರವಾರ, (ಜುಲೈ 05): ಭಟ್ಕಳದ (Bhatkal) ಮಂಕಿ ಪೊಲೀಸ್ ಠಾಣೆಯ ಪಿಎಸ್‌ಐ ಅಭಿನಂದನ್ ಗೌಡ ವಿರುದ್ಧ ಅಪ್ರಾಪ್ತ ಬಾಲಕಿಗೆ ಲೈಂಗಿಕ ಕಿರುಕುಳ ಆರೋಪ ಕೇಳಿಬಂದಿದೆ. ಸಂತ್ರಸ್ತೆಯ ದೂರಿನ ಅನ್ವಯ ಭಟ್ಕಳ ನಗರ ಪೊಲೀಸರು ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ. ಇದರ ಬೆನ್ನಲ್ಲೇ ಅಭಿನಂದನ್ ಗೌಡನನ್ನು ಬಂಧಿಸಿದ್ದಾರೆ. ರಾಮನಗರ ಜಿಲ್ಲೆಯ ಕನಕಪುರ ಮೂಲದ ಅಭಿನಂದನ್ ಗೌಡ, ಕೆಲವು ತಿಂಗಳ ಹಿಂದಷ್ಟೇ ಮಂಕಿ ಠಾಣೆಗೆ ಎಲ್ಎನ್ಒ ಆಗಿ ಬಂದಿದ್ದು, ಇದೀಗ ಫೋಕ್ಸೊ ಪ್ರಕರಣದಲ್ಲಿ ಅರೆಸ್ಟ್ ಆಗಿದ್ದಾರೆ.
ಯಲ್ಲಾಪುರ ಮೂಲದ ಅಪ್ರಾಪ್ತ ಬಾಲಕಿಯೊಬ್ಬಳಿಗೆ ಪಿಎಸ್‌ಐ ಅಭಿನಂದನ್ ಲೈಂಗಿಕ ಕಿರುಕುಳ ನೀಡಿರುವ ಆರೋಪ ಕೇಳಿಬಂದಿದೆ. 16 ವರ್ಷದ ಬಾಲಕಿಯನ್ನ ಪುಸಲಾಯಿಸಿ ಭಟ್ಕಳಕ್ಕೆ ಕರೆತಂದು ಲಾಡ್ಜ್ ನಲ್ಲಿ ಅತ್ಯಾಚಾರ ಎಸಗಿರುವ ಆರೋಪ ಕೇಳಿಬಂದಿದ್ದು, ಈ ಕುರಿತು ಸಂತ್ರಸ್ತ ಅಪ್ರಾಪ್ತ ಬಾಲಕಿಯು ಭಟ್ಕಳ ನಗರ ಪೊಲೀಸ್ ಠಾಣೆಯಲ್ಲಿ ಲಿಖಿತ ದೂರು ದಾಖಲಿಸಿದ್ದರು. ಬಾಲಕಿಯ ದೂರಿಗೆ ತಕ್ಷಣವೇ ಸ್ಪಂದಿಸಿದ ಭಟ್ಕಳ ನಗರ ಠಾಣೆಯ ಪೊಲೀಸರು ಆರೋಪಿ ಪಿಎಸ್‌ಐ ಅಭಿನಂದನ್ ವಿರುದ್ಧ ಪೋಕ್ಸೋ (POCSO) ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ತದನಂತರ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ವಶಕ್ಕೆ ಪಡೆದು, ಸದ್ಯ ಬಂಧನ ಪ್ರಕ್ರಿಯೆ ಪೂರ್ಣಗೊಳಿಸಿದ್ದಾರೆ.ತನಿಖೆ ವೇಳೆ ಅಸಲಿ ಸತ್ಯ ಹೊರಗೆ ಬರಲಿದೆ.
ಇನ್ನು ಸಾರ್ವಜನಿಕರ ಜೀವ, ಆಸ್ತಿ ಮತ್ತು ಗೌರವದ ರಕ್ಷಣೆಯ ಹೊಣೆ ಹೊತ್ತಿರುವ ಪೊಲೀಸ್ ಅಧಿಕಾರಿಯೊಬ್ಬರ ವಿರುದ್ಧವೇ ಇಂತಹ ಗಂಭೀರ ಆರೋಪ ಕೇಳಿಬಂದಿರುವುದು ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ತಪ್ಪಿತಸ್ಥರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಬೇಕು ಎಂಬ ಆಗ್ರಹವೂ ಕೇಳಿಬರುತ್ತಿದೆ.
Published On - 3:38 pm, Sun, 5 July 26