ಬೆಂಗಳೂರು, ಜುಲೈ 11: ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ (Shobha Karandlaje) ಅವರು ಕೇಂದ್ರ ಗೃಹ ಸಚಿವ ಅಮಿತ್ ಶಾ (Amit Shah) ಅವರಿಗೆ ಪತ್ರ ಬರೆಯುವ ಮೂಲಕ ವಾಲ್ಮೀಕಿ ನಿಗಮದ ಹಗರಣದಲ್ಲಿ ಭಾಗಿಯಾಗಿರುವ ಹಣಕಾಸು ಸಂಸ್ಥೆಗಳಿಂದ ಸಮಗ್ರ ಮತ್ತು ಸ್ವತಂತ್ರ ತನಿಖೆ ನಡೆಸುವಂತೆ ಕೋರಿದ್ದಾರೆ. ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣವನ್ನು ಸಿಬಿಐ ತನಿಖೆ ತೀವ್ರಗೊಳ್ಳಬೇಕು. ಪ್ರಕರಣದಲ್ಲಿ ಯೂನಿಯನ್ ಬ್ಯಾಂಕ್ ಶಾಮೀಲಾಗಿದೆ. ಹೀಗಾಗಿ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ಹೇಳಿದ್ದಾರೆ.
ಸಮಗ್ರ ತನಿಖೆ ಮಾಡಿಸಿ ಹಗರಣದಲ್ಲಿ ಭಾಗಿಯಾದವನ್ನು ಹೊಣೆಗಾರರನ್ನಾಗಿ ಮಾಡಬೇಕು. ಪ್ರಕರಣದಲ್ಲಿ ಭಾಗಿಯಾಗಿರುವ ಯೂನಿಯನ್ ಬ್ಯಾಂಕ್ ಮತ್ತು ಇತರೆ ಹಣಕಾಸು ಸಂಸ್ಥೆಗಳ ಪಾತ್ರದ ತನಿಖೆಯಾಗಬೇಕು. ಆ ಮೂಲಕ ಚಂದ್ರಶೇಖರ್ ಆತ್ಮಹತ್ಯೆಗೆ ಕಾರಣ ಪತ್ತೆಹಚ್ಚಬೇಕು. ಭವಿಷ್ಯದಲ್ಲಿ ಇಂತಹ ಕೃತ್ಯಗಳನ್ನು ತಡೆಯಲು ಕ್ರಮವಹಿಸಬೇಕು ಎಂದು ಪತ್ರದ ಮೂಲಕ ಮನವಿ ಮಾಡಿದ್ದಾರೆ.
ಇದನ್ನೂ ಓದಿ: ವಾಲ್ಮೀಕಿ ನಿಗಮದಲ್ಲಿ ಅವ್ಯವಹಾರ ಪ್ರಕರಣ: ಹಗರಣದ ಆರೋಪಿಗಳ ಮತ್ತೊಂದು ಕಹಾನಿ ಬಯಲು
ಪ್ರಕರಣ ದಿನಕೊಂದು ತಿರುವು ಪಡೆದುಕೊಳ್ಳುತ್ತಿದೆ. ಅದ್ರಲ್ಲೂ ಈ ಕೇಸ್‌ಗೆ ಇಡಿ ಎಂಟ್ರಿಯಾಗ್ತಿದ್ದಂತೆ ಮಾಜಿ ಸಚಿವ ನಾಗೇಂದ್ರ ಹಾಗೂ ಶಾಸಕ ಬಸನಗೌಡ ದದ್ದಲ್‌ಗೆ ಫುಲ್ ಗ್ರಿಲ್ ಮಾಡಲಾಗುತ್ತಿದೆ. ನಿನ್ನೆಯಿಂದಲೂ ಇಬ್ಬರ ಮ್ಯಾರಾಥಾನ್ ವಿಚಾರಣೆ ನಡೆಯುತ್ತಿದೆ. ಇದರ ನಡುವೆ ಕಾಂಗ್ರೆಸ್ ಶಾಸದ ದದ್ದಲ್ ಮಾಜಿ ಪಿಎ ಪಂಪಣ್ಣ ಇವತ್ತು ಅರೆಸ್ಟ್ ಆಗಿದ್ದಾನೆ.
ಇದನ್ನೂ ಓದಿ: ವಾಲ್ಮೀಕಿ ನಿಗಮದ ಹಗರಣ: ಬಿ ನಾಗೇಂದ್ರ ಫ್ಲ್ಯಾಟ್ನಲ್ಲಿ ಇಬ್ಬರನ್ನು ವಶಕ್ಕೆ ಪಡೆದ ಇಡಿ
ವಾಲ್ಮೀಕಿ ನಿಗಮದ ಅಧ್ಯಕ್ಷ ಬಸನಗೌಡ ದದ್ದಲ್ ವಿಲ್ಲಾದಲ್ಲಿ, ಇಡಿ ಅಧಿಕಾರಿಗಳು ಇಂಚಿಂಚೂ ಜಾಲಾಡಿದ್ದರು. ಯಲಹಂಕದ ಶ್ರೀನಿವಾಸಪುರ ಬಳಿಯ ವಿಲ್ಲಾ ಖರೀದಿಯ ಬಗ್ಗೆ ದದ್ದಲ್ ದಂಪತಿಯನ್ನ ವಿಚಾರಣೆ ಮಾಡಲಾಗಿದೆ. ಆದರೆ ದದ್ದಲ್ ಮಾತ್ರ ಯಾವುದನ್ನೂ ಒಪ್ಪಿಕೊಳ್ಳುತ್ತಿಲ್ಲ. ಎಲ್ಲವೂ ಮಾಜಿ ಪಿಎ ಪಂಪಣ್ಣನತ್ತಲೇ ಬೊಟ್ಟು ಮಾಡಿ ತೋರಿಸಿದ್ದಾರೆ. ಇನ್ನು ಪಂಪಣ್ಣ ಪಡೆದುಕೊಂಡಿರೋ 55 ಲಕ್ಷ ರೂ. ಹಣದ ಬಗ್ಗೆ ಪ್ರಶ್ನೆ ಮಾಡಿದ್ರೂ ಆ ವಿಚಾರ ನನಗೆ ಗೊತ್ತಿಲ್ಲ ಅಂದಿದ್ದಾರೆ.
ವಾಲ್ಮೀಕಿ ನಿಗಮ ಹಗರಣ ಸಂಬಂಧ ಸರ್ಕಾರದ ವಿರುದ್ಧ ಬಿಜೆಪಿ ಬೀದಿಗಿಳಿಯಲು ನಿರ್ಧರಿಸಿದೆ. ಜುಲೈ 15ಕ್ಕೆ ವಿಧಾನಸೌಧ ಮುತ್ತಿಗೆಗೆ ಬಿಜೆಪಿ ಕರೆ ನೀಡಿದೆ. ಆದರೆ ಇದಕ್ಕೆ ಸಿಎಂ ಸಿದ್ದರಾಮಯ್ಯ ಗರಂ ಆಗಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.