ಬಳ್ಳಾರಿ, ಆಗಸ್ಟ್.06: ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದ 89.62 ಕೋಟಿ ರೂ. ಅಕ್ರಮ ವರ್ಗಾವಣೆ ಪ್ರಕರಣಕ್ಕೆ (Valmiki Scam) ಸಂಬಂಧಿಸಿ ಪ್ರಮುಖ ಆರೋಪಿ ನೆಕ್ಕಂಟಿ ನಾಗರಾಜ್ ಅವರ ಸಂಬಂಧಿಕರಿಗೆ ಇಡಿ (Enforcement Directorate) ನೋಟಿಸ್ ನೀಡಿದೆ. ನೆಕ್ಕಂಟಿ ನಾಗರಾಜ್ ಮಾವ ವೆಂಕಟೇಶ್ವರ ರಾವ್ ಮನೆಗೆ ಇಡಿ ತಂಡ ಭೇಟಿ ನೀಡಿದ್ದು ವೆಂಕಟೇಶ್ವರ ರಾವ್ ಈಗಾಗಲೇ ಎಸ್ಐಟಿ (SIT) ಕಸ್ಟಡಿಯಲ್ಲಿದ್ದಾರೆ.
2-3 ದಿನಗಳ ಹಿಂದೆ ಬಳ್ಳಾರಿ ತಾಲೂಕಿನ ಕೃಷ್ಣಾನಗರದ ಕ್ಯಾಂಪ್ಗೆ ಬಂದಿದ್ದ ಇಡಿ ಅಧಿಕಾರಿಗಳು, ನೆಕ್ಕಂಟಿ ನಾಗರಾಜ್ ಮಾವ ವೆಂಕಟೇಶ್ವರ ರಾವ್ ಮನೆಗೆ ಭೇಟಿ ನೀಡಿದ್ದರು. ಸದ್ಯ ಇದೀಗ ಕೃಷ್ಣಾನಗರ ಕ್ಯಾಂಪ್ನ ಕೆಲವರಿಗೆ ನೋಟಿಸ್ ನೀಡಿದ್ದಾರೆ. ಹಾಗೂ ಹಣ ವಾಪಾಸ್ ನೀಡುವಂತೆ ತಾಕೀತು ಮಾಡಿದ್ದಾರೆ.
ಇನ್ನು ಕೃಷ್ಣಾನಗರದ ಕ್ಯಾಂಪ್ನಲ್ಲಿರುವ ಸಂಬಂಧಿಕರಿಗೆ ವೆಂಕಟೇಶ್ವರ ರಾವ್ ಹಣ ವರ್ಗಾವಣೆ ಮಾಡಿಸಿದ್ದರು. ಶ್ರೀನಿವಾಸ ಎನ್ನುವವರು ಎಸ್ಐಟಿ ವಿಚಾರಣೆ ಹೋಗಿದ್ದು, ಹಣ ವಾಪಸ್ ನೀಡೋದಾಗಿ ಹೇಳಿದ್ದರು. ಇದೀಗ ನಿನ್ನೆ ಮತ್ತೊಮ್ಮೆ ಇಡಿ ಅಧಿಕಾರಿಗಳು ಕೃಷ್ಣಾನಗರದ ಕ್ಯಾಂಪ್ಗೆ ಭೇಟಿ ನೀಡಿ ನೋಟಿಸ್ ನೀಡಿದ್ದಾರೆ. ಹಣ ಹಿಂದಿರುಗಿಸದ ಬಗ್ಗೆ ಕಾರಣ ನೀಡುವಂತೆ ಇಡಿ ಮತ್ತೆ ನೋಟಿಸ್ ನೀಡಿದೆ.
ಇದನ್ನೂ ಓದಿ: ಮುಡಾ ಹಗರಣಕ್ಕೆ ಬಿಗ್ ಟ್ವಿಸ್ಟ್: ಸ್ವಪಕ್ಷದವರ ವಿರುದ್ಧವೇ ಹೊಸ ಬಾಂಬ್ ಸಿಡಿಸಿದ ಯತ್ನಾಳ್
ವಾಲ್ಮೀಕಿ ಹಗರಣ ಪ್ರಕರಣದ ತನಿಖೆ ನಡೆಸುತ್ತಿರುವ ಸಿಐಡಿ ಎಸ್‌ಐಟಿ, ನಿಗಮದ ಮಾಜಿ ವ್ಯವಸ್ಥಾಪಕ ನಿರ್ದೇಶಕ ಜೆ.ಜಿ. ಪದ್ಮನಾಭ ಸೇರಿ 12 ಆರೋಪಿಗಳ ವಿರುದ್ಧ ನ್ಯಾಯಾಲಯಕ್ಕೆ ಪ್ರಾಥಮಿಕ ಆರೋಪ ಪಟ್ಟಿ ಸಲ್ಲಿಸಿದೆ.
ಅಕ್ರಮವಾಗಿ ನಿಗಮದ ಹಣ ದೋಚಿದ್ದ ಆರೋಪಿಗಳ ವಿರುದ್ಧ ನಕಲಿ ಖಾತೆಗಳಿಗೆ ಹಣ ವರ್ಗಾವಣೆ, ವಂಚನೆ ಕುರಿತು ಸಾಕ್ಷ್ಯಾಧಾರ, ಸಾಕ್ಷಿಗಳ ಹೇಳಿಕೆ ಮೇರೆಗೆ 3072 ಪುಟಗಳ ಆರೋಪ ಪಟ್ಟಿಯನ್ನು 3ನೇ ಎಸಿಎಂಎಂ ನ್ಯಾಯಾಲಯಕ್ಕೆ ಸಲ್ಲಿಸಲಾಗಿದೆ. ಆರೋಪಿಗಳು ನಿಗಮದ ಖಾತೆಯಿಂದ ದೋಚಿದ್ದ ಹಣದ ಪೈಕಿ ನಗದು, ಚಿನ್ನಾಭರಣ ಸೇರಿ 49.96 ಕೋಟಿ ರೂ. ಮೌಲ್ಯದ ವಸ್ತುಗಳನ್ನು ಜಪ್ತಿ ಮಾಡಲಾಗಿದೆ ಎಂದು ಎಸ್‌ಐಟಿ ತಿಳಿಸಿದೆ.
ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 7:39 am, Tue, 6 August 24