
ನೋಡಲು ಬದನೆಕಾಯಿ ತರಾನೇ ಇದೆ. ಆದರೆ ಬದನೆ ಅಲ್ಲ…ಈ ತರಕಾರಿ ಹೆಸರು ಮಟ್ಟು ಗುಳ್ಳ . ಗುಳ್ಳ ಎಂದರೆ ತುಳು ಭಾಷೆಯಲ್ಲಿ ಚಿಕ್ಕದು ಎಂಬರ್ಥವಿದೆ. ಉಡುಪಿಯಿಂದ ಕೇವಲ 10 ಕಿಮೀ ದೂರದಲ್ಲಿರುವ ಮಟ್ಟು ಎಂಬ ಗ್ರಾಮದಲ್ಲಿ ಇದನ್ನು ಬೆಳೆಯುವುದರಿಂದ ಇದಕ್ಕೆ ಮಟ್ಟು ಗುಳ್ಳ ಎಂಬ ಹೆಸರು ಬಂತು. ಮಟ್ಟು ಗುಳ್ಳ ಅಥವಾ ಗುಳ್ಳ ಅಂತಿಂಥ ತರಕಾರಿ ಅಲ್ಲ. ಇದು ಭೌಗೋಳಿಕ ಮಾನ್ಯತೆ ಪಡೆದ ತರಕಾರಿ. ಬಿಟಿ ಬದನೆಯೊಂದಿಗೆ ತನ್ನ ಉಳಿಯುವಿಕೆಗಾಗಿ ಹೋರಾಡಿ ಗೆದ್ದ ಅಪ್ಪಟ ದೇಸೀ ತಳಿ ಈ ಮಟ್ಟು ಗುಳ್ಳ. ಹಲವಾರು ವರ್ಷಗಳಿಂದ ಹೇಳಹೆಸರಿಲ್ಲದೆ ಮೂಲೆಗುಂಪಾಗಿದ್ದ ಈ ತರಕಾರಿ ಈ ಹೋರಾಟದಿಂದಾಗಿ ಪ್ರಸಿದ್ಧಿ ಪಡೆಯಿತು. ಕೃಷಿ ವಿಶ್ವವಿದ್ಯಾಲಯದ ವಿಜ್ಞಾನಿಗಳು ಈ ಬೆಳೆಯ ಬಗ್ಗೆ ಹೆಚ್ಚಿನ ಸಂಶೋಧನೆಗಳನ್ನು ಮಾಡಿದರು. ಮಟ್ಟು ಗುಳ್ಳಕ್ಕೆ 2011 ರಲ್ಲಿ ಭೌಗೋಳಿಕ ಮಾನ್ಯತೆ (GI Tag) ನೀಡಲಾಯಿತು. ವಿಶಿಷ್ಟವಾದ ದುಂಡಗಿನ ಆಕಾರ, ತಿಳಿ ಹಸಿರು ಬಣ್ಣ ಮತ್ತು ಹೊರಮೈಮೇಲೆ ಮಸುಕಾದ ಪಟ್ಟೆಗಳಿರುವ ಈ ಗುಳ್ಳದಲ್ಲಿ ಬೀಜಗಳು ಕಡಿಮೆ, ಹೆಚ್ಚಿನ ತಿರುಳು ಇರುತ್ತದೆ. ಮಟ್ಟು ಗುಳ್ಳದ ಪ್ರಮುಖ ಲಕ್ಷಣವೆಂದರೆ ತೆಳುವಾದ ಮೇಲ್ಮೈ ಮುಳ್ಳುಗಳನ್ನು ಹೊಂದಿರುವ ತೊಟ್ಟು ಇರುತ್ತದೆ. ಸಮುದ್ರಕ್ಕೆ ಹತ್ತಿರವಾಗಿರುವುದರಿಂದ ಇಲ್ಲಿನ ಮಣ್ಣು ತರಕಾರಿಗೆ ವಿಶಿಷ್ಟವಾದ ಸುವಾಸನೆ ಮತ್ತು ರುಚಿಯನ್ನು ನೀಡುತ್ತದೆ. ಈ ಮಟ್ಟುಗುಳ್ಳದ ಬಗ್ಗೆ ಮತ್ತಷ್ಟು ತಿಳಿಯೋಣ… ಎಲ್ಲಿಂದ ಬಂತು ಗುಳ್ಳ? ದಂತಕಥೆಯ...