ತೆಂಕುತಿಟ್ಟು ಯಕ್ಷಗಾನದ ಖ್ಯಾತ ಭಾಗವತ, ಗಾನಗಂಧರ್ವ ಪದ್ಯಾಣ ಗಣಪತಿ ಭಟ್ ನಿಧನ

TV9 Digital Desk

| Edited By: Sushma Chakre

Updated on: Oct 12, 2021 | 12:51 PM

Padyana Ganapathi Bhat: 50 ವರ್ಷಗಳ ಕಾಲ ಯಕ್ಷಗಾನ ಕ್ಷೇತ್ರದಲ್ಲಿ ಭಾಗವತಿಕೆ ಮಾಡಿದ್ದ ಗಣಪತಿ ಭಟ್ಟರು ಭಾಗವತಿಕೆಯಲ್ಲಿ ಪದ್ಯಾಣ ಶೈಲಿಯನ್ನು ಸೃಷ್ಟಿಸಿದವರು. ಅವರು ಇಂದು ಬೆಳಗ್ಗೆ ಸುಳ್ಯದಲ್ಲಿರುವ ತಮ್ಮ ಮನೆಯಲ್ಲಿ ಕೊನೆಯುಸಿರೆಳೆದಿದ್ದಾರೆ.

ತೆಂಕುತಿಟ್ಟು ಯಕ್ಷಗಾನದ ಖ್ಯಾತ ಭಾಗವತ, ಗಾನಗಂಧರ್ವ ಪದ್ಯಾಣ ಗಣಪತಿ ಭಟ್ ನಿಧನ
ಪದ್ಯಾಣ ಗಣಪತಿ ಭಟ್
Follow us


ಮಂಗಳೂರು: ಗಾನಗಂಧರ್ವ ಎಂದೇ ಖ್ಯಾತರಾಗಿದ್ದ ತೆಂಕುತಿಟ್ಟು ಯಕ್ಷಗಾನದ ಭಾಗವತ ಪದ್ಯಾಣ ಗಣಪತಿ ಭಟ್ ಇಂದು ಬೆಳಗ್ಗೆ ಇಹಲೋಕ ತ್ಯಜಿಸಿದ್ದಾರೆ. 66 ವರ್ಷದ ಅವರಿಗೆ ಕೆಲವು ತಿಂಗಳ ಹಿಂದೆ ಕೋವಿಡ್ ಸೋಂಕು ತಗುಲಿತ್ತು. ಬಳಿಕ ನ್ಯುಮೋನಿಯಾದಿಂದ ಬಳಲಿದ್ದ ಅವರು ಹೃದಯ ಸಂಬಂಧಿ ಕಾಯಿಲೆಗೂ ತುತ್ತಾಗಿದ್ದರು. ಇಂದು ಬೆಳಗ್ಗೆ 7.30ರ ಸುಮಾರಿಗೆ ಹೃದಯಾಘಾತದಿಂದ ಪದ್ಯಾಣ ಗಣಪತಿ ಭಟ್ ಕೊನೆಯುಸಿರೆಳೆದಿದ್ದಾರೆ.

50 ವರ್ಷಗಳ ಕಾಲ ತೆಂಕುತಿಟ್ಟು ಯಕ್ಷರಂಗದಲ್ಲಿ ಭಾಗವತಿಕೆ ಮಾಡಿದ್ದ ಗಣಪತಿ ಭಟ್ಟರು ಭಾಗವತಿಕೆಯಲ್ಲಿ ಪದ್ಯಾಣ ಶೈಲಿಯನ್ನು ಸೃಷ್ಟಿಸಿದವರು. ಬಾಲ್ಯದಲ್ಲೇ ಯಕ್ಷಗಾನದತ್ತ ಆಸಕ್ತಿ ಹೊಂದಿದ್ದ ಇವರು ಧರ್ಮಸ್ಥಳದಲ್ಲಿ ಯಕ್ಷಗಾನ ತರಬೇತಿ ಕೇಂದ್ರದಲ್ಲಿ ಮಾಂಬಾಡಿ ನಾರಾಯಣ ಭಾಗವತರ ಬಳಿ ಭಾಗವತಿಕೆ ಕಲಿತರು. ಗಣಪತಿ ಭಟ್ಟರು ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯದವರು. ಇವರು ತೆಂಕುತಿಟ್ಟಿನ ಜನಪ್ರಿಯ ಮೇಳಗಳಾದ ಹೊಸನಗರ ಮೇಳ, ಎಡನೀರು ಮೇಳ, ಹನುಮಗಿರಿ ಮೇಳಗಳಲ್ಲಿ ಪ್ರಧಾನ ಭಾಗವತರಾಗಿ ಸೇವೆ ಸಲ್ಲಿಸುತ್ತಿದ್ದರು. ಇವರ ಇಡೀ ಕುಟುಂಬವೇ ತೆಂಕುತಿಟ್ಟಿನ ಯಕ್ಷಗಾನ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದೆ.

1955ರ ಜನವರಿ 21ರಂದು ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲ್ಲೂಕಿನ ಕಲ್ಮಡ್ಕದ ಬಳಿ ಇರುವ ಗೋಳ್ತಜೆ ಎಂಬಲ್ಲಿ ತಿರುಮಲೇಶ್ವರ ಭಟ್ ಮತ್ತು ಸಾವಿತ್ರಿ ದಂಪತಿಯ ಮಗನಾಗಿ ಗಣಪತಿ ಭಟ್ಟರು ಜನಿಸಿದರು. ತಮ್ಮ 16ನೇ ವಯಸ್ಸಿನಲ್ಲಿ ಚೌಡೇಶ್ವರಿ ಮೇಳಕ್ಕೆ ಸಂಗೀತಗಾರರಾಗಿ ಸೇರುವ ಮೂಲಕ ಯಕ್ಷಗಾನದಲ್ಲಿ ತೊಡಗಿಸಿಕೊಂಡ ಗಣಪತಿ ಭಟ್ಟರು ನಂತರ ಭಾಗವತಿಯಲ್ಲಿ ಬಹಳ ಜನಪ್ರಿಯತೆ ಗಳಿಸಿದರು. ಸಂಗೀತ ದಿಗ್ಗಜ ಎಸ್​.ಪಿ. ಬಾಲಸುಬ್ರಹ್ಮಣ್ಯಂ ಮುಂತಾದ ಗಾಯಕರು ಕೂಡ ಗಣಪತಿ ಭಟ್ಟರ ಗಾಯನಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದರು.

ಪದ್ಯಾಣ ಗಣಪತಿ ಭಟ್ ಅವರ ನಿಧನಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಸಚಿವ ಅರವಿಂದ್ ಲಿಂಬಾವಳಿ ಮುಂತಾದವರು ಸಂತಾಪ ಸೂಚಿಸಿದ್ದಾರೆ.

ಗಣಪತಿ ಭಟ್ಟರಿಗೆ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಸಹಿತ ಹಲವು ಪ್ರಶಸ್ತಿ ಸನ್ಮಾನಗಳು ಬಂದಿವೆ. ದುಬೈ, ಮಸ್ಕತ್, ಕುವೈತ್ ಮುಂತಾದ ದೇಶಗಳಲ್ಲಿ ಕೂಡ ಇವರು ಯಕ್ಷಗಾನ ತಂಡಗಳೊಂದಿಗೆ ತೆರಳಿ ಭಾಗವತಿಕೆ ಮಾಡಿದ್ದಾರೆ. ಪ್ರಸ್ತುತ ಹನುಮಗತಿ ಮೇಳದ ಪ್ರಧಾನ ಭಾಗವತರಾಗಿ ಇವರು ಕಾರ್ಯ ನಿರ್ವಹಿಸುತ್ತಿದ್ದರು. ಗಣಪತಿ ಭಟ್ಟರು ಪತ್ನಿ ಶೀಲಾಶಂಕರಿ, ಮಕ್ಕಳಾದ ಸ್ವಸ್ತಿಕ್, ಕಾರ್ತಿಕ್ ಮತ್ತು ಕುಟುಂಬಸ್ಥರನ್ನು ಅಗಲಿದ್ದಾರೆ.

ಇದನ್ನೂ ಓದಿ: ಅಭಿನವ ವಾಲ್ಮೀಕಿ ಖ್ಯಾತಿಯ, ಯಕ್ಷಗಾನ ಭಾಗವತ ಬೊಟ್ಟಿಕೆರೆ ಪುರುಷೋತ್ತಮ ಪೂಂಜ ನಿಧನ

ಮೂಡಬಿದಿರೆಯಲ್ಲಿ ವೇದಿಕೆಯಲ್ಲಿ ಕುಣಿಯುವಾಗಲೇ ಕುಸಿದು ಬಿದ್ದ ಯಕ್ಷಗಾನ ಕಲಾವಿದ

ತಾಜಾ ಸುದ್ದಿ

Related Stories

Click on your DTH Provider to Add TV9 Kannada