ಭಗತ್ ಸಿಂಗ್ ಫೋಟೋ ಬಳಸಿ ಗಾಂಜಾ ಸಾಗಾಟ: ಬೆಂಗಳೂರಿನಲ್ಲಿ 1.70 ಕೋಟಿ ರೂ. ಮೌಲ್ಯದ 317 ಕೆಜಿ ಗಾಂಜಾ ಜಪ್ತಿ

ಬೆಂಗಳೂರು ಪೊಲೀಸರು ಕ್ವಿಂಟಲ್‌ಗಟ್ಟಲೆ ಗಾಂಜಾ ವಶಪಡಿಸಿಕೊಂಡಿದ್ದಾರೆ. ಪೊಲೀಸರಿಂದ ತಪ್ಪಿಸಿಕೊಳ್ಳಲು ಆರೋಪಿಗಳು ಭಗತ್ ಸಿಂಗ್ ಫೋಟೋವನ್ನು ಕಾರಿನ ಮೇಲೆ ಅಂಟಿಸಿ ಒಡಿಶಾದಿಂದ ಕೇರಳಕ್ಕೆ ಗಾಂಜಾ ಸಾಗಿಸುತ್ತಿದ್ದರು. ಕುಂಬಳಗೋಡು ಪೊಲೀಸರು ಕಾರ್ಯಾಚರಣೆ ನಡೆಸಿ, ₹1.7 ಕೋಟಿ ಮೌಲ್ಯದ 317 ಕೆಜಿ ಗಾಂಜಾ ಹಾಗೂ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಸೀಟುಗಳ ಒಳಗೆ ಗಾಂಜಾ ಅಡಗಿಸಿಡಲಾಗಿತ್ತು.

ಭಗತ್ ಸಿಂಗ್ ಫೋಟೋ ಬಳಸಿ ಗಾಂಜಾ ಸಾಗಾಟ: ಬೆಂಗಳೂರಿನಲ್ಲಿ 1.70 ಕೋಟಿ ರೂ. ಮೌಲ್ಯದ 317 ಕೆಜಿ ಗಾಂಜಾ ಜಪ್ತಿ
ವಿಷ್ಣುಮಣಿ (30) ಹಾಗೂ ಚಾನ್ ಪಾಷಾ (31)
Image Credit source: Tv9 kannada
Edited By:

Updated on: Oct 13, 2026 | 2:52 PM

ಬೆಂಗಳೂರು, ಅ.13: ಪೊಲೀಸರ ತಪಾಸಣೆಯಿಂದ ತಪ್ಪಿಸಿಕೊಳ್ಳಲು ಹಾಗೂ ಯಾರಿಗೂ ಅನುಮಾನ ಬರದಂತೆ ಸ್ವಾತಂತ್ರ್ಯ ಹೋರಾಟಗಾರ ಭಗತ್ ಸಿಂಗ್ ಅವರ ಫೋಟೋವನ್ನು ಕಾರಿನ ಮೇಲೆ ಅಂಟಿಸಿಕೊಂಡು ಕ್ವಿಂಟಲ್ ಗಟ್ಟಲೆ ಗಾಂಜಾ ಸಾಗಿಸುತ್ತಿದ್ದ ಕಳ್ಳರ ಜಾಲವನ್ನು ಬೆಂಗಳೂರು ಪೊಲೀಸರು ಯಶಸ್ವಿಯಾಗಿ ಭೇದಿಸಿದ್ದಾರೆ. ಒಡಿಶಾದಿಂದ ಕೇರಳಕ್ಕೆ ಕಾರಿನಲ್ಲಿ ಸಾಗಿಸುತ್ತಿದ್ದ ಬೃಹತ್ ಪ್ರಮಾಣದ ಗಾಂಜಾವನ್ನು ಕುಂಬಳಗೋಡು ಠಾಣೆಯ ಪೊಲೀಸರು ವಶಪಡಿಸಿಕೊಂಡಿದ್ದಾರೆ. ಒಡಿಶಾದಿಂದ ಟೊಯೋಟಾ ಇನೋವಾ ಕ್ರಿಸ್ಟಾ ಕಾರಿನಲ್ಲಿ ಕೇರಳಕ್ಕೆ ಗಾಂಜಾ ಸಾಗಿಸಲಾಗುತ್ತಿತ್ತು.

ಮಾರ್ಗಮಧ್ಯೆ ಯಾರೂ ಅನುಮಾನ ಪಡಬಾರದು ಮತ್ತು ತಪಾಸಣೆ ವೇಳೆ ಪೊಲೀಸರು ಸುಲಭವಾಗಿ ಬಿಟ್ಟುಬಿಡಲಿ ಎಂಬ ದುರುದ್ದೇಶದಿಂದ ಕಾರಿನ ಮೇಲೆ ಭಗತ್ ಸಿಂಗ್ ಅವರ ಫೋಟೋವನ್ನು ಅಂಟಿಸಿಕೊಂಡು ಕಿಲಾಡಿಗಳು ವೇಷಮರೆಸಿದ್ದರು. ಕಾರಿನ ಸೀಟ್‌ಗಳ ಒಳಗೆ ಮತ್ತು ಇತರೆ ಗುಪ್ತ ಜಾಗಗಳಲ್ಲಿ ಗಾಂಜಾದ ಮೂಟೆಗಳನ್ನು ಅಡಗಿಸಿ ನಗರದ ಮೂಲಕ ಸಾಗಿಸುತ್ತಿದ್ದರು.

ಖಚಿತ ಮಾಹಿತಿ ಮೇರೆಗೆ ಕಾರ್ಯಾಚರಣೆ ನಡೆಸಿದ ಕುಂಬಳಗೋಡು ಪೊಲೀಸರು ಕಾರನ್ನು ಅಡ್ಡಗಟ್ಟಿ ಪರಿಶೀಲನೆ ನಡೆಸಿದ್ದಾರೆ. ಆರಂಭದಲ್ಲಿ ಕಾರಿನಲ್ಲಿ ಮೂರ್ನಾಲ್ಕು ಕೆಜಿ ಗಾಂಜಾ ಮಾತ್ರ ಇರಬಹುದು ಎಂದು ಪೊಲೀಸರು ಭಾವಿಸಿದ್ದರು. ಆದರೆ ಕಾರಿನ ಒಳಗೆ ಬಟ್ಟೆ ಹಾಗೂ ಸೀಟ್‌ಗಳ ಕೆಳಗೆ ಪರಿಶೀಲಿಸಿದಾಗ ಮೂಟೆ ಮೂಟೆಯಾಗಿ ಗಾಂಜಾ ತುಂಬಿರುವುದು ಕಂಡುಬಂದು ಪೊಲೀಸರೇ ದಂಗಾಗಿದ್ದಾರೆ. ಒಟ್ಟು 317 ಕೆಜಿ ಗಾಂಜಾವನ್ನು ವಶಕ್ಕೆ ಪಡೆಯಲಾಗಿದ್ದು, ಇದರ ಅಂದಾಜು ಮೌಲ್ಯ 1.5 ರಿಂದ 1.70 ಕೋಟಿ ರೂಪಾಯಿ ಎಂದು ಅಂದಾಜಿಸಲಾಗಿದೆ.

ಇದನ್ನೂ ಓದಿ: ಅಂತರ್ಜಾತಿ ಮದುವೆಗೆ ಯುವಕನ ಪೋಷಕರ ವಿರೋಧ: ಪ್ರಿಯಕರ ಪರಾರಿ, ಲಿವ್-ಇನ್​ ಸಂಬಂಧದಲ್ಲಿದ್ದ ಯುವತಿಯಿಂದ ದೂರು ದಾಖಲು!

ಈ ಕೃತ್ಯಕ್ಕೆ ಸಂಬಂಧಿಸಿದಂತೆ ವಿಷ್ಣುಮಣಿ (30) ಹಾಗೂ ಚಾನ್ ಪಾಷಾ (31) ಎಂಬ ಇಬ್ಬರು ಪ್ರಮುಖ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಸದ್ಯ ಕುಂಬಳಗೋಡು ಠಾಣೆಯ ಪೊಲೀಸರು ಆರೋಪಿಗಳನ್ನು ವಶಕ್ಕೆ ಪಡೆದು ತೀವ್ರ ವಿಚಾರಣೆ ಮುಂದುವರೆಸಿದ್ದಾರೆ ಹಾಗೂ ಈ ಜಾಲದ ಹಿಂದೆ ಇನ್ಯಾರ ಕೈವಾಡವಿದೆ ಎಂಬುದರ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

 

Published On - 2:44 pm, Tue, 13 October 26

ವಿಕಾಸ್​ ಬಿಎಂ

ವಿಕಾಸ್​ ಬಿಎಂ ಅವರು ಹುಟ್ಟಿದ್ದು ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಯಲ್ಲಿ. ಬೆಳೆದಿದ್ದು ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿಯಲ್ಲಿ. ಮೈಸೂರು ಯೂನಿವರ್ಸಿಟಿ ಯಲ್ಲಿ ಶಿಕ್ಷಣ ಮುಗಿಸಿ, 2014 ರಿಂದ ಎಲೆಕ್ಟ್ರಾನಿಕ್ ಮಾದ್ಯಮದಲ್ಲಿ ವೃತ್ತಿ ಜೀವನ ಆರಂಭಿಸಿದ್ದಾರೆ. ಸದ್ಯ ಬೆಂಗಳೂರು ಕ್ರೈಂ ವರದಿಗಾರನಾಗಿ 11 ವರ್ಷ ಸೇವೆ ಸಲ್ಲಿಸಿದ್ದಾರೆ. ಕ್ರೈಂ ರಿಪೋರ್ಟಿಂಗ್ ಹಾಗು ಇನ್ವೆಷ್ಟಿಗೇಟಿವ್ ವರದಿಗಾರರಾಗಿ ಹಾಗು ಸ್ಟಿಂಗ್ ಆಪರೇಷನ್​ಗಳನ್ನ ಮಾಡಿದ್ದಾರೆ. ರಾಮೇಶ್ವರಂ ಕೆಫೆ ಬಾಂಬ್ ಬ್ಲಾಸ್ಟ್ ಪ್ರಕರಣದ ಸುದ್ದಿ ಮೊದಲು ಬ್ರೇಕ್ ಮಾಡಿದ್ದಲ್ಲದೆ, ಶಂಕಿತರ ಸಿಸಿ ಕ್ಯಾಮರಾ ವಿಡಿಯೋಗಳನ್ನ ಪ್ರಸರಣ ಮಾಡಿ ಸಂಸ್ಥೆಯಿಂದ ಪ್ರಶಂಸೆಗೆ ಪಾತ್ರನಾಗಿದ್ದಾರೆ. ಅಲ್ಲದೇ ಬೆಂಗಳೂರಲ್ಲಿ ಟೈಡಾಲ್ ಡ್ರಗ್ ಸೇವನೆಯ ಸ್ಟಿಂಗ್ ಆಪರೇಷನ್ ಮಾಡಿ, ಮೆಡಿಕಲ್ ಗಳಲ್ಲಿ ಟೈಡಾಲ್ ಮಾತ್ರೆಯ ಮಾರಟ ನಿಯಂತ್ರಣಕ್ಕೆ ಬರುವಂತೆ ಮಾಡಿದ್ದಾರೆ. ನೊಂದವರ ಪರವಾಗಿ ನಿಂತು ವಸ್ತುನಿಷ್ಠವಾಗಿ ಸುದ್ದಿಗಳನ್ನ ನೀಡಿ ನ್ಯಾಯ ಕೊಡಿಸುವುದು ಇವರ ಮೊದಲ ಉದ್ದೇಶ. ಸದ್ಯ ಟಿವಿ9 ಸಂಸ್ಥೆಯಲ್ಲಿ ಬೆಂಗಳೂರು ಕ್ರೈಂ ವರದಿಗಾರರಾಗಿ ಕೆಲಸ ಮಾಡುತ್ತಿದ್ದಾರೆ. ರೋಡ್ ಟ್ರಿಪ್, ಕ್ರಿಕೆಟ್‌, ವಾಲಿಬಾಲ್ ಆಡುವುದು, ಕ್ರೈಂ ಇನ್ವೆಷ್ಟಿಗೇಷನ್ ಪುಸ್ತಕ ಓದುವುದು ಮತ್ತು ಕ್ರೈಂ ತ್ರಿಲ್ಲರ್ ಸಿನಿಮಾಗಳನ್ನ ನೋಡುವುದು ಇವರ ಹವ್ಯಾಸಗಳು.

Read More
Loading...
Unable to load recommendations.
Follow Us