ಮಸೀದಿ ಬಿಟ್ಟು ಉದ್ಯಾನವನಕ್ಕೆ ಮೀಸಲಿಟ್ಟ ಜಾಗದಲ್ಲಿ ಪ್ರಾರ್ಥನೆ ಆರೋಪ: ಜಿಲ್ಲಾಧಿಕಾರಿಗೆ ದೂರು
ವಿಜಯಪುರ ನಗರದ ಹೊರ ಭಾಗದಲ್ಲಿ ನಿರ್ಮಾಣವಾಗುತ್ತಿರುವ ಕೆಲ ಬಡಾವಣೆಗಳಲ್ಲಿ ಉದ್ಯಾನವಕ್ಕೆ ಬಿಟ್ಟಿರುವ ಜಾಗದಲ್ಲಿ ಅನ್ಯ ಕೋಮಿನವರು ಸಾಮೂಹಿಕ ಪ್ರಾರ್ಥನೆ ಮಾಡುತ್ತಿರುವ ಆರೋಪ ಕೇಳಿ ಬಂದಿದೆ. ಇಲ್ಲಿನ ಉದ್ಯಾನವನದಲ್ಲಿ ಅನ್ಯಕೋಮಿನವರಿಂದ ಸಾಮೂಹಿಕ ಪ್ರಾರ್ಥನೆ ಮಾಡುತ್ತಿರುವುದು ಸ್ಥಳಿಯರಿಗೆ ಸಮಸ್ಯೆ ಉಂಟು ಮಾಡಿದ್ದು, ಹೀಗಾಗಿ ಬಡಾವಣೆಯ ಮಾಲೀಕರು ಜಿಲ್ಲಾಧಿಕಾರಿಗಳಿಗೆ ದೂರು ನೀಡಿದ್ದಾರೆ.
ವಿಜಯಪುರ, ಜೂನ್ 26: ಇತ್ತೀಚಿನ ವರ್ಷಗಳಲ್ಲಿ ಕೋಮು ಸೌಹಾರ್ದತೆ ಒಡಕಿನ ಕುಖ್ಯಾತಿಗೆ ವಿಜಯಪುರ (Vijayapura) ಜಿಲ್ಲೆ ಪಾತ್ರವಾಗಿದೆ. ಸೂಫಿ ಸಂತರು, ಶರಣರು, ಸಾಧುಗಳು ನಡೆದಾಡಿದ ಹಾಗೂ ವಿಶ್ವಗುರು ಬಸವಣ್ಣನವರು ಜನ್ಮ ತಾಳಿದ ಜಿಲ್ಲೆಯಲ್ಲಿ ಜಾತೀಯತೆ ಇನ್ನೂ ಮಾಸಿಲ್ಲ. ಅದರಲ್ಲೂ ಜಿಲ್ಲೆಯಲ್ಲಿ ಹಿಂದೂ, ಮುಸ್ಲಿಂ (Muslim) ಎಂಬ ಬೇಧಭಾವ ಮನೆ ಮಾಡಿದೆ. ಆದರೆ ಸದ್ಯ ನಗರದಲ್ಲಿ ಕೆಲ ನೂತನ ಬಡಾವಣೆಗಳಲ್ಲಿ ಉದ್ಯಾನವಕ್ಕೆ ಬಿಟ್ಟಿರೋ ಜಾಗದಲ್ಲಿ ಅನ್ಯ ಕೋಮಿನವರು ಸಾಮೂಹಿಕ ಪ್ರಾರ್ಥನೆ ಮಾಡುತ್ತಿರುವ ಆರೋಪ ಕೇಳಿ ಬಂದಿದೆ. ಆದರೆ ಇದನ್ನು ಅನ್ಯಕೋಮಿನ ಮುಖಂಡರು ಅಲ್ಲಗಳೆದಿದ್ದಾರೆ.
ನಗರದ ಹೊರ ಭಾಗದಲ್ಲಿ ನಿರ್ಮಾಣವಾಗುತ್ತಿರುವ ಕೆಲ ಬಡಾವಣೆಗಳಲ್ಲಿ ಸಮಸ್ಯೆಗೆ ಕಾರಣವಾಗಿದೆ. ನೂತನವಾಗಿ ನಿರ್ಮಾಣವಾಗಿರುವ ಕೆಲ ಬಡಾವಣೆಗಳಲ್ಲಿ ಹಳೆಯ ಕಟ್ಟಡಗಳು ಇವೆ. ಇಂಥ ಬಡವಾಣೆಗಳ ಮಾಲೀಕರು ಹಳೆಯ ಕಟ್ಟಡದ ಸುತ್ತಮುತ್ತಲೂ ಸಾರ್ವಜನಿಕರ ಉಪಯೋಗಕ್ಕೆ ಉದ್ಯಾನವನ ನಿರ್ಮಾಣ ಮಾಡಿ ಬಡಾವಣೆಗಳನ್ನು ಕಾನೂನು ಪ್ರಕಾರ ನಿರ್ಮಾಣ ಮಾಡಿದ್ದಾರೆ. ಇದೇ ಕಟ್ಟಡದ ವಿಚಾರದಲ್ಲಿ ಇದೀಗ ಸಮಸ್ಯೆ ಆಗಿದ್ದು, ಇದಕ್ಕೆ ಈ ಪ್ರಕರಣ ನಿದರ್ಶನವಾಗಿದೆ.
ನಿತ್ಯ ಅನ್ಯ ಕೋಮಿನವರಿಂದ ಪ್ರಾರ್ಥನೆ
ವಿಜಯಪುರ ನಗರದ ಸರ್ವೇ ನಂಬರ್ 726 ರ 12 ಎಕರೆ 34 ಗುಂಟೆ ಜಮೀನು ವಿನೋದ ಬಾಗಾಯತ್ ಪಾಟೀಲ್ ಎಂಬವವರಿಗೆ ಸೇರಿದೆ. ಇವರ ಜಮೀನಿನಲ್ಲಿರುವ ಹಳೆಯ ಕಟ್ಟಡದ ಸುತ್ತಲೂ ಇವರು 1 ಎಕರೆ 8 ಗುಂಟೆ ಜಾಗ ಬಿಟ್ಟು ಅದನ್ನು ಸಾರ್ವಜನಿಕರ ಉಪಯೋಗಕ್ಕಾಗಿ ಉದ್ಯಾನವನ ನಿರ್ಮಾಣ ಮಾಡಿ ಅದಕ್ಕೆ ಕಾಂಪೌಂಡ್ ಹಾಕಿದ್ದಾರೆ. ಬಡಾವಣೆ ನಿರ್ಮಾಣ ಮಾಡಿ ಮಹಾನಗರ ಪಾಲಿಕೆಯ ಸುಪರ್ದಿಗೆ ಒಪ್ಪಿಸಿದ್ದಾರೆ. ಇದೀಗ ಇಲ್ಲಿ ನಿತ್ಯ ಅನ್ಯ ಕೋಮಿನವರು ಪ್ರಾರ್ಥನೆ ಮಾಡಲು ಬರುತ್ತಿದ್ಧಾರಂತೆ. ಇದರಿಂದ ಇಲ್ಲಿ ನಿವೇಶನ ತೆಗೆದುಕೊಂಡು ಮನೆಗಳನ್ನು ಕಟ್ಟಿಸಿಕೊಂಡವರಿಗೆ ಸಮಸ್ಯೆಯಾಗುತ್ತಿದೆ. ಇಲ್ಲಿ ಯಾಕೆ ಪ್ರಾರ್ಥನೆ ಮಾಡುತ್ತೀರಿ ಎಂದು ಪ್ರಶ್ನಿಸಿದರೆ ಇದು ಮಹಾನಗರ ಪಾಲಿಕೆಯ ಆಸ್ತಿಯಾಗಿದೆ. ಇಲ್ಲಿರುವ ಕಟ್ಟಡ ಮಸೀದಿ ಯಾಗಿತ್ತು ಎಂದು ವಾದ ಮಾಡುತ್ತಿದ್ದಾರೆ.
ಇದನ್ನೂ ಓದಿ: ವಿಜಯಪುರ: ಅರಣ್ಯ ಸಂಪತ್ತು ಬೆಳೆಸುವ ಪ್ರಯತ್ನಕ್ಕೆ ತಡೆ, ಸಿಸಿಗಳನ್ನು ತಯಾರಿಸಲು ಕೆಬಿಜೆಎನ್ಎಲ್ಗೆ ಅನುದಾನವೇ ಬಂದಿಲ್ಲ
ಈ ಬಡಾವಣೆಯಲ್ಲಿ ಮಸೀದಿ ಇರಲಿಲ್ಲಾ ಎಂದು ಬಡಾವನೆಯ ಮಾಲೀಕ ವಿನೋದ ಬಾಗಾಯತ್ ಪಾಟೀಲ್ ವಿಜಯಪುರ ಉಪ ವಿಭಾಗಾಧಿಕಾರಿಗಳ ನ್ಯಾಯಾಲಯಕ್ಕೆ ದೂರು ನೀಡಿದ್ದರು. ವಿಜಯಪುರ ಎಸಿ ಸಹ ದಾಖಲಾತಿಗಳನ್ನು ಪರಿಶೀಲನೆ ಮಾಡಿ ಇಲ್ಲಿ ಯಾವುದೇ ಮಸೀದಿ ಇರಲಿಲ್ಲ, ಹಳೆಯ ಕಟ್ಟಡವಿದೆ ಎಂದು ಆದೇಶ ಮಾಡಿದ್ದಾರೆ. ಇಷ್ಟಾಗಿಯೂ ಸಹ ಬಾಗಾಯತ ಅವರ ಬಡಾವಣೆಯ ಉದ್ಯಾನವನದಲ್ಲಿ ಅನ್ಯ ಕೋಮಿನ ಜನರು ಪ್ರಾರ್ಥನೆ ಮಾಡುತ್ತಿರೋದು ಸಮಸ್ಯೆಗೆ ಕಾರಣವಾಗಿದೆ.
ಈ ಬಡಾವಣೆಯಲ್ಲಿ ಎಲ್ಲಾ ನಿವೇಶನಗಳನ್ನು ಖರೀದಿ ಮಾಡಿಕೊಂಡು ಮನೆಗಳನ್ನು ಕಟ್ಟಿಕೊಂಡವರು ಹಿಂದೂ ಸಮಾಜದವರಾಗಿದ್ದಾರೆ. ಹಾಗಾಗಿ ಇಲ್ಲಿನ ಉದ್ಯಾನವನದಲ್ಲಿ ಸಾಮೂಹಿಕ ಪ್ರಾರ್ಥನೆಯನ್ನು ಅನ್ಯಕೋಮಿನವರು ಮಾಡುತ್ತಿರುವುದು ಸ್ಥಳಿಯರಿಗೆ ಸಮಸ್ಯೆಯನ್ನು ಉಂಟು ಮಾಡುತ್ತಿದೆ. ಹಿನ್ನಲೆ ಬಡಾವಣೆಯ ಮಾಲೀಕ ವಿನೋದ್ ಬಾಗಾಯತ್ ಪಾಟೀಲ್ ಜಿಲ್ಲಾಧಿಕಾರಿಗಳಿಗೆ ದೂರು ನೀಡಿದ್ದಾರೆ. ಅವರ ದೂರಿನ ಅನ್ವಯ ಇಲ್ಲಿನ ಉದ್ಯಾನವನದಲ್ಲಿ ಧಾರ್ಮಿಕ ಚಟುವಟಿಕೆಗೆ ಅವಕಾಶವಿಲ್ಲ. ಇಲ್ಲಿ ವಾಯು ವಿಹಾರ ಉದ್ಯಾನವನಕ್ಕೆ ಸಂಬಂಧಿಸಿದ ಚಟುವಟಿಕೆಗಳನ್ನು ಮಾತ್ರ ಮಾಡಬೇಕೆಂದು ಮನವಿ ಮಾಡಿ ಪೊಲೀಸ್ ಭದ್ರತೆಗೂ ಮನವಿ ಸಲ್ಲಿಸಿದ್ದಾರೆ.
ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಿಷ್ಟು
ಈ ವಿಚಾರಕ್ಕೆ ಸಂಬಂಧ ಪಟ್ಟಂತೆ ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹಾಗೂ ಪೊಲೀಸ್ ಆಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಸಮಸ್ಯೆಗೆ ಪರಿಹಾರವೆಂಬಂತೆ ಇಲ್ಲಿನ ಉದ್ಯಾನವನದಲ್ಲಿ ಶಾಸಕರ ನಿಧಿಯಿಂದ ವಾಕಿಂಗ್ ಟ್ರ್ಯಾಕ್, ಓಪನ್ ಜಿಮ್ ಸೇರಿದಂತೆ ಇತರೆ ಅಭಿವೃದ್ದಿ ಕಾಮಗಾರಿ ಮಾಡುತ್ತೇನೆ. ಆಗ ಸಮಸ್ಯೆಗೆ ಪರಿಹಾರ ಸಿಗುತ್ತದೆ ಎಂದು ಯತ್ನಾಳ್ ಹೇಳಿದ್ದಾರೆ.
ಇಂಥ ಸಮಸ್ಯೆ ಕೋಮು ಸೌಹಾರ್ಧತೆಗೆ ಧಕ್ಕೆ ತರುವಂತ ಘಟನೆಗಳಾಗಿವೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಇದೊಂದು ಬಡವಾಣೆ ಮಾತ್ರವಲ್ಲ ನಗರದ ಹೊರ ಭಾಗದಲ್ಲಿ ನಿರ್ಮಾಣ ಆಗುತ್ತಿರಿವ ಹೊಸ ಬಡಾವಣೆಗಳಲ್ಲಿ ಇದೇ ರೀತಿಯ ಸಮಸ್ಯೆಯಾಗುತ್ತಿವೆ ಎಂದು ಜಮೀನುಗಳ ಮಾಲೀಕರು ಮಾಹಿತಿ ನೀಡಿದ್ದಾರೆ. ಕಾರಣ ಇಂಥ ಸಮಸ್ಯೆಗಳ ಬಗ್ಗೆ ಜಿಲ್ಲಾಡಳಿತ ಹಾಗೂ ಮಹಾನಗರ ಪಾಲಿಕೆ ಅಧಿಕಾರಿಗಳು ಗಮನ ಹರಿಸಬೇಕಿದೆ. ಉದ್ಯಾನವನಗಳಲ್ಲಿ ಅನ್ಯ ಕೋಮಿನವರು ಪ್ರಾರ್ಥನೆ ಮಾಡದಂತೆ ಕ್ರಮ ತೆಗೆದುಕೊಳ್ಳಬೇಕೆಂದು ಮನವಿ ಮಾಡಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 6:50 pm, Wed, 26 June 24