BLDE Neonatal Care ನವಜಾತ ಶಿಶುಗಳ ಆರೈಕೆಯಲ್ಲಿ ಗಣನೀಯ ಸಾಧನೆ: ಬಿಎಲ್ಡಿಇ ವೈದ್ಯಕೀಯ ಆಸ್ಪತ್ರೆಗೆ 3ಎ ಮಾನ್ಯತೆ
ಬಿಎಲ್ಡಿಇ ಆಸ್ಪತ್ರೆಯಲ್ಲಿ ಚಿಕ್ಕ ಮಕ್ಕಳ ವಿಭಾಗ 40 ಹಾಸಿಗೆಗಳ ಎನ್ಐಸಿಯು ಹೊಂದಿದೆ. ಪ್ರತಿ ವರ್ಷವೂ 1500 ಕ್ಕಿಂತಲೂ ಹೆಚ್ಚು ಕ್ಲಿಷ್ಟಕರ ಸಮಸ್ಯೆಯ ನವಜಾತ ಶಿಶುಗಳು ಇಲ್ಲಿ ದಾಖಲಾಗುತ್ತಿದ್ದು, ಶೇ.95ಕ್ಕಿಂತಲೂ ಹೆಚ್ಚು ಶಿಶುಗಳು ಸಂಪೂರ್ಣ ಗುಣಮುಖ ಹೊಂದಿ, ತಾಯಂದಿರ ಮಡಿಲು ಸೇರುತ್ತಿದೆ.

ವಿಜಯಪುರ: ಬಿಎಲ್ಡಿಇ ಡೀಮ್ಡ್ ವಿಶ್ವವಿದ್ಯಾಲಯ ಬಿ.ಎಂ. ಪಾಟೀಲ ವೈದ್ಯಕೀಯ ಕಾಲೇಜು ನವಜಾತ ಶಿಶುಗಳ ತುರ್ತು ಚಿಕಿತ್ಸಾ ಘಟಕವನ್ನು ಸ್ಥಾಪಿಸಿದ್ದು, ನವಜಾತ ಶಿಶುಗಳ ಆರೈಕೆಯಲ್ಲಿ ಗಣನೀಯ ಸಾಧನೆ ಮಾಡಿದೆ. ಆಸ್ಪತ್ರೆಗೆ ರಾಷ್ಟ್ರೀಯ ನವಜಾತ ಶಿಶುಗಳ ಆರೈಕೆ ಸಂಸ್ಥೆ ಲೆವೆಲ್ – 3ಎ ಮಾನ್ಯತೆ ಲಭಿಸಿದ್ದು, ರಾಷ್ಟ್ರೀಯ ನವಜಾತ ಶಿಶುಗಳ ಆರೈಕೆ ಸಂಸ್ಥೆ (ನಿಯೋನೆಟಲ್ ಅಸೋಸಿಯೇಶನ್ ಆಫ್ ಇಂಡಿಯಾ) ಈ ಮಾನ್ಯತೆ ನೀಡಿದೆ.
ರಾಷ್ಟ್ರೀಯ ನವಜಾತ ಶಿಶುಗಳ ಆರೈಕೆ ಸಂಸ್ಥೆಯು ದೇಶದ ಎಲ್ಲಾ ಮಕ್ಕಳ ಆಸ್ಪತ್ರೆ ಅಥವಾ ಮಕ್ಕಳ ಚಿಕಿತ್ಸಾ ವಿಭಾಗಗಳಲ್ಲಿ ನೀಡಲಾಗುವ ಸೇವೆಯಾಗಿದ್ದು, ಚಿಕಿತ್ಸಾ ಕ್ರಮ ಹಾಗೂ ಗುಣಮುಖವಾಗುವ ಪ್ರಮಾಣದ ಆಧಾರದ ಮೇಲೆ ಸಾಮಾನ್ಯವಾಗಿ ಈ ಮಾನ್ಯತೆ ನೀಡಲಾಗುತ್ತದೆ.
BLDE B.M. Patil Medical College Hospital & Research Centre ಬಿಎಲ್ಡಿಇ ಆಸ್ಪತ್ರೆಯಲ್ಲಿ ಚಿಕ್ಕ ಮಕ್ಕಳ ವಿಭಾಗ 40 ಹಾಸಿಗೆಗಳ ಎನ್ಐಸಿಯು Neonatal Intensive Care Unit (NICU) ಹೊಂದಿದೆ. ಪ್ರತಿ ವರ್ಷವೂ 1500 ಕ್ಕಿಂತಲೂ ಹೆಚ್ಚು ಕ್ಲಿಷ್ಟಕರ ಸಮಸ್ಯೆಯ ನವಜಾತ ಶಿಶುಗಳು ಇಲ್ಲಿ ದಾಖಲಾಗುತ್ತಿದ್ದು, ಶೇ. 95ಕ್ಕಿಂತಲೂ ಹೆಚ್ಚು ಶಿಶುಗಳು ಸಂಪೂರ್ಣ ಗುಣಮುಖ ಹೊಂದಿ, ತಾಯಂದಿರ ಮಡಿಲು ಸೇರುತ್ತಿದ್ದು, ಈ ಕೇಂದ್ರದಲ್ಲಿ 10 ಅತ್ಯಾಧುನಿಕ ವೆಂಟಿಲೇಟರ್ಗಳು ಕಾರ್ಯನಿರ್ವಹಿಸುತ್ತಿವೆ.

ನವಜಾತ ಶಿಶು ಆರೈಕೆ
ಹಾಸಿಗೆ ಬದಿಯಲ್ಲಿಯೇ ಎಕೋಕಾರ್ಡಿಯಾಗ್ರಫಿ, ಅಲ್ಟ್ರಾಸೌಂಡ್ ಇತ್ಯಾದಿ ಆಧುನಿಕ ತಪಾಸಣೆ ಹಾಗೂ ಚಿಕಿತ್ಸೆಗಳನ್ನು ತಜ್ಞ ವೈದ್ಯರು, ನುರಿತ ಶುಶ್ರೂಷಕ ಸಿಬ್ಬಂದಿ ಹಾಗೂ ವಿಶೇಷ ಪರಿಣಿತ ತಜ್ಞ ವೈದ್ಯರನ್ನು ಒಳಗೊಂಡ ತಂಡ ಇಲ್ಲಿ ಕಾರ್ಯನಿರ್ವಹಿಸುತ್ತಿರುವುದನ್ನು ಪರಿಗಣಿಸಿ ಈ ಮಾನ್ಯತೆ ನೀಡಲಾಗಿದೆ ಎಂದು ಆಸ್ಪತ್ರೆಯ ಚಿಕ್ಕ ಮಕ್ಕಳ ವಿಭಾಗದ ಮುಖ್ಯಸ್ಥ ಡಾ.ಎಸ್. ವಿ ಪಾಟೀಲ ಕನಮಡಿ ತಿಳಿಸಿದ್ದಾರೆ.
ಈ ಮಾನ್ಯತೆಯಿಂದ ಫೆಲೋಶಿಪ್ಗೆ ಅನುಕೂಲ: ಉತ್ತರ ಕರ್ನಾಟಕದಲ್ಲಿ ಈ ಮಾನ್ಯತೆ ಪಡೆದ ಮೊದಲ ಶಿಶು ಆಸ್ಪತ್ರೆ ಎಂಬ ಹೆಗ್ಗಳಿಕೆಗೆ ನಗರದ ಬಿಎಲ್ಡಿಇ ಡೀಮ್ಡ್ ವಿಶ್ವವಿದ್ಯಾಲಯ ಬಿ.ಎಂ ಪಾಟೀಲ ವೈದ್ಯಕೀಯ ಕಾಲೇಜಿನ ಆಸ್ಪತ್ರೆ ಪಾತ್ರವಾಗಿದೆ. ರಾಷ್ಟ್ರೀಯ ನವಜಾತ ಶಿಶುಗಳ ಆರೈಕೆ ಸಂಸ್ಥೆ ಲೆವೆಲ್- 3ಎ ಮಾನ್ಯತೆಯಿಂದಾಗಿ ಚಿಕ್ಕ ಮಕ್ಕಳ ಆರೈಕೆಯಲ್ಲಿ ಸ್ನಾತಕೋತ್ತರ ಪದವಿ ಹೊಂದಿದ ವಿದ್ಯಾರ್ಥಿಗಳು ಇಲ್ಲಿ ಫೆಲೋಶಿಪ್ ಪಡೆಯಬಹುದಾಗಿದ್ದು, ನವಜಾತ ಶಿಶುಗಳ ಆರೈಕೆ, ರಕ್ಷಣೆ, ನವಜಾತ ಶಿಶು ಮರಣ ತಪ್ಪಿಸುವುದು ಮತ್ತಿತರ ನವಜಾತ ಶಿಶು ಸಂಬಂಧಿತ ಶುಶ್ರೂಷೆ ಇಲ್ಲಿ ದೊರೆಯಲಿದೆ.

ಚಿಕ್ಕ ಮಗುವಿನ ಆರೈಕೆ ಬಗ್ಗೆ ತರಬೇತಿ ನೀಡುತ್ತಿರುವ ದೃಶ್ಯ
ಟ್ರೇನ್ ಆ್ಯಂಡ್ ಹೆಲ್ಪ್ ಬೇಬಿಸ್ ಸಂಸ್ಥೆಯೊಂದಿಗೆ ಒಪ್ಪಂದ: ಅಮೇರಿಕಾದ ಟೆಕ್ಸಾಸ್ ಪ್ರಾಂತದ ಡಾ. ಪ್ರಕಾಶ ಕಬ್ಬೂರ, ಡಾ.ಸುಮನಾ ನಂಜುಂಡಾಚಾರ್ಯ ನೇತೃತ್ವದ ಟ್ರೇನ್ ಆ್ಯಂಡ್ ಹೆಲ್ಪ್ ಬೇಬಿಸ್ ಸಂಸ್ಥೆ ಬಿಎಲ್ಡಿಇ ನವಜಾತ ಶಿಶು ಘಟಕದೊಂದಿಗೆ ಒಪ್ಪಂದ ಮಾಡಿಕೊಂಡಿದ್ದು, ಜಗತ್ತಿನ ಅತ್ಯಂತ ಪ್ರಭಾವಶಾಲಿ ಮತ್ತು ಮುಂದುವರೆದ ರಾಷ್ಟ್ರದಲ್ಲಿನ ನವಜಾತ ಶಿಶು ಆರೈಕೆ ಮಾದರಿಗಳನ್ನು ಇಲ್ಲಿನ ಸಿಬ್ಬಂದಿಗೆ ತಿಳಿಸಿಕೊಡುವ ಮೂಲಕ ಈ ಭಾಗದ ರೋಗಿಗಳಿಗೆ ಇಂತಹ ಸೇವೆಯನ್ನು ನೀಡುವ ಗುರಿ ಹೊಂದಲಾಗಿದೆ ಎಂದು ಬಿ. ಎಂ. ಪಾಟೀಲ ವೈದ್ಯಕೀಯ ಕಾಲೇಜು, ಆಸ್ಪತ್ರೆಯ ಪ್ರಾಚಾರ್ಯ ಡಾ. ಅರವಿಂದ ಪಾಟೀಲ ಹೇಳಿದ್ದಾರೆ.
ಬಿಎಲ್ಡಿಇ ಆಸ್ಪತ್ರೆಯ ಚಿಕ್ಕಮಕ್ಕಳ ವಿಭಾಗದ ಈ ಸಾಧನೆಗಾಗಿ ಸಂಸ್ಥೆ ಅಧ್ಯಕ್ಷ ಹಾಗೂ ಮಾಜಿ ಸಚಿವ ಎಂ ಬಿ.ಪಾಟೀಲ್, ಉಪಕುಲಪತಿ ಡಾ.ಎಂ.ಎಸ್ ಬಿರಾದಾರ ಸಿಬ್ಬಂದಿಗೆ ಅಭಿನಂದನೆ ಸಲ್ಲಿಸಿದ್ದು, ಮತ್ತಷ್ಟು ಉತ್ತಮ ಸೇವೆ ಆಸ್ಪತ್ರೆಯಿಂದ ಸಿಗುವಂತಾಗಲಿ ಎಂದು ತಿಳಿಸಿದ್ದಾರೆ.
ಆಸ್ಪತ್ರೆಗೆ ಅಲೆದು ಅಲೆದು ಚಿಕಿತ್ಸೆ ಸಿಗದೇ ಹೊಟ್ಟೆಯಲ್ಲಿದ್ದ ಮಗುವನ್ನ ಕಳೆದುಕೊಂಡ ತಾಯಿ