ವಿಜಯಪುರ: ಆರ್ಎಸ್ಎಸ್ ನಿಷೇಧಿಸಬೇಕು ಎನ್ನುವ ಸಿದ್ದರಾಮಯ್ಯ ಹೇಳಿಕೆಯೇ ದೊಡ್ಡ ದುರ್ದೈವ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು. ಜಿಲ್ಲಾ ಪ್ರವಾಸಕ್ಕೆಂದು ವಿಜಯಪುರಕ್ಕೆ ಬಂದಿರುವ ಅವರು, ಸಿದ್ದರಾಮಯ್ಯ ಈ ಮಟ್ಟಕ್ಕೆ ಇಳಿಯಬಾರದಿತ್ತು ಎಂದು ಅಭಿಪ್ರಾಯಪಟ್ಟರು. ಪಿಎಫ್ಐ ಏಕೆ ನಿಷೇಧಿಸಿದ್ರಿ ಎಂದು ಕೇಳಲು ಇವರಿಗೆ ಆಧಾರವಿಲ್ಲವೇ? ಪಿಎಫ್ಐ ಮೇಲಿದ್ದ ಪ್ರಕರಣಗಳನ್ನು ಇವರೇ ಹಿಂಪಡೆದಿದ್ದರು. ಅದನ್ನು ಮರೆಮಾಚಲು ಆರ್ಎಸ್ಎಸ್ ನಿಷೇಧಿಸಿ ಎಂದು ಹೇಳುತ್ತಿದ್ದಾರೆ. ದೇಶಪ್ರೇಮಿಗಳು ಹಾಗೂ ಬಡವರಿಗೆ ನೆರವಾಗುತ್ತಿರುವ ಸಂಘಟನೆ ಆರ್ಎಸ್ಎಸ್ ಎಂದು ವಿವರಿಸಿದರು. ದೇಶವು ಸಮಸ್ಯೆಗಳಿಗೆ ಸಿಲುಕಿದಾಗ ಆರ್ಎಸ್ಎಸ್ ಹಲವು ರೀತಿಯಲ್ಲಿ ನೆರವಿಗೆ ಬಂದಿದೆ. ದೇಶದಲ್ಲಿ ದೇಶಪ್ರೇಮ ಜಾಗೃತಿ ಮಾಡುತ್ತಿರುವ ಸಂಘಟನೆಯನ್ನು ನಿಷೇಧಿಸಬೇಕು ಎನ್ನುವುದು ದುರ್ದೈವ ಎಂದರು.
ವಿಜಯಪುರ ಜಿಲ್ಲಾ ಪ್ರವಾಸ ಕೈಗೊಂಡಿರುವ ಮುಖ್ಯಮಂತ್ರಿಗಳು ಆಲಮಟ್ಟಿ ಜಲಾಶಯಕ್ಕೆ ಗಂಗಾಪೂಜೆ ನೆರವೇರಿಸಿ, ಬಾಗಿನ ಅರ್ಪಿಸಲಿದ್ದಾರೆ. ಹುಬ್ಬಳ್ಳಿಯಿಂದ ಹೆಲಿಕಾಪ್ಟರ್ ಮೂಲಕ ಬೆಳಿಗ್ಗೆ 10 ಗಂಟೆಗೆ ಜಿಲ್ಲೆಯ ನಿಡಗುಂದಿ ತಾಲೂಕಿನ ಆಲಮಟ್ಟಿಗೆ ಆಗಮಿಸಿದರು. ಸೈನಿಕ ಶಾಲೆಯ ಆವರಣದಲ್ಲಿ ನೂತನವಾಗಿ ನಿರ್ಮಿಸಿರುವ ಹಾಕಿ ಕ್ರೀಡಾಂಗಣವನ್ನು ಅವರು ಉದ್ಘಾಟಿಸಲಿದ್ದಾರೆ. ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ, ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಸೇರಿದಂತೆ ಹಲವು ಸಚಿವರು ಹಾಗೂ ಮುಖಂಡರು ಮುಖ್ಯಮಂತ್ರಿಯ ಜೊತೆಗೆ ಇರುತ್ತಾರೆ.
ಮುಸ್ಲಿಮರನ್ನು ಓಲೈಸುತ್ತಿರುವ ಸಿದ್ದರಾಮಯ್ಯ
ಆರ್ಎಸ್ಎಸ್ ನಿಷೇಧಿಸಬೇಕು ಎನ್ನುವ ಸಿದ್ದರಾಮಯ್ಯ ಹೇಳಿಕೆಯನ್ನು ಬಲವಾಗಿ ವಿರೋಧಿಸಿರುವ ಬಿಜೆಪಿ ನಾಯಕ ಕೆ.ಎಸ್.ಈಶ್ವರಪ್ಪ, ಗಾಂಧಿ ವಂಶವೇ ಮನಸ್ಸು ಮಾಡಿದರೂ ಆರ್ಎಸ್ಎಸ್ನ ಒಂದು ಕೂದಲು ಅಲ್ಲಾಡಿಸಲು ಆಗಲಿಲ್ಲ. ಮುಸ್ಲಿಮರನ್ನು ತೃಪ್ತಿಪಡಿಸಲು ಸಿದ್ದರಾಮಯ್ಯ ಇಂಥ ಹೇಳಿಕೆ ಕೊಡುತ್ತಿದ್ದಾರೆ. ಆರ್ಎಸ್ಎಸ್ ಸಂಘಟನೆ ಜಗಕ್ಕೆ ಬೆಳಕು ನೀಡುವ ಸೂರ್ಯನಿದ್ದಂತೆ. ಆರ್ಎಸ್ಎಸ್ ಇರದಿದ್ದರೆ ಈ ದೇಶ ಎಲ್ಲಿರುತ್ತಿತ್ತು? ಆರ್ಎಸ್ಎಸ್ನ ದೇಶಭಕ್ತ ಕೂಸು ಭಾರತೀಯ ಜನತಾ ಪಾರ್ಟಿ ಎಂದು ಹೇಳಿದರು.