ವಿಜಯಪುರದಲ್ಲೂ ಕತ್ತೆ ಮಾರಾಟ ಮಾಡಿ ಮಹಾಮೋಸ; ಕಂಪನಿ ಮಾಲೀಕ, ಸದಸ್ಯರು ನಾಪತ್ತೆ
ವಿಜಯನಗರದಲ್ಲಿ ನೂರಾರು ರೈತರಿಗೆ ಕತ್ತೆ ಮಾರಾಟ ಮಾಡಿ ಹಣ ದೋಚಿ ನಾಪತ್ತೆಯಾಗಿರುವ ಜಿನ್ನಿ ಮಿಲ್ಕ್ ಕಂಪನಿ ವಿಜಯಪುರದಲ್ಲೂ ನೂರಾರು ರೈತರು, ಯುವಕರನ್ನು ಮೋಸ ಮಾಡಿದೆ. ಕೋಟಿ ಕೋಟಿ ಹಣ ಪಡೆದು ಪರಾರಿಯಾಗಿದೆ. ಕತ್ತೆಗಳನ್ನು ಸಾಕಿ ಲಕ್ಷ ಲಕ್ಷ ಹಣ ಗಳಿಸಬೇಕೆಂಬ ಆಸೆಯಲ್ಲಿ ಸಾಲ ಮಾಡಿದ್ದವರು ಕಂಗಾಲಾಗಿದ್ದಾರೆ.
ವಿಜಯಪುರ, ಸೆ.29: ಅತ್ತೆಗೊಂದು ಕಾಲ ಸೊಸೆಗೊಂದು ಕಾಲ ಎಂಬ ಗಾದೆ ಮಾತಿದೆ. ಇದರ ಜೊತೆಗೆ ಕತ್ತೆಗೂ ಒಂದು ಕಾಲ ಎಂದು ಸೇರಿಸಿ ಮಾತನಾಡೋನ್ನಾ ನಾವು ಕೇಳಿದ್ದೇವು. ಕಾರ್ಯ ವಾಸಿ ಕತ್ತೆ ಕಾಲು ಎಂದು ಕೆಲಸ ಆಗಬೇಕೆಂದರೆ ಕತ್ತೆ (Donkey) ಕಾಲು ಹಿಡಿಬೇಕೆಂಬ ತಾತ್ಪರ್ಯವಾಗಿದೆ. ಈಗದಕ್ಕೂ ಒಂದು ಹೆಜ್ಜೆ ಮುಂದೆ ಹೋದ ಆಂಧ್ರಪ್ರದೇಶದ ಅನಂತಪುರದ ಕಂಪನಿಯೊಂದು ಕತ್ತೆಗಳ ಮಾರಾಟ ಹಾಗೂ ಕತ್ತೆಗಳ ಹಾಲು ಖರೀದಿ ಆಸೆಯನ್ನು ತೋರಿಸಿ ಕರ್ನಾಟಕದ ಜನರಿಗೆ ಪಂಗನಾಮ ಹಾಕಿದೆ. ಮೂರ್ಖತನಕ್ಕೆ ಉದಾಹರಣೆಯಾಗಿರೋ ಕತ್ತೆಯನ್ನೇ ಮುಂದಿಟ್ಟುಕೊಂಡು ರಾಜ್ಯದ ವಿವಿಧ ಜಿಲ್ಲೆಯ ಜನರನ್ನು ಮೂರ್ಖರನ್ನಾಗಿ ಮಾಡಿದೆ. ಈ ವಿಚಾರದಲ್ಲಿ ವಿಜಯಪುರ (Vijayapura) ಜಿಲ್ಲೆಯ ಯುವಕರೂ ಮೂರ್ಖರಾಗಿ ಮೋಸ ಹೋಗಿದ್ದಾರೆ.
ಇತ್ತೀಚಿನ ದಿನಗಳಲ್ಲಿ ದಿಡೀರ್ ದುಡ್ಡು ಮಾಡೋ ಖಯಾಲಿ ಎಲ್ಲರಿಗೂ ಬಂದು ಬಿಟ್ಟಿದೆ. ದಿನ ಬೆಳಗಾಗಿ ರಾತ್ರಿಯಾಗೋದ್ರೊಳಗೆ ಶ್ರೀಮಂತರಾಗೋ ಬಯಕೆ ಎಲ್ಲರದ್ದು. ಇದನ್ನೇ ಬಂಡವಾಳ ಮಾಡಿಕೊಳ್ಳೋ ಜಾಣರು ಮೂರು ನಾಮ ಹಾಕುತ್ತಾರೆ. ಇಲ್ಲಿ ನಡೆದಿದ್ದೂ ಇದೇ ಒಂದು ಲೀಟರ್ ಕತ್ತೆ ಹಾಲನ್ನು 2350 ರೂಪಾಯಿಗೆ ಖರೀದಿ ಮಾಡುತ್ತೇವೆ. ಕತ್ತೆಗಳನ್ನು ನಾವೇ ಕೊಡುತ್ತೇವೆ ಹಾಲನ್ನೂ ನಾವೇ ಸಂಗ್ರಹಿಸುತ್ತೇವೆಂದು ಆಸೆ ತೋರಿಸಿದ ಕಂಪನಿ ಇದೀಗಾ ಅಬೇಸ್ ಆಗಿದೆ. ಮೂಲತಃ ಆಂಧ್ರಪ್ರದೇಶದ ಅನಂತಪೂರ ಮೂಲ ಜಿನ್ನಿ ಮಿಲ್ಕ್ (ದಿ ಕಂಪನಿ) ಎಂಬ ಹೆಸರಿನಲ್ಲಿ ಕತ್ತೆಗಳ ಮಾರಾಟ ಹಾಗೂ ಅದರ ಹಾಲು ಖರೀದಿಯ ಬಿಸಿನೆಸ್ ಆಫರ್ ನೀಡಿತ್ತು.
ಹೆಚ್ಚು ಹಣ ಮಾಡುವ ಆಸೆಗೆ ಬಿದ್ದು ಹಣ ಕಳೆದು ಕೊಂಡ ಜನ
ವಿಜಯನಗರ ಜಿಲ್ಲೆಯ ಹೊಸಪೇಟೆಯ ಪಿಕೆವಿ ಪ್ಲಾಜಾ ಗ್ರೌಂಡ್ ಪ್ಲೋರ್ ಯೂನಿಯನ್ ಬ್ಯಾಂಕ್ ಹಿಂದುಗಡೆ ಹಂಪಿ ರೋಡ್ ಸರ್ಕಲ್ ಬಳಿ ಕಚೇರಿ ಹೊಂದಿತ್ತು. ಕಂಪನಿ ಮಾಲೀಕ ಮುರಳಿ ಇತರ ಸಿಬ್ಬಂದಿಯೊಂದಿಗೆ ಅಲ್ಲಿ ಠೀಕಾಣಿ ಹೂಡಿದ್ದ. ಈ ಬಿಸಿನೆಸ್ ವಿಚಾರ ತಿಳಿದ ಜನರು ಕತ್ತೆಗಳ ಹಾಲು ಒಂದು ಲೀಟರ್ಗೆ 2,350 ರೂ ಎಂಬ ಆಸೆಯಿಂದ ಕತ್ತೆಗಳ ಯುನಿಟ್ ಹಾಕಲು ಮುಗಿ ಬಿದ್ದರು. ಇದನ್ನೇ ಕಾಯುತ್ತಿದ್ದ ಮುರುಳಿ ಹಾಗೂ ಟೀಂ ಕತ್ತೆಗಳನ್ನು ನಾವೇ ಕೊಡುತ್ತೇವೆ. ಹಾಲನ್ನೂ ನಾವೇ ಖರೀದಿ ಮಾಡುತ್ತೇವೆಂದು ಹೇಳಿದರು. ಒಂದು ಯುನಿಟ್ ಗೆ 3 ಲಕ್ಷ ರೂಪಾಯಿ ನೀಡಬೇಕು. ಮೂರು ಹೆಣ್ಣು ಕತ್ತೆಗಳು ಮೂರು ಮರಿಗಳು ಒಂದು ಪ್ರೀಡ್ಜ್ ನೀಡುತ್ತೇವೆ ಎಂದು ಭರವಸೆ ನೀಡಿದ್ದರು.
ಇದನ್ನೂ ಓದಿ: ನೂರಾರು ಕತ್ತೆ ಸೇಲ್ ಮಾಡಿದ್ದ ಕಂಪನಿಗೆ ಬೀಗ: ಕತ್ತೆಗಳನ್ನ ನಂಬಿ ಬಂಡವಾಳ ಹೂಡಿದ್ದವರು ಕಂಗಾಲು!
ಜಿನ್ನಿ ಮಿಲ್ಕ್ ಬಿಸಿನೆಸ್ ಗೆ ಜನರು ಆಕರ್ಷಿತರಾಗಿ ಕತ್ತೆಗಳ ಯುನಿಟ್ ಪಡೆಯಲು ಮುಂದಾಗಿದ್ದರು. ಇದಕ್ಕಾಗಿ ಜಿನ್ನಿ ಮಿಲ್ಕ್ ಕಂಪನಿ ಮಾಲೀಕ ನುತಲಪಲ್ಲಿ ಮರಳಿ ಒಂದೊಂದು ಯುನಿಟ್ ನವರಿಗೂ ಬಾಂಡ್ ಮಾಡಿಕೊಟ್ಟ. ಬಾಂಡ್ ಪ್ರಕಾರ ಒಂದು ಯುನಿಟ್ ಗಾಗಿ 3 ಲಕ್ಷ ರೂಪಾಯಿ ಹಣ ಭರಿಸಬೇಕು. ಕಂಪನಿಯಿಂದ ಮೂರು ಹೆಣ್ಣು ಕತ್ತೆ ಮೂರು ಮರಿಗಳನ್ನು ಹಾಗೂ ಕತ್ತೆ ಹಾಲನ್ನು ಸಂಗ್ರಹಿಸಲು ಒಂದು ಪ್ರಿಡ್ಜ್ ನೀಡಲಾಗುತ್ತದೆ. ಕತ್ತೆಗಳನ್ನು ನೀಡಿದ ಬಳಿಕ ಅವುಗಳನ್ನು ಸಾಕಿ ನಿತ್ಯ ಹಾಲು ಕರೆದು ಡೀಪ್ ಪ್ರೀಜರ್ ಮಾಡಿ ಸಂಗ್ರಹ ಮಾಡಬೇಕು. ತಿಂಗಳಲ್ಲಿ ಮೂರು ಬಾರಿ ಕತ್ತೆಗಳ ಹಾಲನ್ನು ಕಂಪನಿಯಿಂದಲೇ ಸಂಗ್ರಹ ಮಾಡುತ್ತೇವೆ. ಕತ್ತೆಗಳ ಹಾಲನ್ನು ನಮಗೆ ಮಾತ್ರ ಮಾರಾಟ ಮಾಡಬೇಕು. ಹಾಗೇ ಮೂರು ಬಾರಿ ಹಾಲಿನ ಪೇಮೆಂಟ್ ಮಾಡುತ್ತೇವೆ. ಒಂದು ಯುನಿಟ್ ನಿಂದ ನಿತ್ಯ 1.5 ದಿಂದ 2 ಲೀಟರ್ ಹಾಲನ್ನು ಮಾತ್ರ ಖರೀದಿಗೆ ತೆಗೆದುಕೊಳ್ಳಲಾಗುತ್ತದೆ.
ಹೆಚ್ಚಿಗೆ ಇದ್ದರೆ ಖರೀದಿಗೆ ಪಡೆಯಲ್ಲ. ಒಂದು ವೇಳೆ ಒಂದು ಯುನಿಟ್ ನಿಂದ 1.5 ಲೀಟರ್ ಹಾಲು ಸಿಗಲಿಲ್ಲವೆಂದರೆ ಕತ್ತೆಗಳನ್ನು ಬದಲಾಯಿಸಿ ಬೇರೆ ಕತ್ತೆಗಳನ್ನು ನೀಡುತ್ತೇವೆ. ಒಂದು ವೇಳೆ ಅನಾರೋಗ್ಯದಿಂದ ಕತ್ತೆ ಮೃತಪಟ್ಟರೆ ಹಾಗೂ ಕತ್ತೆ ಗರ್ಭ ಧರಿಸಲು ವಿಫಲವಾದರೆ ಬೇರೆ ಕತ್ತೆಯನ್ನು ನೀಡುತ್ತೇವೆಂದು ಬಾಂಡ್ ನಲ್ಲಿ ಉಲ್ಲೇಖಿಸಿದ್ದಾರೆ. ಒಂದು ವೇಳೆ ಕತ್ತೆಗಳ ಯುನಿಟ್ ಒಂದು ವರ್ಷದೊಳಗೆ ಬಂದ್ ಮಾಡುತ್ತೇವೆಂದರೆ ಶೇಕಡಾ 90 ರಷ್ಟು ಹಣ ವಾಪಸ್ ನೀಡುತ್ತೇವೆ. ಹಾಗೇ 2 ವರ್ಷಕ್ಕೆ ಶೇಕಡಾ 80 ಹಾಗೂ 3 ವರ್ಷಕ್ಕೆ ಶೇಕಡಾ 70 ಹಣ ವಾಪಸ್ ನೀಡತ್ತೇವೆ ಎಂದು ಬಾಂಡ್ ನಲ್ಲಿ ಬರೆದುಕೊಟ್ಟಿದ್ದಾರೆ. ಇದನ್ನೆಲ್ಲ ನಂಬಿದ ವಿಜಯಪುರ ಜಿಲ್ಲೆಯ ಯುವಕರು 57 ಯುನಿಟ್ ಗಳಿಗೆ ಹಣ ಸಂದಾಯ ಮಾಡಿದ್ದಾರೆ. ಈಪೈಕಿ 8 ಯುನಿಟ್ ಗಳಿಗೆ ಮಾತ್ರ ಕತ್ತೆಗಳನ್ನು ನೀಡಲಾಗಿದೆ. ಆದರೆ ಈವರೆಗೂ ಕತ್ತೆಗಳ ಹಾಲನ್ನು ಮಾರಾಟಕ್ಕೆ ತೆಗೆದುಕೊಂಡು ಹೋಗಿಲ್ಲ. ಇದೀಗಾ ತಾವು ಮೋಸ ಹೋಗಿದ್ದೇವೆಂದು ತಿಳಿದು ಇವರೆಲ್ಲಾ ಕಂಗಾಲಾಗಿದ್ದಾರೆ.
ಇದನ್ನೂ ಓದಿ: ನೂರಾರು ಕತ್ತೆ ಸೇಲ್ ಮಾಡಿ ಮೋಸ: ಪ್ರಕರಣ ಸಿಐಡಿ ಕೈಗೆ, ಆರೋಪಿಗಳ ಪತ್ತೆಗೆ ವಿಶೇಷ ತಂಡ ರಚನೆ
ಕತ್ತೆಗಳನ್ನು ಸಾಕಿ ಲಕ್ಷ ಲಕ್ಷ ಹಣ ಗಳಿಸಬೇಕೆಂಬ ಆಸೆಯಲ್ಲಿ ಸಾಲ ಮಾಡಿ ಒಂದೊಂದು ಯುನಿಟ್ ಗೆ 3 ಲಕ್ಷ ಹಣ ಭರಿಸಿದ್ದವರು ಸಂಕಟ ಪಡುವಂತಾಗಿದೆ. ಒಂದು ಯುನಿಟ್ ಗೆ 3 ಲಕ್ಷ ರೂಪಾಯಿ ಭರಿಸುವುದರ ಜೊತೆಗೆ ಕತ್ತೆಗಳ ಸಾಕು ಶೇಡ್ ಹಾಕುವುದು, ಅವುಗಳಿಗೆ ನೀರು ಮೇವು ಹಾಗೂ ಇತರೆ ಸೌಲಭ್ಯಗಳನ್ನು ನೀಡಲು ಸಹ ನಿತ್ಯ ನೂರಾರು ರೂಪಾಯಿ ಖರ್ಚು ಮಾಡುತ್ತಿದ್ದಾರೆ. ಕೈಯ್ಯಲ್ಲಿದ್ದ ಕಾಸನ್ನು ಕಳೆದುಕೊಂಡು ಕತ್ತೆಗಳ ಪಾಲನೆ ಮಾಡುವಂತಾಗಿದೆ. ಕಳೆದ ಎರಡು ತಿಂಗಳಿನಿಂದ ಹಾಲನ್ನು ಕರೆದು ಸಂಗ್ರಹ ಮಾಡಿಟ್ಟು ಸಾಕಾಗಿದೆ. ಹಾಲು ಒಯ್ಯದ ಕಾರಣ ಕತ್ತೆಗಳ ಹಾಲನ್ನು ಕರೆಯದೇ ಬಿಟ್ಟಿದ್ದೇವೆ. ನಮಗೆ ನ್ಯಾಯ ಬೇಕೆಂದು ಒತ್ತಾಯ ಮಾಡಿದ್ದಾರೆ. ಬಡ್ಡಿಗೆ ಸಾಲ ಮಾಡಿ ಹಣ ಭರಿಸಿದ್ದೇವೆ. ಮನೆ, ಆಟೋ ಮಾರಾಟ ಮಾಡಿ ಹಣ ಕೊಟ್ಟಿದ್ದೇವೆ. ಈಗ ಮೋಸ ಹೋಗಿದ್ದೇವೆ. ಹೊಸಪೇಟೆಯ ಟೌನ್ ಪೊಲೀಸ್ ಠಾಣೆಯಲ್ಲಿ ದೂರು ನೀಡದ್ದೇವೆ. ಪೊಲೀಸರ ತನಿಖೆ ನಡೆಸಿ ನಮಗೆ ನ್ಯಾಯ ನೀಡಬೇಕೆಂದು ಮನವಿ ಮಾಡಿದ್ದಾರೆ.
ಸದ್ಯ ಹೊಸಪೇಟೆಯಲ್ಲಿನ ಜಿನ್ನಿ ಮಿಲ್ಕ್ ಕಂಪನಿಯ ಕಚೇರಿಗೆ ಬೀಗ ಬಿದ್ದಿದೆ. ಕಂಪನಿಯ ಓನರ್ ಮುರಳಿ ಹಾಗೂ ಸಿಬ್ಬಂದಿ ನಾಪತ್ತೆಯಾಗಿದ್ದಾರೆ. ವಿಜಯಪುರ ಜಿಲ್ಲೆ ಹಾಗೂ ಇತರೆ ಜಿಲ್ಲೆಗಳ ಜನರು ಹಣ ಹಾಕಿದ್ದ ಬ್ಯಾಂಕ್ ಖಾತೆಯಲ್ಲಿನ ಎಲ್ಲಾ ಹಣ ಖಾಲಿಯಾಗಿದೆ. ಕಾರಣ ಕಂಪನಿಯ ಬ್ಯಾಂಕ್ ಅಕೌಂಟ್ ನನ್ನು ಸ್ಥಗಿತ ಮಾಡಿ ಸೀಜ್ ಮಾಡಿದರೂ ಅದರಲ್ಲಿ ಹಣವಿಲ್ಲದ ಕಾರಣ ಯಾವುದೇ ಉಪಯೋಗವಿಲ್ಲವಾಗಿದೆ.
ಈ ರೀತಿ ಕತ್ತೆ ಮಾರಾಟ ಹಾಗೂ ಕತ್ತೆಗಳ ಹಾಲು ಖರೀದಿ ಮಾಡುವ ನೆಪದಲ್ಲಿ ರಾಜ್ಯದ ವಿವಿಧ ಜಿಲ್ಲೆಗಳ ಜನರಿಗೆ ಕೋಟಿ ಕೋಟಿ ಪಂಗನಾಮ ಹಾಕಿದವರ ಪತ್ತೆ ಮಾಡಿ ಜನರ ಹಣವನ್ನು ವಾಪಸ್ ಪಡೆಯುವತ್ತ ಪೊಲೀಸರು ಕ್ರಮ ತೆಗೆದುಕೊಳ್ಳಬೇಕಿದೆ. ಈ ಪ್ರಕರಣದಲ್ಲಿ ಸರ್ಕಾರ ಗೃಹ ಇಲಾಖೆ ಗಮನ ಹರಿಸಬೇಕಿದೆ.
ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ