ವಿಜಯಪುರ: ನಮ್ಮಲ್ಲಿ ಬೇಧಭಾವ ಇಲ್ಲ, ಎಲ್ಲರೂ ಕೂಡಿ ಜಾತ್ರೆ ಮಾಡುತ್ತೇವೆ; ಸೌಹಾರ್ದತೆಗೆ ಸಾಕ್ಷಿಯಾದ ಗುರುಚಕ್ರವರ್ತಿ ಸದಾಶಿವ ಜಾತ್ರೆ
ದೇವಸ್ಥಾನಗಳಲ್ಲಿ, ಜಾತ್ರೆಗಳಲ್ಲಿ ಹಬ್ಬ ಹರಿದಿನಗಳಲ್ಲಿ ಮುಸ್ಲೀಂ ವ್ಯಾಪಾರಸ್ಥರಿಗೆ ನಿಷೇಧದ ಮಾತು ಕೇಳಿಬರುತ್ತಿರುವ ನಡುವೆ ಇದಕ್ಕೆ ಹೊರತಾಗಿ ಸಾಮರಸ್ಯಕ್ಕೆ ಸಾಕ್ಷಿಯಾಗಿದೆ ವಿಜಯಪುರ ಜಿಲ್ಲೆ. ಶ್ರೀ ಗುರುಚಕ್ರವರ್ತಿ ಸದಾಶಿವ ಜಾತ್ರೆ ಕೋಮು ಸೌಹಾರ್ದತೆಗೆ ವೇದಿಕೆಯಾಗಿದೆ.
ವಿಜಯಪುರ: ಇಲ್ಲಿನ ಶ್ರೀ ಗುರುಚಕ್ರವರ್ತಿ ಸದಾಶಿವ ಜಾತ್ರಾ ಮಹೋತ್ಸವ ಕೋಮು ಸೌಹಾರ್ದತೆಗೆ ವೇದಿಕೆಯಾಗಿದೆ. ಸಾಮರಸ್ಯಕ್ಕೆ ಸಾಕ್ಷಿಯಾಗಿದೆ. ವಿಜಯಪುರ ತಾಲೂಕಿನ ಕತಕನಹಳ್ಳಿಯಲ್ಲಿ ನಡೆದ ಜಾತ್ರೆಯಲ್ಲಿ ಮುಸ್ಲಿಂ ವರ್ತಕರು ವ್ಯಾಪಾರ ಮಾಡಲು ಅವಕಾಶ ನೀಡಲಾಗಿದೆ. ಜಾತಿ, ಧರ್ಮ ಬದಿಗಿಟ್ಟು ಗ್ರಾಮಸ್ಥರು ಒಂದಾಗಿ ಜಾತ್ರೆ ಮಾಡುತ್ತಿದ್ದಾರೆ. ರಾಜ್ಯದ ವಿವಿಧೆಡೆ ಹಿಂದೂ ದೇವಸ್ಥಾನಗಳಲ್ಲಿ ಜಾತ್ರೆಗಳಲ್ಲಿ ಮುಸ್ಲಿಂ ವ್ಯಾಪಾರಿಗಳಿಗೆ ನಿರ್ಬಂಧ ವಿಚಾರದ ನಡುವೆ ಸಾಮರಸ್ಯದ ಘಟನೆ ನಡೆದಿದೆ. ದೇವಸ್ಥಾನಗಳಲ್ಲಿ, ಜಾತ್ರೆಗಳಲ್ಲಿ ಹಬ್ಬ ಹರಿದಿನಗಳಲ್ಲಿ ಮುಸ್ಲಿಂ ವ್ಯಾಪಾರಸ್ಥರಿಗೆ ನಿಷೇಧದ ಮಾತು ಕೇಳಿಬರುತ್ತಿರುವ ನಡುವೆ ಇದಕ್ಕೆ ಹೊರತಾಗಿ ಸಾಮರಸ್ಯಕ್ಕೆ ಸಾಕ್ಷಿಯಾಗಿದೆ ವಿಜಯಪುರ ಜಿಲ್ಲೆ. ಶ್ರೀ ಗುರುಚಕ್ರವರ್ತಿ ಸದಾಶಿವ ಜಾತ್ರೆ ಕೋಮು ಸೌಹಾರ್ದತೆಗೆ ವೇದಿಕೆಯಾಗಿದೆ.
ವಿಜಯಪುರ ತಾಲೂಕಿನ ಕತಕನಹಳ್ಳಿ ಗ್ರಾಮದಲ್ಲಿ ನಡೆಯುತ್ತಿರೋ ಜಾತ್ರೆ, ಶ್ರೀ ಗುರುಚಕ್ರವರ್ತಿ ಸದಾಶಿವ ಜಾತ್ರೆಯಲ್ಲಿ ಎಲ್ಲರೂ ಸಮಾನರು. ಯಾವುದೇ ಧರ್ಮ ಸಮುದಾಯದ ಬೇಧ ಭಾವವಿಲ್ಲ. ಸರ್ವ ಧರ್ಮೀಯರು ಕೂಡಿಕೊಂಡು ಭಾಗಿಯಾಗುವ ಜಾತ್ರೆ ಇದಾಗಿದೆ. ಭಾವೈಕ್ಯತೆಗೆ ಹಿಂದೂ- ಮುಸ್ಲಿಂ ಏಕತೆ ಸಾರುವ ಜಾತ್ರೆಯಲ್ಲಿ ಸರ್ವ ಧರ್ಮೀಯರಿಗೂ ವ್ಯಾಪಾರ ವಹಿವಾಟಿಗೆ ಅವಕಾಶ ಇದೆ. ಮುಸ್ಲೀಂ ವ್ಯಾಪಾರಸ್ಥರಿಗೂ ಅನುಮತಿ ಇದೆ. ನಮ್ಮಲ್ಲಿ ಬೇಧಭಾವ ಇಲ್ಲ, ಎಲ್ಲರೂ ಕೂಡಿ ಜಾತ್ರೆ ಮಾಡುತ್ತೇವೆ ಎಂದು ಗ್ರಾಮಸ್ಥರು ಹೇಳಿದ್ದಾರೆ. ನಮಗೆಲ್ಲರಿಗೂ ವ್ಯಾಪಾರ ವಹಿವಾಟಿಗೆ ಅವಕಾಶ ನೀಡಿದ್ದಾರೆ ಎಂದು ಮುಸ್ಲಿಂ ವ್ಯಾಪಾರಿಗಳು ಹೇಳಿದ್ದಾರೆ. ಸರ್ವ ಧರ್ಮೀಯರು ಒಟ್ಟಾಗಿ ಆಚರಿಸೋ ಜಾತ್ರೆ ಇತರರಿಗೆ ಮಾದರಿ ಆಗಿದೆ.
ಕಲಬುರಗಿ: ಸರ್ವಧರ್ಮಗಳ ಜನರಿಂದ ಯುಗಾದಿ ಹಬ್ಬ
ಇತ್ತ ಕಲಬುರಗಿಯಲ್ಲೂ ಅಂತಹ ಸಾಮರಸ್ಯದ ಘಟನೆ ನಡೆದಿದೆ. ಹಲಾಲ್, ಜಟ್ಕಾ ಕಟ್ ನಡುವೆ ಕಲಬುರಗಿಯಲ್ಲಿ ವಿಭಿನ್ನ ರೀತಿಯಲ್ಲಿ ಯುಗಾದಿ ಆಚರಣೆ ಮಾಡಲಾಗಿದೆ. ಸರ್ವಧರ್ಮಗಳ ಜನರಿಂದ ಯುಗಾದಿ ಹಬ್ಬ ಆಚರಿಸಲಾಗಿದೆ. ಕಲಬುರಗಿ ನಗರದ ಬಸವೇಶ್ವರ ಮೂರ್ತಿ ಬಳಿ ಹಬ್ಬ ಆಚರಣೆ ಮಾಡಲಾಗಿದೆ. ಯುಗಾದಿ ಹಬ್ಬದ ಅಂಗವಾಗಿ ಸರ್ವಧರ್ಮಿಯರು ಬೇವು ಬೆಲ್ಲದ ಪಾನಕ ಸವಿದಿದ್ದಾರೆ. ಸೌಹಾರ್ದ ಕರ್ನಾಟಕ ತಂಡದಿಂದ ಹಬ್ಬದ ಆಯೋಜನೆ ಮಾಡಲಾಗಿದೆ. ಹಿಂದು, ಮುಸ್ಲಿಂ, ಕ್ರಿಶ್ಚಿಯನ್ ಸೇರಿದಂತೆ ಅನೇಕ ಧರ್ಮದ ಜನ ಭಾಗಿ ಆಗಿದ್ದಾರೆ. ಒಬ್ಬರು ಮತ್ತೊಬ್ಬರಿಗೆ ಬೇವು ಬೆಲ್ಲದ ಪಾನಕ ಕುಡಿಸಿ ಶುಭಾಶಯ ವಿನಿಮಯ ಮಾಡಿಕೊಂಡಿದ್ದಾರೆ. ಧರ್ಮಗಳ ನಡುವೆ ವೈಮನಸ್ಯು ಹೆಚ್ಚುತ್ತಿರುವ ಸಮಯದಲ್ಲಿ ಸಾಮರಸ್ಯದ ಹಬ್ಬ ಕಂಡುಬಂದಿದೆ. ನಾವೆಲ್ಲರು ಒಂದೇ, ದಯವಿಟ್ಟು ಧರ್ಮಗಳ ನಡುವೆ ಜಗಳ ಬೇಡ ಎಂದು ಈ ವೇಳೆ ಮನವಿ ಮಾಡಲಾಗಿದೆ.
ಬೆಂಗಳೂರಿನಲ್ಲಿ ಹಲಾಲ್ ಕಟ್ ಮಾಂಸ ವಿರೋಧಿಸಿ ಅಭಿಯಾನ
ಇತ್ತ ಬೆಂಗಳೂರಿನಲ್ಲಿ ಹಲಾಲ್ ಕಟ್ ಮಾಂಸ ವಿರೋಧಿಸಿ ಅಭಿಯಾನ ಕಂಡುಬಂದಿದೆ. ದೇವಾಲಯದ ಬಳಿ ಹಿಂದೂ ಪರ ಸಂಘಟನೆಗಳಿಂದ ಅಭಿಯಾನ ನಡೆಸಲಾಗಿದೆ. ಹಲಾಲ್ ಕಟ್ ಮಾಂಸ ಖರೀದಿ ಮಾಡದಂತೆ ಜನರಲ್ಲಿ ಮನವಿ ಮಾಡಲಾಗಿದೆ. ಹಿಂದೂ ಪರ ಸಂಘಟನೆಯ ಮಹಿಳಾ ಕಾರ್ಯಕರ್ತೆಯರು ಮನವಿ ಮಾಡಿದ್ದಾರೆ. ದೇವಾಲಯಕ್ಕೆ ಬರುವ ಭಕ್ತರಿಗೆ ಸದಸ್ಯರು ಮನವಿ ಮಾಡಿದ್ದಾರೆ. ಪ್ರಸನ್ನ ವೀರಾಂಜನೇಯ ಸ್ವಾಮಿ ದೇವಾಲಯದಲ್ಲಿ ಅಭಿಯಾನ ನಡೆಸಲಾಗಿದೆ. ಬೆಂಗಳೂರಿನ ಮಹಾಲಕ್ಷ್ಮೀ ಲೇಔಟ್‌ನಲ್ಲಿರುವ ದೇವಾಲಯದಲ್ಲಿ ಘಟನೆ ನಡೆದಿದೆ.
ಇದನ್ನೂ ಓದಿ: Jumma masjid: ಜುಮ್ಮಾ ಮಸೀದಿಗೆ ಭೇಟಿ ನೀಡುವ ಮೂಲಕ ಸೌಹಾರ್ದತೆ ಮೆರೆದ ಗವಿಸಿದ್ದೇಶ್ವರ ಸ್ವಾಮೀಜಿ, ಏನು ಹೇಳಿದರು?
ಇದನ್ನೂ ಓದಿ: ಕರ್ನಾಟಕ ನಮ್ಮದು, ರಾಜ್ಯ ಒಡೆಯುವ ದ್ರೋಹಿಗಳದ್ದಲ್ಲ; ಟ್ವೀಟ್ ಮೂಲಕ ಹೆಚ್ಡಿ ಕುಮಾರಸ್ವಾಮಿ ಆಕ್ರೋಶ
Published On - 1:02 pm, Sat, 2 April 22