900ಕ್ಕೂ ಹೆಚ್ಚು ಜೋಗತಿಯರು, ಮಂಗಳಮುಖಿಯರಿಗೆ ಉಡಿ ತುಂಬಿ ಗೌರವ: ವಿಶೇಷ ಕಾರ್ಯಕ್ರಮಕ್ಕೆ ಸಾಕ್ಷಿಯಾದ ವಿಜಯಪುರ
ಮಂಗಳಮುಖಿಯರಿಗೆ ಜೋಗತಿಯರಿಗೆ ದುರ್ಗಾದೇವಿ ದೇವಸ್ಥಾನದಲ್ಲಿ ನವರಾತ್ರಿಯು ಮೊದಲ ದಿನ ಉಡಿ ತುಂಬುವ ಸುದ್ದಿ ತಿಳಿದು 900 ಕ್ಕೂ ಹೆಚ್ಚು ಮಂಗಳಮುಖಿಯರು ಹಾಗೂ ಜೋಗತಿಯರು ಭಾಗಿಯಾದರು.
ವಿಜಯಪುರ: ಎಲ್ಲೆಡೆ ದಸರಾ ಹಬ್ಬರ ಸಡಗರ ಸಂಭ್ರಮ ಮನೆ ಮಾಡಿದೆ. ದಸರಾ ಸಂದರ್ಭದಲ್ಲಿ ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ತಂಗಡಗಿ ಗ್ರಾಮದ ಶ್ರೀ ದುರ್ಗಾದೇವಿ ಜಾತ್ರೆ ನಡೆಯುತ್ತದೆ. ಪ್ರತಿ ವರ್ಷದಂತೆ ನಡೆಯೋ ತಂಗಡಿಯ ಶ್ರೀ ದುರ್ಗಾ ದೇವಿಯ ಜಾತ್ರೆ ಈ ಬಾರಿ ವಿಶೇಷವಾಗಿತ್ತು. ಗ್ರಾಮದ ಹಿರಿಯರು, ದುರ್ಗಾದೇವಿಯ ಆರಾಧಕ ಶಾಂತಪ್ಪ ಪೂಜಾರಿ ಹಾಗೂ ದುರ್ಗಾದೇವಿ ದೇವಸ್ಥಾನದ ಆಡಳಿತ ಮಂಡಳಿ ಈ ಬಾರಿ ದಸರಾ ಹಬ್ಬವನ್ನು ವಿಶೇಷವಾಗಿ ಮಾಡಬೇಕೆಂದು ತೀರ್ಮಾನ ಮಾಡಿದ್ದರು. ಹೀಗೆ ನಿರ್ಧಾರ ಮಾಡಿದ ಬಳಿಕ ನವರಾತ್ರಿಯಲ್ಲಿ ಯಾವ ರೀತಿಯ ವಿಶೇಷ ಮಾಡೋಣವೆಂದು ಯೋಚಿಸಿದರು. ಆಗ ಹೊಳೆದದ್ದೇ ಉಡಿ ತುಂಬುವ ಕಾರ್ಯಕ್ರಮ. ನವರಾತ್ರಿ ಹಬ್ಬದಲ್ಲಿ ಸಾಲು-ಸಾಲು ಧಾರ್ಮಿಕ ಕಾರ್ಯಕ್ರಮಗಳು ಜರಗುತ್ತಿವೆ. ಎಲ್ಲಾ ದೇವಸ್ಥಾನಗಳಲ್ಲಿ ವಿಶೇಷ ಪೂಜೆ ಪುನಸ್ಕಾರಗಳು ನಡೆಯುತ್ತವೆ. ಇನ್ನು ಶಕ್ತಿ ದೇವತೆ ದುರ್ಗಾ ದೇವಿಯ ದೇವಸ್ಥಾನದಲ್ಲಿ ಕೇಳಬೇಕೆ.
ವಿವಿಧ ಧಾರ್ಮಿಕ ಹಾಗೂ ಪೂಜಾ ಕೈಂಕರ್ಯಗಳು ನಡೆಯುತ್ತವೆ. ಇಷ್ಟ ಮದ್ಯೆ ಉಡಿ ತುಂಬುವ ಕಾರ್ಯಕ್ರಮ ಮಾಡಲು ತಂಗಡಗಿ ಗ್ರಾಮದ ಜನರು ಹಾಗೂ ದುರ್ಗಾದೇವಿ ದೇವಸ್ಥಾನದ ಆಡಳಿತ ಮಂಡಳಿ ಹಾಗೂ ಗುರು ಹಿರಿಯರು ಮುಂದಾದರು. ಉಡಿಯನ್ನು ಸುಮಂಗಲೆಯರಿಗೆ ಯಾವ ರೀತಿ ತುಂಬಲಾಗುತ್ತದೆಯೋ ಅದೇ ಮಾದರಿಯಲ್ಲಿ ಮಂಗಳಮುಖಿಯರಿಗೆ ಹಾಗು ಜೋಗತಿಯರಿಗೆ ಈ ಬಾರಿ ಉಡಿ ತುಂಬಿ ಗೌರವಿಸೋದೇ ವಿಶೇಷವಾಗಿತ್ತು.
ಶರನ್ನವರಾತ್ರಿಯ ಮೊದಲ ದಿನದ ಕಾರ್ಯಕ್ರಮದಲ್ಲಿ ತಂಗಡಗಿ ಗ್ರಾಮದ ದುರ್ಗಾ ದೇವಿಯ ದೇವಸ್ಥಾನವದಲ್ಲಿ ಮಂಗಳಮುಖಿಯರಿಗೆ ಹಾಗು ಜೋಗತಿಯರಿಗೆ ಸೀರೆ ಸಹಿತ ಉಡಿ ತುಂಬಿ ಗೌರವಿಸಲಾಯಿತು. ಉಡಿ ತುಂಬುವ ಕಾರ್ಯಕ್ರಮದಲ್ಲಿ 900 ಕ್ಕೂ ಆಧಿಕ ಮಂಗಳಮುಖಿಯರು ಹಾಗೂ ಜೋಗತಿಯರು ಭಾಗಿಯಾಗಿದ್ದು, ಮತ್ತೊಂದು ವಿಶೇಷಣವಾಗಿತ್ತು. ಬಿಲ್ ಕೆರೂರ ಸಿದ್ದಲಿಂಗ ಶ್ರೀ ಹಡಪದ ಅನ್ನದಾನಿ ಭಾರತಿ ಅಪ್ಪಣ್ಣ ಶ್ರೀಗಳು ಉಡಿ ತುಂಬುವ ಕಾರ್ಯಕ್ರಮದ ಸಾನಿಧ್ಯವನ್ನು ವಹಿಸಿದ್ದರು. ದುರ್ಗಾ ದೇವಿಯ ಆರಾಧಕ ಶಾಂತಪ್ಪ ಪೂಜಾರಿ ಹಾಗೂ ಇತರರು ಉಡಿ ತುಂಬುವ ಕಾರ್ಯ ನೆರವೇರಿಸಿದರು.
ಇಂಥಹ ವಿಶೇಷ ಕಾರ್ಯಕ್ರಮ ತಂಗಡಗಿ ಗ್ರಾಮದಲ್ಲಿ ಇದೇ ಮೊದಲ ಬಾರಿಗೆ ನಡೆದಿದೆ. ಗ್ರಾಮದಲ್ಲಿ ಮೊದಲು ನವರಾತ್ರಿ ಹಬ್ಬದ ಆಚರಣೆ ಪ್ರಯುಕ್ತ ಕೆಲ ಸುಮಂಗಲೆಯರಿಗೆ ಮಾತ್ರ ಉಡಿ ತುಂಬಲಾಗುತ್ತಿತ್ತು. ಆದರೆ ಇದೆ ಮೊದಲ ಬಾರಿಗೆ ಮಂಗಳಮುಖಿಯರಿಗೆ, ಜೋಗತಿಯರಿಗೆ ಉಡಿ ತುಂಬುವ ಕಾರ್ಯ ಮಾಡಿದ್ದು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ಮೊದಲು 501 ಮುಂಗಳಮುಖಿ ಹಾಗೂ ಜೋಗತಿಯರಿಗೆ ಉಡಿ ತುಂಬುವ ಸಿದ್ದತೆ ಮಾಡಿಕೊಳ್ಳಲಾಗಿತ್ತು. ಆದರೆ ಮಂಗಳಮುಖಿಯರಿಗೆ ಜೋಗತಿಯರಿಗೆ ದುರ್ಗಾದೇವಿ ದೇವಸ್ಥಾನದಲ್ಲಿ ನವರಾತ್ರಿಯು ಮೊದಲ ದಿನ ಉಡಿ ತುಂಬುವ ಸುದ್ದಿ ತಿಳಿದು 900 ಕ್ಕೂ ಹೆಚ್ಚು ಮಂಗಳಮುಖಿಯರು ಹಾಗೂ ಜೋಗತಿಯರು ಭಾಗಿಯಾದರು. ಕರ್ನಾಟಕ-ಮಹಾರಾಷ್ಟ್ರದ ಮಂಗಳಮುಖಿಯರು, ತೃತೀಯ ಲಿಂಗಿಗಳು, ಜೋಗತಿ-ಜೋಗಪ್ಪಗಳು ಹಾಜರಾಗಿದ್ದರು. ಜಾತಿಬೇಧವಿಲ್ಲದೇ ವಿವಿಧ ಜಾತಿಯ ಮಂಗಳಮುಖಿಯರು, ಜೋಗತಿಯರು ಭಾಗಿಯಾಗಿದ್ದರು.
ತಂಗಡಗಿ ಗ್ರಾಮದ ದುರ್ಗಾ ದೇವಿ ಜಾತ್ರೆಯ ಪ್ರಯುಕ್ತ ಮಂಗಳಮುಖಿಯರಿಗೆ ಹಾಗು ಜೋಗತಿಯರಿಗೆ ಉಡಿ ತುಂಬುವ ಕಾರ್ಯಕ್ರಮದ ಸುದ್ದಿ ತಿಳಿದು ಇಲ್ಲಿಗೆ ಬಂದಿದ್ದೇನೆ. ನಮಗೂ ಇಂಥ ಗೌರವ ಸಿಗುತ್ತಿರೋದು ತಿಳಿದು ಖುಷಿಪಟ್ಟಿದ್ದೇನೆ. ಮುದ್ದೇಬಿಹಾಳ ತಾಲೂಕಿನ ಹಡಲಗಿ ಗ್ರಾಮದಿಂದ ಬಂದಿದ್ದೇನೆ. ನಾನೂ ಉಡಿ ತುಂಬಿಕೊಳ್ಳುವ ಮೂಲಕ ಗೌರವ ಪಡೆದುಕೊಂಡಿದ್ದೇನೆ ಎಂದು ಮಂಗಳಮುಖಿ ದಾದಾಪೀರ್ ಹೇಳಿದರು.
ವರದಿ: ಅಶೋಕ ಯಡಳ್ಳಿ, ಟಿವಿ9 ವಿಜಯಪುರ