ತಂತ್ರಜ್ಞಾನದ ಮೂಲಕ 3 ಕೋಟಿ ರೂ ಮೌಲ್ಯದ ಮೊಬೈಲ್​​ಗಳನ್ನ ಪತ್ತೆ ಮಾಡಿದ ವಿಜಯಪುರ ಪೊಲೀಸ್

ನಮ್ಮ ಕೈಯಲ್ಲಿರುವ ಮೊಬೈಲ್ ಎಲ್ಲವನ್ನು ಒಳಗೊಂಡ ಒಂದು ಮಿನಿ ಜಗತ್ತು. ಹಾಗಾಗಿ ಒಂದು ವೇಳೆ ಮೊಬೈಲ್ ಕಳ್ಳತನವಾದರೆ ಅದರಿಂದಾಗುವ ಬೇಜಾರು ಹೇಳಲು ಸಾಧ್ಯವಿಲ್ಲ. ಇನ್ನು ಕಳೆದುಹೋದ ಮೊಬೈಲ್​ ಸಿಕ್ಕಿಬಿಟ್ಟರೆ ಖುಷಿಯೋ ಖುಷಿ. ವಿಜಯಪುರ ಜಿಲ್ಲಾ ಪೊಲೀಸರು ಕಳೆದುಹೋಗಿದ್ದ 3 ಕೋಟಿ ರೂ ಮೌಲ್ಯದ 340 ಮೊಬೈಲ್‌ಗಳನ್ನು ಯಶಸ್ವಿಯಾಗಿ ಪತ್ತೆ ಮಾಡಿ ಮಾಲೀಕರಿಗೆ ಹಸ್ತಾಂತರಿಸಿದ್ದಾರೆ.

ತಂತ್ರಜ್ಞಾನದ ಮೂಲಕ 3 ಕೋಟಿ ರೂ ಮೌಲ್ಯದ ಮೊಬೈಲ್​​ಗಳನ್ನ ಪತ್ತೆ ಮಾಡಿದ ವಿಜಯಪುರ ಪೊಲೀಸ್
ಮಾಲೀಕರಿಗೆ ಮೊಬೈಲ್​ಗಳ ಹಸ್ತಾಂತರ
Image Credit source: tv9 kannada
Edited By:

Updated on: Apr 10, 2026 | 3:10 PM

ವಿಜಯಪುರ, ಏಪ್ರಿಲ್​ 10: ಇತ್ತೀಚೆಗೆ ಮೊಬೈಲ್ ಕಳ್ಳತನ (Lost Mobiles) ಪ್ರಕರಣಗಳು ಹೆಚ್ಚುತ್ತಿವೆ. ಬೆಲೆ ಬಾಳುವ ಮೊಬೈಲ್ ಕಳ್ಳತನ ಪತ್ತೆಗೆ ಕೇಂದ್ರ ಸರ್ಕಾರ ನೂತನ ಸಾಫ್ಟ್‌ವೇರ್​ಗಳನ್ನು ಬಿಡುಗಡೆ ಮಾಡಿದೆ. ಸಿಇಐಆರ್ ಸಾಫ್ಟ್‌ವೇರ್ ಮೂಲಕ ಜಿಲ್ಲಾ ಪೊಲೀಸರು ಕಳೆದ ಆರು ತಿಂಗಳಲ್ಲಿ ಕಳ್ಳತನವಾಗಿದ್ದ 3 ಕೋಟಿ ರೂ ಬೆಲೆ ಬಾಳುವ ಮೊಬೈಲ್​ಗಳನ್ನು ಪತ್ತೆ ಮಾಡಿ ಮಾಲೀಕರಿಗೆ ನೀಡಿದ್ದಾರೆ. ಪೊಲೀಸರ ಕಾರ್ಯಕ್ಕೆ ಜನರು ಮೆಚ್ಚಿಗೆ ವ್ಯಕ್ತಪಡಿಸಿದ್ದಾರೆ.

ಕಳ್ಳತನವಾಗಿದ್ದ ಮೊಬೈಲ್‌ಗಳನ್ನು ಪತ್ತೆ ಮಾಡಿ, ಮಾಲೀಕರಿಗೆ ಹಸ್ತಾಂತರ ಮಾಡುವ ಮೂಲಕ ವಿಜಯಪುರ ಜಿಲ್ಲಾ ಪೊಲೀಸರು ಯಶಸ್ವಿಯಾಗಿದ್ದಾರೆ. ವಿಜಯಪುರ ಜಿಲ್ಲಾ ಪೊಲೀಸ್ ಇಲಾಖೆ ವ್ಯಾಪ್ತಿಯಲ್ಲಿ ಕಳೆದ ಆರು ತಿಂಗಳಲ್ಲಿ ಕಳೆದುಹೋಗಿದ್ದ 340 ಮೊಬೈಲ್‌ಗಳನ್ನು ಪತ್ತೆ ಹಚ್ಚಿ ಮಾಲೀಕರಿಗೆ ಹಸ್ತಾಂತರಿಸಲಾಗಿದೆ.

ಪತ್ತೆಯಾದ ಮೊಬೈಲ್​ಗಳ ಮೌಲ್ಯ 3 ಕೋಟಿ ರೂ ಅಧಿಕ

ಜಿಲ್ಲೆಯ ಬಸವನಬಾಗೇವಾಡಿ, ಇಂಡಿ, ವಿಜಯಪುರ ಹಾಗೂ ಗ್ರಾಮೀಣ ಉಪ ವಿಭಾಗಗಳ ವ್ಯಾಪ್ತಿಯ 26 ಪೊಲೀಸ್ ಠಾಣೆಗಳ ಪೊಲೀಸರು ಕಾರ್ಯಾಚರಣೆ ನಡೆಸಿ 340 ಮೊಬೈಲ್‌ಗಳನ್ನು ಪತ್ತೆ ಮಾಡಿದ್ದಾರೆ. ಪತ್ತೆಯಾದ ಮೊಬೈಲ್‌ಗಳ ಒಟ್ಟು ಮೌಲ್ಯ ಅಂದಾಜು ಸುಮಾರು 3 ಕೋಟಿ ರೂಪಾಯಿಗೂ ಅಧಿಕ ತಿಳಿದುಬಂದಿದೆ.

ಮೊಬೈಲ್​​ ಪತ್ತೆ ಮಾಡಿದ್ದು ಹೇಗೆ? 

ಸೆಂಟ್ರಲ್ ಎಕ್ವಿಪ್‌ಮೆಂಟ್ ಐಡೆಂಟಿಟಿ ರಿಜಿಸ್ಟರ್ (CEIR) ತಂತ್ರಜ್ಞಾನದ ಮೂಲಕ ಮೊಬೈಲ್‌ಗಳನ್ನು ಪತ್ತೆ ಮಾಡಿ ವಶಕ್ಕೆ ಪಡೆಯಲಾಗಿದೆ. ಬಳಿಕ ಕಾನೂನು ಪ್ರಕಾರ ಮೊಬೈಲ್​ಗಳನ್ನು ಮಾಲೀಕರಿಗೆ ಹಿಂತಿರುಗಿಸಲಾಗಿದೆ. ಈ ಕುರಿತು ಮಾಹಿತಿ ನೀಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ, ಸಾರ್ವಜನಿಕರು ಮೊಬೈಲ್ ಕಳೆದುಕೊಂಡ ತಕ್ಷಣ ದೂರು ದಾಖಲಿಸಿದರೆ, ಶೀಘ್ರ ಪತ್ತೆಗೆ ಸಹಕಾರಿಯಾಗುತ್ತದೆ ಎಂದು ಹೇಳಿದ್ದಾರೆ. CEIR ಹಾಗೂ ಇತರೆ ತಂತ್ರಜ್ಞಾನಗಳ ಮೂಲಕ ಸೂಕ್ತ ಭದ್ರತೆಗಳನ್ನು ಕೈಗೊಳ್ಳಬೇಕೆಂದು ಎಸ್ಪಿ ಮಾಹಿತಿ ನೀಡಿದ್ದಾರೆ.

ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ 

ವಿಜಯಪುರ ಜಿಲ್ಲೆಯಾದ್ಯಂತ ಕಳೆದ ಎರಡು ವರ್ಷಗಳಿಂದ ಮೊಬೈಲ್ ಕಳ್ಳತನ ಪ್ರಕರಣಗಳು ಹೆಚ್ಚಿವೆ. ಬೆಲೆ ಬಾಳುವ ಮೊಬೈಲ್ ಕಳ್ಳತನ ಪ್ರಕರಣಗಳು ಪೊಲೀಸರಿಗೆ ತಲೆನೋವಾಗಿತ್ತು. ಇದೇ ವೇಳೆ ಕೇಂದ್ರ ಸರ್ಕಾರ ಸಿಇಐಆರ್ ಸಾಫ್ಟ್‌ವೇರ್ ಅನುಷ್ಠಾನ ಹಾಗೂ ಸಾಥಿ ಆ್ಯಪ್ ಬಿಡುಗಡೆ ಮಾಡಿದ್ದು, ತನಿಖೆಗೆ ಸಾಕಷ್ಟು ಅನುಕೂಲವಾಗಿದೆ. ಈ ನಿಟ್ಟಿನಲ್ಲಿ ತನಿಖೆ ನಡೆಸಿದ ಜಿಲ್ಲಾ ಪೊಲೀಸ್ ಅಧಿಕಾರಿಗಳಿಗೆ ದೊಡ್ಡ ಮಟ್ಟದ ಯಶಸ್ಸು ಸಿಕ್ಕಿದೆ. ಪೊಲೀಸರ ಕಾರ್ಯಕ್ಕೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಬಂದಿದ್ದು ಜಾರ್ಖಂಡ್​ನಿಂದ, ಧರಿಸಿದ್ದು ಆರ್​ಸಿಬಿ ಜೆರ್ಸಿ, ಮಾಡಬಾರದ ಕೆಲಸ ಮಾಡಿ ಪೊಲೀಸ್ ಬಲೆಗೆ ಬಿದ್ದ ಖದೀಮರು!

ಸದ್ಯ 340 ಮೊಬೈಲ್​ಗಳನ್ನು ಪೊಲೀಸರು ಪತ್ತೆ ಮಾಡಿದ್ದಾರೆ. ದೂರು ದಾಖಲಾತಿಯ ಆಧಾರದ ಮೇಲೆ ಆಯಾ ಮೊಬೈಲ್ ಮಾಲೀಕರುಗಳಿಗೆ ಕಾನೂನು ಪ್ರಕಾರ ಮೊಬೈಲ್​ಗಳನ್ನು ವಾಪಸ್ ನೀಡಲಾಗಿದೆ. ಸಾರ್ವಜನಿಕರು ಸಹ ಸೂಕ್ತ ಮುಂಜಾಗೃತಾ ಕ್ರಮಗಳನ್ನು ತೆಗೆದುಕೊಂಡು ಕಳ್ಳತನ ತಡೆಯುವುದಕ್ಕೆ ಹಾಗೂ ಕಳೆದುಕೊಳ್ಳದಂತೆ ಜಾಗೃತ ವಹಿಸಬೇಕಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Follow Us