AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಧುಗಿರಿ, ಶಿರಾ, ಪಾವಗಡ ಜನರ ದಶಕಗಳ ಕನಸಿಗೆ ರೆಕ್ಕೆ: 2027ರ ಡಿಸೆಂಬರ್ ವೇಳೆಗೆ ಲೋಕಾರ್ಪಣೆಯಾಗಲಿವೆ 2 ಪ್ರಮುಖ ರೈಲು ಮಾರ್ಗಗಳು

ಮಧುಗಿರಿ, ಶಿರಾ, ಪಾವಗಡ ಜನರ ದಶಕಗಳ ರೈಲು ಸಂಪರ್ಕದ ಕನಸು 2027ರ ಡಿಸೆಂಬರ್‌ ವೇಳೆಗೆ ನನಸಾಗಲಿದೆ. ತುಮಕೂರು-ಕಲ್ಯಾಣದುರ್ಗ ಮತ್ತು ದಾವಣಗೆರೆ-ತುಮಕೂರು ನೂತನ ರೈಲು ಮಾರ್ಗಗಳು ಪ್ರಗತಿಯಲ್ಲಿದ್ದು, ಪ್ರಧಾನಿ ಮೋದಿ ಅವರಿಂದ ಲೋಕಾರ್ಪಣೆಯಾಗುವ ಸಾಧ್ಯತೆ ಇದೆ. ಈ ಯೋಜನೆಗಳು ಆರ್ಥಿಕ ಪ್ರಗತಿ, ವ್ಯಾಪಾರ-ವಹಿವಾಟು ಹಾಗೂ ಪ್ರಾದೇಶಿಕ ಸಂಪರ್ಕವನ್ನು ಬಲಪಡಿಸಲಿವೆ.

ಮಧುಗಿರಿ, ಶಿರಾ, ಪಾವಗಡ ಜನರ ದಶಕಗಳ ಕನಸಿಗೆ ರೆಕ್ಕೆ: 2027ರ ಡಿಸೆಂಬರ್ ವೇಳೆಗೆ ಲೋಕಾರ್ಪಣೆಯಾಗಲಿವೆ 2 ಪ್ರಮುಖ ರೈಲು ಮಾರ್ಗಗಳು
ತುಮಕೂರು ರೈಲು ಯೋಜನೆ
Jagadisha B
| Edited By: |

Updated on: Jul 14, 2026 | 9:20 PM

Share

ಮುಖ್ಯಾಂಶಗಳು

  • ಮಧುಗಿರಿ, ಶಿರಾ, ಪಾವಗಡ ಜನರ ದಶಕಗಳ ಕನಸಿಗೆ ರೆಕ್ಕೆ
  • 2027ರ ಡಿಸೆಂಬರ್ ವೇಳೆಗೆ ಲೋಕಾರ್ಪಣೆಯಾಗಲಿವೆ 2 ಪ್ರಮುಖ ರೈಲು ಮಾರ್ಗಗಳು
  • ಕಾಮಗಾರಿ ಮುಕ್ತಾಯಗೊಂಡ ತಕ್ಷಣ ಪ್ರಧಾನಿ ನರೇಂದ್ರ ಮೋದಿಯಿಂದ ಚಾಲನೆ

ತುಮಕೂರು, ಜು.14: ತುಮಕೂರು ಜಿಲ್ಲೆಯ ಮಧುಗಿರಿ, ಶಿರಾ ಮತ್ತು ಪಾವಗಡ ಭಾಗದ ಜನರ ದಶಕಗಳ ಕಾಲದ ರೈಲು ಸಂಪರ್ಕದ ಕನಸು ಕೊನೆಗೂ ನನಸಾಗುವ ಹಂತಕ್ಕೆ ತಲುಪಿದೆ. ಒಂದೆಡೆ ದಾವಣಗೆರೆ-ತುಮಕೂರು ರೈಲು ಮಾರ್ಗ ಹಾಗೂ ಮತ್ತೊಂದೆಡೆ ತುಮಕೂರು-ಕಲ್ಯಾಣದುರ್ಗ ನಡುವಿನ ನೂತನ ರೈಲು ಮಾರ್ಗದ ಕಾಮಗಾರಿಗಳು ಅತ್ಯಂತ ಭರದಿಂದ ಸಾಗುತ್ತಿವೆ. ಈ ಎರಡೂ ಮಹತ್ವಾಕಾಂಕ್ಷೆಯ ಯೋಜನೆಗಳನ್ನು 2027ರ ಡಿಸೆಂಬರ್ ವೇಳೆಗೆ ಸಾರ್ವಜನಿಕರ ಸಂಚಾರಕ್ಕೆ ಮುಕ್ತಗೊಳಿಸುವ ಮಹತ್ತರ ಗುರಿಯನ್ನು ಹೊಂದಲಾಗಿದೆ.

ಕೇಂದ್ರ ರೈಲ್ವೆ ಸಚಿವ ವಿ. ಸೋಮಣ್ಣ ಅವರ ಹೊಸ ಭರವಸೆಯ ಮಾತುಗಳು ಈಗ ಈ ಭಾಗದ ಗಡಿಭಾಗದ ಜನರಲ್ಲಿ ಹೊಸ ಆಶಾಕಿರಣ ಮೂಡಿಸಿದೆ. ಪಾವಗಡ ಸಂಪರ್ಕ ಪೂರ್ಣಗೊಂಡಿದೆ. ಈ ಮಾರ್ಗದಲ್ಲಿ ರಾಯದುರ್ಗದಿಂದ ಪಾವಗಡ ಪಟ್ಟಣದವರೆಗಿನ ರೈಲ್ವೆ ಕಾಮಗಾರಿ ಯಶಸ್ವಿಯಾಗಿ ಪೂರ್ಣಗೊಂಡಿದೆ. ತುಮಕೂರಿನಿಂದ ಊರುಕೆರೆ ಜಂಕ್ಷನ್‌ವರೆಗಿನ ಕಾಮಗಾರಿಯೂ ಮುಗಿದಿದ್ದು, ಪಾವಗಡ, ಮಧುಗಿರಿ, ಕೊರಟಗೆರೆ ಹಾಗೂ ತುಮಕೂರು ನಡುವಿನ ಮಾರ್ಗದ ಕೆಲಸಗಳು ಪ್ರಸ್ತುತ ವೇಗವಾಗಿ ಸಾಗುತ್ತಿವೆ.

ಇತ್ತೀಚೆಗಷ್ಟೇ ಮಧುಗಿರಿ ರೈಲ್ವೆ ನಿಲ್ದಾಣದ ನಿರ್ಮಾಣ ಕಾಮಗಾರಿಗೆ ಕೇಂದ್ರ ಸಚಿವ ವಿ. ಸೋಮಣ್ಣ ಹಾಗೂ ಸಚಿವ ಕೆ.ಎನ್. ರಾಜಣ್ಣ ಅವರು ಜಂಟಿಯಾಗಿ ಗುದ್ದಲಿ ಪೂಜೆ ನೆರವೇರಿಸಿದ್ದಾರೆ. ದಾವಣಗೆರೆ – ತುಮಕೂರು ನೇರ ರೈಲು ಮಾರ್ಗದ ಕಾಮಗಾರಿಯೂ ವೇಗ ಪಡೆದುಕೊಂಡಿದ್ದು, ತುಮಕೂರು ಮತ್ತು ಶಿರಾ ನಡುವಿನ ಹಳಿ ಜೋಡಣೆ ಕಾಮಗಾರಿ ಈಗಾಗಲೇ ಪೂರ್ಣಗೊಂಡಿದೆ. ಉಳಿದ ಭಾಗಗಳಲ್ಲೂ ಕೆಲಸ ಅತ್ಯಂತ ತ್ವರಿತಗತಿಯಲ್ಲಿ ನಡೆಯುತ್ತಿದೆ.

ಇದನ್ನೂ ಓದಿ: ಮಳೆ ವೇಳೆ ಗೋಕರ್ಣ ದೇಗುಲದ ಗರ್ಭಗುಡಿಗೆ ನುಗ್ಗುತ್ತಿರುವ ಕೊಳಚೆ ನೀರು: ಕ್ರಮಕ್ಕೆ ಸಿಎಂ ಡಿಕೆ ಶಿವಕುಮಾರ್​​ ಸೂಚನೆ

2027ರ ಡಿಸೆಂಬರ್ ಗಡುವು; ಪ್ರಧಾನಿ ಮೋದಿಯಿಂದ ಉದ್ಘಾಟನೆ

ಕೇಂದ್ರ ರೈಲ್ವೆ ಸಚಿವ ವಿ. ಸೋಮಣ್ಣ ಅವರ ಕಟ್ಟುನಿಟ್ಟಿನ ಮೇಲ್ವಿಚಾರಣೆಯಲ್ಲಿ, ಈ ಹಿಂದೆ ಭೂಸ್ವಾಧೀನದ ಅಡಚಣೆಯಿಂದಾಗಿ ನನೆಗುದಿಗೆ ಬಿದ್ದಿದ್ದ ಯೋಜನೆಗಳಿಗೆ ಈಗ ಮರುಜೀವ ಬಂದಿದೆ.

“2027ರ ಡಿಸೆಂಬರ್ ಒಳಗಾಗಿ ಈ ಎರಡೂ ಮಾರ್ಗಗಳ ಕಾಮಗಾರಿಯನ್ನು ಸಂಪೂರ್ಣವಾಗಿ ಮುಗಿಸಲು ಗಡುವು ವಿಧಿಸಲಾಗಿದೆ. ಕಾಮಗಾರಿ ಮುಕ್ತಾಯಗೊಂಡ ತಕ್ಷಣ ಸ್ವತಃ ಪ್ರಧಾನಿ ನರೇಂದ್ರ ಮೋದಿ ಅವರಿಂದಲೇ ಈ ಐತಿಹಾಸಿಕ ರೈಲು ಮಾರ್ಗಗಳಿಗೆ ಚಾಲನೆ ಕೊಡಿಸುವುದು ನಮ್ಮ ಉದ್ದೇಶವಾಗಿದೆ,” ಎಂದು ಕೇಂದ್ರ ಸಚಿವ ವಿ. ಸೋಮಣ್ಣ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಈ ರೈಲು ಯೋಜನೆಗಳು ಸಂಪೂರ್ಣವಾಗಿ ಲೋಕಾರ್ಪಣೆಗೊಂಡರೆ ಮಧುಗಿರಿ, ಶಿರಾ, ಪಾವಗಡ ಮಾತ್ರವಲ್ಲದೆ ಆಂಧ್ರಪ್ರದೇಶದ ಗಡಿಭಾಗದ ಜನರ ಸಂಚಾರಕ್ಕೆ ಅತ್ಯಂತ ಸುಲಭವಾದ ಸಂಪರ್ಕ ಸಿಗಲಿದೆ. ಜೊತೆಗೆ, ಈ ಭಾಗದಲ್ಲಿ ವ್ಯಾಪಾರ-ವಹಿವಾಟು ವಿಸ್ತರಣೆಯಾಗಲಿದ್ದು, ಕೈಗಾರಿಕಾ ಕ್ಷೇತ್ರ ಹಾಗೂ ಆರ್ಥಿಕ ಪ್ರಗತಿಗೆ ಭಾರಿ ಕೊಡುಗೆ ಸಿಗಲಿದೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us