ಮಳೆ ವೇಳೆ ಗೋಕರ್ಣ ದೇಗುಲದ ಗರ್ಭಗುಡಿಗೆ ನುಗ್ಗುತ್ತಿರುವ ಕೊಳಚೆ ನೀರು: ಕ್ರಮಕ್ಕೆ ಸಿಎಂ ಡಿಕೆ ಶಿವಕುಮಾರ್ ಸೂಚನೆ
ಗೋಕರ್ಣದ ಮಹಾಬಲೇಶ್ವರ ದೇವಾಲಯದ ಗರ್ಭಗುಡಿಗೆ ಕೊಳಚೆ ನೀರು ನುಗ್ಗುತ್ತಿರುವ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸಲು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಸಣ್ಣ ನೀರಾವರಿ ಇಲಾಖೆಗೆ ತಕ್ಷಣದ ಕ್ರಮಕ್ಕಾಗಿ ಆದೇಶಿಸಿದ್ದಾರೆ. ಈ ಸಂಬಂಧ ಪರಿವರ್ತನ ಗೋಕರ್ಣ ಸಂಸ್ಥೆ ಸಲ್ಲಿಸಿದ್ದ ಮನವಿ ಪತ್ರ ಹಾಗೂ ದೇವಾಲಯದೊಳಗೆ ಕೊಳಚೆ ನೀರು ನಿಂತಿರುವ ಚಿತ್ರಗಳನ್ನು ಪರಿಶೀಲಿಸಿರುವ ಸಿಎಂ, ಈ ಕಾಮಗಾರಿಯನ್ನು ತುರ್ತು ಅಗತ್ಯದ ಕೆಲಸವೆಂದು ಪರಿಗಣಿಸಿ ಕೂಡಲೇ ಕೈಗೆತ್ತಿಕೊಳ್ಳಿ ಎಂದು ಮನವಿ ಪತ್ರದ ಮೇಲೆಯೇ ಸೂಚನೆ ಬರೆದಿದ್ದಾರೆ.

ಬೆಂಗಳೂರು/ಕುಮಟಾ, ಜುಲೈ 14: ಗೋಕರ್ಣದ ಪುರಾಣ ಪ್ರಸಿದ್ಧ ಶ್ರೀ ಮಹಾಬಲೇಶ್ವರ ದೇವಾಲಯದ ಗರ್ಭಗುಡಿಗೆ ಮಳೆಗಾಲದಲ್ಲಿ ಕೊಳಚೆ ನೀರು ನುಗ್ಗುತ್ತಿರುವ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿರುವ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಸಣ್ಣ ನೀರಾವರಿ ಇಲಾಖೆಗೆ ತಕ್ಷಣವೇ ಅಗತ್ಯ ಕ್ರಮ ಕೈಗೊಳ್ಳುವಂತೆ ನಿರ್ದೇಶನ ನೀಡಿದ್ದಾರೆ. ದೇವಾಲಯದ ಅಭಿಷೇಕದ ತೀರ್ಥ ಹೊರಹೋಗುವ ಸೋಮಸೂತ್ರವು ಸಂಗಮ ನಾಲೆಗೆ ಸೇರುವ ಸ್ಥಳದಲ್ಲಿ ಗೇಟ್ ವಾಲ್ವ್ ಅಳವಡಿಸಿ, ಮಳೆಗಾಲದಲ್ಲಿ ಹೊರಗಿನ ಕೊಳಚೆ ನೀರು ದೇವಾಲಯದ ಒಳಭಾಗಕ್ಕೆ ಪ್ರವೇಶಿಸದಂತೆ ಶಾಶ್ವತ ವ್ಯವಸ್ಥೆ ಕಲ್ಪಿಸಲು ಸೂಚಿಸಲಾಗಿದೆ.
‘ತುರ್ತು ಅಗತ್ಯದ ಕೆಲಸವೆಂದು ಪರಿಗಣಿಸಿ’
ಈ ಸಂಬಂಧ ಪರಿವರ್ತನ ಗೋಕರ್ಣ ಸಂಸ್ಥೆ ಸಲ್ಲಿಸಿದ್ದ ಮನವಿ ಪತ್ರ ಹಾಗೂ ದೇವಾಲಯದೊಳಗೆ ಕೊಳಚೆ ನೀರು ನಿಂತಿರುವ ಚಿತ್ರಗಳನ್ನು ಪರಿಶೀಲಿಸಿರುವ ಸಿಎಂ, ಈ ಕಾಮಗಾರಿಯನ್ನು ತುರ್ತು ಅಗತ್ಯದ ಕೆಲಸವೆಂದು ಪರಿಗಣಿಸಿ ಕೂಡಲೇ ಕೈಗೆತ್ತಿಕೊಳ್ಳಿ ಎಂದು ಮನವಿ ಪತ್ರದ ಮೇಲೆಯೇ ಸೂಚನೆ ಬರೆದಿದ್ದಾರೆ. ಮಳೆಗಾಲ ಆರಂಭವಾದ ಬಳಿಕ ಎರಡು ಬಾರಿ ಮಹಾಬಲೇಶ್ವರ ದೇವಾಲಯದ ಗರ್ಭಗುಡಿಗೆ ನೀರು ನುಗ್ಗಿ ಭಕ್ತರು ಹಾಗೂ ದೇವಾಲಯ ಆಡಳಿತಕ್ಕೆ ತೊಂದರೆಯಾದ ಕುರಿತು ಮಾಧ್ಯಮಗಳಲ್ಲಿ ಪ್ರಕಟವಾದ ವರದಿಗಳನ್ನು ಗಮನಿಸಿದ ಅವರು ಈ ಸಂಬಂಧ ತಮ್ಮ ಕಚೇರಿಯಲ್ಲಿ ಚರ್ಚೆ ನಡೆಸಿದ್ದಾರೆ.
ಇದನ್ನೂ ಓದಿ: ಉತ್ತರ ಕನ್ನಡದಲ್ಲಿ ಮಳೆ ಆರ್ಭ; ಗೋಕರ್ಣ ಮಹಾಬಲೇಶ್ವರ ದೇಗುಲದ ಗರ್ಭಗುಡಿಗೆ ನುಗ್ಗಿದ ನೀರು, ಹಲವೆಡೆ ಸಂಚಾರ ವ್ಯತ್ಯಯ
ಈ ವೇಳೆ ಉಪಸ್ಥಿತರಿದ್ದ ಕಾಂಗ್ರೆಸ್ ಪಕ್ಷದ ರಾಜ್ಯ ಕಾರ್ಯದರ್ಶಿ ನಿವೇದಿತ್ ಆಳ್ವಾ, ದೇವಾಲಯ ಎದುರಿಸುತ್ತಿರುವ ಸಮಸ್ಯೆಗಳ ಕುರಿತು ಮುಖ್ಯಮಂತ್ರಿಗಳಿಗೆ ವಿವರಿಸಿದ್ದಾರೆ. ಇದೇ ವೇಳೆ ಮಾಜಿ ಸಚಿವ ಹಾಗೂ ಭಟ್ಕಳ ಶಾಸಕ ಮಂಕಾಳ ವೈದ್ಯ, ಗೋಕರ್ಣದ ರಸ್ತೆ ಅಭಿವೃದ್ಧಿ ಹಾಗೂ ಕೋಟಿತೀರ್ಥ ಅಭಿವೃದ್ಧಿ ಯೋಜನೆಗಳ ವಿಷಯವನ್ನೂ ಮುಖ್ಯಮಂತ್ರಿಗಳ ಗಮನಕ್ಕೆ ತಂದಿದ್ದಾರೆ.
ಈ ಕುರಿತು ಮಾತನಾಡಿದ ಕಾಂಗ್ರೆಸ್ ರಾಜ್ಯ ಕಾರ್ಯದರ್ಶಿ ನಿವೇದಿತ್ ಆಳ್ವಾ, ಗೋಕರ್ಣ ಕ್ಷೇತ್ರದ ಅಭಿವೃದ್ಧಿಯ ಬಗ್ಗೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಆರಂಭದಿಂದಲೂ ವಿಶೇಷ ಕಾಳಜಿ ಇದ್ದು, ಮೊದಲ ಹಂತವಾಗಿ ದೇವಾಲಯಕ್ಕೆ ಎದುರಾಗಿರುವ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ತಿಳಿಸಿದ್ದಾರೆ. ಮಾಜಿ ಸಚಿವ ಹಾಗೂ ಭಟ್ಕಳ ಶಾಸಕ ಮಂಕಾಳ ವೈದ್ಯ ಮಾತನಾಡಿ, ಮುಖ್ಯಮಂತ್ರಿಗಳ ನಿರ್ದೇಶನದಂತೆ ಸಂಬಂಧಪಟ್ಟ ಅಧಿಕಾರಿಗಳು ತಕ್ಷಣ ಕಾರ್ಯಪ್ರವೃತ್ತರಾಗಲಿದ್ದು, ಮುಂದಿನ ದಿನಗಳಲ್ಲಿ ಗೋಕರ್ಣ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಹೊಸ ಯೋಜನೆಗಳನ್ನು ರೂಪಿಸಿ ಜಾರಿಗೊಳಿಸಲಾಗುವುದು. ಈ ಅಭಿವೃದ್ಧಿ ಕಾರ್ಯಕ್ಕೆ ಎಲ್ಲ ರೀತಿಯ ಸಹಕಾರ ನೀಡಲಾಗುವುದು ಎಂದು ಹೇಳಿದ್ದಾರೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.




