Vijayapura: ರಾಜಕೀಯ ದ್ವೇಷದಿಂದ ಚುನಾವಣೆ ಅಬ್ಬರದ ಮಧ್ಯೆ ಪಾಲಿಕೆ ಸದಸ್ಯೆಯ ಗಂಡನನ್ನು ಕಾರಲ್ಲಿ ಕುಳಿತಿದ್ದಾಗಲೇ ಶೂಟೌಟ್ ಮಾಡಿಬಿಟ್ಟರು! ಅವ ರೌಡಿ ಶೀಟರ್ ಆಗಿದ್ದ!
ಹೈದರಅಲಿ ಮೇಲೆ ದಾಳಿ ಮಾಡಿದಾಗ ಎದುರಿಗೆ ಇದ್ದ ಆತನ ಪತ್ನಿ ನಡೆದ ಘಟನೆಯನ್ನು ಹೀಗೆ ವಿವರಿಸಿದ್ದಾಳೆ: ಶೇಖ್ ಅಹ್ಮದ್ ಮೋದಿ ಹಾಗೂ ನ್ಯಾಯವಾದಿ ಎಸ್ ಎಸ್ ಖಾದ್ರಿ ಬೈಕಿನಲ್ಲಿ ಬಂದಿದ್ದರು. ನನ್ನ ಗಂಡನ ಬಳಿ ಮಾತನಾಡುವ ಹಾಗೆ ನಾಟಕ ಮಾಡಿದರು. ಶೇಖ್ ಅಹ್ಮದ್ ಮೋದಿ ಮಚ್ಚು ತೆಗೆದು ಕಾರಿನ ಹಿಂದಿನ ಗಾಜು ಒಡೆದು ನನ್ನ ಗಂಡನ ತಲೆಗೆ ಹೊಡೆದ ಎಂದಿದ್ದಾರೆ.
ಅದು ಕಳೆದ ಶನಿವಾರ ಮೇ 6 ರಂದು ಇಡೀ ವಿಜಯಪುರ ಜಿಲ್ಲೆ ವಿಧಾನಸಭಾ ಚುನಾವಣೆ ಅಬ್ಬರದಲ್ಲಿ ಮುಳುಗಿತ್ತು. ರಾಜಕೀಯ ಪಕ್ಷಗಳು ಪ್ರಚಾರದ ಭರಾಟೆಯಲ್ಲಿ ಕಳೆದು ಹೋಗಿದ್ದರು. ಜಿಲ್ಲಾ ಪೊಲೀಸರು ಇದೇ ಚುನಾವಣೆಯ ಕರ್ತವ್ಯದಲ್ಲಿ ನಿರತರಾಗಿದ್ದರು. ಇಷ್ಟರ ಮಧ್ಯೆ ಅಂದು ಬೆಳಿಗ್ಗೆ 10-30 ರ ಸುಮಾರಿಗೆ ವಿಜಯಪುರ ನಗರದ (vijayapura) ಜನರು ಜೋರಾಗಿಯೇ ಬೆಚ್ಚಿಬಿದ್ದರು. ಚುನಾವಣೆಯ ವೇಳೆ ನಗರದಲ್ಲೇ ಗುಂಡಿನ ಮೊರೆತ ಕೇಳಿ ಬಂದಿದ್ದು ಜನರು ಬೆಚ್ಚಿ ಬೀಳಲು ಕಾರಣವಾಗಿತ್ತು. ಹಾಡ ಹಗಲೇ ಗುಂಡಿನ ಸದ್ದು ಜನರ ಜಂಘಾ ಬಲವನ್ನೇ ಅಡಗಿಸಿ ಬಿಟ್ಟಿತ್ತು. ಮಹಾನಗರ ಪಾಲಿಕೆಯ ಸದಸ್ಯೆಯ ಪತಿಯ ಗುಂಡಿಗೆಯನ್ನು ಸೀಳಿದಾಗ ಆ ಗುಂಡಿನ ಸದ್ದು ಕೇಳಿಬಂದಿತ್ತು. ಅದು ಆತನ್ನ ಉಸಿರನ್ನೇ ನಿಲ್ಲಿಸಿತ್ತು. ರೌಡಿ ಶೀಟರ್ ಆಗಿದ್ದ (Rowdy sheeter) ಕಾರ್ಪೋರೇಟರ್ ಪತಿ ಶೂಟೌಟ್ ಗೆ ಬಲಿಯಾದ ಕುರಿತು ಪೊಲೀಸ್ ವಾರೆಂಟ್ ಸ್ಟೋರಿ ಇಲ್ಲಿದೆ ಓದಿ. ವಿಜಯಪುರ ನಗರದಲ್ಲಿ ಮತ್ತೊಮ್ಮೆ ಗುಂಡಿನ ಮೊರೆತ, 2021 ರ ಬಳಿಕ ಗುಂಡಿನ ಸದ್ದು ಕೇಳಿ ನಗರ ಭಾಗದ ಜನ ನಡುಗಿದ್ದಾರೆ. ಪಾಲಿಕೆ ಸದಸ್ಯೆಯ ಪತಿ (husband) ರೌಡಿ ಶೀಟರ್ ಆಗಿದ್ದವನ ಮೇಲೆ ಫೈರಿಂಗ್ ನಡೆಸಿದ ದುಷ್ಕರ್ಮಿಗಳು ಸ್ಥಳದಲ್ಲೇ ಆತನನ್ನು ಹತ್ಯೆಗೈದಿದ್ದರು. ರಾಜ್ಯ ವಿಧಾನಸಭಾ ಚುನಾವಣೆ ನಡೆಯುತ್ತಿರೋ ವೇಳೆಯೇ ವಿಜಯಪುರ ಜಿಲ್ಲೆಯಲ್ಲಿ ಗುಂಡಿನ ಮೊರೆತ ಕೇಳಿ ಬಂದಿದೆ. ವಿಜಯಪುರ ನಗರದ ಮಹಾನಗರ ಪಾಲಿಕೆಯ ವಾರ್ಡ್ 19 ರ ಸದಸ್ಯೆ ನಿಶಾತ್ ಹೈದರ ಅಲಿ ನದಾಫ್ ಗುಂಡಿನ ಮೊರೆತಕ್ಕೆ (shootout) ಬಲಿಯಾಗಿರೋ ವ್ಯಕ್ತಿ.
ಮೇ 6 ರ ಬೆಳಿಗ್ಗೆ ಎಂದಿನಂತೆ ಹೈದರಅಲಿ ನದಾಫ್ ನಗರದ ವಜ್ರಹನುಮಾನ ದೇವಸ್ಥಾನ ಬಳಿಯ ಚಂದಾಪೂರ ಕಾಲೋನಿಯಲ್ಲಿರುವ ತನ್ನ ಮನೆಯಲ್ಲಿ ಪತ್ನಿ ನಿಶಾತ್ ಜೊತೆಗೆ ಉಪಾಹಾರ ಮಾಡಿದ್ದ. ಬಳಿಕ ಮಹಾನಗರ ಪಾಲಿಕೆ ಕೆಲಸ ಕಾರ್ಯಗಳಿಗಾಗಿ ಹೈದರಅಲಿ ನದಾಫ್ ಪತ್ನಿಯ ಜೊತೆಗೆ ಹೊರ ಹೋಗಲು ಅಣಿಯಾಗಿದ್ದ. ಮನೆಯಿಂದ ಹೊರಗಡೆ ಬಂದು ಕಾರಿನ ಬಳಿ ಬಂದಿದ್ದ. ಆತನ ಪತ್ನಿ ನಿಶಾತ್ ಸಹ ಅನತಿ ದೂರದಿಂದ ಬರುತ್ತಿದ್ದಳು. ಆಗ ಬೈಕ್ ನಲ್ಲಿ ಬಂದ ಇಬ್ಬರು ಹೈದರಅಲಿ ಜೊತೆಗೆ ಮಾತನಾಡುತ್ತಾ ನಿಂತಿದ್ದಾರೆ. ಹೈದರ ಅಲಿ ಕಾರಿನಲ್ಲಿ ಕುಳಿತುಕೊಂಡು ಅವರ ಜೊತೆಗೆ ಮಾತನಾಡುತ್ತಿದ್ದ. ಆಗ ತನ್ನ ಪತಿಯ ಜೊತೆಗೆ ಯಾರೋ ಮಾತನಾಡುತ್ತಿದ್ದಾರೆ ಎಂದುಕೊಂಡ ನಿಶಾತ್ ಅನದಿ ದೂರದಲ್ಲೇ ನಿಂತಿದ್ದಳು.
ಸರಿಯಾಗಿ ಅದೇ ವೇಳೆ ಹೈದರಅಲಿ ಬಳಿ ನಿಂತಿದ್ದ ಓರ್ವ ಮಚ್ಚನ್ನು ತೆಗೆದುಕೊಂಡು ಹೈದರಅಲಿ ಕುಳಿತಿದ್ದ ಕಾರಿನ ಹಿಂದಿನ ಗಾಜು ಒಡೆದು ನಂತರ ಅದೇ ಮಚ್ಚಿನಿಂದ ಹೈದರಅಲಿ ತಲೆಗೆ ಹೊಡೆದು ಬಿಟ್ಟ. ಕೂಡಲೇ ಹೈದರ ಅಲಿ ಅಲ್ಲಿಂದ ಓಡಲು ಯತ್ನಿಸಿದಾಗ ಅಲ್ಲಿದ್ದ ಇಬ್ಬರೂ ಕಂಟ್ರೀ ಪಿಸ್ತೂಲ್ ತೆಗೆದು ಹೈದರಅಲಿಯನ್ನು ಹಿಡಿದಿದ್ದಾರೆ. ಅವರ ಕೈಗೆ ಸಿಕ್ಕ ಹೈದರಅಲಿ ಮೇಲೆ ಗುಂಡಿನ ಮೊರೆತ ಮಾಡಿದ್ದಾರೆ. 10 ರಿಂದ 12 ರೌಂಡ್ ಗುಂಡುಗಳನ್ನು ಹಾರಿಸಿದ್ದಾರೆ. ನಾಲ್ಕು ಗುಂಡುಗಳು ಹೈದರಅಲಿ ಎದೆ ಸೀಳಿವೆ. ಗುಂಡಿನ ದಾಳಿಗೆ ಒಳಗಾದ ಹೈದರಅಲಿ ಸ್ಥಳದಲ್ಲೇ ಕುಸಿದು ಬಿದ್ದಿದ್ದಾನೆ. ಇದೆಲ್ಲಾ ಕಣ್ಣೆದುರಿಗೆ ನೋಡುತ್ತಿದ್ದ ಹೈದರಅಲಿ ಪತ್ನಿ ನಿಶಾತ್ ಗಾಬರಿಯಾಗಿ ಸ್ಥಬ್ದವಾಗಿದ್ದಾಳೆ. ಓಡಿ ಬಂದು ಹೈದರಅಲಿಯನ್ನು ಮೇಲೆತ್ತಲು ಪ್ರಯತ್ನ ಮಾಡಿದ್ದಾಳೆ. ಆದರೆ ಇಷ್ಟರಲ್ಲಿ ಆತನ ಪಲ್ಸ್ ಹಾಗೂ ಹಾರ್ಟ್ ಬೀಟ್ ಸ್ಥಬ್ದವಾಗಿ ಬಿಟ್ಟಿದೆ. ಹೈದರಅಲಿ ಜೀವ ಹೋಗಿದೆ ಎಂದು ಗಾಬರಿಯಾದ ನಿಶಾತ್, ತಮ್ಮ ಸಂಬಂಧಿಕರಿಗೆ ಕರೆ ಮಾಡಿ ವಿಚಾರ ತಿಳಿಸಿದ್ದಾಳೆ.
ಹತ್ತಕ್ಕೂ ಹೆಚ್ಚು ಗುಂಡುಗಳನ್ನು ಹಾರಿಸಿದ ದುಷ್ಕರ್ಮಿಗಳು ಹೈದರಅಲಿ ನೆಲಕ್ಕೆ ಬೀಳುತ್ತಿದ್ದಂತೆ ಅಲ್ಲಿಂದ ಎರಡು ಕಾರುಗಳು ಹಾಗೂ ಒಂದು ಬೈಕ್ ನಲ್ಲಿ ಎಸ್ಕೇಪ್ ಆಗಿಬಿಟ್ಟಿದ್ದಾರೆ. ಸುದ್ದಿ ತಿಳಿದು ಸ್ಥಳಕ್ಕೆ ಆಗಮಿಸಿದ ಜಲ ನಗರ ಪೊಲೀಸರು ಪ್ರಾಥಮಿಕ ತನಿಖೆ ನಡೆಸಿದರು. ಬಳಿಕ ಎಸ್ಪಿ ಆನಂದಕುಮಾರ ಹಾಗೂ ಇತರ ಆಧಿಕಾರಿಗಳು ಸಹ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದರು. ಘಟನಾ ಸ್ಥಳವನ್ನು ಪೂರ್ಣವಾಗಿ ಸೀಲ್ ಮಾಡಿ ಹೈದರಅಲಿ ಶವವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲು ಕ್ರಮ ತೆಗೆದುಕೊಂಡಿದ್ದರು. ಸ್ಥಳದಲ್ಲಿ ಹೈದರಅಲಿ ಪತ್ನಿ ನಿಶಾತ್ ಹಾಗೂ ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿತ್ತು.
ಪತಿಯನ್ನು ಕಳೆದುಕೊಂಡಿದ್ದ ನಿಶಾತ್ ನೆಲ ಬಡಿದು ಗೋಗರೆದಿದ್ದಳು. ಪ್ರಾಥಮಿಕ ಮಾಹಿತಿ ಹಾಗೂ ತನಿಖೆಯ ಬಳಿಕ ಪೊಲೀಸರು ಹೈದರ ಅಲಿ ಶವವನ್ನು ಮರಣೋತ್ತರ ಪರೀಕ್ಷೆಗಾಗಿ ಜಿಲ್ಲಾ ಆಸ್ಪತ್ರೆಯ ಆವರಣಕ್ಕೆ ರವಾನೆ ಮಾಡಿದರು. ಜಿಲ್ಲಾ ಆಸ್ಪತ್ರೆಯ ಆವರಣದಲ್ಲಿಯೂ ಗುಂಡಿನ ದಾಳಿಗೆ ಬಲಿಯಾಗಿದ್ದ ಹೈದರಅಲಿ ಸಂಬಂಧಿಕರ ಅಕ್ರಂದನ ಮುಗಿಲು ಮುಟ್ಟಿತ್ತು. ಇಂಥ ಘಟನೆಗೆ ಇಡೀ ನಗರ ಭಯಗೊಂಡಿತ್ತು. ಪೊಲೀಸ್ ಇಲಾಖೆ ಆಧಿಕಾರಿಗಳು ತ್ವರಿತವಾಗಿ ತನಿಖೆ ನಡೆಸಿ ಆರೋಪಿಗಳನ್ನು ಬಂಧಿಸಬೇಕೆಂದು ಒತ್ತಾಯ ಮಾಡಿದರು. ಇನ್ನು ಕೊಲೆಯಾದ ಹೈದರಅಲಿ ಅತ್ತೆ ಅಂದರೆ ಪತ್ನಿಯ ತಾಯಿ ಕೂಡಲೇ ಪೊಲೀಸರು ಗುಂಡಿನ ದಾಳಿ ನಡೆಸಿ ನನ್ನ ಅಳಿಯನನ್ನು ಕೊಲೆ ಮಾಡಿದವರನ್ನು ಬಂಧಿಸಿ ಕಠಿಣ ಶಿಕ್ಷೆಗೆ ಒಳಪಡಿಸಬೇಕು. ಇಲ್ಲವಾದರೆ ನಾನು ನನ್ನ ಮಗಳು ಎಸ್ಪಿ ಅವರ ಕಚೇರಿ ಬಳಿಯೇ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಳ್ಳುತ್ತೇವೆಂದು ಹೇಳಿದ್ದಾರೆ.
ಅಷ್ಟಕ್ಕೂ ಕಾರ್ಪೋರೇಟರ್ ಪತಿ ಹೈದರಅಲಿ ಕೊಲೆಗೆ ಕಾರಣವೇನು ಎಂದು ಮಾಹಿತಿ ಕಲೆ ಹಾಕಿದಾಗ ಅಲ್ಲಿ ಕಳೆದ 2022 ರ ಅಕ್ಟೋಬರ್ ನಲ್ಲಿ ನಡೆದಿದ್ದ ಮಹಾನಗರ ಪಾಲಿಕೆಯ ಚುನಾವಣೆ ಕಾರಣವಾಗಿದೆ. ನಗರದ ಚಂದಾಪೂರ ಕಾಲೋನಿ ನಿವಾಸಿಯಾಗಿದ್ದ ಹೈದರಅಲಿ ನದಾಫ್ ರೌಡಿ ಶೀಟರ್ ಆಗಿದ್ದ. ಕೊಲೆ, ಕೊಲೆ ಯತ್ನ, ಜೀವ ಬೆದರಿಕೆ, ಹಣ ವಸೂಲಿ ಸೇರಿದಂತೆ ಇತರೆ ಸುಮಾರು 15 ಕ್ಕೂ ಆಧಿಕ ಪ್ರಕಣಗಳಲ್ಲಿ ಹೈದರಅಲಿ ಆರೋಪಿಯಾಗಿದ್ದ. ರಾಜಕಾರಣದಲ್ಲಿ ಗುರುತರವಾಗಿ ಬೆಳೆಯಬೇಕೆಂಬ ಹಂಬಲವಿತ್ತು ಆತನಿಗೆ. ಹಾಗಾಗಿ ಕಾಂಗ್ರೆಸ್ ಪಕ್ಷದಲ್ಲಿ ಗುರುತಿಸಿಕೊಂಡಿದ್ದ.
2022ರ ಅಕ್ಟೋಬರ್ ನಲ್ಲಿ ವಿಜಯಪುರ ಮಹಾನಗರ ಪಾಲಿಕೆ ಚುನಾವಣೆ ನಡೆಯುತ್ತಿರೋವಾಗ ವಾರ್ಡ್ ನಂಬರ್ 19 ಅಲ್ಪಸಂಖ್ಯಾತ ಮಹಿಳಾ ಮೀಸಲಾಗಿತ್ತು. ಈ ವಾರ್ಡ್ ನಿಂದ ತನ್ನ ಪತ್ನಿ ನಿಶಾತ್ ನದಾಫ್ ಳನ್ನಾ ಕಣಕ್ಕಿಳಿಸಲು ಪ್ರಯತ್ನ ಮಾಡಿದ್ದ. ಆದರೆ ಕಾಂಗ್ರೆಸ್ ನಾಯಕರು ಶೇಖ್ ಅಹ್ಮದ್ ಮೋದಿ ಪತ್ನಿ ಆಯೇಷಾ ಮೋದಿಗೆ ಟಿಕೆಟ್ ನೀಡಿದ್ದರು. ಕೈ ಟಿಕೆಟ್ ತನ್ನ ಪತ್ನಿಗೆ ಸಿಗದ ಕಾರಣ ಹೈದರಅಲಿ ನಿಶಾತ್ ಳನ್ನು ಪಕ್ಷೇತರ ಅಭ್ಯರ್ಥಿಯನ್ನಾಗಿ ಕಣಕ್ಕಿಳಿಸಿದ್ದ. ಆಗಲೇ ಹೈದರಅಲಿ ನದಾಫ್ ಗೂ ಶೇಖ್ ಅಹ್ಮದ್ ಮೋದಿಗೂ ವೈರತ್ವ ಬೆಳೆಯಲು ಪ್ರಾರಂಭವಾಗುತ್ತದೆ.
ಇದೇ ವೇಳೆ ನಿನ್ನ ಪತ್ನಿಯ ನಾಮಪತ್ರ ವಾಪಸ್ ಪಡೆದುಕೊ ಎಂದು ಶೇಖ್ ಅಹ್ಮದ್ ಮೋದಿ ಹೈದರಅಲಿಗೆ ಒತ್ತಾಯ ಮಾಡುತ್ತಾನೆ. ಆದರೆ ಹೈದರಅಲಿ ಇದ್ಯಾವುದಕ್ಕೂ ಸೊಪ್ಪು ಹಾಕದೇ ಪ್ರಚಾರ ಮಾಡುತ್ತಾನೆ. ಪಾಲಿಕೆಯ ಚುನಾವಣೆಯಲ್ಲಿ ಹೈದರಅಲಿ ಪತ್ನಿ ನಿಶಾತ್ ಗೆದ್ದು ಬೀಗುತ್ತಾಳೆ. ಶೇಖ್ ಅಹ್ಮದ್ ಮೋದಿ ಪತ್ನಿ ಆಯೇಷಾ ಸೋಲನ್ನು ಅನುಭವಿಸುತ್ತಾಳೆ. ಇದೇ ಸೋಲು ಹೈದರಅಲಿ ಮೇಲಿನ ದ್ವೇಷದ ಬೆಂಕಿಗೆ ತುಪ್ಪ ಸುರಿದಂತಾಗುತ್ತದೆ. ಅದೇ ಸಿಟ್ಟನ್ನ ಮನಸ್ಸಿನಲ್ಲಿ ಇಟ್ಟುಕೊಂಡ ಶೇಖ್ ಅಹ್ಮದ್ ಮೋದಿ ಹೈದರ ಅಲಿಯನ್ನು ಖಲಾಸ್ ಮಾಡಲು ನಿರ್ಧಾರ ಮಾಡಿದ್ದ.
ಹೈದರಅಲಿ ಮೇಲೆ ದಾಳಿ ಮಾಡಿದಾಗ ಎದುರಿಗೆ ಇದ್ದ ಆತನ ಪತ್ನಿ ನಡೆದ ಘಟನೆಯನ್ನು ವಿವರಿಸಿದ್ದಾಳೆ. ಶೇಖ್ ಅಹ್ಮದ್ ಮೋದಿ ಹಾಗೂ ನ್ಯಾಯವಾದಿ ಎಸ್ ಎಸ್ ಖಾದ್ರಿ ಬೈಕಿನಲ್ಲಿ ಬಂದಿದ್ದರು. ನನ್ನ ಗಂಡನ ಬಳಿ ಮಾತನಾಡುವ ಹಾಗೆ ನಾಟಕ ಮಾಡಿದರು. ಶೇಖ್ ಅಹ್ಮದ್ ಮೋದಿ ಮಚ್ಚು ತೆಗೆದು ಕಾರಿನ ಹಿಂದಿನ ಗಾಜು ಒಡೆದು ನನ್ನ ಗಂಡನ ತಲೆಗೆ ಹೊಡೆದ. ಆಗ ನನ್ನ ಪತಿ ಓಡಿ ನನ್ನ ಬಳಿ ಬರುವಾಗ ಶೇಖ್ ಅಹ್ಮದ ಮೋದಿ ಹಿಡಿದುಕೊಂಡರು. ಆತನ ಕೈಯ್ಯಲ್ಲಿದ್ದ ಪಿಸ್ತೂಲ್ ನನ್ನು ನ್ಯಾಯವಾದಿ ಎಸ್ ಎಸ್ ಖಾದ್ರಿಗೆ ಕೊಟ್ಟು ಶೂಟ್ ಮಾಡು ಎಂದ. ಎಸ್ ಎಸ್ ಖಾದ್ರಿ 6 ರಿಂದ 8 ಸುತ್ತು ಗುಂಡು ಹೊಡೆದ.
ಆಗ ನನ್ನ ಪತಿ ನೆಲದಲ್ಲೇ ಕುಸಿದು ಬಿದ್ದರು. ಹೊಡೆಯುವ ವೇಳೆ ಇನ್ನೂ ಮೂವರಾದ ಧರ್ಮಗುರು ತನ್ವೀರ್ ಪೀರಾ ಪೀರಜಾದೆ, ಧರ್ಮಗುರು ಸಹೋದರ ವಾಜೀದ್ ಪೀರಾ ಪೀರಜಾದೆ, ಶಾನವಾಜ್ ದಫೇದಾರ ಆತನನ್ನು ಬಿಡಬೇಡಿ. ಗುಂಡು ಹಾರಿಸಿ ಕೊಲೆ ಮಾಡಿ ಎಂದು ಪ್ರಚೋದನೆ ನೀಡಿದರು. ಗುಂಡುಗಳನ್ನು ಹಾರಿಸಿ ಅಲ್ಲಿಂದ ಅವರು ಬೈಕ್ ಹಾಗೂ ಕಾರಿನಲ್ಲಿ ಓಡಿ ಹೋದರು. ಅದಾಗಲೇ ನನ್ನ ಗಂಡನ ನಾಡಿ ಬಡಿತ ಎದೆ ಬಡಿತ ನಿಂತು ಹೋಗಿತ್ತು. ಅವರ ಪ್ರಾಣ ಪಕ್ಷಿ ಹಾರಿ ಹೋಗಿತ್ತು. ಇದಕ್ಕೆಲ್ಲಾ 2022 ರ ಅಕ್ಟೋಬರ್ ನಲ್ಲಿ ನಡೆದ ನಡೆದ ಮಹಾನಗರ ಪಾಲಿಕೆ ಚುನಾವಣೆ ಕಾರಣವಾಗಿದೆ ಎಂದಿದ್ದಾರೆ ನಿಶಾತ್ ನದಾಫ್. ವಿಧಾನಸಭಾ ಚುನಾವಣೆಗಾಗಿ ಇಷ್ಟೆಲ್ಲಾ ಭದ್ರತೆಯಿದ್ದರೂ ಕೊಲೆಗಾರರಿಗೆ ಪಿಸ್ತೂಲ್ ಎಲ್ಲಿಂದ ಬಂತು. ಈ ಕುರಿತು ಪೊಲೀಸರು ತನಿಖೆ ನಡೆಸಿ ನನಗೆ ನ್ಯಾಯ ನೀಡಬೇಕೆಂದು ಒತ್ತಾಯ ಮಾಡಿದ್ಧಾರೆ ನಿಶಾತ್.
ಮೇ 6 ರಂದು ಮನೆಯಲ್ಲಿ ರೆಡಿಯಾಗಿ ಹೊರಗೆ ಹೊರಟಿದ್ದ ವೇಳೆ ಹೈದರಅಲಿ ನದಾಫ್ ನ ಮೇಲೆ ಕಂಟ್ರಿ ಪಿಸ್ತೂಲ್ ನಿಂದ ನಾಲ್ಕು ಸುತ್ತು ಗುಂಡು ಹಾರಿಸಿ ಕೊಲೆ ಮಾಡಲಾಗಿದೆ. ರೌಡಿಶೀಟರ್ ಆಗಿದ್ದ ಹೈದರಅಲಿಯ ಮೇಲೆ ಕೊಲೆ, ಬೆದರಿಕೆ ಸೇರಿದಂತೆ ಹಲವು ಕೇಸ್ ಗಳು ಇವೆ. ಅವುಗಳ ಬಗ್ಗೆ ನಿಖರ ಮಾಹಿತಿಯನ್ನು ನಂತರ ನೀಡಲಾಗುತ್ತದೆ. ಈತ ಮೊದಲಿನಿಂದಲೂ ಬಡ್ಡಿ ಹಣಕಾಸು ವ್ಯವಹಾರ, ಆಸ್ತಿ ಮಾರಾಟ ರಿಯಲ್ ಎಸ್ಟೇಟ್ ಸೇರಿದಂತೆ ಇತರೆ ವ್ಯವಹಾರಗಳನ್ನು ಮಾಡುತ್ತಿದ್ದ. ಇದೇ ಹಿನ್ನೆಲೆ ಕೊಲೆ ಆಗಿದೆ ಎಂದು ಪೊಲೀಸರು ಶಂಕಿಸಿದ್ದಾರೆ.
ಕೊಲೆ ನಡೆದ ಸ್ಥಳಕ್ಕೆ ಬಂದ ಜಲನಗರ ಠಾಣೆ ಪೊಲೀಸರು ಆರೋಪಿಗಳ ಬಂಧನಕ್ಕೆ ಜಾಲ ಬೀಸಿದ್ದಾರೆ. ಕೊಲೆಯಾದವನೂ ರೌಡಿಶೀಟರ್ ಆಗಿದ್ದು, ಕೊಲೆ ಮಾಡಿದವರೂ ರೌಡಿಶೀಟರ್ ಗಳಾಗಿದ್ದಾರೆ. ಈ ಕುರಿತು ತಂಡ ರಚಿಸಿದ್ದು, ಆರೋಪಿಗಳನ್ನು ಶೀಘ್ರದಲ್ಲೇ ಬಂಧಿಸಲಾಗುವುದು ಎಂದು ತಿಳಿಸಿದ್ದಾರೆ. ತನಿಖಾ ದೃಷ್ಟಿಯಿಂದ ಹೆಚ್ಚಿನ ಮಾಹಿತಿ ನೀಡಲಾಗುವುದಿಲ್ಲ ಎಂದಿದ್ದಾರೆ. ಸದ್ಯ ನಡೆದ ಈ ಕೊಲೆಗೂ ಚುನಾವಣೆಗೂ ಯಾವುದೇ ಸಂಬಂಧವಿಲ್ಲ. ಜನರು ಯಾವುದೇ ಭಯಕ್ಕೆ ಒಳಗಾಗಬಾರದು ಎಂದು ವಿಜಯಪುರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹೆಚ್ ಡಿ ಆನಂದಕುಮಾರ ಅಭಯ ನೀಡಿದ್ದಾರೆ.
ಸದ್ಯ ಗುಂಡಿನ ದಾಳಿಯಲ್ಲಿ ಹತನಾಗಿರೋ ಹೈದರಅಲಿ ನದಾಫ್ ಪತ್ನಿ ನಿಶಾತ್ ಜಲನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿದ್ದಾರೆ. ಶೇಖ್ ಅಹ್ಮದ ಮೋದಿ, ನ್ಯಾಯವಾದಿ ಎಸ್ ಎಸ್ ಖಾದ್ರಿ, ಧರ್ಮಗುರು ತನ್ವೀರ್ ಪೀರಾ ಪೀರಜಾದೆ, ಧರ್ಮಗುರು ಸಹೋದರ ವಾಜೀದ್ ಪೀರಾ ಪೀರಜಾದೆ, ಶಾನವಾಜ್ ದಫೇದಾರ ಮೇಲೆ ದೂರು ನೀಡಿದ್ದಾರೆ ನಿಶಾತ್ ನದಾಫ್.
ಇಡೀ ಘಟನೆಯನ್ನು ಗಂಭೀರವಾಗಿ ಪರಿಗಣಿಸಿರೋ ಎಸ್ಪಿ ಆರೋಪಿಗಳ ಬಂಧನಕ್ಕೆ ನಾಲ್ಕು ವಿಶೇಷ ತಂಡಗಳನ್ನು ರಚನೆ ಮಾಡಿದ್ದಾರೆ. ಶೀಘ್ರವೇ ಆರೋಪಿಗಳನ್ನು ಬಂಧಿಸೋದಾಗಿ ಮಾಹಿತಿ ನೀಡಿದ್ದಾರೆ. ಆರೋಪಿಗಳು ಬಂಧನವಾದ ಬಳಿಕ ಇಡೀ ಘಟನೆ ಕುರಿತು ಮತ್ತಷ್ಟು ಸತ್ಯಾಸತ್ಯೆಗಳು ಹೊರ ಬರಲಿವೆ. ಮಹಾನಗರ ಪಾಲಿಕೆ ಚುನಾವಣಾ ಜಿದ್ದು ಇಲ್ಲಿ ರೌಡಿ ಶೀಟರ್ ನ ಜೀವವನ್ನು ಬಲಿ ಪಡೆದಿದೆ. ಚುನಾವಣಾ ಸೋಲನ್ನು ತಡೆದುಕೊಳ್ಳದ ಎದುರುಗಾರರು ಕೊಲೆಗಾರರ ಪಟ್ಟ ಕಟ್ಟಿಕೊಂಡರು. ಚುನಾವಣೆ ಅಂದ ಮೇಲೆ ಸೋಲು ಗೆಲುವು ಸಾಮಾನ್ಯ. ಸೋತ ಕಾರಣಕ್ಕೆ ಎದುರಿನವನ್ನು ಕೊಲೆ ಮಾಡುವಷ್ಟು ದ್ವೇಷ ರಾಜಕಾರಣದಲ್ಲಿರೋದು ಒಳ್ಳೆಯ ಬೆಳವಣಿಗೆಯಲ್ಲಾ.
ವರದಿ: ಅಶೋಕ ಯಡಳ್ಳಿ, ಟಿವಿ9, ವಿಜಯಪುರ