
ವಿಜಯಪುರ, ಸೆಪ್ಟೆಂಬರ್ 19: ವಿಜಯಪುರ (Vijayapura) ಜಿಲ್ಲೆಯ ಚಡಚಣ ಪಟ್ಟಣದ ಎಸ್‌ಬಿಐ ಬ್ಯಾಂಕ್‌ನಲ್ಲಿ (SBI Bank) ನಡೆದಿದ್ದ ಭಾರೀ ದರೋಡೆ ಪ್ರಕರಣದಲ್ಲಿ ಮಹತ್ವದ ಸುಳಿವು ಸಿಕ್ಕಿದೆ. ಹುಲಜಂತಿ ಗ್ರಾಮದ ಪಾಳು ಬಿದ್ದ ಮನೆಯೊಂದರ ಮೇಲ್ಚಾವಣಿಯಲ್ಲಿ41 ಲಕ್ಷ ರೂ. ನಗದು ಇದ್ದ ಚೀಲ ಮತ್ತು ಚಿನ್ನಾಭರಣ ಪತ್ತೆಯಾಗಿದೆ. ಮಂಗಳವೇಡ ಗ್ರಾಮಸ್ಥರು ಮನೆಯ ಮೇಲ್ಚಾವಣಿಯಲ್ಲಿ ಅನುಮಾನಾಸ್ಪದ ಬ್ಯಾಗ್ ಕಂಡು ತಕ್ಷಣವೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಮಂಗಳವೇಡ ಪೊಲೀಸರು ವಿಜಯಪುರ ಜಿಲ್ಲಾ ಎಸ್ಪಿ ಲಕ್ಷ್ಮಣ ನಿಂಬರಗಿಗೆ ವರದಿ ಸಲ್ಲಿಸಿದ್ದು, ಪೊಲೀಸರು ಸ್ಥಳಕ್ಕೆ ಧಾವಿಸಿ ಬ್ಯಾಗ್ ವಶಕ್ಕೆ ಪಡೆದುಕೊಂಡಿದ್ದಾರೆ.
ಎಸ್ಪಿ ಲಕ್ಷ್ಮಣ ನಿಂಬರಗಿ ನೀಡಿದ ಮಾಹಿತಿಯ ಪ್ರಕಾರ, ಪಾಳುಬಿದ್ದ ಮನೆ ಚಾವಣಿಯಲ್ಲಿ ಪತ್ತೆಯಾದ ಬ್ಯಾಗ್‌ನಲ್ಲಿ 6.54 ಕೆಜಿ ಚಿನ್ನಾಭರಣ, 41.4 ಲಕ್ಷ ರೂ. ನಗದು ಸಿಕ್ಕಿದೆ. ಚಡಚಣದ ಎಸ್‌ಬಿಐ ಬ್ಯಾಂಕ್‌ನಲ್ಲಿ ನಡೆದ ದರೋಡೆಯಲ್ಲಿ ಒಟ್ಟು 1.5 ಕೋಟಿ ರೂ. ನಗದು ಕಳವಾಗಿತ್ತು. ಅಲ್ಲದೆ 20 ಕೆಜಿಗೂ ಹೆಚ್ಚಿನ ಚಿನ್ನಾಭರಣ ದೋಚಲಾಗಿತ್ತು.
ದರೋಡೆ ನಡೆದ ದಿನವಾದ ಸೆಪ್ಟೆಂಬರ್ 16ರಂದು ದರೋಡೆಕೋರರು ಬಳಸಿದ ಇಕೋ ವಾಹನ ಹುಲಜಂತಿ ಗ್ರಾಮದಲ್ಲೇ ಪತ್ತೆಯಾಗಿತ್ತು. ಈ ವಾಹನ ಬೈಕ್‌ಗೆ ಡಿಕ್ಕಿ ಹೊಡೆದಾಗ ಸ್ಥಳೀಯರು ಪ್ರಶ್ನಿಸಿದಾಗ, ವಾಹನದಲ್ಲಿದ್ದ ಆರೋಪಿಗಳು ಪಿಸ್ತೂಲ್ ತೋರಿಸಿ ಪರಾರಿಯಾಗಿದ್ದರು. ಆ ಸಂದರ್ಭದಲ್ಲಿ ಸ್ಥಳೀಯರಿಗೆ ಸಿಕ್ಕಿದ್ದ ಬ್ಯಾಗ್ನಲ್ಲಿಯೂ ಸ್ವಲ್ಪಚಿನ್ನಾಭರಣ ಹಾಗೂ 1.30 ಲಕ್ಷ ರೂ. ನಗದು ಸಿಕ್ಕಿತ್ತು. ದರೋಡೆಕೋರರು ಪರಾರಿಯಾಗುವ ವೇಳೆ ಚಿನ್ನಾಭರಣ ಮತ್ತು ನಗದು ಹೊಂದಿದ್ದ ಬ್ಯಾಗ್ ಅನ್ನು ಪಾಳು ಮನೆಯ ಮೇಲ್ಚಾವಣಿಯಲ್ಲಿ ಇಟ್ಟು ಹೋಗಿರಬಹುದು ಎಂದು ಶಂಕಿಸಲಾಗಿದೆ.
ಪೊಲೀಸರ ಎಂಟು ತಂಡಗಳು ವಿವಿಧ ಆಯಾಮಗಳಲ್ಲಿ ತನಿಖೆ ನಡೆಸುತ್ತಿವೆ. ಶೀಘ್ರದಲ್ಲೇ ದರೋಡೆಕೋರರನ್ನು ಬಂಧಿಸಿ ಪ್ರಕರಣ ಬೇಧಿಸಲಾಗುತ್ತದೆ ಎಂದು ಎಸ್ಪಿ ಲಕ್ಷ್ಮಣ ನಿಂಬರಗಿ ತಿಳಿಸಿದ್ದಾರೆ.
ಇದನ್ನೂ ಓದಿ: ವಿಜಯಪುರ ಎಸ್‌ಬಿಐ ಬ್ಯಾಂಕ್ ದರೋಡೆಗೆ ಮ್ಯಾನೇಜರ್, ಸಿಬ್ಬಂದಿಯ ನಿರ್ಲಕ್ಷ್ಯವೇ ನೆರವಾಯ್ತಾ? ಆಘಾತಕಾರಿ ಅಂಶ ಬಯಲು
ಸಪ್ಟೆಂಬರ್ 16 ರ ಸಂಜೆ ಚಡಚಣ ಪಟ್ಟಣದ ಎಸ್‌ಬಿಐ ಬ್ಯಾಂಕ್ ದರೋಡೆಯಾಗಿತ್ತು. ಮ್ಯಾನೇಜರ್, ಸಿಬ್ಬಂದಿ, ಸೆಕ್ಯೂರಿಟಿ ಗಾರ್ಡ್ ಹಾಗೂ ಇದ್ದ ಕೆಲವು ಮಂದಿ ಗ್ರಾಹಕರ ಕೈಕಾಲು ಕಟ್ಟಿಹಾಕಿದ್ದ ದರೋಡೆಕೋರರು, ನಗದು ಹಾಗೂ ಚಿನ್ನಾಭರಣ ದೋಚಿ ಪರಾರಿಯಾಗಿದ್ದರು. ಬ್ಯಾಂಕ್ ಮ್ಯಾನೇಜರ್, ಸೆಕ್ಯೂರಿಟಿ ಗಾರ್ಡ್ ನಿರ್ಲಕ್ಷ್ಯ ಕೂಡ ದರೋಡೆಕೋರರಿಗೆ ನೆರವಾಗಿದೆ ಎಂದು ಗ್ರಾಹಕರು ಆರೋಪಿಸಿದ್ದು, ಸಿಬ್ಬಂದಿ ವಿರುದ್ಧವೂ ಕ್ರಮಕ್ಕೆ ಆಗ್ರಹಿಸಿದ್ದಾರೆ. ಮಹಾರಾಷ್ಟ್ರದ ಕಡೆ ಪರಾರಿಯಾಗಿದ್ದಾರೆ ಎನ್ನಲಾಗಿರುವ ದರೋಡೆಕೋರರಿಗಾಗಿ ಶೋಧ ಕಾರ್ಯ ಮುಂದುವರಿದಿದೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ